SM Krishna; ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ; ರಾಜೀವ್ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  Sm Krishna; ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ; ರಾಜೀವ್ ಹೆಗಡೆ ಬರಹ

SM Krishna; ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ; ರಾಜೀವ್ ಹೆಗಡೆ ಬರಹ

SM Krishna; ಸದ್ಯದ ಆಡಳಿತದಲ್ಲಿ, ಗ್ಯಾರೆಂಟಿ ಯೋಜನೆಗಳ ಪ್ರತಿಪಾದಕರೇ ಹೆಚ್ಚು. ಆದರೆ ದಶಕಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಬೇರೆಯೇ ಇತ್ತು. ವಿಶೇಷವಾಗಿ ಎಸ್‌ಎಂ ಕೃಷ್ಣ ಸಿಎಂ ಆಗಿದ್ದಾಗ ಯೋಜನೆಗಳು ಭಿನ್ನವಾಗಿದ್ದವು. ಹಾಗಾಗಿ, ಈಗ ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ ಎನ್ನುತ್ತಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಜಾರಿಗೊಳಿಸಿದ ಯೋಜನೆಗಳನ್ನು ಒಮ್ಮೆ ನೋಡಿ ಎಂದು ಆ ಯೋಜನೆಗಳ ಕಡೆಗೆ ಗಮನಸೆಳೆದಿದ್ದಾರೆ ಪತ್ರಕರ್ತ ರಾಜೀವ್ ಹೆಗಡೆ.
ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಜಾರಿಗೊಳಿಸಿದ ಯೋಜನೆಗಳನ್ನು ಒಮ್ಮೆ ನೋಡಿ ಎಂದು ಆ ಯೋಜನೆಗಳ ಕಡೆಗೆ ಗಮನಸೆಳೆದಿದ್ದಾರೆ ಪತ್ರಕರ್ತ ರಾಜೀವ್ ಹೆಗಡೆ. (LM)

SM Krishna; ಎಸ್‌ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಮುನ್ನಡೆಸಿದ್ದು ಕಾಂಗ್ರೆಸ್ ಪಕ್ಷದ ಸರ್ಕಾರವನ್ನೇ. ಆದರೆ ಅವರ ಆಲೋಚನಾ ಕ್ರಮಕ್ಕೂ ಆ ನಂತರದವರ ಆಲೋಚನಾ ಕ್ರಮಕ್ಕೂ ಇರುವ ವ್ಯತ್ಯಾಸ ದೊಡ್ಡದು. ಅಂಥವರು ವಿಶೇಷವಾಗಿ ಗ್ಯಾರೆಂಟಿ ಯೋಜನೆಗಳ ಬಗ್ಗೆ, ಉಚಿತವಾಗಿ ಒದಗಿಸುವ ಉಪಕ್ರಮಗಳ ಬೇಕು ಎಂದು ಪ್ರತಿಪಾದಿಸುವವರು ಒಮ್ಮೆ ಎಸ್‌ ಎಂ ಕೃಷ್ಣ ಅವರು ಜಾರಿಗೆ ತಂದ ಯೋಜನೆಗಳನ್ನು ಅವಲೋಕಿಸುವುದಕ್ಕೆ ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ಇದನ್ನೇ ಪತ್ರಕರ್ತ ರಾಜೀವ ಹೆಗಡೆ ಅವರು ಉಲ್ಲೇಖಿಸಿದ್ದು, ಅವರ ಬರಹ ಇಲ್ಲಿದೆ.

ಗ್ಯಾರಂಟಿ ಬಗ್ಗೆ ಭಾಷಣ ಮಾಡುವರೆಲ್ಲ ಕೃಷ್ಣರ ಯೋಜನೆಗಳನ್ನು ಒಮ್ಮೆ ನೋಡಿ!

ಪಂಚ ಗ್ಯಾರಂಟಿ ಯೋಜನೆಗಳನ್ನಿಟ್ಟುಕೊಟ್ಟು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರ ಘನತೆವೆತ್ತ ಸರ್ಕಾರ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಇಂತಹದ್ದೇ ತಲೆಬುಡವಿಲ್ಲದ ಪುಕ್ಕಟೆ ಯೋಜನೆಗಳನ್ನು ಇತರೇ ರಾಜ್ಯಗಳಲ್ಲೂ ಪಕ್ಷಾತೀತವಾಗಿ ಮಾಡಲಾಗುತ್ತಿದೆ. ಆದರೆ ದಶಕಗಳ ಹಿಂದೆಯೇ ʼಪಾಂಚಜನ್ಯʼ ಯಾತ್ರೆಯ ಮೂಲಕ ರಾಜ್ಯದ ಜನರಿಗೆ ಭಾಷೆಯನ್ನಿತ್ತು, ಒಂದಿಷ್ಟು ಕ್ರಾಂತಿಕಾರಕ ಯೋಜನೆಗಳನ್ನು ಎಸ್‌.ಎಂ ಕೃಷ್ಣ ಜಾರಿಗೆ ತಂದಿದ್ದರು. ಗ್ಯಾರಂಟಿ ಯೋಜನೆಯೆಂದರೆ ಹೇಗಿರಬೇಕು ಎಂದು ಇಂದಿನ ದೂರದೃಷ್ಟಿಯಿಲ್ಲದ ರಾಜಕಾರಣಿಗಳಿಗೆ ತೆಲೆಗೆ ತಟ್ಟಿ ಹೇಳಿದಂತೆ ಆ ಯೋಜನೆಗಳನ್ನು ರೂಪಿಸಿದ್ದರು. ಎಸ್‌.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನನಗೆ ನೆನಪಿನಲ್ಲಿರುವಂತೆ ಕೂಲಿಗಾಗಿ ಕಾಳು, ಬಿಸಿಯೂಟ, ಸ್ತ್ರೀಶಕ್ತಿ ಹಾಗೂ ಜಲಾನಯನ ಎನ್ನುವ ಯೋಜನೆ ಚಾಲ್ತಿಯಲ್ಲಿತ್ತು. ಸರ್ಕಾರದ ಜನಕಲ್ಯಾಣ ಯೋಜನೆಯೆಂದರೆ ಹೇಗಿರಬೇಕು ಎನ್ನುವುದಕ್ಕೆ ಈ ನಾಲ್ಕು ಯೋಜನೆಗಳಿಗಿಂತ ಇನ್ನೊಂದು ಕಲ್ಪನೆ ಇರಲಾರದು. ಇದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದಾದರೂ ಯೋಜನೆಯಿದ್ದರೆ ಒಂದು ಹಂತಕ್ಕೆ ಪರಿಪೂರ್ಣ ಎನ್ನಬಹುದಿತ್ತು. ಆದರೆ ಮುಂದೆ ಬಂದ ಸರ್ಕಾರ ಹಾಗೂ ಅದರಲ್ಲಿನ ಮುಖ್ಯಮಂತ್ರಿಗಳ ದೂರದೃಷ್ಟಿ ಕೊರತೆಯಿಂದ ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಪುಕ್ಕಟೆ ಹಂಚುವುದೇ ಒಳಿತು ಎನ್ನುವ ಮಟ್ಟಿಗೆ ಆರ್ಥಿಕ ನೀತಿ ರೂಪಿಸಿದ್ದಾರೆ.

ಸ್ತ್ರೀಶಕ್ತಿ ಸಂಘ

ಐಟಿ ಕ್ಷೇತ್ರದಲ್ಲಿ ಜಾಗತಿಕ ಸ್ಟಾರ್ಟಪ್‌ ಹಬ್‌ ಆಗಿ ಬೆಳೆಯಲಷ್ಟೇ ಎಸ್‌.ಎಂ ಕೃಷ್ಣ ವೇದಿಕೆ ಸೃಷ್ಟಿಸಿರಲಿಲ್ಲ. ಕರ್ನಾಟಕದ ಗ್ರಾಮೀಣ ಕ್ಷೇತ್ರದಲ್ಲಿನ ಮಹಿಳೆಯರ ಮೂಲಕ ಮಿನಿ ಸ್ಟಾರ್ಟಪ್‌ ಹಬ್‌ನ್ನೇ ನಿರ್ಮಿಸಲು ಸ್ತ್ರೀಶಕ್ತಿ ಎನ್ನುವ ಅದ್ಭುತ ಯೋಜನೆ ರೂಪಿಸಿದ್ದರು. ಸ್ಥಳೀಯವಾಗಿ ಆರ್ಥಿಕ ಸಬಲೀಕರಣ, ಒಂದಿಷ್ಟು ಸಣ್ಣ ಉದ್ದಿಮೆ ಆರಂಭಿಸಲು ಈ ಸ್ತ್ರೀ ಶಕ್ತಿ ಸಂಘಟನೆಗಳು ಕಾರಣವಾದವು. ಸರ್ಕಾರದಿಂದ ಆ ದಿನದ ಮಟ್ಟಿಗೆ ಒಂದಿಷ್ಟು ಆರ್ಥಿಕ ನೆರವಿನ ಜತೆಗೆ ಬ್ಯಾಂಕ್‌ನಿಂದಲೂ ಸಹಕಾರ ದೊರೆಯಲು ಆರಂಭವಾಗಿತ್ತು. ಇದರ ಜತೆಗೆ ಹಳ್ಳಿಗಳಲ್ಲಿ ದುಡಿಯುತ್ತಿದ್ದ ಮಹಿಳೆಯರ ಸಂಘಟನೆಗೂ ಇದು ಅವಕಾಶ ಸೃಷ್ಟಿಸಿತ್ತು. ಆದರೆ ಎಸ್‌.ಎಂ ಕೃಷ್ಣ ಸರ್ಕಾರ ಹೋದ ಬಳಿಕ ಇತರ ಮುಖ್ಯಮಂತ್ರಿಗಳಿಗೆ ಈ ಯೋಜನೆಯ ಮೇಲೆ ಪ್ರೀತಿ ಕಡಿಮೆಯಾಯಿತು. ಒಂದು ಕಾಲದಲ್ಲಿ ಈ ಸ್ತ್ರೀ ಶಕ್ತಿ ಸಂಘಟನೆಗಳಿಗೆ ನೂರಾರು ಕೋಟಿ ಆರ್ಥಿಕ ನೆರವು ಕೊಡಲು ಕೂಡ ಸರ್ಕಾರ ಆಸಕ್ತಿ ತೋರಿರಲಿಲ್ಲ. ಆದರೆ ಇಂದು ಅದೇ ಆರ್ಥಿಕ ಪಂಡಿತರ ಸರ್ಕಾರವು ಗೃಹಲಕ್ಷ್ಮೀ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ 35,000 ಕೋಟಿ ಹಣ ಪುಕ್ಕಟೆಯಾಗಿ ಹಂಚುತ್ತಿದೆ. ನಾವು ಕೊಟ್ಟ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದರು, ಬೈಕ್‌ ಕೊಡಿಸಿದರು ಎಂದು ನಮ್ಮ ಲಕ್ಷ್ಮಕ್ಕ ಪೋಸ್ಟ್‌ ಮೇಲೆ ಪೋಸ್ಟ್‌ ಹಾಕುತ್ತಾರೆ. ಆದರೆ ಗೃಹಲಕ್ಷ್ಮೀ ಯೋಜನೆಯ ವಾರ್ಷಿಕ ವೆಚ್ಚದ ಶೇ.೧೦ರಷ್ಟು ಹಣವನ್ನು ಸ್ತ್ರೀ ಶಕ್ತಿ ಸಂಘಟನೆಗಳ ಅಭಿವೃದ್ಧಿ ಹಾಗೂ ಹೊಸ ಸಂಘಟನೆಗಳ ಹುಟ್ಟಿಗೆ ಹಾಕಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಸರ್ಕಾರ ಪುಕ್ಕಟೆ ಕೊಡುತ್ತಿರುವ 2000 ರೂಪಾಯಿ ಋಣದ ಹಣಕ್ಕಿಂತ ದುಡಿಮೆಯಲ್ಲಿ ಅದರ ದುಪ್ಪಟ್ಟನ್ನು ಗಳಿಸಲು ಸಾಧ್ಯವಾಗುವ ಅವಕಾಶ ನಿರ್ಮಾಣವಾಗುತ್ತಿತ್ತು. ಹಾಗೆಯೇ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವ ಬದಲಿಗೆ ಆಸ್ತಿ ಸೃಷ್ಟಿ ಆಗುತ್ತಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಗ್ಯಾರಂಟಿಗಿಂತ ಮಹಿಳೆಯರೇ ರಾಜ್ಯದ ಖಜಾನೆಗೆ ಆದಾಯದ ಗ್ಯಾರಂಟಿ ಆಗಿರುತ್ತಿದ್ದರು.

ಕೂಲಿಗಾಗಿ ಕಾಳು

ನಾನು ಆಗಿನ್ನೂ ಶಾಲೆಗೆ ಹೋಗುತ್ತಿದ್ದೆ. ಆ ಸಮಯದಲ್ಲಿ ʼಕೂಲಿಗಾಗಿ ಕಾಳುʼ ಯೋಜನೆಯ ಬಗ್ಗೆ ಸಾಕಷ್ಟು ಓದಿದ್ದೆ ಹಾಗೂ ನನ್ನ ಮುಂದೆಯೇ ಅದರ ಅನುಭವಗಳ ಕಥೆಯನ್ನು ನೋಡಿದ್ದೆ. ಈ ಯೋಜನೆಯ ನಿರ್ದಿಷ್ಟ ಕೂಲಿಯ ಮೊತ್ತ ನನಗೆ ನೆನಪಿಲ್ಲ. ಆದರೆ ದಿನಕ್ಕೆ 100 ರೂಪಾಯಿ ನಿಗದಿಯಾಗಿದೆಯೆಂದರೆ ಅದರ ಅರ್ಧದಷ್ಟು ಮೊತ್ತದ ಅಕ್ಕಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿತ್ತು. ಉಳಿದ ಹಣವನ್ನು ನಗದು ರೂಪದಲ್ಲಿ ನೀಡಲಾಗುತ್ತಿತ್ತು. ಆಗಿನ ಕಾಲಕ್ಕೆ ಈ ಯೋಜನೆಯಲ್ಲಿ ಸ್ಥಳೀಯ ರಾಜಕೀಯ ಪುಡಾರಿಗಳು ಸಾಕಷ್ಟು ಹಣ ಲೂಟಿ ಮಾಡಿದ್ದರು. ಆದರೆ ಈ ಯೋಜನೆಯ ಉದ್ದೇಶ ತುಂಬಾ ಒಳ್ಳೆಯದಿತ್ತು. ದುಡಿಯಲು ಶಕ್ತರಾಗಿರುವರಿಗೆ ಅವಕಾಶ ಸೃಷ್ಟಿ ಮಾಡಿಕೊಡುವುದರ ಜತೆಗೆ, ಅವರ ಹೊಟ್ಟೆಯನ್ನು ತಣಿಸುವ ಕೆಲಸ ಮಾಡಲಾಗಿತ್ತು. ಇದರ ಜತೆಗೆ ಸರ್ಕಾರಕ್ಕೆ ರಸ್ತೆ, ಶಾಲೆ ನಿರ್ಮಾಣ ಸೇರಿ ಹಲವು ಕಾಮಗಾರಿಗಳ ಮೂಲಕ ಆಸ್ತಿ ಸೃಷ್ಟಿಯಾಗುತ್ತಿತ್ತು. ಇಲ್ಲಿ ಉದ್ಯೋಗದ ಗ್ಯಾರಂಟಿಯಿದೆ, ಹಾಗೆಯೇ ಊಟದ ಗ್ಯಾರಂಟಿಯಿದೆ, ಜತೆಗೆ ಹಣದ ಗ್ಯಾರಂಟಿಯೂ ಇದೆ. ಎಸ್‌.ಎಂ ಕೃಷ್ಣರ ಒಂದೇ ಗ್ಯಾರಂಟಿ ಯೋಜನೆಯಲ್ಲಿ ಮೂರಯ ಗ್ಯಾರಂಟಿಗಳಿದ್ದವು. ಇದೇ ಯೋಜನೆಗೆ ಒಂದಿಷ್ಟು ಹೊಸ ರೂಪ ನೀಡಿ, ಇಂದಿನ ಡಿಬಿಟಿ ಸೇರಿ ಇತರ ತಂತ್ರಜ್ಞಾನವನ್ನು ಬಳಸಿಕೊಂಡಿದ್ದರೆ ಹಣ ಸೋರಿಕೆ ತಡೆಯ ಜತೆಗೆ ಇನ್ನಷ್ಟು ಫಲಾನುಭವಿಗಳನ್ನು ಪರಿಣಾಮಕಾರಿಯಾಗಿ ತಲುಪಬಹುದಿತ್ತು. ಇದರೊಟ್ಟಿಗೆ ಸರ್ಕಾರವು ಅದೆಷ್ಟು ಆಸ್ತಿ ಸೃಷ್ಟಿ ಮಾಡಲು ಅವಕಾಶವಾಗುತ್ತಿತ್ತು.

ಬಿಸಿಯೂಟ

ತಮಿಳುನಾಡಿನಲ್ಲಿ ದಶಕಗಳ ಹಿಂದೆಯೇ ಕಾಮರಾಜರು ಜಾರಿಗೆ ತಂದಿದ್ದ ಬಿಸಿಯೂಟ ಯೋಜನೆಯನ್ನು ಕರ್ನಾಟಕದಲ್ಲಿ ಮೊದಲು ಆರಂಭಿಸಿದ್ದು ಎಸ್‌.ಎಂ.ಕೃಷ್ಣರ ಸರ್ಕಾರ. ಆ ದಿನಗಳಲ್ಲಿ ಮೇಲ್ವರ್ಗ ಎಂದು ಹೇಳಿಸಿಕೊಳ್ಳುವ ಕೆಲವರಿಂದ ಈ ಯೋಜನೆಗೆ ಭಾರಿ ವಿರೋಧವ್ಯಕ್ತವಾಗಿತ್ತು. ಆದರೆ ಶಾಲೆಗೆ ಮಕ್ಕಳನ್ನು ಕರೆತರಲು ಇದೊಂದು ಕ್ರಾಂತಿಕಾರಕ ಯೋಜನೆಯಾಗಿತ್ತು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯ ಜತೆಗೆ ಶಾಲಾ ಹಾಜರಾತಿ ಹೆಚ್ಚಿಸುವಲ್ಲಿ ಬಿಸಿಯೂಟ ದೊಡ್ಡ ಕ್ರಾಂತಿ ಮಾಡಿದೆ. ಇದರ ಸಂಪೂರ್ಣ ಶ್ರೇಯವು ಎಸ್‌ಎಂಕೆ ಸರ್ಕಾರಕ್ಕೆ ಸಲ್ಲಬೇಕು. ಈ ಯೋಜನೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿ ಗೊಂದಲದ ಗೂಡು ಮಾಡಿದ್ದರೂ ಬಿಸಿಯೂಟ ನೀಡುತ್ತಿದ್ದಾರೆ ಎನ್ನುವುದಷ್ಟೇ ಸದ್ಯದ ಖುಷಿ.

ಜಲಾನಯನ

ಇಂದು ಕೆರೆ ನುಂಗಿ ರೀಯಲ್‌ ಎಸ್ಟೇಟ್‌ನಲ್ಲಿ ಲೂಟಿ ಮಾಡಿದವರೆ ರಾಜಕಾರಣಿಳಾಗಲು ಅರ್ಹತೆ ಪಡೆಯುತ್ತಾರೆ. ಆದರೆ ಎರಡು ದಶಕಗಳ ಹಿಂದೆ ಎಸ್‌ಎಂಕೆ ಸರ್ಕಾರದಲ್ಲಿ ಜಲಾನಯನ ಯೋಜನೆ ಜಾರಿಯಲ್ಲಿತ್ತು. ಈ ಯೋಜನೆ ಮೂಲಕ ರಾಜ್ಯದ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವ ಯೋಜನೆ ಮಾಡಿದರು. ಇದಕ್ಕೂ ಮುಖ್ಯವಾಗಿ ಸಾವಿರಾರು ಕೆರೆಗಳಲ್ಲಿನ ಹೂಳೆತ್ತುವ ಕೆಲಸ ಮಾಡಿಸಿದರು. ತೀವ್ರ ಬರಗಾಲದಿಂದ ಬಳಲುತ್ತಿದ್ದ ರಾಜ್ಯಕ್ಕೆ ಆ ಯೋಜನೆ ಸಣ್ಣ ಆಶಾಭಾವನೆ ಮೂಡಿಸಿತ್ತು. ಕೃಷ್ಣರ ಶಿಷ್ಯಂದಿರು ಇಂದು ಕೆರೆ ನುಂಗುವುದರಲ್ಲೇ ಖುಷಿ ಪಡುತ್ತಿರುವಾಗ, ಅಂದು ಅವರು ಕೆರೆಗಳ ಹೂಳೆತ್ತಲು ಒತ್ತು ನೀಡಿದ್ದರು.

ಕೃಷ್ಣ ಅವರ ಶಿಷ್ಯರ ಗಮನಕ್ಕೆ...

ಎಸ್‌.ಎಂ ಕೃಷ್ಣರನ್ನು ತಂದೆ ಸಮಾನ ಎನ್ನುವವರು, ಗುರು ಎನ್ನುವವರೆಲ್ಲ ಇಂದು ಹಲವು ಪಕ್ಷಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್‌ ಅವರಂಥವರು ಅಧಿಕಾರದ ಸೂಪರ್‌ ಪವರ್‌ ಅನುಭವಿಸುತ್ತಿದ್ದಾರೆ. ಹಾಗಿದ್ದರೆ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ 60,000 ಕೋಟಿ ಖರ್ಚು ಮಾಡುವಾಗ ಎಸ್‌ಎಂಕೆಯವರ ಇಂತಹ ಜನೋಪಯೋಗಿ ಗ್ಯಾರಂಟಿಗಳು ಕಣ್ಣಿಗೆ ಬೀಳುವುದಿಲ್ಲವೇ? ನೀವು ಮನೆಯ ಮೇಲೊಂದು ಮನೆಯನ್ನಲ್ಲದೇ ಅಕ್ಕ ಪಕ್ಕದ ಊರು, ರಾಜ್ಯ, ದೇಶಗಳಲ್ಲಿಯೂ ಮನೆ ಮಾಡಿ, ಅಲ್ಲೆಲ್ಲ ಐಷಾರಾಮಿ ಕಾರಿನಲ್ಲಿ ಸುತ್ತಾಡುತ್ತಿರಬೇಕು. ಆದರೆ ನಮ್ಮ ಬಡ ಕನ್ನಡಿಗರು ಮಾತ್ರ ನಿಮ್ಮ ಪುಕ್ಕಟೆಯ ಒಂದಿಷ್ಟು ಸಾವಿರ ಹಣದ ಭಿಕ್ಷೆ ಪಡೆಯುತ್ತಿರಬೇಕೆ? ಎಸ್.ಎಂ ಕೃಷ್ಣರ ರೀತಿಯಲ್ಲಿ ದೂರದೃಷ್ಟಿ ಆಲೋಚನೆಯನ್ನು ಹೊಂದದೇ ಅವರ ಶಿಷ್ಯ ಎಂದು ಹೇಳಿಕೊಳ್ಳಲು ಸ್ವಲ್ಪವೂ ಮುಜುಗರವಾಗುವುದಿಲ್ಲವೇ? ನೀವು ನಂಬುವ ಗುರುವಿಗೆ ನಿಜವಾಗಿಯೂ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆಯೇ?

ಕೊನೆಯದಾಗಿ: ಗ್ಯಾರಂಟಿ ಯೋಜನೆಗಳೆಂದರೆ ಸರ್ಕಾರವು ಜನರಿಗೆ ಉಚಿತವಾಗಿ ಹಂಚುವಂತಾಗಬಾರದು. ಜನರು ಸರ್ಕಾರಕ್ಕೆ ಕೊಡುವಂತಾಗಲು ಅವಕಾಶ ಸೃಷ್ಟಿಸುವಂತಿರಬೇಕು. ಬಿಸಿಯೂಟ, ಸ್ತ್ರೀಶಕ್ತಿ, ಕೂಲಿಗಾಗಿ ಕಾಳು, ಜಲಾನಯನ ಯೋಜನೆಗಳು ಅಂತಹ ಪವಿತ್ರ ಕೆಲಸದ ಉದ್ದೇಶವನ್ನು ಹೊಂದಿದ್ದವು. ಅಂದ್ಹಾಗೆ ನಾವು ಜನರು ಕೂಡ ಒಂದು ವಿಚಾರವನ್ನು ಅರಿಯಬೇಕು. ನಮಗೆ ಉತ್ತಮ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ನೀಡಲಾಗದೇ, ಬೆಲೆ ಏರಿಕೆಗೆ ಉತ್ತರವನ್ನು ಕಂಡುಕೊಳ್ಳಲಾಗದ ಬೇಜವಾಬ್ದಾರಿ ಸರ್ಕಾರಗಳು ಇಂತಹ ಉಚಿತದ ರುಚಿಯನ್ನು ತೋರಿಸಿ ಹಾಳು ಬಾವಿಗೆ ಬಾವಿಗೆ ತಳ್ಳುತ್ತಿರುತ್ತಾರೆ. ಯಾರಿಗಾದರೂ ಈ ರಾಜ್ಯದಲ್ಲಿ ಎಸ್‌.ಎಂ ಕೃಷ್ಣರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎನ್ನುವ ಆಶಯವಿದ್ದರೆ ಜನಪರವಾದ ವೈಜ್ಞಾನಿಕ ಗ್ಯಾರಂಟಿ ಯೋಜನೆ ಜಾರಿ ಮಾಡಲು ಪ್ರಯತ್ನ ಮಾಡಿ, ಒತ್ತಾಯ ಮಾಡಿ. ಇಲ್ಲವಾದಲ್ಲಿ ಗುರು-ಶಿಷ್ಯ, ಜನ ಕಲ್ಯಾಣ, ಸಾಮಾಜಿಕ ನ್ಯಾಯ ಎನ್ನುವ ಹಳಸಲು ಭಾಷಣ ಮಾಡಬೇಡಿ.

  • ರಾಜೀವ ಹೆಗಡೆ, ಪತ್ರಕರ್ತ

Whats_app_banner