ಕನ್ನಡ ಸುದ್ದಿ / ಕರ್ನಾಟಕ /
Aero India 2023: ನಾಳೆಯಿಂದ ಬೆಂಗಳೂರು ಏರ್ ಶೋ, ಉಕ್ಕಿನ ಹಕ್ಕಿಗಳ ಕಲರವ, ವೈಮಾನಿಕ ಪ್ರದರ್ಶನದಲ್ಲಿ ಏನು ನಿರೀಕ್ಷಿಸಬಹುದು? 10 ಅಂಶಗಳು
Aero India 2023: ಸಾರ್ವಜನಿಕರಿಗೆ ಫೆಬ್ರವರಿ 16 ಮತ್ತು ಫೆಬ್ರವರಿ 7ರಂದು ಮಾತ್ರ ವೀಕ್ಷಣೆಗೆ ಅವಕಾಶವಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ವೈಮಾನಿಕ ಪ್ರದರ್ಶನ ವೀಕ್ಷಿಸಬಹುದು.
Aero India 2023: ಆಕಾಶದಲ್ಲಿ ಉಕ್ಕಿನ ಹಕ್ಕಿಗಳ ಕಲರವ, ನಾಳೆಯಿಂದ ಬೆಂಗಳೂರು ಏರ್ ಶೋ, ವೈಮಾನಿಕ ಪ್ರದರ್ಶನದಲ್ಲಿ ಏನು ನಿರೀಕ್ಷಿಸಬಹುದು? 10 ಅಂಶಗಳು (ANI Photo)
(Sashidhar Byrappa)
ಬೆಂಗಳೂರು: ನಾಳೆಯಿಂದ ಐದು ದಿನಗಳ ಕಾಲ ಬೆಂಗಳೂರಿನ ಆಗಸದಲ್ಲಿ ಉಕ್ಕಿನ ಹಕ್ಕಿಗಳ ಕಲರವ. ಫೆಬ್ರವರಿ 13ರಿಂದ ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಜಗತ್ತಿನ ಪ್ರಮುಖ ಏರ್‌ಶೋಗಳಲ್ಲಿ ಒಂದಾದ ಏರೋ ಇಂಡಿಯಾವು ಬೆಂಗಳೂರಿನಲ್ಲಿ ಹದಿಮೂರು ಬಾರಿ ಯಶಸ್ವಿ ಪ್ರದರ್ಶನಗಳನ್ನು ನಡೆಸಿದೆ.
- ಏರೋ ಇಂಡಿಯಾ ವೆಬ್‌ಸೈಟ್ ಪ್ರಕಾರ ಈ ಬಾರಿಯ ಐದು ದಿನದ ವೈಮಾನಿಕ ಪ್ರದರ್ಶನದಲ್ಲಿ 809 ಎಕ್ಸಿಬಿಟರ್‌ಗಳು ನೋಂದಣಿ ಮಾಡಿದ್ದಾರೆ. ಇದರಲ್ಲಿ 699 ಭಾರತದ ಪ್ರದರ್ಶಕರಾಗಿದ್ದಾರೆ, 110 ವಿದೇಶಿ ಪ್ರದರ್ಶಕರಾಗಿದ್ದಾರೆ. 2021ರಲ್ಲಿ ನಡೆದ ಏರ್‌ಶೋನಲ್ಲಿ 55 ದೇಶಗಳ 540 ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದರು.
- ನಿನ್ನೆ ಯಲಹಂಕ ಏರ್‌ಶೋಗೆ ಪೂರ್ವಭಾವಿಯಾಗಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ತಾಲೀಮು ನಡೆಸಿವೆ. ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯಲ್ಲಿ ಎಚ್‌ಎಎಲ್ ನಿರ್ಮಿತ ಹೆಲಿಕಾಪ್ಟರ್‌ಗಳು ಈ ಬಾರಿಯ ವೈಮಾನಿಕ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿವೆ. ಸುಧಾರಿತ ಈ ಹಗುರ ಹೆಲಿಕಾಪ್ಟರ್‌ಗಳು, ಹಗುರ ಯುದ್ಧ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿವೆ.
- ಅಮೆರಿಕ ನಿರ್ಮಿತ ಗ್ಲೋಬ್ ಮಾಸ್ಟರ್ ದೇಶೀಯ ರಕ್ಷಣೆ ಪಡೆಗೆ ಸೇರಿದೆ. ನಿನ್ನೆಯ ರಿಹರ್ಸಲ್‌ನಲ್ಲಿ ಸೂರ್ಯಕಿರಣ್ ಜತೆಗೆ ಈ ಗ್ಲೋಬ್ ಮಾಸ್ಟರ್ ಹಾರಾಟ ನಡೆಸಿದೆ. ನಾಳೆಯಿಂದ ನಡೆಯಲಿರುವ ವೈಮಾನಿಕ ಶೋದಲ್ಲಿ ಇವೆರಡು ಜೋಡಿಗಳು ನೋಡುಗರ ಗಮನ ಸೆಳೆಯುವ ನಿರೀಕ್ಷೆಯಿದೆ.
- ತೇಜಸ್ ಯುದ್ಧವಿಮಾನವು ಏರ್‌ಶೋನ ಪ್ರಮುಖ ಆಕರ್ಷಣೆಯಾಗಿರಲಿದೆ. ಶಬ್ದಾತೀತವಾಗಿ ಬಾನಲ್ಲಿ ಹಾರುತ್ತ, ತೇಲುತ್ತ, ಮೇಲಕ್ಕೆ, ಕೆಳಕೆ ನುಗ್ಗುತ್ತ ಸಾಗುವುದನ್ನು ಏರ್ ಶೋನಲ್ಲಿ ಕಣ್ತುಂಬಿಕೊಳ್ಳಬಹುದು.
- ರಫೆಲ್ ಯುದ್ಧವಿಮಾನವು ಈ ಬಾರಿಯ ವೈಮಾನಿಕ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ.
- ದೇಶ ಹಳೆಯ ವಿಮಾನ ಡಕೋಟಾ ಡಿಸಿ 3ಯು ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ನೋಡುಗರನ್ನು ಸೆಳೆಯಲಿದೆ.
- ಸೂರ್ಯಕಿರಣ್, ಎಂಐ17, ತೇಜಸ್ ಯುದ್ಧ ವಿಮಾನ, ಹಾಕ್, ಸುಖೋಯ್, ಐಜೆಟಿ, ಎಚ್‌ಟಿಟಿ ತರಬೇತಿ ವಿಮಾನ, ಸುಖೋಯ್ 30, ಎಂಕೆಐ, ಮಿಗ್ 29, ಜಾಗ್ವಾರ್ ಯುದ್ಧ ವಿಮಾನಗಳು ಈ ಬಾರಿಯ ವೈಮಾನಿಕ ಶೋದ ಪ್ರಮುಖ ಆಕರ್ಷಣೆಗಳಾಗಿರಲಿವೆ.
- ಎಚ್‌ಎಎಲ್ ಇದೇ ಮೊದಲ ಬಾರಿಗೆ ಎಚ್‌ಎಲ್‌ಎಫ್‌ಟಿ 42 ಹೆಸರಿನ ಮುಂದಿನ ತಲೆಮಾರಿನ ಸುಧಾರಿತ ಸೂಪರ್‌ಸಾನಿಕ್ ತರಬೇತಿ ಜೆಟ್ ವಿಮಾನದ ಪ್ರದರ್ಶನವನ್ನು ನಡೆಸಲಿದೆ.
- ಇದೇ ಮೊದಲ ಬಾರಿಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾರತದಲ್ಲಿನ ಅಮೆರಿಕ ಮಿಷನ್‌ನ ಜಾರ್ಜ್ ಡಿ ಅಫೇರ್ಸ್ ಅಂಬಾಸಡರ್ ಎಲಿಜಬೆತ್ ಜೋನ್ಸ್ ತನ್ನ ನಿಯೋಗದೊಂದಿಗೆ ಭಾಗವಹಿಸಲಿದ್ದಾರೆ.
- ನಾಳೆಯಿಂದ ವೈಮಾನಿಕ ಪ್ರದರ್ಶನ ಆರಂಭಗೊಳ್ಳುವುದಿದ್ದರೂ ಸಾರ್ವಜನಿಕರಿಗೆ ಫೆಬ್ರವರಿ 16 ಮತ್ತು ಫೆಬ್ರವರಿ 7ರಂದು ಮಾತ್ರ ವೀಕ್ಷಣೆಗೆ ಅವಕಾಶವಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ವೈಮಾನಿಕ ಪ್ರದರ್ಶನ ವೀಕ್ಷಿಸಬಹುದು.