ಕಡೂರು ಹುಡುಗ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್; ಕಲಿಕೆಯಲ್ಲಿ ಸ್ಥಿರತೆ, ನಿರಂತರ ಅಭ್ಯಾಸ, ಯಶಸ್ಸಿನ ಸೂತ್ರ
ಕನ್ನಡ ಸುದ್ದಿ  /  ಕರ್ನಾಟಕ  /  ಕಡೂರು ಹುಡುಗ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್; ಕಲಿಕೆಯಲ್ಲಿ ಸ್ಥಿರತೆ, ನಿರಂತರ ಅಭ್ಯಾಸ, ಯಶಸ್ಸಿನ ಸೂತ್ರ

ಕಡೂರು ಹುಡುಗ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್; ಕಲಿಕೆಯಲ್ಲಿ ಸ್ಥಿರತೆ, ನಿರಂತರ ಅಭ್ಯಾಸ, ಯಶಸ್ಸಿನ ಸೂತ್ರ

Success Story: ಎಕ್ಸ್‌ಪರ್ಟ್‌ ಪಿಯು ಕಾಲೇಜ್‌ ವಳಚಿಲ್‌ ವಿದ್ಯಾರ್ಥಿ, ಕಡೂರು ಹುಡುಗ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್ ಗಳಿಸಿದ್ದು, ಆತ ಕಲಿಕೆಯಲ್ಲಿ ಸ್ಥಿರತೆ, ನಿರಂತರ ಅಭ್ಯಾಸ, ಉತ್ತಮ ಜೀವನ ಶೈಲಿ ರೂಢಿಸಿಕೊಂಡಿರುವುದು ಯಶಸ್ಸಿನ ಸೂತ್ರ ಎಂದು ಪಾಲಕರು ತಿಳಿಸಿದ್ದಾರೆ.

ಕಡೂರು ಪತ್ರಕರ್ತ ಪ್ರಕಾಶ್ ಎಜೆ ಮತ್ತು ಶಿಕ್ಷಕಿ ಉಷಾ ದಂಪತಿಯ ಪುತ್ರ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್ ಬಂದಿದೆ.
ಕಡೂರು ಪತ್ರಕರ್ತ ಪ್ರಕಾಶ್ ಎಜೆ ಮತ್ತು ಶಿಕ್ಷಕಿ ಉಷಾ ದಂಪತಿಯ ಪುತ್ರ ಷಡ್ಜಯ್ ಎಪಿಗೆ ದ್ವಿತೀಯ ಪಿಯುಸಿಯಲ್ಲಿ 4ನೇ ರ‍್ಯಾಂಕ್ ಬಂದಿದೆ.

Success Story: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪತ್ರಕರ್ತ ಪ್ರಕಾಶ್ ಎಜೆ, ಶಿಕ್ಷಕಿ ಉಷಾ ದಂಪತಿಯ ಪುತ್ರ, ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜ್‌ ವಳಚಿಲ್‌ನ ವಿದ್ಯಾರ್ಥಿ ಷಡ್ಜಯ್ ಎಪಿ ನಾಲ್ಕನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. 600 ಅಂಕಗಳಿಗೆ 596 ಅಂಕ ಗಳಿಸಿದ್ದು ಶೇಕಡ 99.37 ಫಲಿತಾಂಶ ದಾಖಲಿಸಿದ್ದಾರೆ. ಕನ್ನಡ, ರಸಾಯನ ಶಾಸ್ತ್ರ, ಜೀವಶಾಸ್ತ್ರಗಳಲ್ಲಿ ತಲಾ 100, ಭೌತಶಾಸ್ತ್ರ 98, ಗಣಿತ ಮತ್ತು ಇಂಗ್ಲಿಷ್‌ನಲ್ಲಿ ತಲಾ 99 ಅಂಕಗಳಿಸಿದ್ದಾರೆ. ಷಡ್ಜಯ್ ಎಪಿ ಅವರ ತಂದೆ ಪ್ರಕಾಶ್ ಎಜೆ ಮತ್ತು ತಾಯಿ ಉಷಾ ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಮಾತನಾಡಿದ್ದು, ಪುತ್ರನ ಕಲಿಕಾ ಯಶಸ್ಸಿನ ಸೂತ್ರವನ್ನು ಹಂಚಿಕೊಂಡಿದ್ದಾರೆ.

ಕಲಿಕೆಯಲ್ಲಿ ಸ್ಥಿರತೆ, ನಿರಂತರ ಅಭ್ಯಾಸ, ಯಶಸ್ಸಿನ ಸೂತ್ರ

ಪ್ರಕಾಶ್ ಎಜೆ ಮತ್ತು ಉಷಾ ಅವರು ತಮ್ಮ ಪುತ್ರ ಷಡ್ಜಯ್‌ ಎಪಿ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದು, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪುತ್ರನಿಗೆ 4ನೇ ರ‍್ಯಾಂಕ್ ಬಂದಿದೆ. ಆತ ಸದ್ಯ ಕರ್ನಾಟಕ ಸಿಇಟಿ ಪರೀಕ್ಷೆ ಬರೆಯುವುದಕ್ಕೆ, ನೀಟ್‌ ಪರೀಕ್ಷೆ ಹಾಗೂ ಐಐಎಸ್‌ಸಿ ಬೆಂಗಳೂರಿನ ಪ್ರವೇಶ ಪರೀಕ್ಷೆ ಎದುರಿಸಲು ಸಿದ್ದತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಪಿಯುಸಿಯಲ್ಲಿ ಪಿಸಿಎಂಬಿ ತಗೊಳ್ಳುವ ತೀರ್ಮಾನ ತೆಗೆದುಕೊಂಡಾಗಲೇ ಆತ, ಇದೊಂದು ತಪಸ್ಸು. ಇದಕ್ಕೆ ಸರಿಯಾದ ಕಾಲೇಜಿಗೇ ಸೇರಬೇಕು ಎಂದು ಹೇಳಿದ್ದ. ಅದರಂತೆ, ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿಕೊಂಡು ಮಂಗಳೂರಿನ ಎಕ್ಸ್‌ಪರ್ಟ್‌ ಒಳಚಿಲ್ ಕಾಲೇಜಿನಲ್ಲೇ ಕಲಿಯಬೇಕು ಎಂಬ ತೀರ್ಮಾನವನ್ನೂ ಷಡ್ಜಯ್‌ ಸ್ವತಃ ತೆಗೆದುಕೊಂಡದ್ದು. ಎರಡು ವರ್ಷ ಕಠಿಣ ತರಬೇತಿಗೆ ಒಳಗಾಗಬೇಕು ಎಂದು ತೀರ್ಮಾನಿಸಿಕೊಂಡಿದ್ದ. ವಿಟ್ಲದ ಅಳಿಕೆ ಶಾಲೆಯಲ್ಲಿ 6 ಮತ್ತು 7ನೇ ತರಗತಿ ಓದಿದ್ದ ಕಾರಣ, ಬದುಕಿಗೊಂದು ಶಿಸ್ತು ಬಂದಿತ್ತು ಎಂದು ಹೇಳಿದ್ದಾರೆ.

ಮುಂಜಾನೆ 5.30ಕ್ಕೆ ಎದ್ದು ನಿತ್ಯ ವಿಧಿಗಳನ್ನು ಮುಗಿಸಿಕೊಂಡು ಯೋಗ, ಪ್ರಾಣಾಯಾಮ ಮಾಡಿ ಇಡೀ ದಿನಕ್ಕೆ ಬೇಕಾದ ಚೈತನ್ಯವನ್ನು ಪಡೆಯುತ್ತಿದ್ದಾನೆ. ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ತನಕ ಕಾಲೇಜು ತರಗತಿ ಮತ್ತು ಪೂರಕ ಪಠ್ಯಚಟುವಟಿಕೆಗಳು ನಡೆಯುತ್ತಿದ್ದವು. ರಾತ್ರಿ 11.30ರ ತನಕ ಕೋಚಿಂಗ್ ಇತ್ಯಾದಿ ನಡೆಯುತ್ತದೆ. ಎಕ್ಸ್‌ಪರ್ಟ್‌ ಕಾಲೇಜು ಪ್ರಾಂಶುಪಾಲರು ಮಾತುಗಳಿಂದಲೇ ಆತ ಕಲಿಕೆಗೆ ಬೇಕಾದ ಪ್ರೇರಣೆ ಪಡೆಯುತ್ತಿದ್ದ ಎಂದು ಹೇಳಿದರು.

ಸಿಬಿಎಸ್‌ಇ 10ನೇ ತರಗತಿಯಲ್ಲಿ ಶೇ 97 ಅಂಕ ಬಂದಿತ್ತು

ಬೀರೂರಿನ ವಾಗ್ದೇವಿ ವಿಲಾಸ ಸಿಬಿಎಸ್‌ಇ ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೆ ಓದಿದ್ದು, 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 97 ಅಂಕ ಪಡೆದಿದ್ದ. ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯಲ್ಲಿ ಶೇಕಡ 97 ಅಂಕ ಬಂದ ಕಾರಣ ಕೆಲವು ಪಿಯು ಕಾಲೇಜುಗಳು ಉಚಿತ ಶಿಕ್ಷಣದ ಆಫರ್ ನೀಡಿದ್ದವು. ಅದ್ಯಾವುದೂ ಬೇಡ ಎಂದು ಷಡ್ಜಯ್‌ ಎಪಿ, ಮಂಗಳೂರು ಎಕ್ಸ್‌ಪರ್ಟ್‌ ಕಾಲೇಜಿನಲ್ಲಿ ಕಲಿಯುವ ತೀರ್ಮಾನ ಮಾಡಿದ ಎಂದು ಪ್ರಕಾಶ್ ಎಜೆ ಮತ್ತು ಉಷಾ ದಂಪತಿ ತಿಳಿಸಿದರು.

ಷಡ್ಜಯ್ ಎಪಿ ಕಲಿಕೆಯಲ್ಲಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆ, ಕ್ರೀಡೆಗಳಲ್ಲೂ ತೊಡಗಿಸಿಕೊಂಡಿದ್ದ. ವಾಲಿಬಾಲ್‌, ಕ್ರಿಕೆಟ್, ಚೆಸ್‌ ಬಗ್ಗೆ ಆತನಿಗೆ ವಿಶೇಷ ಆಸಕ್ತಿ. ಸಮಾಜ ಆಗುಹೋಗುಗಳನ್ನು ತಿಳಿದುಕೊಳ್ಳಲು ನಿತ್ಯವೂ ಪತ್ರಿಕೆ ಓದುವ ಹವ್ಯಾಸ ಇಟ್ಟುಕೊಂಡಿದ್ದು, ರಾಜಕೀಯದ ಬಗ್ಗೆಯೂ ಆಸಕ್ತಿ ಇದೆ. ಮುಂದೆ ನೀಟ್ ಬರೆದು ವೈದ್ಯ ವಿಜ್ಞಾನ ಕಲಿತು, ಯುಪಿಎಸ್‌ಸಿ ಪರೀಕ್ಷೆ ಬರೆದು ಸರ್ಕಾರಿ ಸೇವೆಗೆ ಸೇರಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಷಡ್ಜಯ್ ಕಲಿಕೆ ಮುಂದುವರಿಸಿದ್ದಾಗಿ ಅವರು ಹೇಳಿದರು. ಈ ಪ್ರತಿಭೆಗೆ ಶುಭಹಾರೈಸೋಣ. ಒಳಿತಾಗಲಿ. ಶುಭವಾಗಲಿ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner