ಕರುವನ್ನು ತೊಟ್ಟಿಲಿಗೆ ಹಾಕುವ ಸಂಪ್ರದಾಯ; ಕಾರ್ಕಳದಲ್ಲಿ ನಡೆಯಿತೊಂದು ವಿಶಿಷ್ಟ ಆಚರಣೆ, ಹೀಗಿರುತ್ತೆ ಡೋಲಾರೋಪಣಾ ಸೇವೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರುವನ್ನು ತೊಟ್ಟಿಲಿಗೆ ಹಾಕುವ ಸಂಪ್ರದಾಯ; ಕಾರ್ಕಳದಲ್ಲಿ ನಡೆಯಿತೊಂದು ವಿಶಿಷ್ಟ ಆಚರಣೆ, ಹೀಗಿರುತ್ತೆ ಡೋಲಾರೋಪಣಾ ಸೇವೆ

ಕರುವನ್ನು ತೊಟ್ಟಿಲಿಗೆ ಹಾಕುವ ಸಂಪ್ರದಾಯ; ಕಾರ್ಕಳದಲ್ಲಿ ನಡೆಯಿತೊಂದು ವಿಶಿಷ್ಟ ಆಚರಣೆ, ಹೀಗಿರುತ್ತೆ ಡೋಲಾರೋಪಣಾ ಸೇವೆ

ಕಾರ್ಕಳದ ಬಂಡೀಮಠದ ಅನಂತಕೃಷ್ಣ ಗೋಶಾಲೆಯಲ್ಲಿ ಕರುವನ್ನು ತೊಟ್ಟಿಲಿಗೆ ಹಾಕುವ ಅಪರೂಪದ ಆಚರಣೆಯೊಂದು ನಡೆದಿದೆ. ಇದನ್ನು ಡೋಲಾರೋಪಣಾ ಸೇವೆ ಎಂದು ಕರೆಯಲಾಗುತ್ತದೆ. ಅಪರೂಪದಲ್ಲಿ ಅಪರೂಪವಾಗಿರುವ ಈ ಸಂಪ್ರದಾಯದ ಬಗ್ಗೆ ಇಲ್ಲಿದೆ ಮಾಹಿತಿ. (ವರದಿ: ಹರೀಶ್ ಮಾಂಬಾಡಿ)

ಕರುವನ್ನು ತೊಟ್ಟಿಲಿಗೆ ಹಾಕುವ ಡೋಲಾರೋಪಣಾ ಸೇವೆ
ಕರುವನ್ನು ತೊಟ್ಟಿಲಿಗೆ ಹಾಕುವ ಡೋಲಾರೋಪಣಾ ಸೇವೆ

ಕಾರ್ಕಳ: ಮಗು ಹುಟ್ಟಿದ ಕೆಲ ದಿನಗಳ ನಂತರ ತೊಟ್ಟಿಲಶಾಸ್ತ್ರ ಮಾಡುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಕರುವನ್ನು ತೊಟ್ಟಿಲಿಗೆ ಹಾಕುವುದನ್ನು ನೀವು ನೋಡಿದ್ದೀರಾ, ಇದು ಖಂಡಿತ ನಿಮಗೆ ಅಚ್ಚರಿ ಎನ್ನಿಸಬಹುದು. ಹೌದು ಕರುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ನಡೆದಿದ್ದು ಕರಾವಳಿಯ ಕಾರ್ಕಳದಲ್ಲಿ.

ಕಾರ್ಕಳದ ಬಂಡೀಮಠದ ಅನಂತಕೃಷ್ಣ ಗೋಶಾಲೆಯಲ್ಲಿ ನಡೆಸಿದ ಧಾರ್ಮಿಕ ವಿಧಿವಿಧಾನವಿದು. ಇದಕ್ಕೆ ಡೋಲಾರೋಪಣಾ ಸೇವೆ ಎಂದು ಕರೆಯಲಾಗುತ್ತದೆ. ಲೋಕಾ ಕಲ್ಯಾಣಾರ್ಥವಾಗಿ, ದೇಶದ ಸುಭಿಕ್ಷೆ, ಇಷ್ಟಾರ್ಥ ಸಿದ್ಧಿ, ದೇವರು ಪ್ರಸನ್ನನಾಗಲಿ ಎನ್ನುವ ಉದ್ದೇಶದಿಂದ ಈ ಸೇವೆಯನ್ನು ನಡೆಸುತ್ತಾರೆ. 1 ಕೋಟಿ ಗೊಪಾಲಕೃಷ್ಣ ಜಪ ಪಠಿಸಿ, ಗೋಪಾಲಕೃಷ್ಣ ಹೋಮದೊಂದಿಗೆ ಕರುವನ್ನು ತೊಟ್ಟಿಲಿಗೆ ಹಾಕಿ, ಹಣ್ಣುಕಾಯಿ ಹರಿವಾಣದೊಂದಿಗೆ ಮಂಗಳಾರತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.

1ಕೋಟಿ ಗೋಪಾಲಕೃಷ್ಣ ಜಪ ಪಠಿಸಲು ಸುಮಾರು ಆರು ತಿಂಗಳು ಕಳೆದಿದೆ. 1ಕೋಟಿ ಜಪಕ್ಕೆ 1 ಲಕ್ಷ ಹೋಮ ಮಾಡಬೇಕೆಂಬ ವಾಡಿಕೆ ಇದೆ. ಜನವರಿ 5ರಂದು ನಡೆಸಿದ ಗೋಪಾಲಕೃಷ್ಣ ಹೋಮದಲ್ಲಿ 10 ಸಾವಿರ ಹೋಮದ ಸಂಕಲ್ಪ ಮಾಡಿಕೊಂಡಿದ್ದರು. ಅದರಂತೆ ಮುಂದೆ 9 ಹೋಮದಲ್ಲಿ 90 ಸಾವಿರ ಹೋಮದ ಸಂಕಲ್ಪಿಸಬೇಕಾಗಿದೆ. ಡೋಲಾರೋಪಣಾ ಸೇವಾ ಕಾರ್ಯವನ್ನು ಉಡುಪಿಯ ರಾಮದಾಸ ಭಟ್ ವಹಿಸಿಕೊಂಡಿದ್ದಾರೆ ಎಂದು ಅನಂತಕೃಷ್ಣ ಗೋಶಾಲೆಯ ಮುಖ್ಯಸ್ಥ ಗೋಪಿನಾಥ ಭಟ್ ಮಾಹಿತಿ ನೀಡಿದ್ದಾರೆ.

ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋವುಗಳಿಗೆ ಪೂಜೆ ನೆರವೇರಿಸಿದರು.

ಡೋಲಾರೋಪಣಾ ಸೇವೆಯು ಗೋವಾ-ಮಹಾರಾಷ್ಟ್ರದ ಗಡಿಭಾಗದಲ್ಲಿ ಗೌಳಿಗ ಸಮುದಾಯದವರು ಆಚರಿಸುತ್ತಿದ್ದರು ಎಂದು ತಿಳಿದುಬಂದಿದೆ. 

179 ವರ್ಷದ ಇತಿಹಾಸ....

ಬಂಡೀಮಠ ಬಳಿಯಲ್ಲಿ ಇರುವ ಅನಂತಗೋಶಾಲೆಗೆ 179 ವರ್ಷದ ಇತಿಹಾಸ ಇದ್ದು, ಕಳೆದ 5 ವರ್ಷಗಳ ಹಿಂದಷ್ಟೇ ಈ ಗೋಶಾಲೆಗೆ ಅಧಿಕೃತವಾಗಿ ನೋಂದಣಿಯಾಗಿದೆ.

ಕುಟ್ಟಪ್ಪ ಭಟ್ ಅವರು ಆರಂಭಿಸಿದ ಗೋಶಾಲೆಯನ್ನು ವಾಮನ ಭಟ್, ನರಸಿಂಹ ಭಟ್ ಹೀಗೆ ಅನುವಂಶಿಕವಾಗಿ ಇದೀಗ ಗೋಪಿನಾಥ ಭಟ್ ನಿರ್ವಹಿಸುತ್ತಾ ಬಂದಿದ್ದಾರೆ.

ಗೋಪಿನಾಥ ಭಟ್ ಹಾಗೂ ಅವರ ಹಿರಿತಲೆಮಾರಿನವರು ವೈದಿಕ ವೃತ್ತಿ ನಡೆಸುವ ಮೂಲಕ ಜೀವನ ನಿರ್ವಹಿಸುತ್ತಿದ್ದರು. ಸಾಂಪ್ರಾದಾಯಿಕ ಮನೆತನದವರಾಗಿದ್ದ ಗೋಪಿನಾಥ ಭಟ್ ಹಾಗೂ ಅವರ ಐದು ಸಹೋದರರು ಅದೇ ದನದ ಹಟ್ಟಿಯಲ್ಲಿ ಹುಟ್ಟಿದು ಎಂದು ಗೋಪಿನಾಥ ಭಟ್ ನೆನಪಿಸಿಕೊಳ್ಳುತ್ತಾರೆ. ಒಂದೆಡೆ ಬಡತನ ಮತ್ತೊಂದೆಡೆ ಸಾಂಪದ್ರಾಯಿಕ ಮನೆತನ ಇದಕ್ಕೆ ಕಾರಣವೆನ್ನಲಾಗಿ ಎಂದು ವಿವರಿಸಿದ್ದಾರೆ.

18 ಸೆಂಟ್ಸ್ ಜಾಗದಲ್ಲಿ 190 ಗೋವುಗಳು!

ಕುಟುಂಬಸ್ಥರಿಗೆ ಸೇರಿದ ಮನೆ ಹಾಗೂ 18 ಸೆಂಟ್ಸ್ ಆಸ್ತಿಯಲ್ಲಿ ಅನಂತಕೃಷ್ಣ ಗೋಶಾಲೆ ಕಾರ್ಯಚರಿಸುತ್ತಿದೆ. ಒಟ್ಟು 190 ಹಸುಗಳು ಇಲ್ಲಿವೆ. ದಾನಿಗಳ, ಸಂಘ-ಸಂಸ್ಥೆಗಳ ನೆರವಿನೊಂದಿಗೆ ಗೋಶಾಲೆ ಮುನ್ನಡೆಯುತ್ತಾ ಬಂದಿದ್ದು, ಗೋಪ್ರೇಮಿಗಳು ನೆರವು ನೀಡಲು ಮುಂದಾಗಬಹುದೆಂದು ಗೋಪಿನಾಥ ಭಟ್ ಕೋರಿದ್ದಾರೆ.

Whats_app_banner