ಇಂದಿನಿಂದ ಕರ್ನಾಟಕ ಕುಂಭಮೇಳ; ಮೈಸೂರಿನ ತಿ ನರಸೀಪುರದಲ್ಲಿ ಸಿದ್ಧತೆ, 3 ದಿನ ಪುಣ್ಯಸ್ನಾನಕ್ಕೆ ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  ಇಂದಿನಿಂದ ಕರ್ನಾಟಕ ಕುಂಭಮೇಳ; ಮೈಸೂರಿನ ತಿ ನರಸೀಪುರದಲ್ಲಿ ಸಿದ್ಧತೆ, 3 ದಿನ ಪುಣ್ಯಸ್ನಾನಕ್ಕೆ ಅವಕಾಶ

ಇಂದಿನಿಂದ ಕರ್ನಾಟಕ ಕುಂಭಮೇಳ; ಮೈಸೂರಿನ ತಿ ನರಸೀಪುರದಲ್ಲಿ ಸಿದ್ಧತೆ, 3 ದಿನ ಪುಣ್ಯಸ್ನಾನಕ್ಕೆ ಅವಕಾಶ

ಇಂದಿನಿಂದ ಮೂರು ದಿನಗಳ ಕಾಲ ತಿ ನರಸೀಪುರದಲ್ಲಿ ನಡೆಯುತ್ತಿರುವ ಕರ್ನಾಟಕ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 13ನೇ ಕುಂಭಮೇಳಕ್ಕೆ ಮೈಸೂರು ಜಿಲ್ಲಾಡಳಿತ ಅಂತಿಮ ಸಿದ್ದತೆ ನಡೆಸಿದೆ. ಕೋವಿಡ್‌ ಕಾರಣದಿಂದಾಗಿ 2022ರ ಕುಂಭಮೇಳ ನಡೆದಿರಲಿಲ್ಲ.

ಇಂದಿನಿಂದ ಕರ್ನಾಟಕ ಕುಂಭಮೇಳ; ತಿ ನರಸೀಪುರದಲ್ಲಿ 3 ದಿನ ಪುಣ್ಯಸ್ನಾನಕ್ಕೆ ಅವಕಾಶ
ಇಂದಿನಿಂದ ಕರ್ನಾಟಕ ಕುಂಭಮೇಳ; ತಿ ನರಸೀಪುರದಲ್ಲಿ 3 ದಿನ ಪುಣ್ಯಸ್ನಾನಕ್ಕೆ ಅವಕಾಶ

ಮೈಸೂರು: ನಿಮಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗಲು ಸಾಧ್ಯವಾಗದಿದ್ದರೆ ಬೇಸರ ಬೇಕಾಗಿಲ್ಲ. ಏಕೆಂದರೆ ಕರ್ನಾಟಕದಲ್ಲೂ ಅದ್ಧೂರಿ ಕುಂಭಮೇಳ ಇಂದಿನಿಂದ (ಫೆಬ್ರವರಿ 10ರ ಸೋಮವಾರ)ಆರಂಭವಾಗಲಿದೆ. ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ದಕ್ಷಿಣ ಭಾರತದ ಏಕೈಕ ಕುಂಭಮೇಳಕ್ಕೆ ಸಿದ್ದತೆ ಪೂರ್ಣಗೊಂಡಿದೆ. ಪವಿತ್ರ ನದಿಗಳಾದ ಕಾವೇರಿ-ಕಪಿಲಾ ನದಿಗಳ ಜತೆಗೆ ಸ್ಪಟಿಕ ಸರೋವರದ ಸಂಗಮ ತಾಣದಲ್ಲಿ ಜನರಿಗೆ ಪುಣ್ಯಸ್ನಾನದ ಅವಕಾಶ ಕಲ್ಪಿಸಲಾಗಿದೆ. ಆರು ವರ್ಷಗಳ ನಂತರ ತಿರುಮಕೂಡಲು ನರಸೀಪುರದ ಗುಂಜಾನರಸಿಂಹಸ್ವಾಮಿ ದೇಗುಲದ ಸನ್ನಿಧಿಯಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಜನರು ಹರಿದು ಬರುತ್ತಿದ್ದಾರೆ.

ಇಂದಿನಿಂದ ಮೂರು ದಿನಗಳ ಕಾಲ (ಫೆ. 10, 11, 12) ಕುಂಭಮೇಳದ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೈಸೂರು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ. 3 ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ನಡೆಯುತ್ತಿದ್ದು, ಕೋವಿಡ್‌ ಕಾರಣದಿಂದಾಗಿ 2022ರ ಕುಂಭಮೇಳ ನಡೆದಿರಲಿಲ್ಲ. ಈ ಬಾರಿ ನಡೆಯುತ್ತಿರುವುದು 13ನೇ ಕುಂಭಮೇಳ.

ಮೊದಲ ದಿನವಾದ ಇಂದು ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 2025ರ ಫೆಬ್ರುವರಿ 10ರ ಸೋಮವಾರ, ಪುಣ್ಯಸ್ನಾಕ್ಕೆ ಆದಿಚುಂಚನಗಿರಿ ಶರೀಗಳು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಸಂಜೆ 5 ಗಂಟೆಗೆ-ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. 3 ದಿನಗಳ ಕಾಲ ನಡೆಯುವ ಕುಂಭಮೇಳದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಪುಣ್ಯಸ್ನಾನಕ್ಕೆ ಎಲ್ಲಿ ವ್ಯವಸ್ಥೆ?

ಅಗಸ್ತೇಶ್ವರ, ಗುಂಜಾ ನರಸಿಂಹ ಸ್ವಾಮಿ ಮತ್ತು ಭಿಕ್ಷೇಶ್ವರ ಸ್ವಾಮಿ ದೇವಾಲಯದ ಬಳಿ ಸ್ನಾನಘಟ್ಟ ನಿರ್ಮಿಸಲಾಗಿದ್ದು, ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ವೃದ್ಧರು ಮತ್ತು ಮಕ್ಕಳು ಮುಳುಗದಂತೆ ಕ್ರಮ ವಹಿಸಲಾಗುತ್ತಿದೆ. ಸ್ನಾನ ಮಾಡುವವರು ಗರಿಷ್ಠ ಮೂರು ಅಡಿ ಆಳವಿರುವಲ್ಲಿವರೆಗೆ ಹೋಗಿ ಸ್ನಾನ ಮಾಡಲು ಅವಕಾಶವಿದೆ. ಮೂರು ಅಡಿ ಆಳದ ನಂತರ ಬ್ಯಾರಿಕೇಡ್ ಹಾಕಲಾಗಿದೆ.

ತೇಲುವ ಸೇತುವೆ ಇಲ್ಲ

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಈ ಬಾರಿ ತೇಲುವ ಸೇತುವೆ ನಿರ್ಮಾಣ ಮಾಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ 15ಕ್ಕೂ ಹೆಚ್ಚು ಬೋಟ್ ನಿಯೋಜಿಸಲು ವ್ಯವಸ್ಥೆ ಮಾಡಿದೆ. ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಕಾಲ್ತುಳಿತ ಸಂಭವಿಸದಂತೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಏಳು ವರ್ಷಗಳ ಬಳಿಕ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿರುವ ಹಿನ್ನೆಲೆ, ತ್ರಿವೇಣಿ ಸಂಗಮದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಇತ್ತೀಚೆಗೆ ತ್ರಿವೇಣಿ ಸಂಗಮಕ್ಕೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿ ಕುಂಭಮೇಳ ನಡೆಯಲಿರುವ ಸ್ಥಳ ಪರಿಶೀಲನೆ ನಡೆಸಿದ್ದರು. ಧಾರ್ಮಿಕ ಕಾರ್ಯಕ್ರಮ ನಡೆಯುವ ವೇದಿಕೆ, ಪುಣ್ಯಸ್ನಾನ ಮಾಡುವ ಸ್ಥಳ ಪರಿಶೀಲನೆ ನಡೆಸಿದರು. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಆಗಮಿಸುತ್ತಾರೆ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಯಾವುದೇ ಲೋಪದೋಷಗಳು ಆಗದ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ಮಲಾನಂದನಾಥ ಸ್ವಾಮಿಜಿ ಸಲಹೆ ನೀಡಿದರು.

ಏನೇನು ಕಾರ್ಯಕ್ರಮ?

  • ಪ್ರತಿದಿನ ಸಂಕಲ್ಪ, ಹೋಮ, ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ ನಡೆಯಲಿದೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
  • ಫೆ.10ರ ಸೋಮವಾರ ಬೆಳಗ್ಗೆ 8:30ಕ್ಕೆ ಅನುಜ್ಞೆ ಮತ್ತು ಧ್ವಜಾರೋಹಣ ಉದ್ಘಾಟನೆ. ಸಂಜೆ 5 ಗಂಟೆಗೆ ಧರ್ಮಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
  • ಫೆ.11ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಧರ್ಮಸಭೆ. ಸಂಜೆ 4 ಗಂಟೆಗೆ ಗುಂಜಾನರಸಿಂಹ ಸ್ವಾಮಿ ದೇವಸ್ಥಾನದಿಂದ ನರಸೀಪರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ. ರಾತ್ರಿ 7 ಗಂಟೆಗೆ ದೀಪಾರತಿ.
  • ಫೆ.12ರ ಬುಧವಾರ‌ ಪುಣ್ಯಸ್ನಾನ, ಧರ್ಮಸಭೆ

ಇದನ್ನೂ ಓದಿ | ಕರ್ನಾಟಕ ಕುಂಭಮೇಳಕ್ಕೆ ಕ್ಷಣಗಣನೆ, ಮೈಸೂರಿನ ತಿ ನರಸೀಪುರದಲ್ಲಿ ನಾಳೆಯಿಂದ ಕುಂಭಮೇಳ; ತ್ರಿವೇಣಿ ಸಂಗಮದಲ್ಲಿ ಸಿದ್ಧತೆ

Whats_app_banner