World Snake Day: ಇಂದು ವಿಶ್ವ ಹಾವುಗಳ ದಿನ, ಹಾವುಗಳ ಬಗ್ಗೆ ನಿಮಗೆಷ್ಟು ಗೊತ್ತು
ಹಾವುಗಳಿಲ್ಲದ ಊರುಗಳಿಲ್ಲ. ಹಾವುಗಳು ನಮ್ಮ ಪರಿಸರದ ಭಾಗಗಳೇ ಆಗಿ ಹೋಗಿವೆ. ಭಾರತದಲ್ಲಂತೂ ಹಾವಿನ ಬಗ್ಗೆ ಗೌರವ,ಭಯ ಎರಡೂ ಇದೆ.

ಬೆಂಗಳೂರು: ಹಾವು ಎಂದೊಂಡರೆ ಎಂಥವರ ಮನಸಿನಲ್ಲೂಅವ್ಯಕ್ತ ಭಯ ಎದುರಾಗುತ್ತದೆ. ಅಂದರೆ ಹಾವಿನ ಬಗ್ಗೆ ನಮ್ಮಲ್ಲಿ ಎಷ್ಟು ನಂಬಿಕೆ ಇದೆಯೋ ಅಷ್ಟೇ ಭಯ ಇದೆ. ಏಕೆಂದರೆ ಹಾವು ಕಚ್ಚಿದರೆ ಹೇಗೆ ಎನ್ನುವ ಭಯವೇ ಇದಕ್ಕೆ ಕಾರಣ. ಇದು ಬರೀ ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಎಲ್ಲೆಡೆ ಇಂತಹುದ್ದೇ ಮನಸ್ಥಿತಿಯಿದೆ. ಇದು ಶತಮಾನಗಳಿಂದಲೂ ನಡೆದುಕೊಂಡುವ ಬಂದಿರುವಂತದ್ದು. ಹಾವುಗಳು ಪರಿಸರದಲ್ಲಿ ತನ್ನದೇ ಆದ ಮಹತ್ವ ಹೊಂದಿವೆ. ಹಾವುಗಳು ಕೂಡ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಜೀವಿಗಳು. ಅವುಗಳಿಗೂ ಒಂದು ದಿನ ಎನ್ನುವ ಹಾಗೆ ಜುಲೈ 16 ವಿಶ್ವ ಹಾವುಗಳ ದಿನ.
ಹಾವುಗಳು ನಮ್ಮ ನಡುವೆ ವಾಸಿಸುವ ಪ್ರಮುಖ ವನ್ಯಜೀವಿಗಳು. ಬಹಳಷ್ಟು ಜನರಿಗೆ ಇವು ವನ್ಯಜೀವಿಗಳು ಎನ್ನುವುದು ಗೊತ್ತಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಹಾವುಗಳಿಗೂ ಕೂಡ ರಕ್ಷಣೆ ಇದೆ. ಮಣ್ಣುಮುಕ್ಕ ಹಾವನ್ನು 'ಎರಡು ತಲೆ' ಹಾವು 'ಬಿಂಬಿಸಿ', ಮೂಡಬಿನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಅವನ್ನು ಕಳ್ಳಸಾಗಾಣೆ ಮಾಡುವ ಹಲವು ವ್ಯಕ್ತಿಗಳನ್ನು ಆಗಾಗ್ಗೆ ಅರಣ್ಯ ಇಲಾಖೆಯವರು ಬಂಧಿಸುವ ವಿಚಾರ ಓದುತ್ತಿರುತ್ತೇವೆ. ಯಾವುದೇ ಹಾವುಗಳನ್ನು ಸಾಯಿಸುವುದು, ಬಂಧನಲ್ಲಿಟ್ಟುಕೊಳ್ಳುವುದು, ಕೊಳ್ಳುವುದು, ಮಾರುವುದು ಕಾನೂನುಬಾಹಿರ ಕ್ರಮ. ಅವುಗಳ ಜೀವನ ಕ್ರಮವೂ ವಿಶೇಷವಾದದ್ದೇ.
ಹಾವುಗಳು ಇಲಿ, ಕಪ್ಪೆ, ಕೀಟಗಳು, ಹಕ್ಕಿಗಳ ಮೊಟ್ಟೆ, ಮರಿ ಸೇರಿ ಹಲವು ವೈವಿಧ್ಯಮಯ ಆಹಾರ ಪದ್ದತಿ ಹೊಂದಿ, ಹದ್ದುಗಳು ಸೇರಿ ಹಲವು ಪ್ರಾಣಿಗಳಿಗೆ ಆಹಾರವಾಗಿ ಆಹಾರ ಸರಪಳಿಯಲ್ಲಿ ಪ್ರಮುಖ ಕೊಂಡಿಯಾಗಿವೆ. ಹಾಗಾಗಿ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಹಾವುಗಳ ಇಲಿ, ಹೆಗ್ಗಣಗಳಂತ ದಂಶಕ ಪ್ರಾಣಿಗಳ ಪ್ರಮುಖ ಬೇಟೆಗಾರ ಪ್ರಾಣಿಗಳಾದ ಕಾರಣ ಇವುಗಳನ್ನು "ರೈತನ ಮಿತ್ರ" ಎಂತಲೂ ಕರೆಯುತ್ತಾರೆ.
ಇದೇ ಸಮಯದಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಇಡೀ ವಿಶ್ವದಲ್ಲೇ ಹಾವು ಕಡಿತದಿಂದ ಸಾವನ್ನಪ್ಪುವ ಪ್ರಕರಣಗಳು ಅತಿಹೆಚ್ಚು ದಾಖಲಾಗುವುದು ಭಾರತದಲ್ಲಿ. ಈ ಹಿನ್ನಲೆಯಲ್ಲಿ ಭಾರತವನ್ನು ಹಾವುಗಳ ಕಡಿತದ ರಾಜಧಾನಿ(Capital of snake bite) ಎಂತಲೂ ಕರೆಯುತ್ತಾರೆ. ಇತ್ತೀಚಿನ ಅಧ್ಯಯನ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನ ಹಾವು ಕಡಿತಕ್ಕೆ ಗುರಿಯಾಗುತ್ತಿದ್ದು, ಸು.58,000 ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಜೊತೆಗೆ ಸಾವಿರಾರು ಜನ ಹಾವು ಕಡಿತದಿಂದ ಶಾಶ್ವತ ಅಂಗವಿಕಲತೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಹಾವು ಕಡಿತ ವನ್ನು ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದು ಪರಿಸರ ಪರಿವಾರದ ಮನವಿ.
ಭಾರತದಲ್ಲಿ ನೂರಾರು ಬಗೆಯ ಹಾವುಗಳಿದ್ದರೂ, ಅವುಗಳೆಲ್ಲಾ ವಿಷಕಾರಿಯಲ್ಲ. ವಿಷಕಾರಿ ಹಾವುಗಳಲ್ಲಿ ಮುಖ್ಯವಾಗಿ( Big four venomous snakes of India ) 4 ಹಾವುಗಳನ್ನು ಗುರ್ತಿಸಲಾಗಿದ್ದು, ಭಾರತದಿಂದ ಪ್ರತಿವರ್ಷ ಹಾವು ಕಡಿತದಿಂದ ಸಾವನ್ನಪ್ಪುವ ಒಟ್ಟು ಜನರಲ್ಲಿ ಶೇ.90 ಕ್ಕೂ ಜನರ ಸಾವಿಗೆ ಕೇವಲ ಈ ನಾಲ್ಕು ಹಾವುಗಳೇ ಕಾರಣವಾಗುತ್ತವೆ ಎನ್ನುವುದು ತಜ್ಞರ ನುಡಿ.
ನಾಲ್ಕು ವಿಷಕಾರಿ ಹಾವುಗಳು
1. ನಾಗರ ಹಾವು (Spectacled Cobra)
2. ಕಟ್ಟಾವು (Common krait)
3. ಕೊಳಕು ಮಂಡಲ ( Russell's Viper)
4. ಗರಗಸ ಮಂಡಲ (Saw scaled viper)
ಹಾವು ಕಡಿತದಿಂದ ಪಾರಾಗುವಲ್ಲಿ ಉಪಯೋಗವಾಗುವ ರಕ್ಷಣಾ ಅಂಶಗಳು
- ಸಾಮಾನ್ಯವಾಗಿ ಓಡಾಡುವ ಮನೆಯಂಗಳ, ಕೈತೋಟ, ಜಮೀನುಗಳಲ್ಲಿನ ರಸ್ತೆಗಳನ್ನು ಹುಲ್ಲು, ಗಿಡಗಂಟಿಗಳಿಂದ ಮುಕ್ತವಾಗಿಸಿ, ಸ್ವಚ್ಛವಾಗಿಟ್ಟುಕೊಳ್ಳವುದು. ಇಂತಹ ಸ್ಥಳಗಳಲ್ಲಿ ಬಿಲ, ಸಂದುಗೊಂದಲು, ಬಿರುಕುಗಳಿದ್ದರೆ ಮುಚ್ಚುವುದು.
- ರಾತ್ರಿ ವೇಳೆ ಹೊರ ಹೋಗುವಾಗ ಕಡ್ಡಾಯವಾಗಿ ಟಾರ್ಚ್ ಗಳನ್ನು ಬಳಸುವುದು.
- ಮನೆಯಂಗಳದಲ್ಲಿ ಹಾವುಗಳನ್ನು ಆಕರ್ಷಿಸುವ ಇಲಿ, ಕಪ್ಪೆಗಳು ಮನೆ, ಮನೆಯಂಗಳದಲ್ಲಿ ಇರದಂತೆ ನೋಡಿಕೊಳ್ಳುವುದು.
- ಜಮೀನುಗಳಲ್ಲಿ ಅಥವಾ ಮನೆಯ ಹೊರಭಾಗ ಮಲಗುವ ಸನ್ನಿವೇಶ ಬಂದರೆ ಮಚ್ಚಾನ್/ ಕಾಟ್ ಗಳನ್ನು ಬಳಸುವುದು, ನೆಲದಲ್ಲಿ ಮಲಗಿದರೆ ಕಡ್ಡಾಯವಾಗಿ ಸೊಳ್ಳೆ ಪರದೆಗಳನ್ನು ಬಳಸುವುದು.
- ಮನೆಯ ಕಿಟಕಿಗಳಿಗೆ ಕಡ್ಡಾಯವಾಗಿ ಮೆಸ್ ಗಳನ್ನು ಅಳವಡಿಸುವುದು, ಮರದ ಕೊಂಬೆ, ಬಳ್ಳಿಗಳು ಕಿಟಕಿಗೆ ಹೊಂದಿಕೊಂಡಂತಿದ್ದರೆ ಆಗಾಗ್ಗೆ ಅವನ್ನು ಕತ್ತರಿಸುವುದು ಮಾಡುವುದು.
- ಗ್ರಾಮದ ಮುಖ್ಯಸ್ಥರು ಹತ್ತಿರದ ಸರ್ಕಾರಿ ಆಸ್ವತ್ರೆಗಳಲ್ಲಿ ಹಾವು ಕಡಿತದ ಚಿಕಿತ್ಸೆ ಬಳಸುವ ವಿಷ ನಿರೋಧಕ ಸಂಗ್ರಹ ಇರುವುದನ್ನು ಆಗಾಗ್ಗೆ ಖಚಿತ ಪಡಿಸಿಕೊಂಡರೆ ಉತ್ತಮ.
