SM Krishna funeral: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ; ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  Sm Krishna Funeral: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ; ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

SM Krishna funeral: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ; ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

SM Krishna funeral: ಕರ್ನಾಟಕ ರಾಜಕಾರಣ ಕಂಡ ಜಂಟಲ್‌ಮನ್ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ತಮ್ಮ ಇಹಲೋಕ ಯಾತ್ರೆ ಪೂರ್ಣಗೊಳಿಸಿದ್ದು, ಇಂದು ಪಂಚಭೂತಗಳಲ್ಲಿ ಲೀನರಾದರು. ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು. ಅಂತಿಮ ನಮನ ಸಲ್ಲಿಸುವ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾವುಕರದಾದರು.

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪಂಚಭೂತಗಳಲ್ಲಿ ಲೀನರಾದರು. ಸೋಮನಹಳ್ಳಿಯಲ್ಲಿ ಇಂದು (ಡಿಸೆಂಬರ್ 11) ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಿತು.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪಂಚಭೂತಗಳಲ್ಲಿ ಲೀನರಾದರು. ಸೋಮನಹಳ್ಳಿಯಲ್ಲಿ ಇಂದು (ಡಿಸೆಂಬರ್ 11) ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಿತು.

SM Krishna funeral: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಇಂದು (ಡಿಸೆಂಬರ್ 11) ತಮ್ಮ ಹುಟ್ಟೂರು ಸೋಮಹಳ್ಳಿಯಲ್ಲಿ ಪಂಚಭೂತಗಳಲ್ಲಿ ಲೀನರಾದರು. ನಿನ್ನೆ ನಸುಕಿನ ವೇಳೆ ಕೊನೆಯುಸಿರೆಳೆದಿದ್ದ ಎಸ್‌ ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಇಂದು ಬೆಳಗ್ಗೆ 8 ಗಂಟೆಗೆ ಕರೆತಂದು ಅಲ್ಲಿಂದ ಸೋಮನಹಳ್ಳಿಗೆ ಕೊಂಡೊಯ್ಯಲಾಗಿದೆ. ಅಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿದೆ. ಎಸ್ ಎಂ ಕೃಷ್ಣ ಅವರಿಗೆ ಗಂಡು ಮಕ್ಕಳು ಇಲ್ಲದಿರುವ ಕಾರಣ ಮೊಮ್ಮಗ ಅಮರ್ಥ್ಯ ಸಿದ್ಧಾರ್ಥ್‌ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿದರು. ಅಮರ್ಥ್ಯ ಸಿದ್ಧಾರ್ಥ್‌ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಅಳಿಯ ಕೂಡ.

ಎಸ್‌ಎಂ ಕೃಷ್ಣ ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್​​ಎಂ ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಕಾರಣ ಅವರನ್ನು ನಂತರದಲ್ಲಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಡಾ. ಸತ್ಯನಾರಾಯಣ ಮೈಸೂರು, ಡಾ. ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಿತ್ತು. ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಕೃಷ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದು ಫಲಕಾರಿಯಾಗದೇ ಅವರು ಇಹಲೋಕ ಯಾತ್ರೆ ಮುಗಿಸಿದರು.

ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಎಸ್‌ಎಂಕೆ ಮೊಮ್ಮಗ ಅಮರ್ಥ್ಯ; ಕಣ್ಣೀರಿಟ್ಟ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

ಶ್ರೀಗಂಧದ ಕಟ್ಟಿಗೆಗಳನ್ನು ಜೋಡಿಸಿ ಸಿದ್ಧಪಡಿಸಿದ ಚಿತೆಯ ಮೇಲೆ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರದ ವಿಧಿ ವಿಧಾನದಂತೆ ನಡೆದಿದ್ದು, ಮೊಮ್ಮಗ ಅಮರ್ಥ್ಯ ಸಿದ್ಧಾರ್ಥ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸ್ಥಳದಲ್ಲಿದ್ದು, ಎಸ್ ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರದ ವೇಳೆ ಕುಟುಂಬ ಸದಸ್ಯರ ದುಃಖದಲ್ಲಿ ಭಾಗಿಯಾದರು.

ಇದಕ್ಕೂ ಮೊದಲು ಎಸ್‌ಎಂ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಕೆಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್ ಡಿ ಕುಮಾರ ಸ್ವಾಮಿ, ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಸೇರಿ ಗಣ್ಯರು ಪುಷ್ಪ ಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು. ಎಸ್‌ ಎಂ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ಕೂಡಲೇ ಡಿಕೆ ಶಿವಕುಮಾರ್ ಕಣ್ಣೀರಿಟ್ಟರು.

ಮೂರು ಸುತ್ತು ಕುಶಾಲು ತೋಪು ಸಿಡಿಸಿ ಪೊಲೀಸರು ಗೌರವ ಸಲ್ಲಿಸಿದರು. ಪೊಲೀಸ್ ವಾದ್ಯದಲ್ಲಿ ರಾಷ್ಟ್ರಗೀತೆ ನುಡಿಸಲಾಯಿತು. ಬಳಿಕ, ಪಾರ್ಥಿವ ಶರೀರಕ್ಕೆ ಹೊದೆಸಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಎಸ್ ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಸಮರ್ಪಿಸಿದರು. ಬಳಿಕ ಎಸ್ ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಿ ಸುತ್ತು ಬಂದು ಚಿತೆಯ ಬಳಿಗೆ ತರಲಾಯಿತು. ಪಾರ್ಥಿವ ಶರೀರವನ್ನು ಚಿತೆಯ ಮೇಲೆ ಇರಿಸಿದ ಬಳಿಕ ಕೊನೆಯ ವಿಧಿ ವಿಧಾನಗಳನ್ನು ಕುಟುಂಬ ಸದಸ್ಯರು ನಡೆಸಿದರು. ಗಣ್ಯರಾದಿಯಾಗಿ ಆಪ್ತರು ಎಸ್ ಎಂ ಕೃಷ್ಣ ಅವರ ಚಿತೆಯ ಮೇಲೆ ಕಾಷ್ಟಗಳನ್ನು ಇರಿಸಿ ಅಂತಿಮ ನಮನ ಸಲ್ಲಿಸಿದರು.

Whats_app_banner