ಟೀಕೆಗಳ ಮಧ್ಯೆಯೂ ಎಸ್‌ ಎಂ ಕೃಷ್ಣ ಅವರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ; ಪತ್ರಕರ್ತ ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಟೀಕೆಗಳ ಮಧ್ಯೆಯೂ ಎಸ್‌ ಎಂ ಕೃಷ್ಣ ಅವರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ; ಪತ್ರಕರ್ತ ರಾಜೀವ ಹೆಗಡೆ ಬರಹ

ಟೀಕೆಗಳ ಮಧ್ಯೆಯೂ ಎಸ್‌ ಎಂ ಕೃಷ್ಣ ಅವರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ; ಪತ್ರಕರ್ತ ರಾಜೀವ ಹೆಗಡೆ ಬರಹ

SM Krishna Death: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಸುಕಿನಲ್ಲಿ ವಿಧಿವಶರಾದರು. ಕರ್ನಾಟಕದ ರಾಜಕಾರಣದಲ್ಲಿ ಜಂಟಲ್‌ಮನ್‌ ಎಂದೇ ಗುರುತಿಸಿಕೊಂಡಿದ್ದ ಎಸ್ ಎಂ ಕೃಷ್ಣರ ಬಗ್ಗೆ ಹಲವು ಟೀಕೆಗಳು ಇರಬಹುದು. ಆದರೆ, ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವುಕಾರಣಗಳಿವೆ ಎಂಬುದನ್ನು ವಿವರಿಸಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ ಎಂದು ಅನೇಕ ವಿಷಯಗಳನ್ನು ನೆನಪಿಸಿಕೊಂಡಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.
ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ ಎಂದು ಅನೇಕ ವಿಷಯಗಳನ್ನು ನೆನಪಿಸಿಕೊಂಡಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

SM Krishna Death: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಮಂಗಳವಾರ (ಡಿಸೆಂಬರ್ 10) ನಸುಕಿನಲ್ಲಿ ವಿಧಿವಶರಾದರು. ಬುಧವಾರ (ಡಿಸೆಂಬರ್ 11) ಬೆಳಗ್ಗೆ 8 ಗಂಟೆ ತನಕ ಅವರ ಸದಾಶಿವ ನಗರದ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಮದ್ದೂರು ಸೋಮನಹಳ್ಳಿಗೆ ಕೊಂಡೊಯ್ದು ಅಲ್ಲಿ ಅಪರಾಹ್ನ 3 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. 50 ವರ್ಷ ರಾಜಕಾರಣ ನಡೆಸಿದ ಮುತ್ಸದ್ದಿ ರಾಜಕಾರಣಿ ಎಸ್ ಎಂ ಕೃಷ್ಣ, ರಾಜಕೀಯ ವಲಯದಲ್ಲಿ ಜಂಟಲ್‌ಮನ್ ಎಂದೇ ಗುರುತಿಸಿಕೊಂಡಿದ್ದವರು. ಅವರ ಬಗ್ಗೆ ಹಲವು ಟೀಕೆಗಳು ಇರಬಹುದು. ಆದರೆ, ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವುಕಾರಣಗಳಿವೆ ಎಂಬುದನ್ನು ವಿವರಿಸಿದ್ದಾರೆ ಪತ್ರಕರ್ತ ರಾಜೀವ ಹೆಗಡೆ.

ಟೀಕೆಗಳ ಮಧ್ಯೆಯೂ ಕೃಷ್ಣರನ್ನು ಇಷ್ಟಪಡಲು ಹತ್ತು ಹಲವು ಕಾರಣಗಳಿವೆ!

ನನಗೇನು ರಾಜಕೀಯದ ಗಂಧಗಾಳಿ ಗೊತ್ತಿರದ ದಿನವದು. ಆದರೆ ನನ್ನ ತಂದೆ ಖಟ್ಟರ್‌ ಕಾಂಗ್ರೆಸ್‌ ಬೆಂಬಲಿಗರಾಗಿದ್ದ ಹಿನ್ನೆಲೆಯಲ್ಲಿ ನನಗೆ ರಾಜಕೀಯವೆಂದರೆ ಅವರ ಮಾತು, ಆಕಾಶವಾಣಿ ಹಾಗೂ ಪತ್ರಿಕೆಗಳಿಗೆ ಸೀಮಿತವಾಗಿದ್ದವು. ಆ ದಿನಗಳಲ್ಲಿ ನನ್ನನ್ನು ಆಕರ್ಷಿಸಿದ್ದು ಎರಡು ವ್ಯಕ್ತಿತ್ವ. ರಾಷ್ಟ್ರ ಮಟ್ಟದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ರಾಜ್ಯ ಮಟ್ಟದಲ್ಲಿ ಎಸ್‌.ಎಂ ಕೃಷ್ಣ. ರಾಜಕೀಯ ಹಾಗೂ ನನ್ನ ಮಟ್ಟಿಗೆ ಇವರಿಬ್ಬರಲ್ಲೂ ಒಂದಿಷ್ಟು ಸಾಮ್ಯತೆಗಳು ಆಗ ಕಾಣಿಸಿದ್ದವು. ಇಬ್ಬರೂ ಮೃಧುಭಾಷಿಗಳು, ರಾಜಕೀಯವಾಗಿ ಅಜಾತಶತ್ರುಗಳು ಹಾಗೂ ಒಂದೇ ಅವಧಿಗೆ ದೇಶ, ರಾಜ್ಯದಲ್ಲಿ ಅತ್ಯುನ್ನತ ಹುದ್ದೆಗೆ ಏರಿದವರಾಗಿದ್ದರು. ಅಂತಹ ಸಂದರ್ಭದಲ್ಲಿ ಎಸ್‌.ಎಂ ಕೃಷ್ಣರು ನನ್ನ ಮನಸ್ಸಿಗೆ ಹತ್ತಿರವಾಗಲು ಇನ್ನೂ ಕೆಲ ಕಾರಣಗಳಿದ್ದವು.

ಆಗಿನ ಕಾಲದಲ್ಲಿ ಚುನಾವಣೆ ಪ್ರಚಾರಕ್ಕೆ ಸ್ಟಿಕ್ಕರ್‌ಗಳ ಬಳಕೆ ದೊಡ್ಡ ಮಟ್ಟದಲ್ಲಿ ಆಗುತ್ತಿತ್ತು. ತಂದೆಯ ಕಾರಣದಿಂದ ನಮ್ಮ ಮನೆಯಲ್ಲೂ ಎಸ್‌.ಎಂ ಕೃಷ್ಣರ ಹತ್ತಾರು ಸ್ಟಿಕ್ಕರ್‌ಗಳಿದ್ದವು. ಅವರ ವ್ಯಕ್ತಿತ್ವದಿಂದ ಆಕರ್ಷಿತಗೊಂಡಿದ್ದಕ್ಕಾಗಿ ನನ್ನ ಪುಸ್ತಕ ಹಾಗೂ ಪಟ್ಟಿಗಳೊಳಗೆ ಒಂದಿಷ್ಟು ಎಸ್‌ಎಂಕೆ ಸ್ಟಿಕ್ಕರ್‌ಗಳು ಸೇರಿಕೊಂಡಿದ್ದವು.

ಅಂದಿನಿಂದಲೂ ಕೃಷ್ಣರ ಮೃಧು ಭಾಷೆ, ಸಮಯೋಚಿತ ಹಾಗೂ ಅಗತ್ಯಕ್ಕೆ ಬೇಕಾದಷ್ಟು ಮಾತು, ಶಿಸ್ತು, ಅಚ್ಚುಕಟ್ಟಾದ ವಸ್ತ್ರ ಧಾರಣೆ ನನಗೆ ಅತಿ ಖುಷಿ ಕೊಟ್ಟ ವಿಚಾರ. ಕೃಷ್ಣ ಅವರ ಬಗ್ಗೆ ನನ್ನ ಹಿರಿಯ ಪತ್ರಕರ್ತ ಸ್ನೇಹಿತರಿಂದ ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ಆದರೆ ನಾನು ನೋಡಿದಂತೆ ಹಾಗೂ ಕೇಳಿದಂತೆ ಅವರಲ್ಲಿ ಅತಿಯಾಗಿ ಇಷ್ಟವಾಗುವುದು ಅವರ ಮಾತು ಹಾಗೂ ವೇಷಭೂಷಣ. ಈ ವಯಸ್ಸಿನಲ್ಲೂ ಏನೇನೋ ಮಾತನಾಡುತ್ತಿರಲಿಲ್ಲ. ಹಾಗೆಯೇ ಯುವಕರೇ ನಾಚುವಂತೆ ಬಟ್ಟೆ ಧರಿಸುತ್ತಿದ್ದರು. ಅವರು ಬಿಜೆಪಿಗೆ ಸೇರುವ ಮುನ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲೂ ಅವರ ಮಾತು ಎಲ್ಲೆ ಮೀರಿರಲಿಲ್ಲ.

ತೂಕದ ಮಾತುಗಳನ್ನಾಡುತ್ತಿದ್ದರು ಎಸ್‌ಎಂ ಕೃಷ್ಣ

ಮಲ್ಲಿಗೆ ಹೂವು ಹಾಗೂ ಮುತ್ತಿನ ಹಾರವನ್ನು ಪೋಣಿಸುವುದು ಒಂದು ಕಲೆ. ಅದನ್ನು ಚೆಂದವಾಗಿ ಎಲ್ಲರೂ ಮಾಡಲಾಗದು. ಕೃಷ್ಣ ಅವರ ಮಾತುಗಳು ಕೂಡ ಒಂದು ಚೆಂದದ ಮಲ್ಲಿಗೆ ಹಾಗೂ ಮುತ್ತಿನ ಹಾರದಂತಿರುತ್ತದೆ. ಹಾರದ ಮಧ್ಯೆ ಎಲ್ಲಿಯೂ ಕೆಟ್ಟ ಹೂವನ್ನು ನೋಡಲಾಗುವುದಿಲ್ಲವೋ ಅದೇ ರೀತಿ, ಅವರ ಮಾತಿನ ಮಧ್ಯೆ ಒಂದೇ ಒಂದು ಕೆಟ್ಟ ಮಾತನ್ನು ಹುಡುಕಲು ಸಾಧ್ಯವಿಲ್ಲ. ಪ್ರತಿಯೊಂದು ಶಬ್ದವನ್ನು ತೂಕಕ್ಕೆ ಹಾಕಿ ಮಾತನಾಡುವ ವ್ಯಕ್ತಿತ್ವ ಅವರದ್ದು. ಅವರು ಅರ್ಧ ಗಂಟೆ ನಿರಂತರವಾಗಿ ಮಾತನಾಡಿದರೂ ಅಪಾರ್ಥದ ಹೇಳಿಕೆ ಬರುತ್ತಿರಲಿಲ್ಲ.

ʼಅವಶ್ಯಕತೆ ಬಂದಾಗ ಹೇಳುತ್ತೇನೆ... ಸಂಬಂಧಪಟ್ಟವರ ಬಳಿ ಚರ್ಚಿಸುತ್ತೇನೆ.... ನನ್ನ ಬಳಿ ಮಾತನಾಡಿದಾಗ ಸಲಹೆ ನೀಡುತ್ತೇನೆ...ʼ ಎನ್ನುವುದು ಅವರ ರಾಜಕೀಯ ವಿದಾಯ ನುಡಿಯಲ್ಲಿ ಮಾತ್ರ ಇರಲಿಲ್ಲ. ಅವರ ಆರು ದಶಕಗಳ ರಾಜಕೀಯ ಬದುಕು ಕೂಡ ಇದೇ ರೀತಿ ಇತ್ತು ಎನ್ನುವುದು ಕೇಳಿದ್ದೇನೆ. ಎಸ್‌ಎಂಕೆ ಎನ್ನುವ ರಾಜಕಾರಣಿ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳಿವೆ. ಆದರೆ ಮಾತಿಗೆ ಸೀಮಿತವಾಗಿ ಅವರು ಎಲ್ಲರಿಗೂ ಆದರ್ಶ.

ಅಂದ್ಹಾಗೆ ಎಸ್‌ಎಂಕೆ ಅಧಿಕಾರ ಮಾಡಿದ ನಾಲ್ಕೂವರೆ ವರ್ಷವು ಸಮಸ್ಯೆಗಳ ಆಗರವೇ ಆಗಿತ್ತು. ಅದರಲ್ಲೂ ಬರ ಪರಿಸ್ಥಿತಿ ಹಾಗೂ ರಾಜ್‌ಕುಮಾರ್‌ ಅಪಹರಣ ಅವರನ್ನು ತೀರಾ ನಿದ್ದೆಗೆಡಿಸಿತ್ತು. ಆದರೆ ಆ ಸವಾಲುಗಳ ಮಧ್ಯೆಯೂ ಬೆಂಗಳೂರು ಅಭಿವೃದ್ಧಿಗೆ ಪಣ ತೊಟ್ಟರು. ಜತೆಗೆ ಎಲ್ಲಿಯೂ ತಾಳ್ಮೆ ಕಳೆದುಕೊಂಡು ಸಾರ್ವಜನಿಕವಾಗಿ ಅತಿಯಾಗಿ ವರ್ತಿಸಲಿಲ್ಲ.

ನನಗೆ ಇಂದಿನ ರಾಜಕಾರಣಿಗಳನ್ನು ನೋಡಿದಾಗಲೆಲ್ಲ ಎಸ್‌.ಎಂ.ಕೃಷ್ಣ ಪದೇಪದೆ ನೆನಪಾಗುತ್ತಾರೆ. ಹಾಗೆಯೇ ವೈಯಕ್ತಿಕವಾಗಿ ನಾನು ಕೂಡ ಕೋಪದಲ್ಲಿ ವ್ಯವಹರಿಸಿದಾಗ ಈ ವ್ಯಕ್ತಿತ್ವ ನೆನಪಿಗೆ ಬರುತ್ತಾರೆ. ದಿನ ಬೆಳಗಾದರೆ ಮುಖ್ಯಮಂತ್ರಿ, ಸಚಿವರು, ರಾಜಕಾರಣಿಗಳು ಟಿವಿ ಮೈಕ್‌ಗಳು ಸಿಕ್ಕಾಗಲೆಲ್ಲಾ ಬಾಯಿಗೆ ಬಂದಂತೆ ಒದರುತ್ತಾರೆ. ಒಂದೊಮ್ಮೆ ಕೃಷ್ಣ ಅವರು ಇಂದಿನ ಕಾಲದಲ್ಲಿ ಮುಖ್ಯಮಂತ್ರಿ ಆಗಿದ್ದರೆ ವಿದ್ಯುನ್ಮಾನ ಪತ್ರಿಕೋದ್ಯಮಕ್ಕೆ ಸರಕುಗಳು ಸಾಕಷ್ಟು ಕಡಿಮೆ ಆಗುತ್ತಿದ್ದವೇನೋ? ಮೈಕ್‌ಗಳೆದುರು ಬಾಯಿಗೆ ಬಂದಂತೆ ಕಿರುಚುವ ರಾಜಕಾರಣಿಗಳ ಮಧ್ಯೆ ಇವರು ಭಿನ್ನವಾಗಿ ಕಾಣಿಸುತ್ತಾರೆ.

ಗಮನಸೆಳೆಯುವ ಮೂರು ಅಂಶಗಳು

ಎಸ್‌.ಎಂ.ಕೃಷ್ಣ ಅವರ ಆಡಳಿತದ ಬಗ್ಗೆ ನಾನು ವೈಯಕ್ತಿಕವಾಗಿ ಮೂರು ವಿಚಾರಗಳನ್ನು ಕಂಡುಕೊಂಡಿದ್ದೇನೆ. ಮೊದಲನೇಯದು ಅಗತ್ಯಕ್ಕೆ ತಕ್ಕಷ್ಟು ಮಾತು, ಎರಡನೇಯದು ಬೆಂಗಳೂರು ಅಭಿವೃದ್ಧಿಯ ಕನಸು ಹಾಗೂ ಮೂರನೇಯದು ಭ್ರಷ್ಟರನ್ನು ಸಲುಹಿದ ಆರೋಪ. ಇಂದಿನವರಿಗೆ ಮೊದಲೆರಡು ಅಂಶಗಳು ಮಾದರಿಯಾಗಲಿ. ಅವರ ಕನಸಿನ ಬೆಂಗಳೂರನ್ನು ಬ್ರಾಂಡ್‌ ಮಾಡುವುದಾಗಿ ಅವರ ಶಿಷ್ಯನೇ ಆಗಿರುವ ಡಿ.ಕೆ ಶಿವಕುಮಾರ್‌ ಸಂಕಲ್ಪ ಮಾಡಿದ್ದಾರೆ. ಅಂದ್ಹಾಗೆ ಡಿಕೆಶಿಯ ‌ʼಸರ್ವತೋಮುಖʼ ಬೆಳವಣಿಗೆಯಲ್ಲಿ ಎಸ್‌ಎಂಕೆ ಪಾತ್ರ ದೊಡ್ಡದಿದೆ. ರಾಜಕೀಯ ಗುರು ಹಾಗೂ ಆತ್ಮೀಯ ಸಂಬಂಧಿಗೆ ʼಬೆಂಗಳೂರಿನ ನೈಜ ಹಾಗೂ ಪರಿಶುದ್ಧ ಅಭಿವೃದ್ಧಿʼ ಮೂಲಕ ಶಿಷ್ಯ ಶ್ರದ್ಧಾಂಜಲಿ ಸಲ್ಲಿಸುವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ.

ಕೊನೆಯದಾಗಿ: ಎಸ್.ಎಂ ಕೃಷ್ಣರ ಸುಸಂಸ್ಕೃತ ನಾಲಿಗೆ, ದೂರದೃಷ್ಟಿ, ಸಾರ್ವಜನಿಕ ವರ್ತನೆ ಇತರ ಅಧಿಕಾರಸ್ಥರಿಗೆ ಮಾದರಿಯಾಗಲಿ. ಹಾಗೆಯೇ ಭ್ರಷ್ಟರನ್ನು ಸಲುಹಿದರೆ ಅದುವೇ ಹೇಗೆ ರಾಜಕೀಯ ಹಾಗೂ ಕೌಟುಂಬಿಕವಾಗಿ ಚಕ್ರವ್ಯೂಹವಾಗುತ್ತದೆ ಎನ್ನುವುದು ಕೂಡ ರಾಜಕಾರಣಿಗಳಿಗೆ ಪಾಠವಾಗಲಿ.

  • ರಾಜೀವ ಹೆಗಡೆ, ಪತ್ರಕರ್ತ

Whats_app_banner