ಸ್ಪೆಷಲ್ 26 ಸಿನಿಮಾದಂತೆ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ವಂಚಕರ ತಂಡ, ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಸ್ಪೆಷಲ್ 26 ಸಿನಿಮಾದಂತೆ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ವಂಚಕರ ತಂಡ, ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ

ಸ್ಪೆಷಲ್ 26 ಸಿನಿಮಾದಂತೆ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ವಂಚಕರ ತಂಡ, ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ

ವಿಟ್ಲದ ಸಿಂಗಾರಿ ಬೀಡಿ ಕಂಪನಿ ಮಾಲೀಕನ ಮನೆಯಿಂದ 30 ಲಕ್ಷ ರೂಪಾಯಿಯನ್ನು ಪಕ್ಕಾ ಸಿನಿಮಾ ಸ್ಟೈಲ್‌ನಲ್ಲೇ ದೋಚಿದ ಘಟನೆ ಸ್ಪೆಷಲ್ 26 ಸಿನಿಮಾವನ್ನು ನೆನಪಿಸಿದೆ. 1987ರ ಒಪೇರಾ ಹೌಸ್ ದರೋಡೆ ಪ್ರಕರಣವನ್ನೂ ನೆನಪಿ ಬರುವಂತೆ ಮಾಡಿದೆ. ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ ನೋಡಿ. (ವರದಿ-ಹರೀಶ್ ಮಾಂಬಾಡಿ, ಮಂಗಳೂರು)

ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ತಂಡ (ಎಡ ಚಿತ್ರ)ದ ಕೃತ್ಯವು ಅಕ್ಷಯ್‌ ಕುಮಾರ್, ಅನುಪಮ್ ಖೇರ್ ಅಭಿನಯದ ಸ್ಪೆಷಲ್ 26 ಸಿನಿಮಾ (ಬಲ ಚಿತ್ರ)ವನ್ನು ನೆನಪಿಸಿದೆ.
ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ತಂಡ (ಎಡ ಚಿತ್ರ)ದ ಕೃತ್ಯವು ಅಕ್ಷಯ್‌ ಕುಮಾರ್, ಅನುಪಮ್ ಖೇರ್ ಅಭಿನಯದ ಸ್ಪೆಷಲ್ 26 ಸಿನಿಮಾ (ಬಲ ಚಿತ್ರ)ವನ್ನು ನೆನಪಿಸಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ ದಾಳಿ ಸುದ್ದಿ ಭಾರಿ ಚರ್ಚೆಗೆ ಒಳಗಾಗಿತ್ತು. ನಿನ್ನೆ ರಾತ್ರಿ ಉದ್ಯಮಿ ಮನೆಗೆ ಆಗಮಿಸಿದ್ದ ವಂಚಕರ ತಂಡ ಥೇಟ್‌ ಸಿನಿಮಾ ಸ್ಟೈಲ್‌ನಲ್ಲಿ 30 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿತ್ತು. ಪೊಲೀಸ್ ವಿಚಾರಣೆ ನಂತರದಲ್ಲಿ ಈಗ ಸಿನಿಮೀಯ ದಾಳಿಯ ಪೂರ್ತಿ ಚಿತ್ರಣ ಬಹಿರಂಗವಾಗಿದೆ. ಸ್ಪೆಷಲ್ 26 ಮಾದರಿಯಲ್ಲೇ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ವಂಚಕರ ತಂಡ, ಫಿಲ್ಮಿ ಸ್ಟೈಲ್‌ನಲ್ಲಿ ನಡೆದ ದರೋಡೆಯ ಪೂರ್ತಿ ಕಥೆ ಹೀಗಿದೆ.

ಸ್ಪೆಷಲ್ 26 ಸಿನಿಮಾದಂತೆ ಅಂದರೆ ಹೀಗೆ…

ವಿಟ್ಲ ಸಮೀಪದ ಬೋಳಂತೂರು ನಾರ್ಶದಲ್ಲಿರುವ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ನಿನ್ನೆ (ಜನವರಿ 3) ರಾತ್ರಿ ದಾಳಿ ನಡೆಸಿ 30 ಲಕ್ಷ ರೂಪಾಯಿ ದೋಚಿದ ತಂಡದ ಕೃತ್ಯವು 2013ರಲ್ಲಿ ತೆರೆಕಂಡ “ಸ್ಪೆಷಲ್ 26” ಎಂಬ ಬಾಲಿವುಡ್ ಸಿನಿಮಾ ಮಾದರಿಯಲ್ಲೇ ಇದೆ ಎಂಬ ಅಂಶ ಪೊಲೀಸ್ ವಿಚಾರಣೆ ವೇಳೆ ಗಮನಸೆಳೆದಿದೆ. ಈ ಸಿನಿಮಾ 1987ರ ಮಾರ್ಚ್ 19ರಂದ ನಡೆದ ಒಪೇರಾ ಹೌಸ್‌ ದರೋಡೆ ಪ್ರಕರಣವನ್ನು ಆಧರಿಸಿದ್ದು. ಈ ದರೋಡೆಯಲ್ಲಿ ಅಂದಿನ 35 ಲಕ್ಷ ರೂಪಾಯಿ ಮೌಲ್ಯದ (ಈಗ 2.6 ಕೋಟಿ ರೂಪಾಯಿ) ಚಿನ್ನಾಭರಣ ಹೋಗಿತ್ತು. ಈ ಕೇಸ್ ಇನ್ನೂ ಬಗೆಹರಿದಿಲ್ಲ.

ಸ್ಪೆಷಲ್ 26 ಸಿನಿಮಾವನ್ನು ನೀರಜ್ ಪಾಂಡೆ ಬರೆದು ನಿರ್ದೇಶಿಸಿದ್ದು, ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿಬಿಐ ಅಧಿಕಾರಿಗಳಂತೆ ನಟಿಸಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಬಳಿ ಇರುವ ಕಾಳಧನವನ್ನು ದೋಚುವ ಕಥಾಹಂದರ ಸಿನಿಮಾದಲ್ಲಿರುವಂಥದ್ದು. 2018ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ ತಾನಾ ಸೇಂರ್ದ ಕೂಟ್ಟಂ ಇಂಥದ್ದೇ ಕಥಾ ಹಂದರದ್ದು. ಅದೇ ಮಾದರಿಯಲ್ಲಿ ವಿಟ್ಲದ ಉದ್ಯಮಿ ಮನೆ ಮೇಲಿನ ದಾಳಿ ಕೂಡ ನಡೆದಿರುವಂಥದ್ದು.

ಸಿಂಗಾರಿ ಬೀಡಿ ಮಾಲೀಕನ ಮನೆಯಲ್ಲಿ ನಡೆದ ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ

ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ಕಂಪನಿ ಸಿಂಗಾರಿ ಬೀಡಿ. ಇದರ ಮಾಲೀಕ ಸುಲೈಮಾನ್ ಹಾಜಿ ಅವರ ಮನೆ ಎದುರು ಶುಕ್ರವಾರ (ಜನವರಿ 3) ರಾತ್ರಿ 8 ಗಂಟೆಗೆ ತಮಿಳುನಾಡು ನೋಂದಣಿಯ ಎರ್ಟಿಗಾ ಕಾರು ಬಂದು ನಿಂತಿತು. ಕಾರಿನಿಂದ ಇಳಿದವರು ಚಾಲಕ ಸೇರಿ 7 ಜನ. ಅವರು ಇಂಗ್ಲೀಷ್, ಹಿಂದಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸುಲೇಮಾನ್ ಹಾಜಿಯವರ ಮನೆಯವರೊಂದಿಗೆ ಮೊದಲು ಇಂಗ್ಲಿಷ್‌ನಲ್ಲಿ ಮಾತನಾಡಿದ ತಂಡ, ಬಳಿಕ ಹಿಂದಿ ಭಾಷೆಯಲ್ಲಿ ಮಾತು ಮುಂದುವರಿಸಿದೆ. ಆಗ ಸುಲೇಮಾನ್ ಅವರು “ನನಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ” ಎಂದಿದ್ದಾರೆ. ಆ ಸಂದರ್ಭದಲ್ಲಿ ಎರ್ಟಿಗಾ ಕಾರಿನ ಚಾಲಕ, “ಸಾಹೇಬ್ರೇ ಇವರು ಚೆನ್ನೈನಿಂದ ಬಂದಿದ್ದಾರೆ. ಇಡಿ ಅಧಿಕಾರಿಗಳು” ಎಂದು ಪರಿಚಯಿಸಿದ್ದ. ಇದನ್ನು ನಂಬಿದ ಸುಲೇಮಾನ್ ಹಾಜಿಯವರು ತಂಡವನ್ನು ಮನೆಯೊಳಗೆ ಬಿಟ್ಟುಕೊಂಡಿದ್ಧಾರೆ.

ಇಡಿ ಅಧಿಕಾರಿಗಳಂತೆ ವರ್ತಿಸುತ್ತಿದ್ದ ಅವರು, ಮನೆಗೆ ಪ್ರವೇಶಿಸಿದ ಕೂಡಲೇ “ಎಲ್ಲರೂ ನಿಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿ ನಮ್ಮ ಬಳಿ ಕೊಡಿ” ಎಂದಿದ್ದಾರೆ. ಬಳಿಕ, ತಂದೆ ಅಥವಾ ಮಗ ಇಬ್ಬರಲ್ಲಿ ಒಬ್ಬರನ್ನು ನಾವು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಮನೆಯಲ್ಲಿ ಎಲ್ಲಾ ಕಡೆ ಶೋಧ ನಡೆಸಿದ್ದಾರೆ. ಅದಾಗಿ ಕಪಾಟಿನಲ್ಲಿ ಸಿಕ್ಕ ಹಣವನ್ನು ಅಂದಾಜು 30 ಲಕ್ಷ ರೂಪಾಯಿಯನ್ನು ಗೋಣಿ ಚೀಲಕ್ಕೆ ತುಂಬಿದ್ದಾರೆ. ಇಷ್ಟೆಲ್ಲ ಹಣ ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದಕ್ಕೆ ಸಂಬಂಧಿಸಿದ ದಾಖಲೆಗಳು ಎಲ್ಲಿವೆ ಎಂದು ಗದರಿದ್ದಾರೆ. ರಾತ್ರಿ 10.45ರ ತನಕ ಅಲ್ಲೇ ಇದ್ದು ಬಳಿಕ ವಶಪಡಿಸಿಕೊಂಡ ಹಣದ ಚೀಲವನ್ನು ಕಾರಿನಲ್ಲಿಟ್ಟಿದ್ದಾರೆ. ನಿಮ್ಮ ವಿಚಾರಣೆಯನ್ನು ಇನ್ನು ಬಿಸಿ ರೋಡ್‌ನ ಲಾಡ್ಜ್‌ನಲ್ಲಿ ಮುಂದುವರಿಸುತ್ತೇವೆ. ಅಲ್ಲಿಗೆ ಬನ್ನಿ. ಹಣವನ್ನು ಬೆಂಗಳೂರಿನಲ್ಲಿರುವ ಇಡಿ ಕಚೇರಿಗೆ ಬಂದು ಸೂಕ್ತ ದಾಖಲೆ ಕೊಟ್ಟು ಪಡೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

ಎರ್ಟಿಗಾ ಕಾರಿನಲ್ಲಿದ್ದ ತಂಡವನ್ನು ಸಿಂಗಾರಿ ಬೀಡಿ ಮಾಲೀಕ ಸುಲೇಮಾನ್ ಹಾಜಿ ಮತ್ತು ಅವರ ಮಗ ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿದ್ದಾರೆ. ಆದರೆ, ಕಲ್ಲಡ್ಕ ತಲುಪುವ ಮೊದಲೇ ಎರ್ಟಿಗಾ ಕಾರು ಅವರ ಕಣ್ಣಳತೆ ಮೀರಿ ಹೋಗಿತ್ತು. ವಂಚಕರ ಬಳಿ ಇದ್ದ ತಮ್ಮ ಮೊಬೈಲ್‌ಗೆ ಸುಲೇಮಾನ್ ಹಾಜಿ ಫೋನ್ ಮಾಡಿದ್ದಾರೆ. ಆದರೆ ಅದು ಸ್ವಿಚ್‌ ಆಫ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಸುಲೇಮಾನ್ ಹಾಜಿ ಅವರ ಪುತ್ರ ಮಹಮ್ಮದ್ ಇಕ್ಬಾಲ್ ಕೊಟ್ಟ ದೂರಿನಂತೆ ಕೇಸ್ ದಾಖಲಾಗಿದ್ದು, ವಿಟ್ಲ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ನಡೆದಿದೆ.

(ವರದಿ-ಹರೀಶ್ ಮಾಂಬಾಡಿ, ಮಂಗಳೂರು)

Whats_app_banner