ಕರ್ನಾಟಕ ಜಾತಿ ಗಣತಿ ವರದಿ; ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ, ಮೇ 2ಕ್ಕೆ ಮುಂದಿನ ಕ್ಯಾಬಿನೆಟ್‌ ಮೀಟಿಂಗ್
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಜಾತಿ ಗಣತಿ ವರದಿ; ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ, ಮೇ 2ಕ್ಕೆ ಮುಂದಿನ ಕ್ಯಾಬಿನೆಟ್‌ ಮೀಟಿಂಗ್

ಕರ್ನಾಟಕ ಜಾತಿ ಗಣತಿ ವರದಿ; ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರವಿಲ್ಲ, ಮೇ 2ಕ್ಕೆ ಮುಂದಿನ ಕ್ಯಾಬಿನೆಟ್‌ ಮೀಟಿಂಗ್

ಕರ್ನಾಟಕ ಜಾತಿ ಗಣತಿ ವರದಿ: ಬಹುನಿರೀಕ್ಷಿತ ಹಾಗೂ ಕುತೂಹಲ ಕೆರಳಿಸಿದ್ದ ಕರ್ನಾಟಕ ಜಾತಿ ಗಣತಿ ವರದಿ ಕುರಿತಾದ ವಿಶೇಷ ಸಚಿವ ಸಂಪುಟ ಸಭೆ ಇಂದು ಯಾವುದೇ ನಿರ್ಧಾರ ಪ್ರಕಟಿಸದೇ ಮುಂದೂಡಲ್ಪಟ್ಟಿದೆ. ಮುಂದಿನ ಕ್ಯಾಬಿನೆಟ್ ಮೀಟಿಂಗ್ ಮೇ 2ಕ್ಕೆ ನಡೆಯಲಿದೆ. ಯಾವ ಸಚಿವರು ಏನು ಹೇಳಿದ್ರು ಇಲ್ಲಿದೆ ವಿವರ.

ಕರ್ನಾಟಕ ಜಾತಿ ಗಣತಿ ವರದಿಗೆ ಸಂಬಂಧಿಸಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ.
ಕರ್ನಾಟಕ ಜಾತಿ ಗಣತಿ ವರದಿಗೆ ಸಂಬಂಧಿಸಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ.

ಕರ್ನಾಟಕ ಜಾತಿ ಗಣತಿ ವರದಿ: ಬಹುಚರ್ಚಿತ ಹಾಗೂ ವಿವಾದಕ್ಕೀಡಾಗಿರುವ ಕರ್ನಾಟಕ ಜಾತಿ ಗಣತಿ ವರದಿ ಕುರಿತಾದ ವಿಶೇಷ ಸಚಿವ ಸಂಪುಟ ಸಭೆ ಇಂದು (ಏಪ್ರಿಲ್ 17) ಸಂಜೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 6 ಪುಟಗಳ ಟಿಪ್ಪಣಿ ಮಂಡನೆಯಾಗಿದ್ದು, ಜನಸಂಖ್ಯೆ ಆಧರಿಸಿದ ಮೀಸಲಾತಿ ವಿಚಾರ ಪ್ರಸ್ತಾಪವಾಗಿದೆ. ವರದಿ ಪೂರ್ತಿಯಾಗಿ ಓದಿ, ಅಧ್ಯಯನ ನಡೆಸಿದ ಬಳಿಕ ಚರ್ಚಿಸುವ ಬಗ್ಗೆ ಬಹುತೇಕ ಸಚಿವರು ಒಲವು ತೋರಿದ ಕಾರಣ ಈ ಸಚಿವ ಸಂಪುಟ ಸಭೆಯಲ್ಲಿ ವರದಿ ಕುರಿತಾಗಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಜಾತಿಗಣತಿ ವರದಿ ಏನಾಯಿತು; ಕಾನೂನು ಸಚಿವ ಎಚ್​ಕೆ ಪಾಟೀಲ್ ಹೇಳಿದ್ದು ಇಷ್ಟು

ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ 2025ರ ದತ್ತಾಂಶ ಅಧ್ಯಯನ ವರದಿಯನ್ನು ಇವತ್ತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಇನ್ನೂ ಹೆಚ್ಚು ಮಾಹಿತಿ, ತಾಂತ್ರಿಕ ವಿಚಾರಗಳ ಚರ್ಚೆ ಮಾಡಬೇಕಾದ್ದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಭೆಯಲ್ಲಿ ಯಾವುದೇ ಗೊಂದಲ ಆಗಿಲ್ಲ. ಸಮೀಕ್ಷೆ ಸಂದರ್ಭದಲ್ಲಿ ಅನುಸರಿಸಿದ ಮಾನದಂಡಗಳ ವಿಚಾರವೂ ಪ್ರಸ್ತಾಪವಾಗಿದೆ. ಈ ಬಗ್ಗೆ ಮೇ 2ರಂದು ನಡೆಯುವ ಸಂಪುಟ ಸಭೆಯಲ್ಲಿ ಇನ್ನಷ್ಟು ಚರ್ಚೆ ನಡೆಯಲಿದೆ ಎಂದು ಸಚಿವ ಎಚ್‌ಕೆ ಪಾಟೀಲ್ ಅವರು ಸಚಿವ ಸಂಪುಟ ಸಭೆಯ ವಿವರ ನೀಡುತ್ತ ಹೇಳಿದರು.

ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಿಷ್ಟು

ಜಾತಿಗಣತಿ ವರದಿ ಬಗ್ಗೆ ಎಲ್ಲರ ಅಭಿಪ್ರಾಯವನ್ನು ಮೌಖಿಕವಾಗಿ ಅಥವಾ ಲಿಖಿತವಾಗಿ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಲ್ಲರಿಗೂ ಹೇಳಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮೇ 2 ರಂದು ಇದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಸಚಿವ ಸಂತೋಷ್ ಲಾಡ್ ಏನು ಹೇಳಿದ್ರು

ಜಾತಿ ಗಣತಿ ವರದಿಯ ವಿರುದ್ಧ ಯಾವ ಸಚಿವರೂ ಮಾತನಾಡಿಲ್ಲ. ಅದು ಸಮಾಜದ ಒಳಿತಿಗಾಗಿ ಇರುವಂಥದ್ದು. ಇದು ಒಂದೇ ದಿನದ ಸಭೆಯಲ್ಲಿ ತೀರ್ಮಾನ ಮಾಡುವಂಥ ವಿಚಾರ ಅಲ್ಲ. ಎಲ್ಲರ ಅಭಿಪ್ರಾಯವನ್ನು ಮುಖ್ಯಮಂತ್ರಿಯವರು ಕೇಳಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಗೆ ಮೊದಲು ಎಲ್ಲರೂ ಅಭಿಪ್ರಾಯ ಕೊಡಬೇಕು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಬಹುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಹೇಳಿದ್ದೇನು

ಸಚಿವ ಸಂಪುಟ ಸಭೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಮಾತನಾಡುತ್ತ, ಜಾತಿ ಗಣತಿ ವರದಿ ಸರಿಯಾಗಿಲ್ಲ. ಮುಸ್ಲಿಮರಲ್ಲೂ ನೂರಾರು ಉಪ ಪಂಗಡಗಳಿವೆ, ಎಲ್ಲವನ್ನೂ ಒಂದರಲ್ಲೇ ಸೇರಿಸಿರುವುದು ಯಾಕೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಲೇ ಹೇಳಿದರು ಎಂದು ಮೂಲಗಳು ತಿಳಿಸಿವೆ. ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ ಎಸ್ ಎಸ್ ಮಲ್ಲಿಕಾರ್ಜುನ ಅವರು, ಗದ್ದಲ ಏನಿಲ್ಲ. ಜಾತಿ ಗಣತಿ ವರದಿ ಬಗ್ಗೆ ಇನ್ನಷ್ಟು ಚರ್ಚೆ ಆಗಬೇಕು. ಒಂದೇ ಸಿಟ್ಟಿಂಗ್‌ನಲ್ಲಿ ಒಪ್ಪಿಕೊಳ್ಳಲಾಗದು ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರೋಧ

ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಕೂಡ ಈ ಜಾತಿ ಗಣತಿ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನದಂಡಗಳ ಬಗ್ಗೆ ಅನುಮಾನ ಹಾಗೂ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಹಲವು ಸಚಿವರು ವಿರೋಧ, ಭಿನ್ನಮತ ವ್ಯಕ್ತಪಡಿಸಿದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರ ಅಭಿಪ್ರಾಯವೂ ದಾಖಲಾಗಲಿ ಎಂಬ ಕಾರಣಕ್ಕೆ ಲಿಖಿತವಾಗಿ ಅಭಿಪ್ರಾಯ ದಾಖಲಿಸಿ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.