ಇದೆಂಥಾ ದುರಂತ, ಅಪ್ಪನ ಸಾಲಕ್ಕೆ ಮಗನ ಕಾಲಿಗೆ ಸರಪಳಿ; ಮತ್ತೊಂದು ಪ್ರಕರಣದಲ್ಲಿ ತಂದೆ ಕೊಲೆ ಮಾಡಿದ ಮಗ, ಸೊಸೆ ಅರೆಸ್ಟ್
Hubli Dharwad Crime News: ತಂದೆಯನ್ನು ಕೊಲೆಗೈದು ಪರಾರಿಯಾಗಿದ್ದ ಮಗ ಮತ್ತು ಸೊಸೆಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಪ್ಪ ಮಾಡಿದ ಸಾಲಕ್ಕೆ ಸರಪಳಿ ಹಾಕಿದ್ದ ಮಗನನ್ನು ರಕ್ಷಿಸಲಾಗಿದೆ.
ಹುಬ್ಬಳ್ಳಿ: ತಂದೆಯನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಮಗ ಮತ್ತು ಸೊಸೆಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತೋಷನಗರದ ಅಣ್ಣಪ್ಪ ಮೈಸೂರು ಹಾಗೂ ಈತನ ಪತ್ನಿ ಲಕ್ಷ್ಮೀ ಮೈಸೂರು ಎಂಬವರನ್ನು ಬಂಧಿಸಲಾಗಿದೆ. ಇತ್ತೀಚೆಗೆ ತಂದೆ ಮತ್ತು ಮಗನ ನಡುವೆ ದುಡಿಯುವ ವಿಷಯಕ್ಕೆ ಸಂಬಂಧಿಸಿ ಜಗಳವಾಗಿತ್ತು. ಇದೇ ವಿಷಯಕ್ಕಾಗಿ ತಂದೆಯ ಮೇಲೆ ಮಗ ಹಲ್ಲೆ ಮಾಡಿದ್ದು, ಅವರ ತಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆರೋಪಿಗಳು ತಪ್ಪಿಸಿಕೊಂಡಿದ್ದರು. ಇದೀಗ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಐ ಸುರೇಶ ನೇತೃತ್ವದ ತಂಡ ಬಂಧಿಸಿದೆ.
ಅಪ್ಪನ ಸಾಲಕ್ಕೆ ಮಗನ ಕಾಲಿಗೆ ಸರಪಳಿ!
ಧಾರವಾಡ: ಅಪ್ಪ ಪಡೆದ 1 ಲಕ್ಷ ರೂಪಾಯಿ ಸಾಲಕ್ಕಾಗಿ ಅವರ ಮಗನ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಅಮಾನವೀಯ ಘಟನೆ ಹೊಸತೇಗೂರಿನ ಓಲ್ಡ್ ಢಾಬಾದಲ್ಲಿ ನಡೆದಿದೆ. ವೆಂಕಟಾಪುರದ ಅರುಣ್ ಕುಮಾರ ಯಾದವ್ (50), ತಮ್ಮ ಪುತ್ರ ಕಿರಣ್ ಕುಮಾರ್ ಯಾದವ್ (26) ಜೊತೆ ಓಲ್ಡ್ ಢಾಬಾದಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಕಿರಣ್ ತಂದೆ ಢಾಬಾ ಮಾಲೀಕನ ಬಳಿ 1 ಲಕ್ಷ ರೂ ಸಾಲ ಪಡೆದಿದ್ದರು. ಆದರೆ ಅರುಣ್ ಅವರು ಸಾಲ ಪಡೆದು ಢಾಬಾ ಬಿಟ್ಟು ಹೋದರು. ಹೀಗಾಗಿ ಅಲ್ಲೇ ಕೆಲಸ ಮಾಡುತ್ತಿದ್ದ ಮಗನ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಎಸ್ಪಿ ಡಾ.ಗೋಪಾಲ ಬ್ಯಾಕೋಡ್ ಪರಿಶೀಲಿಸಿ ಕ್ರಮಕ್ಕೆ ಸೂಚಿಸಿದ್ದಾರೆ.
ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎಸ್ಐಟಿ
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯರೊಬ್ಬರು ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (SIT) ಶನಿವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. 61 ವರ್ಷದ ಮುನಿರತ್ನ ವಿರುದ್ಧ ಸೆಪ್ಟಂಬರ್ 13ರಂದು ದಾಖಲಾಗಿದ್ದ3 ಎಫ್ಐಆರ್ ಗಳ ಪೈಕಿ ಎರಡನೇ ಎಫ್ಐಆರ್ಗೆ ಸಂಬಂಧಿಸಿದ ಚಾರ್ಜ್ ಶೀಟ್ ಇದಾಗಿದೆ. ಇವರ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸದ್ಯ ಮುನಿರತ್ನ ಜಾಮೀನು ಪಡೆದು ಹೊರಗಿದ್ದಾರೆ.
ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಕುಸಿದ ತಾಪಮಾನ
ಬೆಂಗಳೂರು: ಬಂಗಾಳಕೊಲ್ಲಿಯಿಂದ ಹೊರಟ ಫೆಂಗಲ್ ಚಂಡಮಾರುತದ ಪ್ರಭಾವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಮೇಲೂ ಆಗಿದ್ದು, ಇಂದು (ಡಿಸೆಂಬರ್ 1) ಬೆಳ್ಳಂಬೆಳಗ್ಗೆ ತಾಪಮಾನ ಕುಸಿದಿದ್ದು 20 ಡಿಗ್ರಿ ಸೆಲ್ಶಿಯಸ್‌ಗೂ ಕೆಳಕ್ಕೆ ಕುಸಿಯುವ ಸಾಧ್ಯತೆ ಕಂಡುಬಂದಿದೆ. ಕೆಲವೆಡೆ ಮುಂಜಾನೆ ಮಂಜು ಮತ್ತು ಚಳಿ ಅನುಭವಕ್ಕೆ ಬಂದರೆ, ಬೆಂಗಳೂರು ನಗರದಲ್ಲಿ ಹನಿ ಮಳೆ ಸುರಿಯುತ್ತಿರುವಾಗಲೇ ಅನೇಕರು ಹೊಸ ಚಿಗುರು ಮ್ಯಾರಥಾನ್‌ನಲ್ಲಿ ಭಾಗವಹಿಸಿದವರು. ಈಗಾಗಲೇ ಹವಾಮಾನ ಇಲಾಖೆ ಕೊಟ್ಟಿರುವ ಹವಾಮಾನ ಮುನ್ಸೂಚನೆ ಪ್ರಕಾರ, ಮುಂದಿನ ಎರಡು ದಿನಗಳ ಅವಧಿಯಲ್ಲಿ ಕನಿಷ್ಠ ತಾಪಮಾನ 20 -21 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿರಲಿದೆ. ಚಾಮರಾಜನಗರ, ಮಂಡ್ಯ, ಮೈಸೂರಲ್ಲಿ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ನಾಳೆ ಬೆಂಗಳೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.