Summer Camp: ಎಳೆಮಕ್ಕಳಿಗೆ ಹಳೆಕಾಲ ಪರಿಚಯಿಸಿದ ಅಜ್ಜಿಮನೆ; ವಿಶಿಷ್ಟ ರೀತಿಯಲ್ಲಿ ನಡೆದ ಬೇಸಿಗೆ ಶಿಬಿರ
Summer Camp: ಬಹುತೇಕ ಎಲ್ಲ ಮಕ್ಕಳಿಗೂ ಈಗ ಬೇಸಿಗೆ ರಜೆ. ಕಲ್ಲಡ್ಕ ಮತ್ತು ಪುತ್ತೂರು ನಡುವೆ ಇರುವ ಪೆರಾಜೆ ಮಾಣಿಯ ಬಾಲವಿಕಾಸ ಶಾಲೆಯಲ್ಲಿ ಎಳೆಮಕ್ಕಳಿಗೆ ಹಳೆಕಾಲ ಪರಿಚಯಿಸಿದ ಅಜ್ಜಿಮನೆ, ವಿಶಿಷ್ಟ ರೀತಿಯಲ್ಲಿ ನಡೆದ ಬೇಸಿಗೆ ಶಿಬಿರವಾಗಿ ಮೂಡಿಬಂತು. (ವರದಿ- ಹರೀಶ ಮಾಂಬಾಡಿ, ಮಂಗಳೂರು)

Summer Camp: ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಮೈಸೂರಿನಲ್ಲಿ ಸಿಗುವ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲೆಯ 40ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಮಕ್ಕಳು ಭಾಗವಹಿಸಿದ ಬೇಸಗೆ ಶಿಬಿರ ತನ್ನ ವೈಶಿಷ್ಟ್ಯಗಳ ಮೂಲಕ ಗಮನ ಸೆಳೆಯಿತು. ಮೊಬೈಲ್ ನಲ್ಲಿ ಮುಳುಗಿರುವ ಮಕ್ಕಳನ್ನು ದಶಕಗಳ ಹಿಂದಕ್ಕೆ ಕೊಂಡೊಯ್ದ ಶಿಬಿರವಿದು. ಇದರ ಹೆಸರು ಅಜ್ಜಿಮನೆ.
ಇಲ್ಲಿ ಮಕ್ಕಳು ಹಾಳೆಯಲ್ಲಿ ಜಾರಿದರು, ತೆಂಗಿನ ಗರಿಯಲ್ಲಿ ಗಿರಿಗಿಟಿ ಮಾಡಿದರು, ಮಣ್ಣಿನಲ್ಲಿ ಮಡಿಕೆಯನ್ನೂ ಮಾಡಿದರು..
ಒಂದಾನೊಂದು ಕಾಲದಲ್ಲಿ, ಮೊಬೈಲ್ ಇಲ್ಲದ ಊರಿನಲ್ಲಿ ಎಂಬ ಉಪಶೀರ್ಷಿಕೆಯೊಂದಿಗೆ ರೂಪುಗೊಂಡ ಶಿಬಿರದಲ್ಲಿ ಮಹರಾಷ್ಟ್ರ, ಬೆಂಗಳೂರು, ಮಂಗಳೂರು,ಪುತ್ತೂರು ಬಿ.ಸಿ.ರೋಡು, ಕಲ್ಲಡ್ಕ, ಉಪ್ಪಿನಂಗಡಿ, ವಿಟ್ಲ ಸಹಿತ ಸಹಿತ ಜಿಲ್ಲೆಯ 40 ಕ್ಕೂ ಅಧಿಕ ವಿದ್ಯಾಸಂಸ್ಥೆಗಳ 211 ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು.
ಹಳೆಯ ಲೋಕ, ಹೊಸ ನೆನಪು
ಮೊದಲ ದಿನವೇ ಅಜ್ಜಿ ಮನೆಗೆ ಸ್ಪೆಷಲ್ ಎಂಟ್ರಿಕೊಟ್ಟು ಮಕ್ಕಳನ್ನು ಅಜ್ಜಿಕಾಲಕ್ಕೆ ಕರೆದೊಯ್ದವರು ಮಾಣಿಯ ಪ್ರಪುಲ್ಲಾ ರೈ ಯವರು. ಮಕ್ಕಳಿಗೆ ಹಿಂದಿನ ಕಾಲದಲ್ಲಿ ಮನೆಯೊಳಗೆ ಇದ್ದ ಪರಿಸ್ಥಿತಿ, ಆಗಿನ ಆಟಗಳು, ಹಾಡುಗಳ ಬಗ್ಗೆ ವಿವರಿಸಿ ಮಕ್ಕಳನ್ನು ಹೊಸಲೋಕದತ್ತ ಸೆಳೆದರು. ನಮ್ಮ ಮನೆಯ ಸುತ್ತಮುತ್ತ ಸಿಗುವ ಪ್ರಾಕೃತಿಕ ವಸ್ತುಗಳನ್ನು ಬಳಸಿ ಆಟಿಕೆ ತಯಾರಿಸುವ ವಿವಿಧ ಚಟುವಟಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಉಂಗುರ, ಗಾಡಿ, ಫ್ಯಾನ್, ವಾಚ್, ಗಿರಿಗಿಟಿ, ರಾಕೆಟ್, ಬಿಲ್ಲುಬಾಣ, ಕನ್ನಡಕ, ಚಾಪೆ ಸಹಿತ ವಿವಿಧ ಆಟಿಕೆಗಳನ್ನು ಸ್ವತಃ ತಯಾರಿಸಿ ಸಂಭ್ರಮಿಸಿದರು.
ಗುತ್ತಿನ ಮನೆ ವಿನ್ಯಾಸಕ್ಕೆ ಬೆರಗಾದ ಮಕ್ಕಳು
ಮೂರನೇ ದಿನ ಅತ್ರಬೈಲು ದಿ.ರಾಮದಾಸ್ ರೈ ಯವರ ಗುತ್ತಿನ ಮನೆಗೆ ಭೇಟಿ ನೀಡಿದ ಎಲ್ಲಾ ಮಕ್ಕಳೂ ಅಲ್ಲಿನ ವಿನ್ಯಾಸವನ್ನು ಕಂಡು ಅಚ್ಚರಿಪಟ್ಟರು, ಟಯರ್ ನಲ್ಲಿ ಕೋಲ್ಚಕ್ರ ಆಡಿದರಲ್ಲದೆ, ತೋಟ, ಗದ್ದೆಗಳಲ್ಲಿಯೇ ವಿವಿಧ ಆಟಗಳನ್ನು ಆಡಿದ ಮಕ್ಕಳು ತೆಂಗಿನ ಗರಿಯ ಕಾಂಡದ(ಕೊತ್ತಲಿಗೆ) ಬ್ಯಾಟ್ ನಲ್ಲಿ ಕ್ರಿಕೆಟ್ ಆಡಿದ್ದು ವಿಶೇಷವಾಗಿತ್ತು. ಸಾಬೂನಿನ ನೀರಿನಲ್ಲಿ ಗುಳ್ಳೆ ಮಾಡಿ ಹಾರಿಸಿ ಖುಷಿ ಹಂಚಿಕೊಂಡ ಮಕ್ಕಳು ಗೋಲಿ , ಲಗೋರಿ, ಕಲ್ಲಾಟ, ಎಲೆಯಲ್ಲಿ ಪೀಪಿ ಊದುವ ಚಟುವಟಿಕೆಗಳ ಸಹಿತ ವಿವಿಧ ಗ್ರಾಮೀಣ ಆಟಗಳನ್ನು ಆಡಿದರು. ದನಗಳಿಗೆ ಮೇವು ಉಣ್ಣಿಸಿ ಖುಷಿಪಟ್ಟರು.
ಹಪ್ಪಳ ತಯಾರಿಸಿದರು, ಬೀಜ ಸುಟ್ಟರು!!
ಗ್ರಾಮೀಣ ಹಲವು ಕುಲಕಸುಬುಗಳ ಕೌಶಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ತೆಂಗಿನ ಗೆರಟೆಯಲ್ಲಿ ಸೌಟ್ ಮಾಡುವ ಹಿರಿಯ ಕುಶಲಕರ್ಮಿಯನ್ನು, ಮಡಿಕೆ ಮಾಡುವ ಕುಂಬಾರನನ್ನು, ಬುಟ್ಟಿ ಹೆಣೆಯುವ ಮೇದಾರ ಹೀಗೆ ಹಲವರ ಕೌಶಲ್ಯಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಹಿಂದಿನ ಕಾಲದಲ್ಲಿ ಮಳೆಗಾಲಕ್ಕೆ ಪೂರಕ ಸಿದ್ದತೆಗಳನ್ನು ಮಾಡುವ ವಿಚಾರಗಳನ್ನೂ ಮಕ್ಕಳಿಗೆ ತಿಳಿ ಹೇಳುತ್ತಾ, ಹಲಸಿನ ಹಣ್ಣು ಕೊಯ್ಯುವುದರಿಂದ ತೊಡಗಿ, ಹಪ್ಪಳವನ್ನು ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಮಕ್ಕಳಿಂದಲೇ ಮಾಡಿಸಲಾಯಿತು, ಗೇರುಬೀಜವನ್ನು ಬೆಂಕಿಯಲ್ಲಿ ಸುಟ್ಟು ತಿನ್ನುವ ರೀತಿ, ಹಲಸಿನ ಎಲೆಯಲ್ಲಿ ಕೊಟ್ಟಿಗೆ ಕಟ್ಟುವ ಕಲೆ ಹೀಗೆ ಹಲವು ಗ್ರಾಮೀಣ ವಿಚಾರಧಾರೆಗಳಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿದ್ದರು. ಈ ಮೊದಲ ಹಂತದ ಅಜ್ಜಿಮನೆ ಶಿಬಿರವನ್ನು ಬಾಲವಿಕಾಸ ವಿದ್ಯಾಸಂಸ್ಥೆ ಹೊರತುಪಡಿಸಿ, ವಿವಿಧ ಶಾಲಾ ಮಕ್ಕಳಿಗೆಂದೇ ಏರ್ಪಡಿಸಲಾಗಿದ್ದು, ಉಚಿತ ವಾಹನದ ವ್ಯವಸ್ಥೆ ಹಾಗೂ ಆಹಾರ ಉಪಹಾರವನ್ನೂ ಕಲ್ಪಿಸಲಾಗಿತ್ತು. ಉಪಹಾರದಲ್ಲೂ ದೇಸಿ ಪದ್ದತಿಯನ್ನು ಪರಿಚಯಿಸುವ ಸಲುವಾಗಿ ಅಕ್ಕಿ ಉಂಡೆ, ಕಡ್ಲೆ ಅವಲಕ್ಕಿ, ಪಾನಕ, ಹುರಿಉಂಡೆ, ಉಪ್ಪಿಟ್ಟು, ದಾಸವಾಳ ಪಾನೀಯ, ಜಂಬು ನೇರಳೆ ಹಣ್ಣು ಮೊದಲಾದವುಗಳನ್ನು ನೀಡಲಾಗಿತ್ತು. ಹಳೆ ಕಾಲದ ಬಾಲಮಂಗಳ, ತುಂತುರು, ಚಂದಮಾಮ, ಮಯೂರ, ಮಂಗಳ ಮೊದಲಾದ ಪಾಕ್ಷಿಕ , ವಾರಪತ್ರಿಕೆಗಳನ್ನೂ ಮಕ್ಕಳಿಗೆ ಪರಿಚಯಿಸಲಾಯಿತು.
ಶಿಕ್ಷಕರೇ ಸಂಪನ್ಮೂಲ ವ್ಯಕ್ತಿಗಳಾದರು...
ಶಾಲಾ ಸಂಚಾಲಕ ಪ್ರಹ್ಲಾದ್ ಜೆ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ಯವರ ನೇತೃತ್ವದಲ್ಲಿ, ಶಾಲಾ ಮುಖ್ಯಶಿಕ್ಷಕಿ ಸುಪ್ರಿಯಾ ಡಿ. ಯವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಅಜ್ಜಿಮನೆ ಶಿಬಿರವನ್ನು ಬಾಲವಿಕಾಸ ವಿದ್ಯಾ ಸಂಸ್ಥೆಯ ಶಿಕ್ಷಕರೇ ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು, ಭಾನುವಾರ ಎಲ್ಲಾ ಮಕ್ಕಳ ಪೋಷಕರಿಗೂ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳ ಜೊತೆ ಶಿಕ್ಷಣ ಮಾಹಿತಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು.
(ವರದಿ- ಹರೀಶ ಮಾಂಬಾಡಿ, ಮಂಗಳೂರು)
