ಕನ್ನಡ ಸುದ್ದಿ  /  ಕರ್ನಾಟಕ  /  Ananth Kumar:‌ 'ಅನಂತ' ಜಪ ಮರೆತ ಭಾಜಪ: ಪುತ್ರಿ ವಿಜೇತಾ ಅನಂತ್‌ ಕುಮಾರ್‌ ಅಸಮಾಧಾನಕ್ಕೆ ಕಾರಣಗಳು ಹಲವು

Ananth Kumar:‌ 'ಅನಂತ' ಜಪ ಮರೆತ ಭಾಜಪ: ಪುತ್ರಿ ವಿಜೇತಾ ಅನಂತ್‌ ಕುಮಾರ್‌ ಅಸಮಾಧಾನಕ್ಕೆ ಕಾರಣಗಳು ಹಲವು

ರಾಜ್ಯ ಬಿಜೆಪಿಯಲ್ಲಿ ಅನಂತ್‌ ಕುಮಾರ್‌ ನೆನಪು ಕಡಿಮೆಯಾಗುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಇದಕ್ಕೆ ಕಾರಣವಾಗಿದ್ದು ಅನಂತ್‌ ಕುಮಾರ್‌ ಅವರ ಪುತ್ರಿ ವಿಜೇತಾ ಅನಂತ್‌ಕುಮಾರ್‌ ಮಾಡಿರುವ ಟ್ವೀಟ್‌. ರಾಜ್ಯ ಸರ್ಕಾರ ಬೆಂಗಳೂರಿನ ಪ್ರಮುಖ ರಸ್ತೆಗಳು ಹಾಗೂ ಮೆಟ್ರೋ ನಿಲ್ದಾಣಕ್ಕೆ ದಿವಂಗತ ನಾಯಕ ಅನಂತ್‌ ಕುಮಾರ್‌ ಅವರ ಹೆಸರಿಡಿದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಅನಂತ್‌ ಕುಮಾರ್‌ (ಸಂಗ್ರಹ ಚಿತ್ರ)
ಅನಂತ್‌ ಕುಮಾರ್‌ (ಸಂಗ್ರಹ ಚಿತ್ರ) (HT)

ಬೆಂಗಳೂರು: ಅನಂತ್‌ ಕುಮಾರ್...ಕರ್ನಾಟಕದ ಬಿಜೆಪಿ ಪಾಲಿಗೆ ಈ ಹೆಸರು ಚಿರಸ್ಥಾಯಿ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರೊಂದಿಗೆ ಕೂಡಿ ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಅನಂತ್‌ ಕುಮಾರ್‌, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ತುಂಬ ಶ್ರಮಿಸಿದವರು. ಕೇಂದ್ರದಲ್ಲೂ ತಮ್ಮ ಛಾಪು ಮೂಡಿಸಿದ್ದ ಅನಂತ್‌ ಕುಮಾರ್‌, ವಿಧಿಯ ಮುಂದೆ ತಲಬಾಗಿ ಅಕಾಲಿಕ ನಿಧನರಾಗಿದ್ದು, ಬಿಜೆಪಿ ಪಾಲಿನ ವಿಪರ್ಯಾಸವೇ ಸರಿ.

ಟ್ರೆಂಡಿಂಗ್​ ಸುದ್ದಿ

ಆದರೆ ಕಾಲ ಕಳೆದಂತೆ ರಾಜ್ಯ ಬಿಜೆಪಿಯಲ್ಲಿ ಅನಂತ್‌ ಕುಮಾರ್‌ ನೆನಪು ಕಡಿಮೆಯಾಗುತ್ತಿದೆಯೇ ಎಂಬ ಅನುಮಾನ ಇದೀಗ ಮೂಡತೊಡಗಿದೆ. ಇದಕ್ಕೆ ಕಾರಣವಾಗಿದ್ದು ಸ್ವತಃ ಅನಂತ್‌ ಕುಮಾರ್‌ ಅವರ ಪುತ್ರಿ ವಿಜೇತಾ ಅನಂತ್‌ಕುಮಾರ್‌ ಮಾಡಿರುವ ಟ್ವೀಟ್‌.

ಹೌದು, ರಾಜ್ಯ ಸರ್ಕಾರ ಸಾಲು ಸಾಲಾಗಿ ವಿವಿಧ ಸಾಧಕರ ಹೆಸರುಗಳನ್ನು ಬೆಂಗಳೂರಿನ ರಸ್ತೆಗಳಿಗೆ ನಾಮಕರಾಣ ಮಾಡುತ್ತಿದ್ದು, ದಿವಂಗತ ನಾಯಕ ಅನಂತ್‌ ಕುಮಾರ್‌ ಅವರನ್ನು ಕಡೆಗಣಿಸುತ್ತಿರುವುದು ರಾಜ್ಯ ಬಿಜೆಪಿಯಲ್ಲೇ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕಳೆದ ಸೋಮವಾರವಷ್ಟೇ ರೇಸ್‌ಕೋರ್ಸ್‌ ರಸ್ತೆಎ ದಿವಂಗತ ನಟ ಅಂಬರೀಷ್‌ ಅವರ ಹೆಸರು ಇಡಲಾಗಿದೆ. ೧೨ ಕಿ.ಮೀ. ಉದ್ದದ ಹೊರವರ್ತುಲ ರಸ್ತೆಗೆ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ಇಡಲಾಗಿದೆ. ಜೊತೆಗೆ ಜಯನಗರದ ಮುಖ್ಯ ರಸ್ತೆಗೆ ದಿವಂಗತ ನಟ ಬಜ್ರಮುನಿ ಹೆಸರನ್ನು ಇಡಲಾಗಿದೆ.

ಇವರೆಲ್ಲರೂ ಸಾಧಕರು ಎಂಬುದು ನಿಜವಾದರೂ, ರಾಜ್ಯ ಸರ್ಕಾರ ದಿವಂಗತ ನಾಯಕ ಅನಂತ್‌ ಕುಮಾರ್‌ ಅವರನ್ನು ಕಡೆಗಣಿಸಿರುವುದು ಬಿಜೆಪಿಯ ನಿಷ್ಠಾವಂತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕೇಂದ್ರ ಮತ್ತು ಕರ್ನಾಟಕದ ನಡುವಿನ ಪ್ರಮುಖ ಕೊಂಡಿಯಾಗಿ ದಶಕಗಳ ಕಾಲ ಕಾರ್ಯ ನಿರ್ವಹಿಸಿದ್ದ ಅನಂತ್‌ ಕುಮಾರ್‌, ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಜ್ಯಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತೆಗೆದುಕೊಂಡು ಬಂದ ಕೀರ್ತಿ ಅನಂತ್‌ ಕುಮಾರ್‌ ಅವರದ್ದಾಗಿದೆ. ಆದರೆ ಅವರನ್ನು ಸ್ಮರಣೆ ಮಾಡದಿರುವುದು ನಿಷ್ಠಾವಂತರನ್ನಿ ಕೆರಳಿಸಿದೆ.

ನಗರದ ಯಾವುದೇ ರಸ್ತೆ, ವೃತ್ತ ಅಥವಾ ಮೆಟ್ರೋ ನಿಲ್ದಾಣಕ್ಕೆ ಅನಂತ್‌ ಕುಮಾರ್‌ ಹೆಸರು ನಾಮಕರಣ ಮಾಡದಿರುವುದು ಆಶ್ವರ್ಯ ತರಿಸಿದೆ ಎಂದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಾರೆ. ಯಡಿಯೂರು ಆಸ್ಪತ್ರೆ ಬಳಿ ಇರುವ ಚಿಕ್ಕ ರಸ್ತೆಯೊಂದಕ್ಕೆ ಅನಂತ್‌ ಕುಮಾರ್‌ ಹೆಸರನ್ನು ಇಡಲಾಗಿದೆ. ಅದು ಬಿಟ್ಟರೆ ನಗರದ ಯಾವುದೇ ಪ್ರಮುಖ ರಸ್ತೆ ಅಥವಾ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ದೂರುತ್ತಾರೆ.

ಅನಂತ್‌ ಪುತ್ರಿ ಅಸಮಾಧಾನ:

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ದಿವಂಗತ ಅನಂತ್‌ ಕುಮಾರ್‌ ಪುತ್ರಿ ವಿಜೇತಾ ಅನಂತ್‌ಕುಮಾರ್‌, ''ನನ್ನ ತಂದೆ 1987ರಲ್ಲಿ ಔಪಚಾರಿಕವಾಗಿ ಬಿಜೆಪಿ ಸೇರಿದರು ಮತ್ತು ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿದರು. ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು ಕ್ಷುಲ್ಲಕವಾಗಿದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ.. '' ಎಂದು ಚಾಟಿ ಬೀಸಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ದುಡಿದ ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿಸುವಲ್ಲಿ ಮಹತ್ವದ ಪಾತ್ರ ನಿರವಹಿಸಿದ ದಿವಂಗತ ಅನಂತ್‌ ಕುಮಾರ್‌ ಅವರನ್ನು, ರಾಜ್ಯ ಬಿಜೆಪಿಯೇ ಮರೆತಿರುವುದು ವಿಪರ್ಯಾಸವೇ ಸರಿ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತು ಅನಂತ್‌ ಕುಮಾರ್‌ ಅವರಿಗೆ ಸೂಕ್ತ ಗೌರವ ಸಲ್ಲಿಸಬೇಕು ಎಂಬುದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಒತ್ತಾಸೆಯಾಗಿದೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ