SSLC Exam Karnataka 2025: ಎಸ್‌ಎಸ್‌ಎಲ್‌ಸಿ ಇಂಗ್ಲೀಷ್ ಭಾಷಾ ಪರೀಕ್ಷೆಯಲ್ಲಿ 2 ಅಂಕದ ಪ್ರಶ್ನೆ ಗೊಂದಲ, ಉಳಿದಂತೆ ಹೇಗಿತ್ತು
SSLC Exam Karnataka 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಭಾಷಾ ಪತ್ರಿಕೆಯಾದ ಇಂಗ್ಲೀಷ್ ವಿಷಯ ಬುಧವಾರ ಮುಕ್ತಾಯಗೊಂಡಿದೆ. ಪ್ರಶ್ನೆ ಹೇಗಿತ್ತು, ವಿದ್ಯಾರ್ಥಿಗಳು ಹೇಗೆ ಪ್ರತಿಕ್ರಿಯಿಸಿದರು ಎನ್ನುವ ಕುರಿತು ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ವಾಣಿ ಚಂದ್ರ ವಿವರಣೆ ನೀಡಿದ್ದಾರೆ.

SSLC Exam Karnataka 2025: ಯಾವುದೇ ಪರೀಕ್ಷೆ ಇರಲಿ ವಿದ್ಯಾರ್ಥಿಗಳಿಗೆ ಕಠಿಣ ಎನ್ನಿಸುವುದು ಗಣಿತ ಬಿಟ್ಟರೆ ಇಂಗ್ಲೀಷ್. ಏಕೆಂದರೆ ಇಂಗ್ಲೀಷ್ ಕಲಿಕೆ ಸುಲಭವಾದರೂ ಪರೀಕ್ಷೆ ದೃಷ್ಟಿಯಿಂದ ಅದು ಕೊಂಚ ಕಠಿಣವೇ. ಗ್ರಾಮೀಣ ಪ್ರದೇಶ ಮಾತ್ರವಲ್ಲದೇ ನಗರ ಭಾಗದ ಮಕ್ಕಳೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂಗ್ಲೀಷ್ ವಿಷಯದಲ್ಲಿಯೇ ಹಿಂದೆ ಬೀಳುತ್ತಾರೆ. ಈ ಬಾರಿಯು ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಾಷಾ ಪತ್ರಿಕೆಯ ಇಂಗ್ಲೀಷ್ ವಿಷಯದ ಪರೀಕ್ಷೆಗಳು ನಡೆದಿವು. ಪ್ರಶ್ನೆ ಪತ್ರಿಕೆಯಲ್ಲಿ ಒಂದು ಎರಡು ಅಂಕದ ಪ್ರಶ್ನೆ ಮಾತ್ರ ಗೊಂದಲಕಾರಿಯಾಗಿದ್ದನ್ನು ಬಿಟ್ಟರೆ ಪ್ರಶ್ನೆ ಪತ್ರಿಕೆ ಸರಳವಾಗಿಯೇ ಇತ್ತು. ಎಲ್ಲ ಪ್ರಶ್ನೆಗಳು ನೇರ ಹಾಗೂ ಅರ್ಥವಾಗುವ ರೀತಿಯಲ್ಲಿಯೇ ನೀಡಲಾಗಿತ್ತು. ಬಹುಪಾಲು ಮಕ್ಕಳು ಖುಷಿಯಿಂದಲೇ ಪರೀಕ್ಷೆಯನ್ನು ಸಹಜ ಹಾಗೂ ಸುಸೂತ್ರವಾಗಿಯೇ ಎದುರಿಸಿದ್ದಾರೆ.
ನೂರು ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 80 ಅಂಕ ಪ್ರಶ್ನೋತ್ತರ, ಉಳಿದ 20 ಇಂಟರ್‌ನಲ್ಸ್ ರೂಪದಲ್ಲಿ ಇರುತ್ತದೆ. ಈ ಬಾರಿಯೂ ಇದೇ ಮಾದರಿಯಲ್ಲಿಯೇ ಇಂಗ್ಲೀಷ್ ಭಾಷಾ ವಿಷಯದ ಪ್ರಶ್ನೆ ಪತ್ರಿಕೆ ರೂಪಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಠ್ಯ ಆಧರಿತವಾಗಿಯೇ ಪ್ರಶ್ನೆಯನ್ನು ಕೇಳುವ ಪದ್ದತಿ ರೂಢಿಯಾಗಿದೆ. ಅಲ್ಲದೇ ನೇರವಾಗಿಯೇ ಪ್ರಶ್ನೆಗಳನ್ನು ಕೇಳುವ ಪರಿಪಾಠವೂ ಇದೆ. ಮಕ್ಕಳಿಗೆ ಗೊಂದಲ ಆಗದಿರಲಿ ಎನ್ನುವ ಆಶಯವೂ ಇದರ ಹಿಂದೆ ಇದೆ. ಅದರಲ್ಲೂ ಇಂಗ್ಲೀಷ್ ಅನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಅಲ್ಲ. ಅಲ್ಲದೇ ಉತ್ತರ ಬರೆಯುವುದು ಸುಲಭ ಅಲ್ಲವೇ ಅಲ್ಲ. ಇಂತಹ ಅಭಿಪ್ರಾಯ ಗ್ರಾಮೀಣ ಭಾಗದ ಮಕ್ಕಳಲ್ಲಿ ಮಾತ್ರವಲ್ಲ. ನಗರ ಪ್ರದೇಶದ ವಿದ್ಯಾರ್ಥಿಗಳಲ್ಲೂ ಇರುತ್ತದೆ. ಈ ಕಾರಣದಿಂದಲೇ ಇಂಗ್ಲೀಷ್ ಭಾಷಾ ಶಿಕ್ಷಕರು ಇಂತಹ ಪರೀಕ್ಷೆಯ ಭಯವನ್ನು ಮೊದಲೇ ಮಕ್ಕಳಲ್ಲಿ ಹೋಗಲಾಡಿಸಿ ಸುಲಭ ರೀತಿಯಲ್ಲಿ ಅವರಿಗೆ ಹೇಳಿಕೊಡುತ್ತಾರೆ. ನೀವು ಇಂತಿಷ್ಟು ಅಂಕ ಪಡೆಯಲು ಏನೇನು ಮಾಡಬೇಕಾಗುತ್ತದೆ ಎನ್ನುವ ಮಾರ್ಗೋಪಾಯಗಳನ್ನೂ ತಿಳಿಸಿರುತ್ತಾರೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಇದೇ ರೀತಿಯಲ್ಲಿಯೇ ಶಿಕ್ಷಕರು ಬಂದೇ ಬರಬಹುದಾದ ಪ್ರಶ್ನೆಗಳ ಪಟ್ಟಿಯನ್ನು ಮಾಡಿಸಿಕೊಟ್ಟಿದ್ದರು. ಅದರಂತೆಯೇ ಬಹುತೇಕ ವಿಷಯಗಳು ಆ ಪಟ್ಟಿಯಲ್ಲಿದ್ದ ರೀತಿಯಲ್ಲಿ ಬಂದಿವೆ. ಇದರಿಂದ ಇಂಗ್ಲೀಷ್ ವಿಷಯವನ್ನು ಸುಲಭವಾಗಿಯೇ ವಿದ್ಯಾರ್ಥಿಗಳು ಎದುರಿಸಿದ್ದಾರೆ. ಅದರಲ್ಲೂ ಕಡಿಮೆ ಅಂಕ ಬರಬಹುದು ಎನ್ನುವ ಆತಂಕದಲ್ಲಿದ್ದ ಮಕ್ಕಳೂ ವಿಶ್ವಾಸ, ನಿರಾಳತೆ, ನಗುಮೊಗದಿಂದಲೇ ಪರೀಕ್ಷಾ ಕೊಠಡಿಯಿಂದ ಹೊರ ಬಂದಿದ್ದಾರೆ. ಇಷ್ಟು ಅಂಕ ಬಂದೇ ಬರುತ್ತೆ ಎನ್ನುವ ಆತ್ಮವಿಶ್ವಾಸದಲ್ಲಿ ಶಿಕ್ಷಕರ ಎದುರು ಖುಷಿ ಹಂಚಿಕೊಂಡಿದ್ದಾರೆ.
ಎಲ್ಲಾ ಪ್ರಶ್ನೆಗಳನ್ನು ಸಮಗ್ರವಾಗಿಯೇ ಕೇಳಿದ್ದಾರೆ. ಎಲ್ಲ ಪ್ರಶ್ನೆಗಳು ನಿರೀಕ್ಷೆಯಂತೆಯೇ ಬಂದಿವೆ. ನಾವು ಹೇಳಿಕೊಟ್ಟ ಮಾರ್ಗ ಮಕ್ಕಳಿಗೆ ಉಪಯೋಗವಾಗಿದೆ ಎಂದು ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ವಾಣಿ ಚಂದ್ರ ಹೇಳುತ್ತಾರೆ.
ಪ್ರಬಂಧ ರಚನೆಯಲ್ಲಿ ಈ ಬಾರಿ ಇಂಟರ್‌ನೆಟ್ ಹಾಗೂ ಜಲ ಮಾಲಿನ್ಯವನ್ನು ಎಲ್ಲರೂ ಬರೆದಿದ್ದಾರೆ. ಲೆಟರ್ ರೈಟಿಂಗ್ ವಿಷಯಗಳೂ ಇದ್ದವು. ಇದನ್ನು ಎಲ್ಲರೂ ಚೆನ್ನಾಗಿಯೇ ಬರೆದಿದ್ದಾರೆ. ನಾಲ್ಕು ಅಂಕ ಹಾಗೂ ಮೂರು ಅಂಕದ ಪ್ರಶ್ನೆಗಳೂ ಕೂಡ ಸುಲಭವಾಗಿಯೇ ಇದ್ದವು. ನಿಗದಿತ ಸಮಯದೊಳಗೆ ಎಲ್ಲವನ್ನೂ ವಿದ್ಯಾರ್ಥಿಗಳು ಮುಗಿಸಿದ್ದಾರೆ. ಎರಡು ಅಂಕದ ಸರ್ವೈಯಲ್ ವಿಷಯದ ಪ್ರಶ್ನೆ ಗೊಂದಲಕಾರಿಯಾಗಿತ್ತು. ಟ್ವಿಸ್ಟ್ ಆಗಿ ಪ್ರಶ್ನೆ ಕೇಳಿದ್ದು ಕೆಲ ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ತೆಗೆದುಕೊಂಡಿದೆ. ಆದರೂ ಬಹುತೇಕರು ಉತ್ತರ ಬರೆದಿದ್ದಾರೆ. ಉಳಿದಂತೆ ಯಾವ ಗೊಂದಲವೂ ಆಗಿಲ್ಲ. ಬಹುತೇಕ ಮಕ್ಕಳು ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಬರೆದ ರೀತಿಗೆ ತೃಪ್ತಿಯನ್ನೇ ವ್ಯಕ್ತಪಡಿಸಿದ್ದಾರೆ. ಕಡಿಮೆ ಅಂಕ ಬರುತ್ತದೆ ಎಂದುಕೊಂಡವರೂ ಹೆಚ್ಚು ಅಂಕ ಬರುವ ವಿಶ್ವಾಸದಲ್ಲಿದ್ದಾರ ಎನ್ನುವುದು ವಾಣಿಚಂದ್ರ ಅವರ ವಿವರಣೆ.
