ಉಡುಪಿ: ಕರ್ನಾಟಕದಲ್ಲಿ ಗೋವುಗಳ ಮೇಲೆ ಸರಣಿ ವಿಕೃತ; ಜ 23 ರಿಂದ 29 ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಅಭಿಯಾನ - ಪೇಜಾವರ ಶ್ರೀ
ಗೋವುಗಳ ಮೇಲಿನ ದಾಳಿಗಳನ್ನು ತೀವ್ರವಾಗಿ ಖಂಡಿಸಿರುವ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಜನವರಿ 23 ರಿಂದ 29 ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಅಭಿಯಾನವನ್ನು ಕೈಗೊಂಡಿರುವುದಾಗಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕೋಟಿ ವಿಷ್ಣುಸಹಸ್ರನಾಮ ಪಾರಾಯಣಕ್ಕೆ ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಗೋವುಗಳ ಮೇಲಿನ ದಾಳಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಠಾಧೀಶಕರು ಕೂಡ ಗೋವುಗಳ ಮೇಲಿನ ಸರಣಿ ವಿಕೃತಿಯನ್ನು ಖಂಡಿಸುತ್ತಿದ್ದಾರೆ. ಅಲ್ಲದೆ, ಜನವರಿ 23 ರಿಂದ 29 ರವರಿಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಕೋಟಿ ವಿಷ್ಣುಸಹಸ್ರನಾಮ ಪಾರಾಯಣ, ಶಿವಪಂಚಾಕ್ಷರ ಜಪ ಅಭಿಮಾನವನ್ನು ಮಾಡಲು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನಾಡಿನ ಜನರಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿರುವ ಸ್ವಾಮೀಜಿಗಳು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾಡಿನ ಸಂತರೆಲ್ಲರೂ ಒಂದೆಡೆ ಸೇರಿ ಉಪವಾಸ ವ್ರತ ನಡೆಸುತ್ತೇವೆ. ಸರ್ಕಾರ ಈ ವಿಷಯವನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು ಎನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಹೇಳಿದ್ದಾರೆ.
ಗೋವುಗಳ ಸಂರಕ್ಷಣೆಗಾಗಿ ಪ್ರಾರ್ಥಿಸಲು ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಅನೇಕ ಮಠಾಧೀಶರು, ಸಾಧು-ಸಂತರು ಬೆಂಬಲ ನೀಡಿದ್ದಾರೆ. ಕರ್ನಾಟಕದಲ್ಲಿ ಕಂಡು ಕೇಳರಿಯದ ಮತ್ತು ಅತ್ಯಂತ ಕ್ರೂರವಾಗಿ ಗೋವುಗಳ ಮೇಲೆ ಭೀಭತ್ಸ ಹಿಂಸೆ ಆಕ್ರಮಣಗಳು ನಡೆಯುತ್ತಿದ್ದು ಸಮಸ್ತ ಗೋಭಕ್ತರು ಸನಾತನ ಧರ್ಮೀಯರು ತೀವ್ರ ಸಂಕಟ ದುಃಖ ಅನುಭವಿಸುವಂತಾಗಿದೆ. ಆದರೆ ಗೋವುಗಳ ಮೇಲೆ ಪರಾಕ್ರಮಣಗೈಯುವವರಿಗೆ ಯಾವುದೇ ಕಾನೂನಿನ ಅಂಕುಶ ಮತ್ತು ಶಿಕ್ಷೆಯಾಗುತ್ತಿಲ್ಲ ಎಂದು ದೂರಿದ್ದಾರೆ.
ಸದ್ಯ ನಡೆಯುತ್ತಿರುವ ಬೆಳವಣಿಗೆಯಿಂದ ಅಕ್ಷರಶಃ ಆಘಾತಗೊಂಡಿರುವ ಒಂದು ಸಮಾಜ ಗೋವಂಶದ ರಕ್ಷಣೆಗೆ ತಕ್ಷಣ ಧಾವಿಸಬೇಕಾಗಿದೆ. ಗೋಹತ್ಯೆ, ಗೋವುಗಳ ಮೇಲಿನ ಕ್ರೂರ ಪೈಶಾಚಿಕ ದೌರ್ಜನ್ಯಗಳ ಅಂತ್ಯವಾಗಲೇ ಬೇಕು. ಆ ಸಂಬಂಧ ನಾಡಿನ ಸಮಸ್ತರಿಗೂ ದೇವರು ಸದ್ಭುದ್ಧಿಯನ್ನು ನೀಡಬೇಕು. ಗೋವುಗಳಿಗೆ ನೆಮ್ಮದಿಯ ಸುರಕ್ಷಿತ ಬದುಕು ಲಭಿಸಬೇಕು. ಆದರೆ ಶಾಸನಗಳಿಂದ ಗೋವುಗಳಿಗೆ ನ್ಯಾಯ ಒದಗಿಸುವ ಸ್ಥಿತಿಯಲ್ಲಿ ನಾವಿಲ್ಲ. ಆದ್ದರಿಂದ ಭಗವಂತನಿಗೇ ಶರಣಾಗಬೇಕಾಗಿದೆ ಎಂದು ಹೇಳಿದ್ದಾರೆ.
‘ಎಲ್ಲಾ ಜಾತಿ ಸಮುದಾಯಗಳ ಜನರು ಅಭಿಯಾನದಲ್ಲಿ ಭಾಗವಹಿಸಬೇಕು’ -ಪೇಜಾವರ ಶ್ರೀ
ಈ ಉದ್ದೇಶಕ್ಕಾಗಿ ಇದೇ ಬರುವ ಜನವರಿ 23 ರಿಂದ 29 ರ ವರಿಗೆ ನಾಡಿನಾದ್ಯಂತ ಕೋಟಿ ವಿಷ್ಣುಸಹಸ್ರನಾಮ ಪಾರಾಯಣ ಅಥವಾ ಶಿವಪಂಚಾಕ್ಷರ ಜಪ ಅಭಿಯಾನ ಸಂಕಲ್ಪಿಸುತ್ತಿದ್ದೇವೆ. ಯಾವುದೇ ಜಾತಿ ಮತ ಬೇಧವಿಲ್ಲದೆ ಎಲ್ಲಾ ಜಾತಿ ಸಮುದಾಯಗಳ ಪುರುಷರು, ಮಹಿಳೆಯರು, ಯುವಕ, ಯುವತಿಯೂ ಹೀಗೆ ಸನಾತನ ಧರ್ಮಶ್ರದ್ಧೆ, ಗೋವುಗಳ ಮೇಲೆ ಪ್ರೀತಿ ಭಕ್ತಿಯುಳ್ಳ ಗೋವಿನ ಹಾಲು ಕುಡಿದು ಋಣಿಗಳಾಗಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು.
ಪ್ರತಿ ಮನೆ ಮನೆಗಳಲ್ಲಿ ಒಂದು ವಾರ ಪರ್ಯಂತ ಎಲಲ್ರೂ ಒಟ್ಟಾಗಿ ದೇವರ ಮುಂದೆ ದೀಪ ಇರಿಸಿ ಭಕ್ತಿಯಿಂದ ಗೋವುಗಳ ಮೇಲೆ ಹಿಂಸಾಚಾರ ಗೋಹತ್ಯೆಯಂಥಹ ದುಷ್ಕೃತ್ಯಗಳ ಅಂತ್ಯ, ಆ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಸದ್ಭುದ್ದಿ ಮತ್ತು ಗೋವುಗಳಿಗೆ ನೆಮ್ಮದಿ ಮತ್ತು ಸುರಕ್ಷಿತ ಬದುಕು ಒದಗುವಂತಾಗಬೇಕು. ಆ ಮೂಲಕ ನಾಡಿಿನಲ್ಲಿ ಶಾಂತಿ ಸುಭಿಕ್ಷೆ ಸಮೃದ್ಧಿಯಾಗಬೇಕೆಂದು ಪ್ರಾರ್ಥಿಸಿ ವಿಷ್ಣುಸಹಸ್ರನಾಮ ಅಥವಾ ಶಿವಪಂಚಾಕ್ಷರ ಜಪವನ್ನು ಪಠಿಸಬೇಕು. ಪಾರಾಯಣದ ನಂತರವೂ ಇದೇ ಪ್ರಾರ್ಥನೆಯನ್ನು ದೇವರಿಗೆ ಸಲ್ಲಿಸಬೇಕು. ಸಂಘ ಸಂಸ್ಥೆಗಳು ದೇವಳಗಳಲ್ಲಿ ಸಾಮೂಹಿಕವಾಗಿ ಪಾರಾಯಣ ನಡೆಸಬಹುದು.
ಪ್ರಾರ್ಥನೆ ಅಭಿಯಾನದ ಭಾಗವಗಿ ಜನವರಿ 25ಕ್ಕೆ ಉಪವಾಸ ವ್ರತ ಆಚರಿಸಿ
ಜೀವನ ಪರ್ಯಂತ ನಮ್ಮ ಉಪಕಾರಕ್ಕಾಗಿಯೇ ಬದುಕುವ ಗೋವುಗಳ ಹಿತಕ್ಕಾಗಿ ಒಂದು ವಾರದಲ್ಲಿ ದಿನಕ್ಕೆ ಕೇವಲ ಅರ್ಥ ಗಂಟೆ ಮೀಸಲಿಟ್ಟು ಪಾರಾಯಣ ನಡೆಸಿ ಪ್ರಾರ್ಥಿಸುವುದು ಕರ್ತವ್ಯ. ಜನವರಿ 29 ರಂದು ಆಯಾ ಊರಿನ ಮಠ ಮಂದಿರ ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಯಜ್ಞ ಅಥವಾ ಅಂಚಾಕ್ಷರ ಯಜ್ಞವನ್ನು ನಡೆಸಿ ಅಭಿಯಾನವನ್ನು ಸಂಪನ್ನೆಗೂಳಿಸಬೇಕು. ಈ ಅಭಿಮಾನಕ್ಕೆ ನಾಡಿನ ಸಮಸ್ತ ಮಠಾಧೀಶರು, ಸಾಧು, ಸಂತರು, ಭಜನಾ ಮಂದಿರಗಳು, ಪಾರಾಯಣ ಮಂಡಳಿಗಳು ವಿವಿಧ ಜಾತಿ ಸಂಘಟನೆಗಳು, ಹಿಂದೂ ಸಂಘಟನೆಗಳು ಭಾಗವಹಿಸಬೇಕು. ಎಲ್ಲಾ ಮಠಾಧೀಶರುಗಳು ತಮ್ಮ ಅಭಿಮಾನಿಗಳು, ಭಕ್ತರು ಹಾಗೂ ಶಿಷ್ಯರಿಗೆ ಈ ಬಗ್ಗೆ ಕರೆಕೊಡಬೇಕು ಎಂದು ಅಪೇಕ್ಷಿಸುತ್ತಿರುವುದಾಗಿ ಪೇಜಾವರ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದು, ಒಂದು ದಿನ ಉಪವಾಸ ಅಂದರೆ ಜನವರಿ 25 ರಂದು ಇದೇ ಉದ್ದೇಶಕ್ಕಾಗಿ ಎಲ್ಲರೂ ಉಪವಾಸ ವ್ರತ ಆಚರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ವಿಭಾಗ