ಟ್ಯೂಷನ್ ಗೆ ಹೋಗಿಲ್ಲ, ಸೈಕಲ್ ಟೆಸ್ಟ್ ಅನುಕೂಲವಾಯಿತು; ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಯುಕ್ತಾ ಸ್ಟಡಿ ಪ್ಲಾನ್ ಹೀಗಿತ್ತು
2025ರ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಬನಶಂಕರಿ ನಿವಾಸಿ ಯುಕ್ತಾ ಎಸ್ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈಕೆಯ ಸ್ಟಡಿ ಪ್ಲಾನ್ ಹೇಗಿತ್ತು, ಯಾರೆಲ್ಲಾ ಬೆಂಬಲ ನೀಡಿದರು ಎಂಬುದನ್ನು ವಿವರಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ-ಕೆಎಸ್ಇಎಬಿಯಿಂದ ಎಸ್ಎಸ್ಎಲ್‌ಸಿ ಫಲಿತಾಂಶ ಬಂದಾಗಿದೆ. ಬರೋಬ್ಬರಿ 20 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. 625 ಅಂಕಗಳನ್ನು ಪಡೆಯಲು ಹೇಗೆ ಸಾಧ್ಯವಾಯ್ತು ಅನ್ನೋದು ಅನೇಕರು ಕುತೂಹಲದಿಂದ ಕೇಳುವ ಪ್ರಶ್ನೆ. ಎಸ್ಎಸ್ಎಲ್‌ಸಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳ ಪೈಕಿ ಬೆಂಗಳೂರಿನ ಯುಕ್ತಾ ಎಸ್ ಕೂಡ ಒಬ್ಬರು. ಈ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎನ್ನುವ ಕುರಿತು ವಿದ್ಯಾರ್ಥಿನಿ ಯುಕ್ತಾ, ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದ (ಎಚ್‌ಟಿ ಕನ್ನಡ) ಪ್ರತಿನಿಧಿ ರಾಘವೇಂದ್ರ ಎಂ.ವೈ. ಅವರೊಂದಿಗೆ ಮಾತನಾಡಿದ್ದಾರೆ.
ಎಸ್ಎಸ್ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕೆಂಬ ಉದ್ದೇಶದಿಂದ ಎಲ್ಲಾ ವಿಷಯಗಳಿಗೂ ಬೇರೆ ಬೇರೆ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಷಯಗಳನ್ನು ನಿತ್ಯ ಓದುತ್ತಿದ್ದೆ. ನನಗೆ ಸಮಾಜ ತುಂಬಾ ಕಷ್ಟ ಎನಿಸುತ್ತಿತ್ತು. ಹೀಗಾಗಿ ಸಮಾಜದ ಜೊತೆಗೆ ಗಣಿತ ಮತ್ತು ವಿಜ್ಞಾನದ ವಿಷಯಗಳಿಗೂ ಒತ್ತುಕೊಡುತ್ತಿದೆ. ಸೈನ್ಸ್ ವಿಷಯದಲ್ಲಿ ಕೋವಿಡಿಂಗ್ ಗೆ ಸಮಯ ಮೀಸಲಿಟ್ಟಿದೆ. ಅಮ್ಮನಿಂದ ತುಂಬಾ ಸಪೋರ್ಟ್ ಸಿಕ್ಕಿತು. ಜೊತೆಗೆ ನಾನು ತುಂಬಾನೇ ಎಫರ್ಟ್ ಹಾಕಿದ್ದೇನೆ ಎಂದು ಯುಕ್ತಾ ಎಸ್ ಹೇಳಿದ್ದಾರೆ.
ಶಿಕ್ಷಕರಿಂದ ಸಿಕ್ಕ ಸಪೋರ್ಟ್ ಮರೆಯೋಕೆ ಆಗಲ್ಲ
ನಾನು ಓದಿದ್ದು ಹೋಲಿ ಚೈಲ್ಡ್ ಇಂಗ್ಲಿಷ್ ಹೈಸ್ಕೋಲ್ ನಲ್ಲಿ. ಇಲ್ಲಿನ ಎಲ್ಲಾ ಶಿಕ್ಷಕರು ಫೇವರೇಟ್ ಆಗಿದ್ದರು. ಒಂದಲ್ಲವೊಂದು ರೀತಿಯಲ್ಲಿ ಸಪೋರ್ಟ್ ಮಾಡಿದ್ದಾರೆ. ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ಡಿವಿಷನ್ ಇರುತ್ತಿತ್ತು. ಮುಖ್ಯವಾಗಿ ನಮಗೆ ಡಿಸೆಂಬರ್ ವೇಳೆಗೆ ಎಲ್ಲಾ ವಿಷಯಗಳನ್ನು ಮುಗಿಸಿ ರಿವಿಷನ್ ಪ್ರಾರಂಭಿಸಿದರು. 3 ವರ್ಷಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಸುತ್ತಿದ್ದರು. ಡಿಸೆಂಬರ್ ನಿಂದಲೇ ರಿವಿಷನ್ ಆರಂಭವಾಗಿತ್ತು. ಶಾಲೆಯಲ್ಲಿ ಕೊಡುತ್ತಿದ್ದ ಹಳೆಯ ಪ್ರಶ್ನೆ ಪತ್ರಿಕೆಯನ್ನು ನೋಡುತ್ತಿದ್ದಂತೆ ಇವುಗಳಿಗೆ ಉತ್ತರ ಗೊತ್ತಿದೆ ಎಂದು ಅನಿಸುತ್ತಿತ್ತು. ಆದರೂ ಕೂಡ ಉತ್ತರ ಬರೆದು ಅಭ್ಯಾಸ ಮಾಡುತ್ತಿದ್ದೇವು.
ಟ್ಯೂಷನ್ ಗೆ ಹೋಗಿಲ್ಲ, ಸೈಕಲ್ ಸ್ಟಡಿ ಅನುಕೂಲವಾಯಿತು
ಯಾವುದೇ ಟ್ಯೂಷನ್ ಗೆ ಹೋಗಿಲ್ಲ. ಶಾಲೆಯಿಂದ ಬಂದ ಬಳಿಕ ಸಂಜೆ 5 ರಿಂದ 6 ಗಂಟೆಗಳ ಕಾಲ ಓದುಕೊಳ್ಳುತ್ತಿದ್ದೆ. ಸೈಕಲ್ ಟೆಸ್ಟ್ ಹೆಸರಿನಲ್ಲಿ ಮೂರು ಸಲ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ್ದು ತುಂಬಾ ಅನುಕೂಲವಾಯಿತು. ಅಂತಿಮವಾಗಿ ಪರೀಕ್ಷೆ ಬರೆದ ಸಂದರ್ಭದಲ್ಲಿ ತಪ್ಪಾದ್ರೆ ಅನ್ಯಾಯವಾಗಿ ಮಾರ್ಕ್ಸ್ ಹೋಗುತ್ತೆ ಎಂಬ ಸ್ವಲ್ಪ ಭಯ ಇತ್ತು. ಪರೀಕ್ಷೆ ಬರೆದ ನಂತರ ನಾನು ಕೀ ಉತ್ತರಗಳನ್ನು ಚೆಕ್ ಮಾಡಲಿಲ್ಲ. ದಿನಕ್ಕೆ ಮೂರು ಸಲ ಊಟ ಮಾಡುತ್ತಿದ್ದೆ. ಸಮಯದ ಅಭಾವದಿಂದ ಪರೀಕ್ಷೆಯ ಸಮಯದಲ್ಲಿ ಸರಿಯಾಗಿ ಊಟ ಮಾಡುತ್ತಿರಲಿಲ್ಲ. 100ಕ್ಕೆ ನೂರರಷ್ಟು ಫಲಿತಾಂಶ ಬರುತ್ತೆ ಅಂತ ನಿರೀಕ್ಷೆ ಕೂಡ ಮಾಡಿರಲಿಲ್ಲ. ಅಮ್ಮನಿಗೆ ನಾನು ಎಂಜಿನಿಯರ್ ಮಾಡಬೇಕೆಂಬ ಆಸೆ ಇತ್ತು. ಆದರೆ ನನಗೆ ಮೆಡಿಕಲ್ ಮಾಡಬೇಕೆಂಬ ಆಸೆ ಇದೆ. ಹೀಗಾಗಿ ಸೈನ್ಸ್ ತಗೆದುಕೊಂಡಿದ್ದೇನೆ ಎಂದು ವಿವರಿಸಿದ್ದಾರೆ.
ಸಿಸ್ಟಮ್ಯಾಟಿಕ್ ಆಗಿ ಓದುತ್ತಿದ್ದಳು; ಮಗಳ ಈ ಸಾಧನೆ ಬಗ್ಗೆ ತಾಯಿ ಹೇಳಿದ್ದು ಇಷ್ಟು
ಮಗಳಿಗೆ ಬೆಳಗ್ಗೆ ಓದೋಕೆ ಸಮಯ ಸಿಗುತ್ತಿರಲಿಲ್ಲ. ಆಕೆಗೆ 8 ಗಂಟೆಗೆ ಶಾಲೆಯಲ್ಲಿ ತರಗತಿಗಳು ಶುರುವಾಗುತ್ತಿದ್ದವು. ಬೆಳಗ್ಗೆ 6.30ಕ್ಕೆ ಎದ್ದೇಳುತ್ತಿದ್ದಳು. ಶಾಲೆ ಮುಗಿಸಿ ಸಂಜೆ 4.30ಕ್ಕೆ ವಾಪಸ್ ಮನೆಗೆ ಬರುತ್ತಿದ್ದಳು. ನಿತ್ಯ ಟೈಮ್ ಟೇಬಲ್ ಹಾಕಿಕೊಂಡಿದ್ದಳು. ಈ ದಿನ ಇದೇ ವಿಷಯ ಓದಬೇಕೆಂದು ಪ್ಲಾನ್ ಮಾಡಿಕೊಳ್ಳುತ್ತಿದ್ದಳು. ರಾತ್ರಿ 10 ಗಂಟೆಯ ವರೆಗೆ ಓದುತ್ತಿದ್ದಳು. ಯಾವ ಟ್ಯೂಷನ್ ಗೂ ಕಳುಹಿಸಿಲ್ಲ. ಫ್ರೀಯಾಗಿ ಬಿಟ್ಟಿದೆ. ಸಿಸ್ಟಮ್ಯಾಟಿಕ್ ಆಗಿ ಓದುತ್ತಿದ್ದಳು. 95 ಪ್ಲಸ್ ಮಾರ್ಕ್ಸ್ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ 100 ರಷ್ಟು ಫಲಿತಾಂಶ ಸರ್ಪ್ರೈಸ್ ಆಗಿದೆ. ತುಂಬಾ ಖುಷಿ ಆಯ್ತು. ಯಾವ ಕೋರ್ಸ್ ಗೆ ಸೇರಿಕೊಳ್ಳುತ್ತಾಳೋ ಅದಕ್ಕೆ ಪ್ರೋತ್ಸಾಹ ಮಾಡ್ತೀನಿ. ಡಾಕ್ಟರ್ ಆಗಬೇಕೆಂದು ಹೇಳುತ್ತಿದ್ದಾಳೆ. ಅದಕ್ಕೆ ಬೆಂಬಲ ಕೊಡುತ್ತೀನಿ. ಮಕ್ಕಳಿಗೆ ಒತ್ತಡದ ಶಿಕ್ಷಣ ಇರಬಾರದು ಎಂದು ಯುಕ್ತಾ ಅವರ ತಾಯಿ ಪದ್ಮಾ ತಮ್ಮ ಪುತ್ರಿಯ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು.