SSLC Exam Karnataka 2025: ಮಾತನಾಡಲು ಕಷ್ಟವಾದರೂ ಉತ್ತರ ಪತ್ರಿಕೆ ಸುಲಭವಿತ್ತು; ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆ ವಿದ್ಯಾರ್ಥಿಗಳ ಅಭಿಮತ
ಕನ್ನಡ ಸುದ್ದಿ  /  ಕರ್ನಾಟಕ  /  Sslc Exam Karnataka 2025: ಮಾತನಾಡಲು ಕಷ್ಟವಾದರೂ ಉತ್ತರ ಪತ್ರಿಕೆ ಸುಲಭವಿತ್ತು; ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆ ವಿದ್ಯಾರ್ಥಿಗಳ ಅಭಿಮತ

SSLC Exam Karnataka 2025: ಮಾತನಾಡಲು ಕಷ್ಟವಾದರೂ ಉತ್ತರ ಪತ್ರಿಕೆ ಸುಲಭವಿತ್ತು; ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆ ವಿದ್ಯಾರ್ಥಿಗಳ ಅಭಿಮತ

SSLC Exam Karnataka 2025: ಬುಧವಾರವಷ್ಟೇ ಮುಗಿದ ಎಸ್‌ಎಸ್‌ಎಲ್‌ಸಿ ಇಂಗ್ಲೀಷ್‌ ಭಾಷಾ ವಿಷಯದ ಪ್ರಶ್ನೆಪತ್ರಿಕೆ ಹಾಗೂ ಪರೀಕ್ಷೆ ಕುರಿತು ಕರಾವಳಿ ಭಾಗದ ವಿದ್ಯಾರ್ಥಿಗಳ ಮಾತು ಹೀಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ದಕ್ಷಿಣ ಕನ್ನಡ ಭಾಗದಲ್ಲೂ ವಿದ್ಯಾರ್ಥಿಗಳು ಇಂಗ್ಲೀಷ್‌ ಪರೀಕ್ಷೆ ಸುಸೂತ್ರವಾಗಿ ಮುಗಿಸಿದ್ಧಾರೆ.
ದಕ್ಷಿಣ ಕನ್ನಡ ಭಾಗದಲ್ಲೂ ವಿದ್ಯಾರ್ಥಿಗಳು ಇಂಗ್ಲೀಷ್‌ ಪರೀಕ್ಷೆ ಸುಸೂತ್ರವಾಗಿ ಮುಗಿಸಿದ್ಧಾರೆ. (Mangalore today)

SSLC Exam Karnataka 2025:ಮಂಗಳೂರು: ‘’ಮೊನ್ನೆ ಕನ್ನಡ ಪರೀಕ್ಷೆಯಲ್ಲಿ ಒಂದು ಪ್ರಶ್ನೆ ಕಷ್ಟವಾಗಿತ್ತು. ಇವತ್ತು ಇಂಗ್ಲೀಷ್ ಪರೀಕ್ಷೆಯಲ್ಲಿ ಅಷ್ಟೇನೂ ಕಷ್ಟವಾಗಿಲ್ಲ. ಸುಲಭವಿತ್ತು. ಉತ್ತಮ ಅಂಕಗಳನ್ನು ಗಳಿಸಬಹುದು. ಏನೂ ತೊಂದರೆ ಇಲ್ಲ, ನನಗೆ ಇಂಗ್ಲೀಷ್ ಮಾತನಾಡಲು ಕಷ್ಟವಾಗುತ್ತದೆ, ಆದರೆ ಪರೀಕ್ಷೆ ಕಷ್ಟವಾಗಲಿಲ್ಲ". ಹೀಗೆಂದು ಮುಂದಿನ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ದಕ್ಷಿಣ ಕನ್ನಡದ ಪುತ್ತೂರಿನ ಸರಕಾರಿ ಹೈಸ್ಕೂಲಿನ ವಿದ್ಯಾರ್ಥಿ ಪ್ರಜ್ವಲ್ ಕಾನ್ಫಿಡೆಂಟ್ ಆಗಿ ಇಂಗ್ಲೀಷ್ ಪರೀಕ್ಷೆ ಕುರಿತು ಹೇಳಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಬಹುತೇಕರಿಗೆ ಇಂಗ್ಲೀಷ್ ಪ್ರಶ್ನೆಪತ್ರಿಕೆ ಉತ್ತರಿಸಲು ಸುಲಭವಾಗಿತ್ತು ಎಂದು ಹಲವು ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ಅಭಿಪ್ರಾಯ ವ್ಯಕ್ತವಾಯಿತು. ಮಂಗಳೂರಿನ ಸುಷ್ಮಾಗೆ ಬರೆಯಲು ತುಂಬಾ ಇತ್ತು ಎಂಬುದನ್ನು ಹೊರತುಪಡಿಸಿದರೆ, ಪರವಾಗಿಲ್ಲ ಎಂಬ ಸಮಾಧಾನವಿದ್ದರೆ, ಬೆಳ್ತಂಗಡಿಯ ಕಾರ್ತಿಕ್ ಪರೀಕ್ಷೆ ಯಶಸ್ವಿಯಾದ ಖುಷಿಯಲ್ಲಿದ್ದ. ಬಹುತೇಕ ಮಕ್ಕಳು ಉತ್ತಮ ಅಂಕ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಧಾರಣವಾಗಿ ಓದಿದವರಿಗೂ ಇಂಗ್ಲೀಷ್ ದೊಡ್ಡ ಕಷ್ಟವೇನೂ ಆಗಿಲ್ಲ. ಎಪ್ಪತ್ತು, ಎಂಭತ್ತು ಮಾರ್ಕು ಪಡೆಯುವುದು ಗ್ಯಾರಂಟಿ ಎಂಬ ನಂಬಿಕೆಯಲ್ಲಿದ್ದಾರೆ. ಅವರಿಗೆ ಪಾಠ ಮಾಡಿದ ಅಧ್ಯಾಪಕರಿಗೂ ಸಮಾಧಾನವಿದೆ. ಒಟ್ಟಾರೆಯಾಗಿ ಪ್ರಶ್ನೆಪತ್ರಿಕೆ ಸುಲಭವಿತ್ತು ಎಂದು ಮಂಗಳೂರಿನ ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಂಗಳೂರಿನ ಕೀರ್ತನ್, ಉತ್ತಮ ಮಾರ್ಕು ಗಳಿಸುವ ವಿಶ್ವಾಸ ಹೊಂದಿದ್ದೇನೆ. ಮಾದರಿ ಪ್ರಶ್ನೆಪತ್ರಿಕೆಯನ್ನು ಚೆನ್ನಾಗಿ ಅಭ್ಯಸಿಸಿದವರಿಗೂ ಇದು ಸುಲಭವಾಗಿದೆ. ಪರೀಕ್ಷೆ ಭಾರೀ ಸುಲಭ ಇತ್ತು ಎಂದು ಹೇಳಿದ್ದಾರೆ.

ಶಿಕ್ಷಕರಾದ ಸುದರ್ಶನ್ ಈ ಕುರಿತು ಮಾತನಾಡಿ, ತಮ್ಮ ಶಾಲೆಯ ಮಕ್ಕಳನ್ನು ಗ್ರಾಮರ್ ಸಹಿತ ವಾಕ್ಯರಚನೆಯನ್ನೂ ತಪ್ಪಿಲ್ಲದೆ ಬರೆಯುವುದನ್ನು ಕಲಿಸಿದ್ದೆವು. ಅದೀಗ ಫಲ ನೀಡಿದೆ. ನಮ್ಮೂರ ಶಾಲೆ ಮಕ್ಕಳು ಉತ್ತಮವಾಗಿ ಬರೆದಿದ್ದಾರೆ ಎಂದಿದ್ದಾರೆ. ಅಜ್ಜಿಬೆಟ್ಟು ಶಾಲೆಯ ಗೀತಾ ನಮ್ಮ ಶಾಲೆ ಮಕ್ಕಳು ಉತ್ತಮವಾಗಿ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ನಿಧಾನ ಕಲಿಕೆಯವರೂ ಪಾಸ್ ಆಗುವಂತೆ ಈ ಬಾರಿಯ ಪ್ರಶ್ನೆಪತ್ರಿಕೆ ಇತ್ತು. ಹೀಗಾಗಿ ಮಕ್ಕಳು ಸುಲಭದಲ್ಲಿ ತೇರ್ಗಡೆಯಾಗಬಹುದು. ಹೀಗಾಗಿ ಈ ಬಾರಿ ಉತ್ತಮ ಅಂಕಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆಯುವ ವಿಶ್ವಾಸವಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ. ಮಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner