ನಿಖರವಾಗಿ ಬರೆದರೂ ವಿಜ್ಞಾನದಲ್ಲಿ 3 ಅಂಕ ಕಡಿಮೆ ಕೊಟ್ಟರು, ಮರು ಮೌಲ್ಯಮಾಪನ ನಂತರ ಎಸ್ಎಸ್ಎಲ್‌ಸಿ ಟಾಪರ್ ಆದ ಮೊರಾರ್ಜಿ ಶಾಲೆ ವಿದ್ಯಾರ್ಥಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗುವ ಎನ್ನುವ ಆತ್ಮವಿಶ್ವಾಸದಲ್ಲಿದ್ದ ವಿದ್ಯಾರ್ಥಿ ಮರುಮೌಲ್ಯಮಾಪನದ ನಂತರ ಈಗ ಕರ್ನಾಟಕಕ್ಕೆ ಟಾಪರ್ ಆಗಿದ್ದಾನೆ. ಪೃತ್ವೀಶ್ ಗೊಲ್ಲರಹಳ್ಳಿ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಹಾವೇರಿ: ಮೂರು ವಾರದ ಹಿಂದೆ ಕರ್ನಾಟಕದಲ್ಲಿ ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದಾಗ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಮಾಕನೂರು ಮೊರಾರ್ಜಿ ಶಾಲೆಯ ವಿದ್ಯಾರ್ಥಿ ಪೃತ್ವೀಶ್ ಗೊಲ್ಲರಹಳ್ಳಿಗೆ ತಾನೂ ಟಾಪರ್ ಆಗಬೇಕಿತ್ತು ಎನ್ನುವ ಅಭಿಪ್ರಾಯ ಮೂಡಿತು. ಎಲ್ಲಾ ವಿಷಯದಲ್ಲಿ ಪೂರ್ಣ ಅಂಕ ಬಂದಿದ್ದರೂ ವಿಜ್ಞಾನದಲ್ಲಿ ಮಾತ್ರ ಮೂರು ಅಂಕ ಕಡಿಮೆಯಾಗಿ ಟಾಪರ್ ಆಗುವುದು ತಪ್ಪಿತ್ತು. ಕೊನೆಗೆ ಉತ್ತರ ಪತ್ರಿಕೆ ಪಡೆದಾಗ ಎರಡು ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದಿದ್ದರೂ ಮೂರು ಕಡಿಮೆ ಅಂಕವನ್ನು ಮೌಲ್ಯಮಾಪಕರು ನೀಡಿದ್ದರು. ಶಿಕ್ಷಕರೂ ಮರು ಮೌಲ್ಯಮಾಪನಕ್ಕೆ ಹಾಕು ಎನ್ನುವ ಅಭಿಪ್ರಾಯ ನೀಡಿದರು. ಅದರಂತೆ ಮರು ಮೌಲ್ಯಮಾಪನಕ್ಕೆ ಹಾಕಿದರೆ ಮೂರು ಅಂಕಗಳು ಲಭಿಸಿ ಈಗ ವಿಜ್ಞಾನದಲ್ಲೂ ನೂರಕ್ಕೆ ನೂರು ಅಂಕ ಬಂದಿದೆ. ಪ್ರತ್ವೀಶ್ ಬಯಕೆಯಂತೆ ಈಗ ಆತ ಟಾಪರ್. ಅದೂ ಕರ್ನಾಟಕದಲ್ಲಿ ಮೊರಾರ್ಜಿ ಶಾಲೆಯಲ್ಲಿ ಓದಿದ ಯಾವೊಬ್ಬ ವಿದ್ಯಾರ್ಥಿಯೂ ಈ ವರ್ಷ ಟಾಪರ್ ಆಗಿರಲಿಲ್ಲ. ಪ್ರತ್ವೀಶ್‌ಗೆ ಖುಷಿ. ಮೌಲ್ಯಮಾಪನ ಮಾಡಿದ ಶಿಕ್ಷಕರು ಮಾಡಿದ್ದ ಎಡವಟ್ಟಿನಿಂದ ಬೇಸರಗೊಳ್ಳದ ವಿದ್ಯಾರ್ಥಿ ಆತ್ಮವಿಶ್ವಾಸವೇ ಗೆದ್ದಿತು.
ರಾಣೆಬೆನ್ನೂರು ನಗರದಿಂದ ಸುಮಾರು 20 ಕಿ.ಮಿ ದೂರದಲ್ಲಿರುವ ಮಾಗನೂರು ಮೊರಾರ್ಜಿ ಶಾಲೆಯಲ್ಲಿ 49 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದರು. ಇದರಲ್ಲಿ ಎಂಟು ಹಾಗೂ ಒಂಬತ್ತನೇ ತರಗತಿಯಲ್ಲಿ ಟಾಪರ್ ಆಗಿದ್ದ ಪೃತ್ವೀಶ್ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲೂ ಶಾಲೆಗೆ ಟಾಪರ್ ಆಗುತ್ತಾನೆ ಎನ್ನುವ ವಿಶ್ವಾಸ ಮಾತ್ರವಲ್ಲದೇ ರಾಜ್ಯಕ್ಕೂ ಟಾಪರ್ ಆಗಿಯೇ ತೀರುತ್ತಾನೆ ಎನ್ನುವ ವಿಶ್ವಾಸ ಅಲ್ಲಿನ ಮುಖ್ಯ ಶಿಕ್ಷಕ ಮುಸ್ತಾಫ, ಶಿಕ್ಷಕರಾದ ಗಂಗಾಧರ್, ಬಸವರಾಜ್ ಸಹಿತ ಹಲವರಲ್ಲಿ ಇತ್ತು. ಫಲಿತಾಂಶ ಬಂದಾಗ ಮೂರು ಅಂಕ ಕಡಿಮೆ ಬಂದಿದ್ದವು.
ಎಲ್ಲ ವಿಷಯದಲ್ಲೂ ಟಾಪರ್ ಆದ ಪೃತ್ವೀಶ್ ವಿಜ್ಞಾನದಲ್ಲಿ ಕಡಿಮೆ ತೆಗೆದದ್ದು ಏಕೆ ಎಂದು ಯೋಚಿಸಿದರು ಶಿಕ್ಷಕರು. ಆತನೊಂದಿಗೆ ಮಾತುಕತೆ ನಡೆಸಿದರು. ನಾನು ನಿಖರವಾಗಿ ಬರೆದಿದ್ದೇನೆ ಎನ್ನುವುದು ಪೃತ್ವೀಶ್ ವಿಶ್ವಾಸವಾಗಿತ್ತು. ಆತನ ವಿಶ್ವಾಸದ ಜತೆಗೆ ಪೃತ್ವೀಶ್ ಓದು, ತಯಾರಿ ಮೇಲೆ ಇದ್ದ ನಂಬಿಕೆ ಮೇಲೆ ಶಿಕ್ಷಕರು ಉತ್ತರ ಪತ್ರಿಕೆ ತರಿಸಲು ಸೂಚಿಸಿದರು. ಉತ್ತರ ಪತ್ರಿಕೆ ಬಂದರೆ ಅಲ್ಲಿ ಜೀವ ಶಾಸ್ತ್ರ ವಿಷಯದಲ್ಲಿ ನಾಲ್ಕು ಅಂಕ ಕಡೆ ಎರಡು, ಭೌತಶಾಸ್ತ್ರ ವಿಷಯದಲ್ಲಿ ಮೂರು ಅಂಕ ಕೊಡುವ ಕಡೆ ಎರಡು ಮಾತ್ರ ಬಂದಿತ್ತು. ಇಲ್ಲಿಯೇ ಮೂರು ಅಂಕ ಹೋಗಿರುವುದು ಖಚಿತವಾಯಿತು. ಉತ್ತರ ನಿಖರವಾಗಿದ್ದರಿಂದ ಶಿಕ್ಷಕರು ಮರು ಮೌಲ್ಯಮಾಪನಕ್ಕೆ ಹಾಕಲು ತಿಳಿಸಿದರು. ಪೃತ್ವೀಶ್ ಮರು ಮೌಲ್ಯಮಾಪನಕ್ಕೆ ಹಾಕಿದರೆ ಈಗ ಫಲಿತಾಂಶ ಬಂದು ಮೂರು ಅಂಕವೂ ಲಭಿಸಿ ವಿಜ್ಞಾನದಲ್ಲೂ ನೂರಕ್ಕೆ ನೂರು ಅಂಕ ಬಂದು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಮೌಲ್ಯಮಾಪನ ಮಾಡುವವರು ಮಾಡಿದ ಸಣ್ಣ ಎಡವಟ್ಟಿನಿಂದ ವಿದ್ಯಾರ್ಥಿ ಗೊಂದಲ ಅನುಭವಿಸಿದ್ದೂ ಆಯಿತು. ಈಗ ಆತ ಟಾಪರ್ ಆಗಿರುವುದಕ್ಕೆ ಅಭಿನಂದನೆಯೇ ಹರಿದು ಬರುತ್ತಿದೆ. ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅಭಿನಂದಿಸಿ ಡಿಜಿಟಲ್ ಉಪಕರಣ ನೀಡಿದ್ದಾರೆ.
ನನಗೆ ಎಲ್ಲಾ ವಿಷಯದಲ್ಲೂ ಪೂರ್ಣ ಅಂಕ ಬರುವ ವಿಶ್ವಾಸವಿತ್ತು. ಆದರೆ ವಿಜ್ಞಾನದಲ್ಲಿ ಮಾತ್ರ ಮೂರು ಅಂಕ ಕಡಿಮೆ ಬಂದಿತ್ತು. ಈಗ ಅದು ಸರಿಯಾಗಿರುವುದು ಮರು ಮೌಲ್ಯಮಾಪನದಿಂದ ಗೊತ್ತಾಗಿದೆ. ಅಂಕವನ್ನು ಬಿಟ್ಟಿರಲಿಲ್ಲ. ಬದಲಿಗೆ ಕಡಿಮೆ ಕೊಟ್ಟಿದ್ದರು. ಈಗ ಕರ್ನಾಟಕದ ಟಾಪರ್‌ಗಳ ಪಟ್ಟಿಯಲ್ಲಿ ಹೆಸರಿರುವುದು ಖುಷಿ ತಂದಿದೆ ಎನ್ನುವುದು ಪೃತ್ವೀಶ್ ನುಡಿ.
ನಮ್ಮ ಜಿಲ್ಲೆಯ ಮಾಕನೂರು ಮೊರಾರ್ಜಿ ಶಾಲೆ ವಿದ್ಯಾರ್ಥಿ ಪೃತ್ವೀಶ್ ಗೊಲ್ಲರಹಳ್ಳಿ ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆ ಮರು ಮೌಲ್ಯಮಾಪನ ನಂತರ ಮೂರು ಅಂಕ ಲಭಿಸಿ ಈಗ ರಾಜ್ಯಕ್ಕೆ ಟಾಪರ್ ಎನ್ನಿಸಿದ್ದಾನೆ. ಸದ್ಯವೇ ಹಾವೇರಿ ಜಿಲ್ಲಾಧಿಕಾರಿ, ಜಿಪಂ ಸಿಒಇ ಅವರ ಸಮ್ಮುಖದಲ್ಲಿ ವಿದ್ಯಾರ್ಥಿಯನ್ನು ಅಭಿನಂದಿಸಲಾಗುವುದು ಎಂದು ಹಾವೇರಿ ಡಿಡಿಪಿಐ ಸುರೇಶ್ ಹುಗ್ಗಿ ಎಚ್‌ಟಿ ಕನ್ನಡಕ್ಕೆ ತಿಳಿಸಿದರು.