ಶ್ರೀರಂಗಪಟ್ಟಣ ನಿಮಿಷಾಂಬ ದೇವಸ್ಥಾನದಲ್ಲಿ ಫೆಬ್ರವರಿ 11,12 ರಂದು ಮಾಘ ಶುದ್ಧ ಹುಣ್ಣಿಮೆ ಪುಣ್ಯಸ್ನಾನ; ಒಂದು ಲಕ್ಷ ಭಕ್ತರ ಭಾಗಿ ನಿರೀಕ್ಷೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ತೀರದ ನಿಮಿಷಾಂಬ ದೇಗುಲದಲ್ಲಿ ಫೆಬ್ರವರಿ 11,12 ರಂದು ಮಾಘ ಶುದ್ಧ ಹುಣ್ಣಿಮೆ ಪುಣ್ಯಸ್ನಾನಕ್ಕೆ ಸಿದ್ದತೆಗಳು ನಡೆದಿವೆ.

ಶ್ರೀರಂಗಪಟ್ಟಣ: ಕರ್ನಾಟಕದ ದ್ವೀಪ ನಗರ, ಕಾವೇರಿ ತೀರದ ಶ್ರೀರಂಗಪಟ್ಟಣದಲ್ಲಿ ಮುಂದಿನ ತಿಂಗಳು ಒಂದು ಲಕ್ಷಕ್ಕೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿ ತೀರದ ಪ್ರಸಿದ್ದ ನಿಮಿಷಾಂಬ ದೇವಸ್ಥಾನದಲ್ಲಿ ವಿಶೇಷ ಸ್ನಾನ ಹಾಗೂ ಪೂಜೆಗಳು ನಡೆಯಲಿವೆ. ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಫೆಬ್ರವರಿ 11 ಮತ್ತು 12 ರಂದು ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆಯಲ್ಲಿ ಈ ಪುಣ್ಯ ಸ್ನಾನವನ್ನು ಭಕ್ತರು ಮಾಡುವರು. ನಾಲ್ಕು ನೂರು ವರ್ಷಕ್ಕೂ ಅಧಿಕ ಇತಿಹಾಸ ಇರುವ ನಿಮಿಷಾಂಬ ದೇಗುಲಕ್ಕೆ ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದು ನಡೆದುಕೊಂಡು ಬಂದಿದೆ. ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಐತಿಹಾಸಿಕ ದೇಗುಲ
ಈ ದೇವಾಲಯವನ್ನು ಸುಮಾರು 400 ವರ್ಷಗಳ ಹಿಂದೆ ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸಮಯದಲ್ಲಿ ಸ್ಥಾಪಿಸಲಾಯಿತು. ಆಗಿನಿಂದಲೂ ಕಾವೇರಿ ತಟದಲ್ಲಿರುವ ನಿಮಿಷಾಂಬ ದೇವಿ ಶಕ್ತಿಪೀಠವಾಗಿಯೇ ಗುರುತಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ದೇಗುಲ ಜೀರ್ಣೋದ್ದಾರಗೊಂಡು ಭಕ್ತರನ್ನು ಸೆಳೆಯುತ್ತಿದೆ. ಸಾಕಷ್ಟು ಐತಿಹ್ಯ ಇರುವ ನಿಮಿಷಾಂಬ ದೇಗುಲ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಹಾಗು ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ.
ಮಾಘ ಹುಣ್ಣಿಮೆಯ ಪ್ರಯುಕ್ತ ದೇವಾಲಯಕ್ಕೆ ಬರುವ ಭಕ್ತರು ಪುಣ್ಯ ಸ್ನಾನ ಮಾಡುತ್ತಾರೆ. ಕಾವೇರಿ ನದಿ ಮಿಂದೆದ್ದು ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ. ಕಷ್ಟಗಳು ದೂರವಾಗುತ್ತವೆ ಎನ್ನುವುದು ನಂಬಿಕೆ. ಏಳು ಹಂತಗಳ ರಾಜಗೋಪುರ, ಪುಟ್ಟ ದೇಗುಲ, ನಿಮಿಷಾಂಬ ದೇವಿ ಮೂರ್ತಿಯೂ ಇದೆ.ನಿಮಿಷಾಂಬ ದೇವಿಯನ್ನು ಶಿವನ ಪತ್ನಿ ಪಾರ್ವತಿ ದೇವಿಯ ಅವತಾರವೆಂದು ಪರಿಗಣಿಸಲಾಗಿದೆ. ಇದರಿಂದ ಹಲವು ಭಕ್ತರು ಇಲ್ಲಿಗೆ ನಡೆದುಕೊಳ್ಳುತ್ತಾರೆ. ಬೆಂಗಳೂರಿನ ಹೆಚ್ಚಿನ ಭಕ್ತರು ಇಲ್ಲಿಗೆ ಬರುತ್ತಾರೆ.
ಈ ಕಾರಣದಿಂದಲೇ ಮಾಘ ಶುದ್ಧ ಹುಣ್ಣಿಮೆ ಪುಣ್ಯಸ್ನಾನ ಎರಡು ದಿನ ಇರಲಿದೆ. ಕಾವೇರಿ ನದಿ ಹರಿಯುವ ಸನ್ನಿಧಿ, ಅಲ್ಲಿ ಮೆಟ್ಟಿಲುಗಳನ್ನು ಅಳವಡಿಸಿ ಭಕ್ತರು ಸುಸೂತ್ರವಾಗಿ ಸ್ನಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕಾವೇರಿ ಹೊರ ಹರಿವು ಕಡಿಮೆ ಇರುವುದರಿಂದ ಸ್ನಾನಕ್ಕೂ ಇಲ್ಲಿ ಸೂಕ್ತ ವಾತಾವರಣವಿದೆ.
ವಿವಿಧ ಕಾರ್ಯಕ್ರಮ
ಎರಡು ದಿನವೂ ವಿವಿಧ ಧಾರ್ಮಿಕ ಚಟುವಟಿಕೆಗಳು ಇರಲಿವೆ. ಫೆಬ್ರವರಿ 11ರ ರಾತ್ರಿ 10 ರಿಂದ ಬೆಳಿಗ್ಗೆ 8 ಗಂಟೆಯವರೆಗೂ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ, ಭಜನೆ, ಹರಿಕಥೆ, ಭಾರತನಾಟ್ಯ ಹಾಗೂ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ
ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ. ಯಾವುದೇ ಲೋಪವಾಗದಂತೆ ಸಿದ್ಧತೆ ಮಾಡಿಕೊಳ್ಳಿ. ಅನಾಗತ್ಯ ನೂಕು ನುಗ್ಗಲು ತಡೆಯಲು ಬ್ಯಾರಿಕೇಡಿಂಗ್ ವ್ಯವಸ್ಥೆ, ಸೂಕ್ತ ಸ್ಥಳಗಳಲ್ಲಿ ಆರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಬೇಕು.ಮಹಿಳೆಯರು ಬಟ್ಟೆ ಬದಲಾಯಿಸುವ ತಾತ್ಕಲಿಕ ಶೆಡ್ ಗಳ ನಿರ್ಮಾಣವಾಗಬೇಕು. ಈ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹಾಕಬೇಕು. ದೇವಸ್ಥಾನದ ಬಳಿ ಅಗ್ನಿಶಾಮಕ ಸಿಬ್ಬಂದಿಗಳು ನುರಿತ ಈಜುಗಾರರು, ನದಿ ತೀರದಲ್ಲಿ ಜೀವ ರಕ್ಷಕ ಜಾಕೆಟ್ ಮತ್ತು ಇತರ ರಕ್ಷಣಾ ಸಾಮಗ್ರಿಗಳೊಂದಿಗೆ ಸದಾ ಸಿಬ್ಬಂದಿಗಳು ಸನ್ನದ್ಧರಾಗಿರಬೇಕುಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಸುಗಮ ಸಂಚಾರಕ್ಕಾಗಿ ಶ್ರೀರಂಗಪಟ್ಟಣ ಕಡೆಯಿಂದ ಏಕಮುಖ ಸಂಚಾರ ಮಾಡುವ ವ್ಯವಸ್ಥೆಯಾಗಬೇಕು. ಪಾರ್ಕಿಂಗ್ ವ್ಯವಸ್ಥೆವನ್ನೂ ಮಾಡಿಕೊಳ್ಳಬೇಕು.
ಮೈಸೂರು, ಮಂಡ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ನಿರೀಕ್ಷೆಯಿದ್ದು ಮೈಸೂರು ಮತ್ತು ಶ್ರೀರಂಗಪಟ್ಟಣದಿಂದ ದೇವಾಲಯದ ಕಡೆ ಹೆಚ್ಚುವರಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎನ್ನುವುದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ನೀಡಿರುವ ಸೂಚನೆ.
ಮೂಲಸೌಕರ್ಯ
ವಾಹನಗಳನ್ನು ದೇವಸ್ಥಾನದ ಹತ್ತಿರಕ್ಕೆ ಬಿಡದೆ ನಿಗದಿತ ದೂರದ 2 ಸ್ಥಳಗಳನ್ನು ಗುರುತಿಸಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಪಾರ್ಕಿಂಗ್ ಸ್ಥಳದಲ್ಲಿ ಸೂಕ್ತ ವಿದ್ಯುತ್ ದೀಪದ ವ್ಯವಸ್ಥೆಗಳನ್ನು ಮಾಡಲಾಗುವುದು. ಶ್ರೀರಂಗಪಟ್ಟಣದಿಂದ ಗಂಜಾಂಗೆ ವಿಶೇಷ ಬಸ್ ಗಳನ್ನು ನಿಯೋಜಿಸಲಾಗುವುದು. ಭಕ್ತಾದಿಗಳಿಗೆ ಕೊರತೆ ಉಂಟಾಗದ ರೀತಿಯಲ್ಲಿ ಪ್ರಸಾದ ವಿನಿಯೋಗ ನಡೆಯಲಿದೆ.ಪ್ರಸಾದ ತಯಾರಿಸುವ ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಿ ಆಹಾರ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಮಂಡ್ಯ ಡಿಸಿ ಡಾ.ಕುಮಾರ.
ಸಾರ್ವಜನಿಕರ ಸಂಖ್ಯೆ ಹೆಚ್ಚು ಬರುವುದರಿಂದ ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸಲಾಗುತ್ತದೆ. ನದಿ ತೀರದಲ್ಲಿ ಎಲ್ಲಾ ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛವಾಗಿ ಕಾಯ್ದಿಟ್ಟುಕೊಳ್ಳಬೇಕು.ನದಿಯಲ್ಲಿ ಸ್ನಾನ ಮಾಡುವ ಭಕ್ತಾದಿಗಳು ಯಾವುದೇ ಶಾಂಪು ಸೋಪು ಬಳಸದಂತೆ ಕ್ರಮ ವಹಿಸುವುದು. ಹೆಚ್ಚಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸುವುದು. ನದಿಯ ಬಳಿ ಧ್ವನಿವರ್ಧಕ ಅಳವಡಿಸಿ ಎಚ್ಚರಿಕೆ ಸಂದೇಶಗಳನ್ನು ನೀಡಬೇಕು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಅವರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಅಗತ್ಯವಿರುವ ಹೆಚ್ಚುವರಿ ಆರೋಗ್ಯ ಸಿಬ್ಬಂದಿ, ಔಷಧಿಗಳು, ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಜನ ಸೇರುವ ಸ್ಥಳಗಳಲ್ಲಿ ಮಾಡಲಾಗುವುದು ಎನ್ನುವುದು ಅವರ ವಿವರಣೆ.
