ಕನ್ನಡ ಸುದ್ದಿ  /  Karnataka  /  State Bjp Unit To Organize Seva Pakshika During Pm Modi Birthday On September 17

Seva Pakshika: ಪ್ರಧಾನಿ ಮೋದಿ ಜನ್ಮದಿನದಂದು ʼಸೇವಾ ಪಾಕ್ಷಿಕʼ ಆಚರಣೆ: ಕಾರ್ಯಕ್ರಮ ಪಟ್ಟಿಯಲ್ಲೇನಿದೆ?

ಇದೇ ಸೆ.17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಅದರಂತೆ ರಾಜ್ಯ ಬಿಜೆಪಿ ಘಟಕ ಕೂಡ ಮೋದಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ರಾಜ್ಯಾದ್ಯಂತ ʼಸೆವಾ ಪಾಕ್ಷಿಕʼ ಆಚರಣೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ) (ANI/ PIB)

ಬೆಂಗಳೂರು: ಇದೇ ಸೆ.17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಅದರಂತೆ ರಾಜ್ಯ ಬಿಜೆಪಿ ಘಟಕ ಕೂಡ ಮೋದಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.

ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಒಂದು ವಾರಗಳ ಕಾಲ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಜನೋಪಕಾರಿ ಸೇವೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಘಟಕ ಸ್ಪಷ್ಟಪಡಿಸಿದೆ. ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಜ್ಯ ಬಿಜೆಪಿ ಘಟಕ, ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ʼಸೆವಾ ಪಾಕ್ಷಿಕʼ ಆಚರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ಸೇವಾ ಪಾಕ್ಷಿಕದ ಅಂಗವಾಗಿ ಪ್ರತಿ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರವನ್ನು ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ, ಪ್ರತಿ ಜಿಲ್ಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ, ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಸೇವಾ ಕಾರ್ಯ, ಪ್ರತಿ ಜಿಲ್ಲೆಗಳ ಬೂತ್ ಮಟ್ಟದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲು ರಾಜ್ಯ ಬಿಜೆಪಿ ಘಟಕ ತೀರ್ಮಾನಿಸಿದೆ.

ಇಷ್ಟೇ ಅಲ್ಲದೇ ಸೇವಾ ಪಾಕ್ಷಿಕದ ಅಂಗವಾಗಿ ಪ್ರತಿ ಜಿಲ್ಲೆಯ ಮಂಡಲಗಳಲ್ಲಿ ಎರಡು ದಿನಗಳ ಸ್ವಚ್ಛತಾ ಕಾರ್ಯಕ್ರಮ, ಪ್ರತಿ ಜಿಲ್ಲೆಯಲ್ಲಿ ಜಲವೇ ಜೀವನ ಜಾಗೃತಿ ಅಭಿಯಾನ, ವೋಕಲ್ ಫಾರ್ ಲೋಕಲ್‌ ಅಭಿಯಾನಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದೂ ಬಿಜೆಪಿ ಮಾಹಿತಿ ನೀಡಿದೆ.

2025ರ ವೇಳೆಗೆ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿಸುವ ಗುರಿಯೊಂದಿಗೆ, ಒಂದು ವರ್ಷ ಕಾಲ ಟಿಬಿ ರೋಗಿಗಳಿಗೆ ಆಹಾರ, ಪೋಷಣೆ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದ ಸೇವಾ ಕಾರ್ಯ ಕೂಡ ಪ್ರಧಾನಿ ಮೋದಿ ಅವರ ಜನ್ಮದಿನದಂದೇ ಆರಂಭಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.

ಪ್ರತಿ ಜಿಲ್ಲೆಯಲ್ಲಿ ಭಾರತದ ವಿವಿಧತೆಯಲ್ಲಿ ಏಕತೆಯ ಉತ್ಸವ ಆಯೋಜಿಸಲಾಗುತ್ತಿದ್ದು, ʼಏಕ್ ಭಾರತ್, ಶ್ರೇಷ್ಠ್ ಭಾರತ್ʼ (ಒಂದು ಭಾರತ, ಶ್ರೇಷ್ಠ ಭಾರತ) ಸಂದೇಶವನ್ನು ಸಮಾಜಕ್ಕೆ ನೀಡಲು ಪ್ರಯತ್ನಿಸಲಾಗುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿರುವ ಕಾರ್ಯಕ್ರಮ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಆಯಾ ರಾಜ್ಯಗಳ ಬಿಜೆಪಿ ಘಟಕಗಳ ವತಿಯಿಂದ ಸೇವಾ ಪಾಕ್ಷಿಕವನ್ನು ಆಯೋಜಿಸಲಾಗುತ್ತದೆ. ರಾಜ್ಯದಲ್ಲಿ ಜಾರಿಗೊಳಿಸುವಂತೆ ಅಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ಮೋದಿ ಅವರು ಪ್ರತಿ ಬಾರಿಯೂ ತಮ್ಮ ಜನ್ಮದಿನದ ಆಚರಣೆಯನ್ನು ಸಮಾಜದ ಸೇವೆಗೆ ಮುಡಿಪಾಗಿಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪ್ರಮುಖವಾಗಿ ತಮ್ಮ ಜನ್ಮದಿನಾಚರಣೆ ಅಂಗವಾಗಿ ʼಸ್ವಚ್ಛ ಭಾರತ್‌ʼ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಅದಂತೆ ಪ್ರತಿ ವರ್ಷವೂ ಸೆ.17ರಂದು ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಆಯಾ ರಾಜ್ಯಗಳ ಬಿಜೆಪಿ ಘಟಕಗಳು ಆಯೋಜಿಸುತ್ತವೆ. ರಾಜ್ಯ ಬಿಜೆಪಿ ಘಟಕ ಕೂಡ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.
IPL_Entry_Point