Migratory Birds day: ವಿಶ್ವ ವಲಸೆ ಹಕ್ಕಿಗಳಿಗೂ ಉಂಟು ವರ್ಷದಲ್ಲಿ ಎರಡು ದಿನ, ಯಾವಾಗ, ಏನಿದರ ವಿಶೇಷ
ಕನ್ನಡ ಸುದ್ದಿ  /  ಕರ್ನಾಟಕ  /  Migratory Birds Day: ವಿಶ್ವ ವಲಸೆ ಹಕ್ಕಿಗಳಿಗೂ ಉಂಟು ವರ್ಷದಲ್ಲಿ ಎರಡು ದಿನ, ಯಾವಾಗ, ಏನಿದರ ವಿಶೇಷ

Migratory Birds day: ವಿಶ್ವ ವಲಸೆ ಹಕ್ಕಿಗಳಿಗೂ ಉಂಟು ವರ್ಷದಲ್ಲಿ ಎರಡು ದಿನ, ಯಾವಾಗ, ಏನಿದರ ವಿಶೇಷ

ವಲಸೆ ಹಕ್ಕಿಗಳ ಈ ವರ್ಷದ ವಿಷಯ ‘ಬರ್ಡ್ಸ್ ಕನೆಕ್ಟ್ ಅವರ್ ವರ್ಲ್ಡ್(ಹಕ್ಕಿಗಳು ನಮ್ಮ ಜಗತ್ತನ್ನು ಜೋಡಿಸುತ್ತವೆ)’ ಅನ್ನು ಆಯ್ಕೆ ಮಾಡಲಾಗಿದೆ, ಪಕ್ಷಿಗಳ ಉಳಿವು ಮತ್ತು ಯೋಗಕ್ಷೇಮಕ್ಕೆ ಅಗತ್ಯವಾದ ವಲಸೆ ಹಕ್ಕಿಗಳ ನೈಸರ್ಗಿಕ ಚಲನೆಯನ್ನು ಬೆಂಬಲಿಸುವ ಪರಿಸರ ಸಂಪರ್ಕವನ್ನು ಸಂರಕ್ಷಿಸುವ ಮತ್ತು ಮರುಸ್ಥಾಪಿಸುವ ಮಹತ್ವವನ್ನು ಸಾರುತ್ತದೆ.

ವಲಸೆ ಹಕ್ಕಿಗಳಿಗೂ ವರ್ಷದಲ್ಲಿ ಎರಡು ದಿನದ ಗೌರವ.
ವಲಸೆ ಹಕ್ಕಿಗಳಿಗೂ ವರ್ಷದಲ್ಲಿ ಎರಡು ದಿನದ ಗೌರವ.

ಬೆಂಗಳೂರು: ಹಕ್ಕಿಗಳಿಗೂ ಒಂದು ದಿನವುಂಟು. ಅಷ್ಟೇ ಅಲ್ಲ. ಹೊರ ದೇಶ, ರಾಜ್ಯಗಳಿಂದ ಬರುವ ವಲಸೆ ಹಕ್ಕಿಗಳಿಗೂ ವಿಶೇಷ ದಿನವುಂಟು. ಆದರೆ ವಲಸೆ ಹಕ್ಕಿಗಳಿಗೆ ವರ್ಷದಲ್ಲಿ ಎರಡು ದಿನ ವಿಶೇಷ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಪ್ರತಿ ವರ್ಷ ಮೇ ಮತ್ತು ಅಕ್ಟೋಬರ್ ತಿಂಗಳ ಎರಡನೇ ಶನಿವಾರಗಳನ್ನು ವಿಶ್ವ ವಲಸೆ ಹಕ್ಕಿಗಳ ದಿನ( World Migratory Bird Day) ವನ್ನಾಗಿ ಆಚರಿಸಲಾಗುತ್ತದೆ. ಹಕ್ಕಿಗಳ ವಲಸೆ ಪರಿಸರ ವ್ಯವಸ್ಥೆಯ ಒಂದು ಅತ್ಯಂತ ಸೋಜಿಗದ, ಆದರೆ ಜೀವವೈವಿಧ್ಯ, ಪರಿಸರ ಸಮತೋಲನದ ದೃಷ್ಟಿಯಿಂದ ಅತ್ಯಂತ ಮಹತ್ವದ ವಿಷಯ. 2024ನೇ ಸಾಲಿನ ವಿಶ್ವ ವಲಸೆ ಹಕ್ಕಿಗಳ ದಿನದ ಘೋಷವಾಕ್ಯ "ಕೀಟಗಳನ್ನು ರಕ್ಷಿಸಿ; ಹಕ್ಕಿಗಳನ್ನು ರಕ್ಷಿಸಿ ಎನ್ನುವುದು ಆಗಿದೆ.

ವಿಶೇಷವೇನು

ಪ್ರತಿ ವರ್ಷ ಮೇ 11 ಹಾಗೂ ಅಕ್ಟೋಬರ್‌ 12ರಂದು ವಿಶ್ವದಾದ್ಯಂತ ಜನರು ವಿಶ್ವ ಪಕ್ಷಿ ವಲಸೆ ದಿನವನ್ನು ಆಚರಿಸುತ್ತಾರೆ. ವಲಸೆ ಹಕ್ಕಿಗಳ ಸಂರಕ್ಷಣೆಯ ಅಗತ್ಯವನ್ನು ಎತ್ತಿ ತೋರಿಸಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸುತ್ತಮುತ್ತಲಿನ ಜನರು ಈ ದಿನವನ್ನು ಆಚರಿಸಲು ಪಕ್ಷಿ ಉತ್ಸವಗಳು, ಶಿಕ್ಷಣ ಕಾರ್ಯಕ್ರಮಗಳು, ಪ್ರದರ್ಶನಗಳು ಮತ್ತು ಪಕ್ಷಿ ವೀಕ್ಷಣೆಯ ವಿಹಾರಗಳಂತಹ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಎನ್ನುವುದು ಪಕ್ಷಿ ತಜ್ಞರಾಗಿರುವ ಮೈಸೂರು ಜಿಲ್ಲೆ ಹನಗೋಡಿನ ಛಾಯಾ ಸುನೀಲ್‌ಕುಮಾರ್‌ ಅವರ ನುಡಿ.

ವಲಸೆ ಹಕ್ಕಿಗಳು ತಮ್ಮ ಪ್ರಯಾಸಕರ ಪ್ರಯಾಣ ಮತ್ತು ಸಂತಾನವೃದ್ಧಿ ಕಾಲದಲ್ಲಿ ಶಕ್ತಿಗಾಗಿ ಕೀಟಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈ ಕೀಟಗಳು ವಲಸೆ ಹಕ್ಕಿಗಳ ದೂರದ ಹಾರಾಟಗಳಿಗೆ ಶಕ್ತಿಯನ್ನು ನೀಡುವುದಲ್ಲದೆ, ಪಕ್ಷಿಗಳ ವಲಸೆಯ ಸಮಯ, ಅವಧಿ ಮತ್ತು ಒಟ್ಟಾರೆ ಯಶಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಪಕ್ಷಿಗಳು ತಮ್ಮ ವಲಸೆಯ ಮಾರ್ಗಗಳಲ್ಲಿ ವಿವಿಧ ಸ್ಥಳಗಳಲ್ಲಿ ನಿಲ್ಲುವುದರಿಂದ, ಅವು ಹೊಲಗಳು, ಕಾಡುಗಳು, ಜೌಗು ಪ್ರದೇಶಗಳು ಮತ್ತು ಇತರ ಆವಾಸಸ್ಥಾನಗಳಲ್ಲಿನ ಕೀಟಗಳಿಗೆ ಸಕ್ರಿಯವಾಗಿ ಅವಲಂಬಿತವಾಗಿರುತ್ತವೆ.

ಹಕ್ಕಿಗಳ ಸಂರಕ್ಷಣೆ ಮಹತ್ವ

ಇತ್ತೀಚೆಗೆ ಅತಿಯಾದ ಕೀಟನಾಶಕ ಬಳಕೆ, ಆವಾಸಸ್ಥಾನದ ನಷ್ಟ ಮತ್ತು ಬೆಳಕಿನ ಮಾಲಿನ್ಯದಂತಹ ಅಂಶಗಳಿಂದಾಗಿ ಕೀಟಗಳ ಜನಸಂಖ್ಯೆಯಲ್ಲಿನ ಕುಸಿತದಂತ ಅಂಶಗಳು ಈ ಬಾನಾಡಿಗಳಿಗೆ ತೀವ್ರ ಅಪಾಯವನ್ನುಂಟು ಮಾಡುತ್ತಿವೆ. ಈ ಅಗತ್ಯ ಪೋಷಕಾಂಶಗಳಿಲ್ಲದೆ, ಹಕ್ಕಿಗಳು ವಲಸೆ, ಸಂತಾನೋತ್ಪತ್ತಿ ಮತ್ತು ಅಂತಿಮವಾಗಿ ಬದುಕುಳಿಯುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಇದರಿಂದಾಗಿ ಪರಾಗಸ್ಪರ್ಶ ಮತ್ತು ಪರಿಸರ ವ್ಯವಸ್ಥೆಗಳಲ್ಲಿ, ಕೆಲವು ಅಪಾಯಕಾರಿ ಕೀಟಗಳ ನಿಯಂತ್ರಣದಲ್ಲಿ ಪಕ್ಷಿಗಳು ಬೀರಬಹುದಾದ ಪರಿಣಾಮಕಾರಿ ಪಾತ್ರ ಕಡಿಮೆಯಾಗುತ್ತದೆ.

ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದು, ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವಂತಹ ಕ್ರಮಗಳು ಪಕ್ಷಿಗಳು ಮತ್ತು ಅವು ಅವಲಂಬಿಸಿರುವ ಕೀಟಗಳನ್ನು ಉಳಿಸಿ, ಬೆಳೆಸುವಲ್ಲಿ ನಿರ್ಣಾಯಕವಾಗಿವೆ ಎಂದು ಪರಿಸರ ಪರಿವಾರ ಬಳಗದ ಮನವಿ.

ಕರ್ನಾಟಕದ ಹಕ್ಕಿಗಳ ಲೋಕ

ಕರ್ನಾಟಕವು ಅತ್ಯಂತ ಸುಂದರವಾದ ಪಕ್ಷಿಧಾಮಗಳನ್ನು ಹೊಂದಿದೆ, ಇದು ಹೆಚ್ಚಿನ ಸಂಖ್ಯೆಯ ಸ್ಥಳೀಯ ವಲಸೆ ಪಕ್ಷಿಗಳಾದ ದೊಡ್ಡ ಬಾತುಕೋಳಿಗಳು, ಫ್ಲೆಮಿಂಗೊಗಳು ಮತ್ತು ಕ್ರೇನ್‌ಗಳಿಗೆ ನೆಲೆಯಾಗಿದೆ. ಭಾರತದ ಕರ್ನಾಟಕ ರಾಜ್ಯವು ತನ್ನ ಗಡಿಯೊಳಗೆ 565 ಪಕ್ಷಿ ಪ್ರಭೇದಗಳನ್ನು ಹೊಂದಿದೆ. ಸುಮಾರು 38,720 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಹೊಂದಿರುವ ಪಕ್ಷಿಧಾಮಗಳು ಅದರ ಭೂಮಿಯಲ್ಲಿ ಹರಡಿಕೊಂಡಿವೆ. ಕರ್ನಾಟಕಕ್ಕೂ ಸಹಸ್ರಾರು ಹಕ್ಕಿಗಳು ಸಂತಾನಾಭಿವೃದ್ದಿ, ಹವಾಮಾನ ಬದಲಾವಣೆ ಕಾರಣದಿಂದ ಸಾವಿರಾರು ಕಿ.ಮಿ ಹಾರಿಕೊಂಡು ಬರುತ್ತವೆ.

ಮಾನವರು ವಿಮಾನಗಳು ಅಥವಾ ಕಾರುಗಳನ್ನು ಆವಿಷ್ಕರಿಸುವ ಮುಂಚೆಯೇ ವಲಸೆ ಹಕ್ಕಿಗಳು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿವೆ. ಇದು ಪ್ರಕೃತಿಯ ಅದ್ಭುತ ವಿನ್ಯಾಸದ ಉದಾಹರಣೆಯಾಗಿದೆ. ಅವರ ಪ್ರಯಾಣಗಳು ಸಾಧ್ಯವಾದಷ್ಟು ಕಡಿಮೆ ಅಡಚಣೆಗಳೊಂದಿಗೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳೋಣ. ಇದಕ್ಕಾಗಿ ನಮ್ಮ ಸ್ವಲ್ಪ ಸಮಯವನ್ನಾದರೂ ಮೀಸಲಿಡೋಣ ಎನ್ನುವುದು ಪಕ್ಷಿತಜ್ಞರ ನುಡಿ.

 

Whats_app_banner