Summer Drinks: ಬಿಸಿಲ ಬೇಗೆಗೆ ದೇಹಕ್ಕೆ ತಂಪೆರೆಯುವ ಪುನರ್ಪುಳಿ; ದರ ಮಾತ್ರ ದುಬಾರಿ, ಆದರೆ ಬಹೂಪಯೋಗಿ ಕೋಕಂ
ಕನ್ನಡ ಸುದ್ದಿ  /  ಕರ್ನಾಟಕ  /  Summer Drinks: ಬಿಸಿಲ ಬೇಗೆಗೆ ದೇಹಕ್ಕೆ ತಂಪೆರೆಯುವ ಪುನರ್ಪುಳಿ; ದರ ಮಾತ್ರ ದುಬಾರಿ, ಆದರೆ ಬಹೂಪಯೋಗಿ ಕೋಕಂ

Summer Drinks: ಬಿಸಿಲ ಬೇಗೆಗೆ ದೇಹಕ್ಕೆ ತಂಪೆರೆಯುವ ಪುನರ್ಪುಳಿ; ದರ ಮಾತ್ರ ದುಬಾರಿ, ಆದರೆ ಬಹೂಪಯೋಗಿ ಕೋಕಂ

Summer Drinks: ಬೇಸಿಗೆ ಇರಲಿ,ಮಳೆಗಾಲವೇ ಆಗಲಿ.ಕೆಲವು ಹಣ್ಣುಗಳು ಎಲ್ಲ ಕಾಲಕ್ಕೂ ಆರೋಗ್ಯಕರ. ಇದರಲ್ಲಿ ಪುನರ್‌ಪುಳಿ ಕೂಡ ಒಂದು.ವಿಶೇಷ ಲೇಖನ: ಹರೀಶ ಮಾಂಬಾಡಿ. ಮಂಗಳೂರು

ಬೇಸಿಗೆಗೆ ಅತ್ಯುತ್ತಮ ಪೇಯ ಕೋಕಂ,
ಬೇಸಿಗೆಗೆ ಅತ್ಯುತ್ತಮ ಪೇಯ ಕೋಕಂ,

Summer Drinks:ಆಂಗ್ಲ ಭಾಷೆ ಹಾಗೂ ದಿನಬಳಕೆಯ ವ್ಯಾಪಾರಿ ಭಾಷೆಯಲ್ಲಿ ಕೋಕಂ ಎನ್ನುವ ಮುರುಗಲ ಹಣ್ಣು, ಕರಾವಳಿಯಲ್ಲಿ ಪ್ರಸಿದ್ಧವಾದ ಪುನರ್ಪುಳಿ ಹಣ್ಣಿನ ರಸಕ್ಕೆ ಬೇಸಗೆಯಲ್ಲಿ ಭಾರಿ ಬೇಡಿಕೆ. ಕೂಲ್ ನೀರೊಂದಿಗೆ ಸಕ್ಕರೆಮಿಶ್ರಿತ ಪುನರ್ಪುಳಿ ಎಸೆನ್ಸ್ ಹಾಕಿ ಕುಡಿದರೆ ದಾಹ ಖತಂ!!. ಆದರೆ ಮಂಗಳೂರು ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಪುನರ್ಪುಳಿಗೆ 120 ರೂ ಇದೆ. ಗ್ರಾಮೀಣ ಭಾಗಕ್ಕೆ ಹೋದರೆ ತೀರಾ ಕಮ್ಮಿ ಏನಿಲ್ಲ. 80ರಿಂದ 120 ರೂ ಧಾರಣೆಯ ಕೋಕಂಗೆ ಈಗ ಭಾರೀ ಬೇಡಿಕೆ. ಈಗ ಕಸಿ ಮಾಡಿದ ಹೈಬ್ರೀಡ್ ತಳಿಗಳೇ ಅಧಿಕವಾಗಿ ಕಾಣಸಿಗುತ್ತದೆ. ಸಾಧಾರಣವಾಗಿ ಗುಡ್ಡೆಗಳಲ್ಲಿ ಇದು ಸೊಂಪಾಗಿ ಬೆಳೆಯುತ್ತದೆ. ಮಾರ್ಚ್ ಕೊನೆಯ ವಾರದಿಂದ ಜುಲೈ ಮೊದಲ ವಾರದ ತನಕ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಪುನರ್ಪುಳಿ ಹಣ್ಣುಗಳು ದೊರಕುತ್ತವೆ. ಆದರೆ ಅದನ್ನೇ ಬೆಳೆಯುವವರು ಇಲ್ಲ. ಗೇರು, ಮಾವು ಜೊತೆ ಪುನರ್ಪುಳಿ ಮರಗಳೂ ಕಾಣಸಿಗುತ್ತವೆ.

ಪಶ್ಚಿಮ ಘಟ್ಟ, ತಪ್ಪಲಲ್ಲಿ ಅಧಿಕ ಬೆಳೆ

ಮುರುಗಲ ಹಣ್ಣು ಅಥವಾ ಪುನರ್ಪುಳಿ ಅಥವಾ ಕೋಕಂ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಅದರ ತಪ್ಪಲು ಪ್ರದೇಶದಲ್ಲಿ ಜಾಸ್ತಿಯಾಗಿ ಕಂಡು ಬರುತ್ತದೆ. ಇದು ಹುಳಿ ಮತ್ತು ಸಿಹಿಯ ಮಿಶ್ರಣವಾದಂತಹ ರುಚಿ ಹೊಂದಿರುತ್ತದೆ. ಇವುಗಳಲ್ಲಿ ಎರಡು ವಿಧದ ಬಣ್ಣದ ಹಣ್ಣುಗಳ ಮರಗಳಿವೆ ಕೆಂಪು ಮತ್ತು ಬಿಳಿ. ಅವುಗಳಲ್ಲಿ ಬಿಳಿಯ ಅಂದರೆ ತೆಳು ಹಳದಿ ಬಣ್ಣದ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪಶ್ಚಿಮ ಘಟ್ಟದ ತಳಭಾಗದಲ್ಲಿ ಒಳ್ಳೆಯ ಬಿಸಿಲು ಇರುವ ಜಾಗ ಪುನರ್ಪುಳಿ ಮರಕ್ಕೆ ಸೂಕ್ತ. ಯಾವುದೇ ಪೋಷಣೆಯ ಅಗತ್ಯವಿಲ್ಲದೆ ಬೆಳೆಯುವ ಮರ.‌ಜನವರಿ ಫೆಬ್ರವರಿಯಲ್ಲಿ ಹೂ ಬಿಟ್ಟು ಹೂ ಬಿಟ್ಟು,ಮಾರ್ಚ್ ಏಪ್ರಿಲ್-ಮೇ ತಿಂಗಳಿನಲ್ಲಿ ಕಾಯಿ, ಹಣ್ಣು ಆಗಲು ಪ್ರಾರಂಭವಾಗುತ್ತವೆ.

ಆರೋಗ್ಯಕಾರಿ ಹಣ್ಣು

ಪಿತ್ತದಿಂದ ಉಂಟಾಗುವ ಅನಾರೋಗ್ಯಗಳಿಗೆ ಮುರುಗಲ ಹಣ್ಣು ಪರಿಣಾಮಕಾರಿಯಾಗಿದೆ. ಹಣ್ಣು ಸಿಗುವ ಸಮಯದಲ್ಲಿ ಅಲ್ಲದೇ, ಈ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಇಟ್ಟು ಬೇಕಾದಾಗ ಬಳಸಿಕೊಳ್ಳಬಹುದು. ಈ ಹಣ್ಣಿನ ರಸಕ್ಕೆ ಸ್ವಲ್ಪ ಉಪ್ಪು ಸ್ವಲ್ಪ ಸಕ್ಕರೆ ಸೇರಿಸಿ ವಾರಕ್ಕೆ ಒಮ್ಮೆ ಕುಡಿಯುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿಯನ್ನು ದಿನಕ್ಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹ ದಿಂದ ಬರುವ ಎಲ್ಲಾ ತೊಂದರೆ ಶಮನ ಗೊಳ್ಳುತ್ತದೆ. ತಾಜಾ ಹಣ್ಣು ಸಿಕ್ಕಿದಾಗ ಅದರ ದಂಟು ಕಿತ್ತು ತೆಗೆದು ಅದರೊಳಗೆ ಸ್ವಲ್ಪ ಉಪ್ಪು ಹಾಕಿ ಸವಿಯಬಹುದು.

ಮಳೆಗಾಲದಲ್ಲೂ ಇದು ಉಪಯೋಗಕಾರಿ

ಬೇಸಗೆಯಲ್ಲಿ ಪುನರ್ಪುಳಿಯ ಶರಬತ್ತು ಹಿತಕರವಾದರೆ ಮಳೆಗಾಲದಲ್ಲಿ ಅದರ ಸಿಪ್ಪೆಯ ಸಾರು ರುಚಿಕರ. ಸ್ವಲ್ಪ ಕಾಳುಮೆಣಸು,ಬೆಲ್ಲ,ಉಪ್ಪು ಹಾಕಿ ಕುದಿಸಿ ಕರಿಬೇವು, ಜೀರಿಗೆ ಮತ್ತು ಸಾಸಿವೆಯನ್ನು ತುಪ್ಪದಲ್ಲಿ ಒಗ್ಗರಣೆ ಹಾಕಿ ತಯಾರಿಸಿದ ಸಾರು ಪಿತ್ತ ಹರ. ಹುಣಿಸೆಹಣ್ಣಿನ ಬದಲು ದಿನನಿತ್ಯ ಪುನರ್ಪುಳಿ ಸಿಪ್ಪೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿನ ಕೊಲೆಸ್ಟೊರಾಲ್ ಪ್ರಮಾಣ ಕಡಿಮೆಯಾಗುತ್ತದೆ.ಇದು ಹೃದಯದ ಸಮಸ್ಯೆಗೂ ಶಮನಕಾರಿ. ಶೀತ,ಕೆಮ್ಮು ಗುಣಪಡಿಸಲು, ಹಸಿವು ಹೆಚ್ಚಿಸಲು, ಬೊಜ್ಜು ಕರಗಿಸಲು ಈ ಹಣ್ಣಿನ ಸೇವನೆ ಸಹಕಾರಿ. ಇದರ ಸಿಪ್ಪೆ ಒಣಗಿಸಿಟ್ಟರೆ ಅದರಿಂದ ಶರಬತ್ತನ್ನು ಬೇಕೆಂದಾಗ ತಯಾರಿಸಬಹುದು. ಒಣಗಿಸಿದ ಸಿಪ್ಪೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

ಪುನರ್ಪುಳಿಯ ಎಲೆಗಳಿಂದ ರುಚಿಯಾದ ತಂಬುಳಿ ಮಾಡಬಹುದು.ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಹಿತ್ತಾಳೆ,ತಾಮ್ರ,ಚಿನ್ನ,ಬೆಳ್ಳಿಯ ಪಾತ್ರೆಗಳನ್ನು ತೊಳೆದು ಮೆರುಗು ಬರುವಂತೆ ಮಾಡುತ್ತಾರೆ..

ಪುನರ್ಪುಳಿ ಸಾರು, ಮಾರು ಹೋಗದವರಾರು?

ನಮಗೆ ಪುನರ್ಪುಳಿ ಸಿಪ್ಪೆ ಮನೆಯಲ್ಲಿ ತಯಾರಿಸಲು ಆಗದಿದ್ದಲ್ಲಿ ಒಣಗಿಸಿ ಪ್ಯಾಕ್ ಮಾಡಿದ ಪುನರ್ಪುಳಿ ಸಿಪ್ಪೆ ಅಂಗಡಿಗಳಲ್ಲಿ ಸಿಗುತ್ತದೆ. ಪುನರ್ಪುಳಿ ಸಿಪ್ಪೆ ಹೊಸದಾಗಿ ಇದ್ದರೆ ಸಾರು , ಜ್ಯೂಸ್ ಇತ್ಯಾದಿ ಮಾಡುವಾಗ ಒಳ್ಳೆಯ ಕಲರ್ ಇರುತ್ತದೆ. ರುಚಿ, ಪರಿಮಳ ಎಲ್ಲವೂ ಚೆನ್ನಾಗಿ ಇರುತ್ತದೆ. ಬಹಳ ಹಳೆಯದಾಗಿದ್ದರೆ ಅಷ್ಟು ಚೆನ್ನಾಗಿ ಇರುವುದಿಲ್ಲ. ಸಿಪ್ಪೆ ಚೆನ್ನಾಗಿದ್ದರೆ ಏಳೆಂಟು ಸಿಪ್ಪೆಯಿಂದ ಒಂದೂವರೆ ಎರಡು ಲೀಟರ್ ನಷ್ಟು ಸಾರು ತಯಾರಿಸ ಬಹುದು. ಮೊದಲು ನಿಮ್ಮ ಅಂದಾಜಿನಲ್ಲಿ ಉಪ್ಪು ,ಬೆಲ್ಲ ಹಾಕಿ ರುಚಿ ನೋಡಿ. ಹುಳಿ ಜಾಸ್ತಿ ಇದ್ದರೆ ಮತ್ತು ಸ್ವಲ್ಪ ಬೆಲ್ಲ ಹಾಕಿ ಸರಿಮಾಡಿಕೊಳ್ಳಿ. ಬೇಯಿಸುವ ಮೊದಲು ಸ್ವಲ್ಪ ಹೊತ್ತು ಸಿಪ್ಪೆಯನ್ನು ನೆನೆಸಿಟ್ಟು ಬೇಯಿಸಿದರೂ ಆಗುತ್ತದೆ. ಖಾರಕ್ಕೆ ಹಸಿಮೆಣಸಿನಕಾಯಿ ಅಥವಾ ಕಾಳು ಮೆಣಸು ಪುಡಿ ಬೇಕಿದ್ದರೂ ಉಪಯೋಗಿಸಬಹುದು. ಬೆಳ್ಳುಳ್ಳಿ ಒಗ್ಗರಣೆ ಸಾರಿನ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಅನುಭವಿಗಳು.

ಮೈಕಾಂತಿಗೂ ಒಳ್ಳೆಯದು

ಪುನರ್ಪುಳಿ ಅಥವಾ ಮುರುಗಲ ನೈಸರ್ಗಿಕವಾಗಿ ಸಿಗುವಂತಹ ರುಚಿಕರವಾದಂತಹ ಹಣ್ಣು ಸಿಹಿ ಜತೆ ಸ್ವಲ್ಪ ಹುಳಿಯಾಗಿರುತ್ತದೆ ಕ್ಯಾನ್ಸರ್ ಅಲ್ಸರ್ ಮಧುಮೇಹ ಗಳಂತಹ ರೋಗ ರುಜನಾದಿಗಳಿಗೆ ಹಾಗೂ ಹಿಮೋಗ್ಲೋಬಿನ್ ದೇಹಕ್ಕೆ ರೋಗ ನಿರೋಧಕ ಶಕ್ತಿ ತುಂಬುವ ದಿವ್ಯ ಔಷಧ. ಹೊಂದಿದೆ.‌ಮೈಕಾಂತಿಗೂ ಒಳ್ಳೆಯದು

ಇದರ ಬೀಜವು ಕೂಡ ಬಾಯಾರಿಕೆಗೆ ನಿಶ್ಯಕ್ತದಿಂದ ಬಳಲುವರು ಸಹಿತ ಮೇಕೆ ಹಾಲಿನಲ್ಲಿ ಬೀಜವನ್ನ ಪೌಡರ್ ಮಾಡಿಕೊಂಡು ಸ್ವಲ್ಪ ಬೆಲ್ಲದೊಂದಿಗೆ ಪ್ರತಿ ನಿತ್ಯ ಬೆಳಿಗಿನ ಖಾಲಿ ಹೊಟ್ಟೆಯಲಿ ಸೇವಿಸುವುದರಿಂದ ನಿಶ್ಯಕ್ತತೆ ಮಾನಸಿಕ ಒತ್ತಡಗಳನ್ನ ದೂರವಾಗಿಸಬಲ್ಲದು.

ವಿಶೇಷ ಲೇಖನ: ಹರೀಶ ಮಾಂಬಾಡಿ. ಮಂಗಳೂರು

 

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner