ಕರ್ನಾಟಕದಲ್ಲಿ ಇಂಜಿನಿಯರಿಂಗ್ ಕಾಲೇಜುಗಳ ಸ್ಥಿತಿಗತಿ; ಭರ್ತಿಯಾಗದೆ ಖಾಲಿ ಉಳಿದುಕೊಂಡ 14 ಸಾವಿರ ಸೀಟುಗಳು
ಕರ್ನಾಟಕ ರಾಜ್ಯದ 39 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಾಖಲಾತಿ 10ಕ್ಕಿಂತ ಕಡಿಮೆ. ಇಂಜಿನಿಯರಿಂಗ್ ಕಾಲೇಜುಗಳ ಭವಿಷ್ಯ ಡೋಲಾಯಮಾನವಾಗಿದೆ. 14 ಸಾವಿರ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿದೆ.

ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗದೇ ಉಳಿದುಕೊಳ್ಳುತ್ತಿರುವುದು ಹೊಸ ಸುದ್ದಿಯೇನಲ್ಲ. ಒಂದು ಕಾಲದಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಮಾತ್ರ ಲಭ್ಯವಿದ್ದವು. ಹಾಗಾಗಿ ಇಡೀ ದೇಶದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವೀಧರರಾಗಲು ಕರ್ನಾಟಕದ ಕಾಲೇಜುಗಳು ಅನಿವಾರ್ಯವಾಗಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಸರಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತಿವೆ. ಹಾಗಾಗಿ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಿಗೆ ಬೇಡಿಕೆ ಕುಸಿಯುತ್ತಿದೆ. ಕಳೆದ ಐದಾರು ವರ್ಷಗಳಿಂದ ಅಷ್ಟೇನೂ ಪ್ರಸಿದ್ಧಿ ಪಡೆಯದ ಅನೇಕ ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲಾಗಿದೆ. ಅದರಲ್ಲೂ ಬೆಂಗಳೂರು ಹೊರವಲಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಕಾಲೇಜುಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಈ ಶೈಕ್ಷಣ ಕ ವರ್ಷದಲ್ಲಿ ಸುಮಾರು 39 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಾಖಲಾತಿ 10ಕ್ಕಿಂತ ಕಡಿಮೆ ಇದೆ. ಈ ಕಾಲೇಜುಗಳ ಭವಿಷ್ಯ ಡೋಲಾಯಮಾನವಾಗಿದೆ. ಈಶಾನ್ಯ ಮತ್ತು ಉತ್ತರ ಭಾರತದಿಂದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದರು. ಇಂದು ಅವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಕೆಲವು ಕಾಲೇಜುಗಳಿಗೆ ಇಂತಹ ಹೊರರಾಜ್ದ ವಿದ್ಯಾರ್ಥಿಗಳೇ ಆಧಾರವಾಗಿದ್ದರು.
ಟ್ರೆಂಡಿಂಗ್ ಸುದ್ದಿ
2023-24ರ ಶೈಕ್ಷಣ ಕ ವರ್ಷದಲ್ಲಿ ಕಾಮೆಡ್- ಕೆ ಅಡಿಯಲ್ಲಿ ನಡೆಯುವ ದಾಖಲಾತಿ ಪ್ರಕಾರ ಸುಮಾರು 39 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಾಖಲಾತಿ 10ಕ್ಕಿಂತ ಕಡಿಮೆ ಇದೆ. ಕಾಮೆಡ್- ಕೆ ಮೂಲಗಳ ಪ್ರಕಾರ ಈ 39 ಕಾಲೇಜುಗಳ ಪೈಕಿ ಬಹುತೇಕ ಕಾಲೇಜುಗಳು ಬೆಂಗಳೂರಿನಿಂದ ಹೊರಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿವೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಅತ್ಯುತ್ತಮ ಮೂಲಭೂತ ಸೌಕರ್ಯಗಳಿರುವ ಮತ್ತು ರಾಜಧಾನಿ ಬೆಂಗಳೂರಿನಿಂದ ಹೋಗಿ ಬರಲು ಅನುಕೂಲಗಳಿರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಹೊರ ರಾಜ್ಯಗಳ ವಿದ್ಯಾರ್ಥಿಗಳು ಬೆಂಗಳೂರಿನಿಂದ ಹೊರ ಹೋಗಲು ಬಯಸುವುದಿಲ್ಲ. ಜೊತೆಗೆ ಉತ್ತಮ ಪ್ಲೇಸ್ ಮೆಂಟ್ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಭರ್ತಿಯಾಗದ 14,354 ಸೀಟುಗಳು
ಶೂನ್ಯ ದಾಖಲಾತಿ ಇಲ್ಲ ಎನ್ನುವುದೇ ಈ ವರ್ಷದ ವಿಶೇಷ. ಕಳೆದ ವರ್ಷ ಸುಮಾರು 24 ಕಾಲೇಜುಗಳು ಒಂದೂ ದಾಖಲಾತಿ ಆಗದೆ ಶೂನ್ಯ ದಾಖಲಾತಿ ಹೊಂದಿದ್ದವು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಖಾಲಿ ಉಳಿದಿರುವ ಸೀಟುಗಳ ಸಂಖ್ಯೆ ಹೆಚ್ಚಿದೆ. 2022ರಲ್ಲಿ ಹಂಚಿಕೆಯಾದ 18,460 ಸೀಟುಗಳಲ್ಲಿ 13,149 ಸೀಟುಗಳು ಭರ್ತಿಯಾಗದೆ ಉಳಿದುಕೊಂಡಿದ್ದರೆ 2023ರಲ್ಲಿ 22,837 ಸೀಟುಗಳು ಹಂಚಿಕೆಯಾಗಿದ್ದು 14,354 ಸೀಟುಗಳು ಖಾಲಿ ಉಳಿದುಕೊಂಡಿವೆ. ಈ ರೀತಿ ಭರ್ತಿಯಾದೆ ಉಳಿದುಕೊಳ್ಳುವ ಸೀಟುಗಳು ಆಡಳಿತ ಮಂಡಲಿ ಪಾಲಾಗುತ್ತವೆ. ಆಡಳಿತ ಮಂಡಲಿ ಕೋಟಾ ಅಡಿಯಲ್ಲಿಯೂ ಈ ಎಲ್ಲ ಸೀಟುಗಳು ಭರ್ತಿಯಾಗುವ ಲಕ್ಷಣಗಳಿಲ್ಲ.
ಇನ್ನು ದಾಖಲಾತಿ ಆಗದ ಕಾಲೇಜುಗಳ ಭವಿಷ್ಯ ಏನಾಗಬಹುದು ಎಂದು ನೋಡೋಣ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್ ಪೂರ್ಣಗೊಂಡ ನಂತರ ಕಡಿಮೆ ದಾಖಲಾತಿಯಾಗುವ ಕಾಲೆಜುಗಳ ಭವಿಷ್ಯ ಕುರಿತು ನಿರ್ಧರಿಸುವುದಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಹೇಳುತ್ತಾರೆ. ಇಡೀ ಕಾಲೇಜಿನ ದಾಖಲಾತಿಯನ್ನು ಪರಿಗಣ ಸಲಾಗುತ್ತದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ ನಿಯಮಾವಳಿಗಳ ಪ್ರಕಾರ ಶೇ.50ಕ್ಕಿಂತಲೂ ಕಡಿಮೆ ದಾಖಲಾತಿ ಇರುವ ಕಾಲೇಜುಗಳ ಭವಿಷ್ಯ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ವಿಟಿಯು ಮೂಲಗಳು ತಿಳಿಸುತ್ತವೆ.
ವಿದ್ಯಾರ್ಥಿಗಳ ಆಯ್ಕೆಯ ನೆಚ್ಚಿನ ಕೋರ್ಸ್‍ಗಳಿವು
ಕಾಮೆಡ್- ಕೆ ಮೂಲಗಳ ಪ್ರಕಾರ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಮೊದಲ ಆಯ್ಕೆಯಾಗಿದೆ. ನಂತರದ ಸ್ಥಾನಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್, ಕೃತಕ ಬುದ್ದಿಮತ್ತೆ ಮತ್ತು ಮೆಷಿನ್ ಲರ್ನಿಂಗ್, ಡಾಟಾ ಸೈನ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್ ವಿದ್ಯಾರ್ಥಿಗಳ ಆಯ್ಕೆಯಾಗಿದೆ.
(ವರದಿ: ಎಚ್.ಮಾರುತಿ)