‘ಹಣದ ಅಭಿಲಾಷೆ ಹೆಚ್ಚಾದಷ್ಟೂ ಹೆಣದ ವಾಸನೆ ಬರುತ್ತದೆ’: ಸುಕ್ರಿ ಬೊಮ್ಮಗೌಡ ಹೇಳಿದ ಮಾತು ಇಂದಿಗೂ ಪ್ರಸ್ತುತ
ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಬೊಮ್ಮಗೌಡ ನಿಧನರಾಗಿದ್ದಾರೆ. ಹಾಲಕ್ಕಿ ಜನಪದ ಹಾಡುಗಳಿಂದಲೇ ಖ್ಯಾತರಾದ ಈ ವಿಶೇಷ ಚೇತನದ ಬಗ್ಗೆ ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಅವರ ಜತೆಗಿನ ನೆನಪುಗಳನ್ನು ಎಚ್‌ಟಿ ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ.

ಮಂಗಳೂರು: ನಿನ್ನೆ ಮತ್ತು ನಾಳೆಯನ್ನು ಮರೆತು ಇಂದಿನದು ಇಂದಿಗೆ ಎಂದು ಸಂತಸ ಪಡುವವನೇ ಈ ಜಗತ್ತಿನ ಶೇಷ್ಠ ಸುಖ ಜೀವಿ ಎಂದು ಸುಕ್ರಿ ಅಜ್ಜಿ ಇಷ್ಟು ಹೇಳಿದ್ದು ಮಾತ್ರವಲ್ಲ ಸ್ವತಃ ಅವರೇ ಈ ರೀತಿ ಬದುಕಿ ಇತರರಿಗೂ ಮಾದರಿಯಾಗಿದ್ದಾರೆ. ‘ಹಣವೇ ಬದುಕಲ್ಲ, ಗುಣವೇ ಬದುಕಿನ ಶ್ರೇಷ್ಠ ಸಂಪತ್ತು, ಹಣದ ಅಭಿಲಾಷೆ ಹೆಚ್ಚಾದಷ್ಟೂ ಹೆಣದ ವಾಸನೆ ಬರುತ್ತದೆ ' ಎಂದು ಸುಕ್ರಜ್ಜಿ ಸದಾ ಹೇಳುತ್ತಿದ್ದರು ಎಂದು ನೆನಪಿಸಿಕೊಂಡವರು ಖ್ಯಾತ ಪರಿಸರವಾದಿ ಹಾಗೂ ಪದ್ಮಶ್ರೀ ಸುಕ್ರಿ ಬೊಮ್ಮ ಗೌಡರ ನಿಕಟವರ್ತಿಗಳಲ್ಲಿ ಓರ್ವರಾದ ದಿನೇಶ್ ಹೊಳ್ಳ.
ಅವರ ನಿಧನದ ಕುರಿತು ಸಂತಾಪ ಸೂಚಿಸಿದ ಹೊಳ್ಳರು, ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದು ವೈದ್ಯರನ್ನು ಸುಕ್ರಜ್ಜಿ ಸಂಪರ್ಕಿಸಿ ಹೋಗಿದ್ದರು. ಆಗಲೇ ಮುಖ ಡಲ್ ಆಗಿತ್ತು. ಅವರಂಥವರು ನಮಗೆ ದೊರಕುವುದು ವಿರಳ. ಅನರ್ಘ್ಯ ರತ್ನವೊಂದನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು.
ಸುಕ್ರಜ್ಜಿಗೆ ಹಣ ಮಾಡುವುದಿದ್ದರೆ ಎಷ್ಟೂ ಹಣ ಮಾಡಬಹುದಿತ್ತು. ಅಂತಹ ಅವಕಾಶಗಳು ಕೂಡಾ ಸಾಕಷ್ಟು ಲಭ್ಯವಾಗಿತ್ತು. ಅಲ್ಲಿ ಇಲ್ಲಿ ಸನ್ಮಾನ, ಪುರಸ್ಕಾರ ಅಂತಾ ಒಂದಷ್ಟು ಹಣ ಸಿಕ್ಕಿದರೂ ತಾನು ಉಪಯೋಗಿಸದೇ ಅದನ್ನು ಸಮಾಜ ಮತ್ತು ಸಮುದಾಯದ ಉನ್ನತಿಗೆ ಉಪಯೋಗಿಸುತ್ತಿದ್ದರು. ಬರುವಾಗ ತಂದದ್ದು ಏನಿಲ್ಲ ಹೋಗುವಾಗ ಕೊಂಡು ಹೋಗುವುದು ಏನಿಲ್ಲ, ಇರುವುದರ ನಡುವೆ ಇದ್ದದನ್ನು ಹಂಚಿಕೊಂಡು ತಿಂದು ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ಎನ್ನುವ ನಿಲುವಿನೊಂದಿಗೆ ತನ್ನ ಸುಖವನ್ನು ಸಮಾಜದಲ್ಲಿ ಕಂಡು ಕೊಂಡು ನೆಮ್ಮದಿಯಿಂದ ಬದುಕಿದವರು ಸುಕ್ರಿ ಅಜ್ಜಿ ಎಂದು ಹೊಳ್ಳ ನೆನಪಿಸಿಕೊಂಡರು.
ಸುಕ್ಕಜ್ಜಿಯನ್ನು ಹತ್ತಿರದಿಂದ ಕಂಡವರು ದಿನೇಶ್ ಹೊಳ್ಳ
ಹೊಳ್ಳರು ಅಂಕೋಲದ ಸುಕ್ರಜ್ಜಿ ಮನೆಗೆ ಲೆಕ್ಕವಿಲ್ಲದಷ್ಟು ಬಾರಿ ಹೋಗಿದ್ದಾರೆ. ಅವರ ಪ್ರೀತಿಯ ಮಾತುಗಳನ್ನು ಕೇಳಿದ್ದಾರೆ. ಸಮಾಜದಲ್ಲಿ ಇಂದು ಕಾಳಿನ ಜೊತೆ ಜೊಳ್ಳು ಹೆಚ್ಚಾಗುತ್ತಾ ಇವೆ. ಸುಕ್ರಜ್ಜಿ ಬಹಳ ವರ್ಷಗಳಿಂದ ಮಾಡಿದ್ದೂ ಇದನ್ನೇ.. ಸಮಾಜ ಅಂದರೆ ಒಬ್ಬ, ಇಬ್ಬರು ವ್ಯಕ್ತಿಗಳಲ್ಲ, ಅದು ಸಾರ್ವಜನಿಕ ಸಮುದಾಯ. ಅಲ್ಲಿ ಒಳ್ಳೆಯ ವ್ಯಕ್ತಿಗಳೂ ಇದ್ದಾರೆ, ಕೆಡಿಸುವ ಮಂದಿಯೂ ಇದ್ದಾರೆ. ಕೆಡಿಸುವವರಿಗೆ ಬುದ್ಧಿ ಹೇಳುತ್ತಾ, ಅವರನ್ನು ತಿದ್ದುತ್ತಾ, ಒಳಿತು ಮಾಡುವವರನ್ನು ಹಾರೈಸುತ್ತಾ ಸದಾ ಕಾಲ ಸಾಮಾಜಿಕ ಚಿಂತನೆಯನ್ನೇ ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಬಂದಿರುವ ಸುಕ್ರಜ್ಜಿ ನಮ್ಮ ನಾಡಿಗೊಂದು ಶ್ರೇಷ್ಟ ಸಂಪತ್ತು. ಗ್ರೇಟ್ ಸೆಲೆಬ್ರಿಟಿ.. ಸುಕ್ರಜ್ಜಿ ಜೊತೆ ಮಾತಿಗೆ ಕುಳಿತರೆ ಅವರ ಪ್ರತೀ ಮಾತುಗಳಲ್ಲೂ ಎಲ್ಲರೂ ಒಳ್ಳೆಯದಾಗಬೇಕು, ಎಲ್ಲರಿಗೂ ನೆಮ್ಮದಿ ಇರಬೇಕು, ಸಮಾಜ, ಸಮುದಾಯ ನಿಷ್ಠೆ, ಸತ್ಯ, ಸಂತಸಗಳ ಹಾದಿಯಲ್ಲೇ ಸಾಗಬೇಕು ಎಂಬ ಬದ್ಧತೆ ಸದಾ ಇರುತ್ತದೆ ಎಂದು ನೆನಪಿಸಿಕೊಂಡರು.
ಸುಕ್ರಜ್ಜಿ ಕುರಿತ ಒಡನಾಟ ನೆನಪಿಸಿಕೊಂಡ ಹೊಳ್ಳ.
ಸುಗ್ಗಿ ಹಬ್ಬಕ್ಕೆ ಹೋದ ಮೇಲೆ ಸುಕ್ರಜ್ಜಿ ಮನೆಗೆ ಹೋಗದೆ ಇದ್ದರೆ ಆದೀತೇ....??? ಹೋಗದೆ ಇದ್ದರೆ ಅಜ್ಜಿ ಕೋಪ , ಬೈಗಳು ಕೇಳುದಕ್ಕೆ ಕಷ್ಟ ಆಗ್ತದೆ... ಅಂಕೋಲಾಕ್ಕೆ ಹೋದರೆ ಅದ್ಯಾಕೋ ಅಜ್ಜಿ ಮನೆ ನನ್ನನ್ನು ಸೆಳೆಯುತ್ತದೆ... ಅಜ್ಜಿಯ ಪ್ರೀತಿಯೇ ಅಂತಾದ್ದು... ಜಾನಪದ ಕಾನನ ಕೋಗಿಲೆ, ಪರಿಸರ ಹೋರಾಟಗಾರ್ತಿ, ಹಾಲಕ್ಕಿ ಬುಡಕಟ್ಟು ನಾಯಕಿ, ಪದ್ಮಶ್ರೀ ನಾಡೋಜ ಸುಕ್ರಿ ಬೊಮ್ಮ ಗೌಡ ನನ್ನ ಅಭಿಮಾನದ ತುಂಬಾ ಪ್ರೀತಿಯ, ಹಾಡು, ಕಾಡು, ಜಾಡು ಎಂಬ ಗೌರವದ ಸ್ಥಾನದಲ್ಲಿರುವವರು. ಅವರ ಹೋರಾಟದ ದೃಢ ನಿಲುವು, ಪ್ರೀತಿಯ ಸಂಚಯ, ಜ್ಞಾನದ ಸಂಕೀರ್ಣ, ಎಲ್ಲರೊಡನೆ ಒಡನಾಟದ ಬಾಂಧವ್ಯ , ಮೇರು ವ್ಯಕ್ತಿತ್ವ, ಸರಳ ಜೀವನ ಎಲ್ಲವೂ ಅಮೋಘವಾದುದು.
ನಿನ್ನೆ ಅಂಕೋಲಾದ ಅವರ ಜೊತೆ ಅವರ ಮನೆಯಲ್ಲಿ ಇದ್ದು ಇಡೀ ದಿನ ಒಂದಷ್ಟು ಹರಟೆ ಹೊಡೆಯುತ್ತಾ ಒಂದಷ್ಟು ಅವರ ಹಾಡು ಕೇಳುತ್ತಾ ಅವರ ಜೊತೆ ಊಟ ಮಾಡಿ ಕಳೆದ ಅನುಭವಗಳು ಮರೆಯಲಾಗದ ಕ್ಷಣಗಳು. ಅವರ ಹಾಡುಗಳನ್ನು ನನ್ನ ರೇಖಾಚಿತ್ರಗಳೊಂದಿಗೆ ಪ್ರಕಟ ಗೊಳಿಸಬೇಕೆಂಬ ಆಶಯ ನನ್ನದು. ಈ ಬಗ್ಗೆ ನಿನ್ನೆ ಅಜ್ಜಿ ಜೊತೆ ಹೇಳಿದಾಗ " ಜೈ, ಮಾಡ್ರೀ... ನನ್ನ ಒಪ್ಪಿಗೆ ಇದೆ" ಅಂದು ಬಿಟ್ಟರು... ಅದು ಒಪ್ಪಿಗೆಯಲ್ಲ... ಅವರ ಹಾರೈಕೆ... ಆಶೀರ್ವಾದ. ಸುಕ್ರಜ್ಜಿ ಯವರ ಕೃತಿ ಪ್ರಕಟ ಮಾಡುವುದು ನನ್ನ ಸೌಭಾಗ್ಯವಾಗಿದ್ದು ಅವರ ಬದುಕಿನ ಸಾಧನೆಯನ್ನು ಶಾಶ್ವತವಾಗಿ ಉಳಿಸಬೇಕಾದ ಅಗತ್ಯ ಇದೆ. ನಿನ್ನೆ ಅಜ್ಜಿ ನಂಗೆ ಒತ್ತಿ ಹೇಳಿದ ಹಾಡು ಹೀಗಿತ್ತು....." ಕಂಡು ಬರುವ ಹೂವಾ... ಕಂಡಲ್ಲೇ ಕೊಯ್ಯಬೇಡ... ಹೆಂಡರಿಲ್ಲದ ಪುಂಡುಗಾರ.... ಹೆಂಡರಿಲ್ಲದ ಚೂಲುಗಾರ ಕಂಡವರ ಹೆಣ್ಣಿನ ಕೈಯ ಹಿಡಿದಾನೇ... ಕೈಯಾರ ಹಿಡಿದಾನೇ... ಹಾದಿಗಾಕಿ ರಂಗೋರ ಕರಿಬಳೆ ಜರಿದಾನೆ.... ಜರಿದ ಪುಂಡುಗಾರ ಯಾರ್ಯಾರ ಮನಿಗೆ ಭಂಗ ತರತಾನ " ಒಟ್ಟಾರೆ ಸುಕ್ರಿ ಅಜ್ಜಿ ಜೊತೆ ಇದ್ದರೆ ಯಾವುದೂ ಬೇಡ ಎಲ್ಲಾ ಮರೆತು ಅಜ್ಜಿ ಹತ್ರ ಕುಳಿತರೆ ಎಷ್ಟೊಂದು ಹಾಡು... ಎಷ್ಟೊಂದು ಪ್ರೀತಿ... ಎಷ್ಟೊಂದು ನಗು....
ಇದು ಸ್ವತಃ ಛಾಯಾಚಿತ್ರಗ್ರಾಹರೂ ಆಗಿರುವ ದಿನೇಶ್ ಹೊಳ್ಳ ಸುಗ್ಗಿ ಹಬ್ಬದ ಸಂದರ್ಭ ಹೋದ ವೇಳೆ ಕೆಲ ಛಾಯಾಚಿತ್ರಗಳನ್ನು ಸುಕ್ರಜ್ಜಿಯೊಂದಿಗೆ ತೆಗೆದ ಬಳಿಕ ಬರೆದ ಸಾಲುಗಳು.
ಬರೀ ಪ್ರಶಸ್ತಿ ಸಾಲದು ಸಾಧಕರ ಬದುಕು ಕಟ್ಟಿಕೊಟ್ಟರೆ ಚಂದ
ಬರೀ ಪ್ರಶಸ್ತಿ ಸಾಲದು ಇಂತಹ ಅನನ್ಯ ಕಲೆ, ಸಾಧಕರ ಬದುಕು ಕಟ್ಟಿಕೊಟ್ಟರೆ ಚೆಂದ. ಸುಕ್ರಜ್ಜಿ ವ್ಯಕ್ತಿ ಅಲ್ಲ ಅವರೊಂದು ಮಹಾನ್ ಶಕ್ತಿ... ಯಾವುದೋ ಭ್ರಷ್ಟ ರಾಜಕಾರಣಿ, ಯಾವುದೋ ಚಿತ್ರ ನಟರನ್ನು ಸೆಲೆಬ್ರಿಟಿ ಅನ್ನೋದಕ್ಕೆ ಅರ್ಥವೇ ಇಲ್ಲಾ... ಅವರು ಮಾಡಿದ್ದು ಯಾವ ಕರ್ಮನೂ ಇಲ್ಲಾ... ನನ್ನ ದೇಶದ ನಮ್ಮ ರಾಜ್ಯದ ಗ್ರೇಟ್ ಸೆಲೆಬ್ರಿಟಿ ಅಂದರೆ ಅದು ಸುಕ್ರಿ ಅಜ್ಜಿ. ನಾನಂತೂ 15 ವರುಷ ಅವರ ಸಂಪರ್ಕದಿಂದ ತುಂಬಾ, ತುಂಬಾ ಕಲಿತಿದ್ದೇನೆ... ತುಂಬಾ ವಂಚನೆಗೆ ಒಳಗಾಗಿದ್ದಾರೆ... ಈ ಸಮಾಜದ ಸ್ವಯಂ ಘೋಷಿತ ಪ್ರಭಾವಿಗಳಿಂದ...!!! ನನ್ನಲ್ಲಿ ಅಜ್ಜಿ ಹೇಳಿದ ಕೆಲವು ವಿಚಾರಗಳನ್ನು ಕೇಳಿದಾಗ ಚೀ... ಥೂ ಅಂತ ಉಗಿಯ ಬೇಕಾಗುತ್ತದೆ ಕೆಲವರಿಗೆ... ಆದರೂ ಅಜ್ಜಿ ಗೋಸ್ಕರ ಎಲ್ಲವನ್ನೂ ಸಹಿಸಿ ಸುಮ್ಮನಿರುವುದು... ಅಜ್ಜಿ ಅವರಿಗೆ ಮೋಸ ಮಾಡಿದವರು ಇದ್ದರೂ ಅವರ ಜೊತೆ ಘರ್ಷಣೆ ಮಾಡದೇ ಪ್ರೀತಿಯಿಂದ ಇರುವವರು... ಅಜ್ಜಿಯ ಹಾಡುಗಳನ್ನು ಕೃತಿ ರೂಪದಲ್ಲಿ ತರಬೇಕು ಎಂಬ ಪ್ರಯತ್ನ ನಮ್ಮದು. ಅದು ಕಾರ್ಯ ರೂಪಕ್ಕೆ ಬರಲಿದೆ..
ಅಜ್ಜಿ ತನಗೋಸ್ಕರ ಮಾಡಿದ್ದು ಶೂನ್ಯ... ಸಮಾಜ, ಸಮುದಾಯ, ಪ್ರಕೃತಿಗೊಸ್ಕರ ಮಾಡಿದ್ದು ಆಕಾಶ ದೆತ್ತರಕ್ಕೆ ಬೆಳೆದಿದೆ.. ಸರ್ವರಿಗೂ ಸಮ ಪಾಲು.. ಸರ್ವರಿಗೂ ಸಮ ಬಾಳು ಎಂಬ ಹಾಲಕ್ಕಿ ಸಮುದಾಯದ ನಿಲುವಿನಲ್ಲಿ ಅಜ್ಜಿಯ ಬದುಕು... ಇದುವೆ ಅವರ ನೆಮ್ಮದಿಯ ಬದುಕಿನ ಗುಟ್ಟು.. ಅಜ್ಜಿಗೆ ಒಮ್ಮೆ ಹಣದ ಬಗ್ಗೆ ಮೋಸ ಆಗಿದ್ದಾಗ ನಾನು ಮೋಸ ಮಾಡಿದವರ ಜೊತೆ ಜಗಳಕ್ಕೆ ಇಳಿದಾಗ ಅಜ್ಜಿ ನಂಗೆ ಹೇಳಿದ ಮಾತು ಹೀಗಿತ್ತು... ಹಣದ ಅಭಿಲಾಷೆ ಹೆಚ್ಚಾದರೆ ಹೆಣದ ವಾಸನೆ ಬರುತ್ತದೆ .. ಅಂತಾ... ನಾವೆಲ್ಲಾ ಕಲಿಯಬೇಕಾದ ವಿಚಾರ ಇದು.... ನೀವು ಸದಾ ಇಂತಹ ಒಳ್ಳೆಯ ಯೋಚನೆ ಮಾಡಿ.. ಅಜ್ಜಿಯ ಆಶೀರ್ವಾದ ಅಂದರೆ ಅದು ದೇವರ ಆಶೀರ್ವಾದ....... ಜೈ ಹಾಲಕ್ಕಿ... ಜೈ ಸುಕ್ರಜ್ಜಿ ಎಂದರು ದಿನೇಶ್ ಹೊಳ್ಳ.
ವರದಿ: ಹರೀಶ್ ಮಾಂಬಾಡಿ, ಮಂಗಳೂರು
