ಸಾಹಿತ್ಯ ಅಕಾಡೆಮಿ ಕೊಟ್ಟ ‘ಸ್ಫೋಟಕ‘ ಉಡುಗೊರೆಗಿಲ್ಲ ವಿಮಾನದಲ್ಲಿ ಪ್ರವೇಶ; ರಾಜಾರಾಂ ತಲ್ಲೂರು ಹಂಚಿಕೊಂಡ ಅನುಭವ ಕಥನ
ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪಡೆದ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು ಅಕಾಡೆಮಿ ನೀಡಿದ ಉಡುಗೊರೆ ಬ್ಯಾಗ್ ಹಿಡಿದು ವಿಮಾನ ನಿಲ್ದಾಣಕ್ಕೆ ಹೋದಾಗ ಸೆಕ್ಯುರಿಟಿಯವರು ತಡೆದು ನಿಲ್ಲಿಸುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಯಾವುದಾದರೂ ಪ್ರಶಸ್ತಿಗಳು ಬಂದಾಗ ಫಲಕಗಳು, ಹಾರ, ಸನ್ಮಾನ ಪತ್ರ ಮುಂತಾದವುಗಳ ಜೊತೆ ಉಡುಗೊರೆಯ ಬ್ಯಾಗೊಂದು ನೀಡುತ್ತಾರೆ. ಆದರೆ ಕೆಲವೊಮ್ಮೆ ಈ ಉಡುಗೊರೆ ಬ್ಯಾಗ್‌ನಲ್ಲಿ ಏನಿದೆ ಪಡೆದವರು ಎಂದು ಮನೆ ತಲುಪಿದ ಮೇಲೆಯೇ ನೋಡುತ್ತಾರೆ. ಹೀಗೆ ಮೊನ್ನೆ ನಡೆದ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದ ನಂತರ ಉಡುಗೊರೆ ಬ್ಯಾಗ್ ಸಮೇತ ವಿಮಾನದಲ್ಲಿ ಹೊರಟ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು ಅವರನ್ನು ವಿಮಾನ ನಿಲ್ದಾಣದ ವರ್ಚುವಲ್ ಸೆಕ್ಯುರಿಟಿಯವರು ತಡೆದು ನಿಲ್ಲಿಸುತ್ತಾರೆ. ಅವರ ಬ್ಯಾಗ್‌ನಲ್ಲಿರುವ ಆ ‘ಸ್ಪೋಟಕ‘ ಉಡುಗೊರೆಯೇ ಅದಕ್ಕೆ ಕಾರಣ. ಅದೇನಪ್ಪಾ ಅಂಥ ಸ್ಪೋಟಕ ಸಾಹಿತ್ಯ ಅಕಾಡೆಮಿಯವರು ಕೊಟ್ಟ ಉಡುಗೊರೆ ಬ್ಯಾಗ್‌ನಲ್ಲಿತ್ತು ಅಂತೀರಾ, ಈ ಬಗ್ಗೆ ಬಹಳ ಹಾಸ್ಯಮಯವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಾಜಾರಾಂ ತಲ್ಲೂರು. ಅವರ ಬರಹವನ್ನು ನೀವೂ ಓದಿ. ಆ ಸ್ಪೋಟಕ ಯಾವುದು ಅಂತ ತಿಳ್ಕೊಳ್ಳಿ.
ರಾಜಾರಾಂ ತಲ್ಲೂರು ಬರಹ
ಸಾಹಿತ್ಯ ಅಕಾಡೆಮಿಯ ‘ಸ್ಫೋಟಕ‘ ಉಡುಗೊರೆ!
ಇದು ‘ವಿಷಯ ಸ್ವಲ್ಪ ಗಂಭೀರವೇ ಆದರೂ, ಲಘುವಾಗಿ ಪರಿಗಣಿಸಿ ಓದತಕ್ಕದ್ದು‘ ಎಂದು ಫರ್ಮಾನು ಹೊರಡಿಸಿ, ಈ ಪೋಸ್ಟ್ ಬರೆಯುತ್ತಿದ್ದೇನೆ. ನಿನ್ನೆ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಕೊಡುವ ಸಮಾರಂಭ ರವೀಂದ್ರ ಕಲಾಕ್ಷೇತ್ರದಲ್ಲಿ ನಡೀತಾ…
ನನ್ನ ‘ಕರಿಡಬ್ಬಿ‘ಗೆ ವೈಚಾರಿಕ ಕೃತಿ ಎಂದು ಬಹುಮಾನ ಬಂದಿತ್ತಾ…
ನಾನು ಬೆಂಗಳೂರಿಗೆ ಹೋಗಿ, ಒಂದು ಅಚ್ಚುಕಟ್ಟಾದ ಸಮಾರಂಭದಲ್ಲಿ ಈ ಮರ್ಯಾದೆಯನ್ನು ತಗೊಂಡ್ನಾ…
ಅವರು ಈ ಮರ್ಯಾದೆ ಎಲ್ಲ ಸೇರಿಸಿ, ಸುಮಾರು ಹತ್ತು ಕೆಜಿ ತೂಗುವ ಐಟಂಗಳನ್ನು ಚೀಲದಲ್ಲಿ ಸೇರಿಸಿ ಕೊಟ್ರಾ….
ರಾತ್ರಿ ವಿಳಂಬ ಆದ್ದರಿಂದ, ಉಳಿದುಕೊಂಡಿದ್ದ ಹೊಟೇಲಿಗೆ ಮರಳಿ, ಊಟ ಮುಗಿಸಿ ರೂಮಿಗೆ ಹೋಗುವಾಗ ತಡರಾತ್ರಿ ಆಗಿತ್ತಾ…
ಬೆಳಗ್ಗೆ, ಜೊತೆಗಿದ್ದ ಮಗಳನ್ನು ಬೇಗನೆ ಅವಳ ಕಾಲೇಜಿನ ಹಾಸ್ಟೆಲ್ಲಿಗೆ ಬೀಳ್ಕೊಟ್ಟು, ನಾವು ದಂಪತಿ ತರಾತುರಿಯಲ್ಲಿ ನಮ್ಮ ಬಟ್ಟೆ-ಬರೆ, ಅಕಾಡೆಮಿಯ ಮರ್ಯಾದೆ ಚೀಲ, ಎಲ್ಲ ಸೂಟ್‌ಕೇಸಿಗೆ ತುರುಕಿಸಿಕೊಂಡು ಗಡಿಬಿಡಿಯಲ್ಲಿ ಏರ್‌ಪೋರ್ಟಿಗೆ ಹೊರಟೆವಾ…
ಇಲ್ಲೇ.. ತಪ್ಪಾದದ್ದು. ನಾವು ಅಕಾಡೆಮಿ ಕೊಟ್ಟ ಮರ್ಯಾದೆ ಚೀಲದಲ್ಲಿ ಏನೇನಿತ್ತು ಎಂಬುದನ್ನು ನೋಡುವ ಗೋಜಿಗೆ ಹೋಗಿರಲಿಲ್ಲ. ಇಂದು ಏರ್‌ಪೋರ್ಟಿನಲ್ಲಿ ಲಗೇಜು ಕೊಟ್ಟು, ಸೆಕ್ಯುರಿಟಿ ಮುಗಿಸಿ, ಗೇಟಿನತ್ತ ಹೋಗುವಾಗ... ಒಂದು ಫೋನ್!
‘ತಲ್ಲೂರ್ ಸರ್, ನಿಮ್ಮ ಒಂದು ಬ್ಯಾಗೇಜಿನಲ್ಲಿ ಆಕ್ಷೇಪಾರ್ಹ ವಸ್ತು ಇದೆ. ನೀವು ತಕ್ಷಣ ವರ್ಚುವಲ್ ಸೆಕ್ಯುರಿಟಿ ಚೆಕ್ ವಿಭಾಗಕ್ಕೆ ಬರಬೇಕು‘ ಎಂದು!
‘ಎಲಾ ಕಥೆಯೆ‘ ಅಂದುಕೊಳ್ಳುತ್ತಾ, ವರ್ಚುವಲ್ ಸೆಕ್ಯುರಿಟಿ ವಿಭಾಗಕ್ಕೆ ಹೋದೆವು. ಅಲ್ಲಿ, ಮಾನಿಟರ್ ಪರದೆಯೊಂದರಲ್ಲಿ, ಎಲ್ಲೋ ಸೆಕ್ಯುರಿಟಿ ವಿಭಾಗದವರು, ಸಂಶಯಾಸ್ಪದ ಬ್ಯಾಗುಗಳನ್ನು ನಮ್ಮ ‘ವರ್ಚುವಲ್‘ ಸಮಕ್ಷಮದಲ್ಲಿ ಒಪ್ಪಿಗೆ ಪಡೆದು, ತೆರೆದು ಪರಿಶೀಲಿಸುವುದು ಕಾಣಿಸುತ್ತದೆ. ನಮಗಿಂತ ಮೊದಲಿದ್ದವರ ಬ್ಯಾಗಿನಲ್ಲಿ, ಮೂರು ಹೋಳು ಕೊಬ್ಬರಿ ಇತ್ತು. ಅವರು ಹೈದರಾಬಾದ್ ಪ್ರಯಾಣಿಕ. ಅವರ ಬ್ಯಾಗಿನ ಬೀಗ ಅವರ ಕೈಯಲ್ಲಿತ್ತು. ಹಾಗಾಗಿ ‘ವರ್ಚುವಲ್‘ ಸೆಕ್ಯುರಿಟಿಯವರು ನಮ್ಮ ಕಣ್ಣೆದುರೇ ಬೀಗ ಒಡೆದು, ಅದರೊಳಗಿನ ನಾಲ್ಕು ಕೊಬ್ಬರಿ ಹೋಳು ಎತ್ತಿ ಹೊರಗಿಟ್ಟು, ಬ್ಯಾಗ್ ಮುಚ್ಚಿದರು.
ಈಗ ನಮ್ಮ ಸರದಿ. ನಮ್ಮ ಬ್ಯಾಗ್ ತೆರೆಯಲು ಒಪ್ಪಿಗೆ ಪಡೆದು, ಬ್ಯಾಗಿನ ನಂಬರ್ ಕಾಂಬಿನೇಷನ್ ಮೈಕ್ ಮೂಲಕ ಕೇಳಿ, ಬ್ಯಾಗ್ ತೆರೆದರು. ಅದರೊಳಗೆ ಬಟ್ಟೆಬರೆಗಳ ಅಡಿಯಲ್ಲಿ ಸಾಹಿತ್ಯ ಅಕಾಡೆಮಿ ಮರ್ಯಾದೆಯ ಜೊತೆ ನೀಡಿದ್ದ ‘ಒಣಹಣ್ಣುಗಳ‘ ಒಂದು ದೊಡ್ಡ ಪೊಟ್ಟಣ ಇತ್ತು. ಅದರ ಮೇಲೇ ಅವರಿಗೆ ಸಂಶಯ!
ನಾನು, ‘ನೋಡಿ, ಅದು ನಿನ್ನೆ ಸರ್ಕಾರದ ಕಡೆಯಿಂದಲೇ ಬಂದ ಉಡುಗೊರೆ‘ ಎಂದು ಮೊದಲೇ ಹೇಳಿಬಿಟ್ಟೆ. ಆದರೂ ಅದನ್ನು ಬಿಚ್ಚಿ ನೋಡಿದರೆ, ಅದರೊಳಗೆ ಒಂದು ಇಡೀ ಒಣ ಕೊಬ್ಬರಿ ಕಾಯಿ!
ನಾಲ್ಕು ಹೋಳು ಕೊಬ್ಬರಿ ಬಿಡದವರು, ಇಡಿಯ ಕಾಯಿ ಸಿಕ್ಕಿದರೆ ಬಿಡುವುದುಂಟೇ?!!!
ಅದನ್ನೂ ಕಿತ್ತು ತೆಗೆದು, ಉಳಿದ ಪೊಟ್ಟಣವನ್ನು ಮೊದಲಿದ್ದಂತೆಯೇ ಕಟ್ಟಿ, ಬ್ಯಾಗಿಗೆ ಸೇರ್ಸಿ, ಬ್ಯಾಗು ಮುಚ್ಚಿ, ಮೊದಲಿನಂತೆಯೇ ಲಾಕ್ ಮಾಡಿ ನಮ್ಮನ್ನು ಬಿಟ್ಟುಬಿಟ್ಟರು.
ಸಾಹಿತ್ಯ ಅಕಾಡೆಮಿ ಕೊಟ್ಟ ಕೊಬ್ಬರಿ ಕಾಯಿ, ವಿಮಾನ ನಿಲ್ದಾಣದ ಭದ್ರತೆಯ ಪಾಲಾಯಿತು!
ಕಡೆಗೆ, ಅಲ್ಲಿ ಇನ್‌ಚಾರ್ಜ್ ಮಹಿಳಾ ಸಿಬ್ಬಂದಿಯಲ್ಲಿ, ಯಾಕೆ ಕೊಬ್ಬರಿ ಒಯ್ಯಬಾರದೇನು? ಎಂದು ಕೇಳಿದೆ.
ಅದಕ್ಕೆ ಅವರು, ‘ಒಣ ಕೊಬ್ಬರಿಯಲ್ಲಿ ಎಣ್ಣೆಯ ಅಂಶ ಇರುತ್ತದೆ. ಅದು ವಿಮಾನದ ಸರಕು ವಿಭಾಗದಲ್ಲಿ ಇರಿಸಿದರೆ, 30-40 ಸಾವಿರ ಅಡಿ ಎತ್ತರದಲ್ಲಿ ಹಾರುವಾಗ, ಅದಕ್ಕೆ ಒತ್ತಡ ಉಂಟಾಗಿ, ಕೊಬ್ಬರಿ ಸ್ಫೋಟಿಸಿ ಬೆಂಕಿ ಹೊತ್ತಿಕೊಳ್ಳುವ ಸಂಭವ ಇರುತ್ತದೆ. ನಿಮ್ಮ ರಕ್ಷಣೆಗಾಗಿಯೇ ನಾವು ಕೊಬ್ಬರಿಯನ್ನು ವಿಮಾನದಲ್ಲಿ ಒಯ್ಯಲು ಕಡ್ಡಾಯವಾಗಿ ಬಿಡುವುದಿಲ್ಲ‘ ಎಂದರು.
ಸರಿ ಎಂದು, ನಿಟ್ಟುಸಿರು ಬಿಟ್ಟು, ಆಗಲೇ ವಿಳಂಬ ಆಗಿದ್ದುದರಿಂದ ಗೇಟ್ ಕಡೆ ಹೆಜ್ಜೆ ಹಾಕಿದೆವು.
ಹಾಗಾಗಿ ಇನ್ನು ಯಾರೂ, ಯಾವತ್ತೂ, ಯಾರಿಗೂ ‘ಕೊಬ್ಬರಿ ಸ್ಫೋಟಕ‘ ಉಡುಗೊರೆ ನೀಡಬೇಡಿ!! ಹಾಗೆಂದು ಸಾರ್ವಜನಿಕ ಮಾಹಿತಿ ನಿಡುವ ಸಲುವಾಗಿ, ಈ ಪೋಸ್ಟ್.
ಮಾರ್ಚ್ 25ಕ್ಕೆ ರಾಜಾರಾಂ ತಲ್ಲೂರು ಈ ಪೋಸ್ಟ್ ಹಾಕಿದ್ದಾರೆ. ಈಗಾಗಲೇ 8 ಮಂದಿ ಇವರ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. 50ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.

ವಿಭಾಗ