Summer Travel: ಬೇಸಿಗೆಯಲ್ಲಿ ನೀವು ಕುಟುಂಬಸಮೇತ, ಸ್ನೇಹಿತರೊಡಗೂಡಿ ಹೋಗುವುದಕ್ಕೆ ಇಷ್ಟಪಡುವ ಕರ್ನಾಟಕದ ಸುರಕ್ಷಿತ 10 ಹೊಳೆ ತೀರಗಳು
ಕನ್ನಡ ಸುದ್ದಿ  /  ಕರ್ನಾಟಕ  /  Summer Travel: ಬೇಸಿಗೆಯಲ್ಲಿ ನೀವು ಕುಟುಂಬಸಮೇತ, ಸ್ನೇಹಿತರೊಡಗೂಡಿ ಹೋಗುವುದಕ್ಕೆ ಇಷ್ಟಪಡುವ ಕರ್ನಾಟಕದ ಸುರಕ್ಷಿತ 10 ಹೊಳೆ ತೀರಗಳು

Summer Travel: ಬೇಸಿಗೆಯಲ್ಲಿ ನೀವು ಕುಟುಂಬಸಮೇತ, ಸ್ನೇಹಿತರೊಡಗೂಡಿ ಹೋಗುವುದಕ್ಕೆ ಇಷ್ಟಪಡುವ ಕರ್ನಾಟಕದ ಸುರಕ್ಷಿತ 10 ಹೊಳೆ ತೀರಗಳು

Summer Travel: ಬೇಸಿಗೆ ವೇಳೆ ಕರ್ನಾಟಕದ ನದಿ ತೀರಗಳಲ್ಲಿನ ನೈಸರ್ಗಿಕ ವಾತಾವರಣದಲ್ಲಿ ಕುಟುಂಬದವರು ಇಲ್ಲವೇ ಸ್ನೇಹಿತರೊಂದಿಗೆ ಕಳೆಯಲು ಅವಕಾಶವಿದೆ. ಅಂತಹ ತೀರಗಳ ನೋಟ ಇಲ್ಲಿದೆ.

ವಿಜಯನಗರ ಜಿಲ್ಲೆ ಹಂಪಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ತೀರ.
ವಿಜಯನಗರ ಜಿಲ್ಲೆ ಹಂಪಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ತೀರ.

ಕರ್ನಾಟಕ ನದಿ ತೀರಗಳು ಬೇಸಿಗೆ ವೇಳೆ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿವೆ. ನೈಸರ್ಗಿಕ ಜಲಧಾಮಗಳಾದ ಇಲ್ಲಿಗೆ ಸ್ನೇಹಿತರೊಂದಿಗೂ ಹೋಗಬಹುದು. ಬೇಸಿಗೆ ಶುರುವಾಯಿತೆಂದರೆ ಬಿಸಿಲ ಝಳಕ್ಕೆ ದೇಹ ತಣ್ಣನೆಯ ಸ್ಥಳವನ್ನು ಬಯಸುತ್ತದೆ. ಮನಸು ಅಂತಹ ಸ್ಥಳಗಳ ಹುಡುಕಾಟದಲ್ಲಿ ತೊಡಗುತ್ತದೆ. ಕರ್ನಾಟಕದಲ್ಲಿ ಹರಿಯುವ ಕಾವೇರಿ, ಕೃಷ್ಣಾ, ತುಂಗಭದ್ರಾ, ಭೀಮಾ, ತುಂಗಾ, ಕಾಳಿ, ಕುಮಾರಧಾರ, ಕಪಿಲಾ ಸಹಿತ ಹಲವು ನದಿಗಳ ಬೇಸಿಗೆ ಪ್ರವಾಸಕ್ಕಾಗಿ ಕೈಬೀಸಿ ಕರೆಯುತ್ತಿವೆ. ಇವು ಒಂದು ರೀತಿ ದೇಗುಲಗಳು ಇಲ್ಲವೇ ಪ್ರಮುಖ ಪ್ರವಾಸಿ ತಾಣವಾಗಿ ಹೆಸರು ಮಾಡಿದಂತವು. ಒಂದು ದಿನದ ಮಟ್ಟಿಗೆ ಈ ಸ್ಥಳಗಳು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿವೆ. ಪ್ರವಾಸಕ್ಕೆ ಕುಟುಂಬದವರೊಂದಿಗೆ ಇಲ್ಲವೇ ಸ್ನೇಹಿತರೊಡಗೂಡಿ ಹೋದಾಗ ಖುಷಿಗೆ ಎಷ್ಟು ಒತ್ತು ನೀಡಲಾಗುತ್ತದೆಯೋ ಸುರಕ್ಷತೆಗೂ ಅಷ್ಟೇ ಮಹತ್ವ ನೀಡಬೇಕಾಗುತ್ತದೆ. ಕರ್ನಾಟಕದ ನದಿ ತೀರದ ಪ್ರಮುಖ ತಾಣಗಳ ಪಟ್ಟಿ ಇಲ್ಲಿದೆ.

ಹಂಪಿ/ ತುಂಗಭದ್ರಾ ನದಿ

ವಿಜಯನಗರ ಜಿಲ್ಲೆಯ ಪುರಾತನ ಪ್ರವಾಸಿ ತಾಣ ಹಂಪಿ. ಪಾರಂಪರಿಕ ಮಹತ್ವ ಇರುವ ನೂರಾರು ತಾಣಗಳು ಇಲ್ಲಿವೆ. ಹಂಪಿ ಇರುವುದು ತುಂಗಭದ್ರಾ ನದಿ ತೀರದಲ್ಲಿ. ಹಂಪಿಯ ವಿರೂಪಾಕ್ಷ ದೇಗುಲದ ಹಿಂಭಾಗದಲ್ಲಿ ಕಲ್ಲುಕಣಿವೆಗಳ ನಡುವೆ ತುಂಗಭದ್ರಾ ನದಿ ಹರಿಯುತ್ತದೆ. ಇಲ್ಲಿ ಸ್ನಾನಘಟ್ಟಗಳು ಚೆನ್ನಾಗಿವೆ. ಕುಟುಂಬ ಸಮೇತರಾಗಿ ಹಂಪಿಯ ದೇಗುಲ ಹಾಗೂ ಪುರಾತನ ತಾಣಗಳ ವೀಕ್ಷಣೆಗೆ ಹೋದರೆ ಹೊಳೆಯಲ್ಲೂ ಕೆಲಹೊತ್ತು ಕಳೆದು ಬರಬಹುದು.

ದಾಂಡೇಲಿ / ಕಾಳಿ ನದಿ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸಮೀಪದಲ್ಲಿಯೇ ಕಾಳಿ ನದಿ ಹರಿಯುತ್ತದೆ. ಪಶ್ಚಿಮ ಘಟ್ಟಗಳ ಪ್ರಮುಖ ನದಿಯಾದ ಕಾಳಿ ಬಳಿಗೆ ಹೋಗಲು. ನದಿ ಒಡಲಿನಲ್ಲಿ ಆಟವಾಡಲು ದಾಂಡೇಲಿ ಬಳಿಯೇ ಅವಕಾಶವಿದೆ. ದಾಂಡೇಲಿ ಸುತ್ತಮುತ್ತಲೂ ಅರಣ್ಯ ಇಲಾಖೆಯ ಸಫಾರಿ, ದೇಗುಲಗಳ ದರ್ಶನ ಸಹಿತ ಹತ್ತಾರು ಪ್ರವಾಸಿ ತಾಣಗಳಿವೆ. ರಿವರ್ ರಾಫ್ಟಿಂಗ್‌ ಕೂಡ ಉಂಟು. ಇದರೊಟ್ಟಿಗೆ ಪ್ರಾಕೃತಿಕವಾಗಿ ಕಾಳಿ ನದಿಯ ತೀರದಲ್ಲಿ ಕಳೆಯಲು ಅವಕಾಶವಿದೆ.

ನಿಸರ್ಗಧಾಮ ಹಾಗೂ ದುಬಾರೆ/ ಕಾವೇರಿ ನದಿ

ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದಲ್ಲಿರುವ ಕಾವೇರಿ ನದಿ ತೀರದ ಎರಡು ತಾಣಗಳಿವು. ದುಬಾರೆಯಂತು ಅಪ್ಪಟ ಹಸಿರ ನಡುವಿನ ತಾಣ. ಕಾವೇರಿ ನದಿಯಲ್ಲಿ ಆಟವಾಡಲು ಇರುವ ಅತ್ಯುತ್ತಮ ಸ್ಥಳಗಳಲ್ಲಿ ದುಬಾರೆಯೂ ಒಂದು. ಇಲ್ಲಿಯೂ ರಿವರ್‌ ರಾಫ್ಟಿಂಗ್‌ ವ್ಯವಸ್ಥೆಯಿದೆ. ಪಕ್ಕದಲ್ಲೇ ಆನೆ ಶಿಬಿರವಿದ್ದು ಅಲ್ಲಿ ಹೆಚ್ಚು ಹೊತ್ತು ಕಳೆಯಬಹುದು. ಕಾವೇರಿ ನಿಸರ್ಗಧಾಮ ಕುಶಾಲನಗರ ಪಟ್ಟಣ ಸಮೀಪದಲ್ಲಿಯೇ ಇರುವ ಕಾವೇರಿ ತೀರದ ಮತ್ತೊಂದು ಪ್ರವಾಸಿ ತಾಣ. ಇದಲ್ಲದೇ ಕುಶಾಲನಗರ ಅಕ್ಕಪಕ್ಕ ಹಲವು ತಾಣಗಳನ್ನು ವೀಕ್ಷಿಸಿ ಬರಬಹುದು.

ಬಲಮುರಿ ಶ್ರೀರಂಗಪಟ್ಟಣ/ ಕಾವೇರಿ ನದಿ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರಕ್ಕೆ ಹೋಗುವ ಮಾರ್ಗದಲ್ಲಿದೆ ಬಲಮುರಿ ತಾಣ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರು ಆಣೆಕಟ್ಟೆಯಿಂದ ಇಲ್ಲಿ ಸೊಬಗಿನ ವಾತಾವರಣ ನಿರ್ಮಾಣವಾಗಿದೆ. ಅರ್ಧದಿನಕ್ಕೆ ಇದು ಉತ್ತಮ ಸ್ಥಳ. ಶ್ರೀರಂಗಪಟ್ಟಣ ಸಮೀಪದಲ್ಲಿಯೂ ಘೋಸಾಯಿ ಘಾಟ್‌, ಸಂಗಮ, ನಿಮಿಷಾಂಬ ದೇಗುಲದ ಬಳಿಯೂ ಕಾವೇರಿ ನದಿಯ ತೀರ ಅತ್ಯುತ್ತಮವಾಗಿದೆ. ಇಲ್ಲಿನ ವಾತಾವರಣ ಜಲದಾಟಕ್ಕೆ ಹೇಳಿದಮಾಡಿಸಿದಂತಿದೆ.

ಸಕ್ಕರೆ ಬೈಲು ಶಿವಮೊಗ್ಗ/ ತುಂಗಾ ನದಿ

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ಮಾರ್ಗದಲ್ಲಿ ಸಿಗುವ ತುಂಗಾ ತೀರದ ತಾಣ ಸಕ್ಕರೆಬೈಲು. ಇಲ್ಲಿ ತುಂಗಾ ನದಿ ಪ್ರವಾಸಿ ಸ್ಥಳವಾಗಿ ರೂಪುಗೊಂಡಿದೆ. ನದಿಯಲ್ಲಿ ಇಳಿದು ಕುಣಿದು ಕುಪ್ಪಳಿಸಿ ಆಟವಾಡಿ ರಿಲಾಕ್ಸ್‌ ಆಗಲು ಇದು ಹೇಳಿ ಮಾಡಿಸಿದಂತಿದೆ. ಇಲ್ಲಿಯೇ ಆನೆ ಶಿಬಿರವೂ ಇದೆ. ಈ ಆನೆ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಆನೆಗಳು ಹೊಳೆಯಲ್ಲಿ ಆಟವಾಡುವ, ಅವುಗಳೊಂದಿಗೆ ಕಳೆಯುವ ಅವಕಾಶವೂ ನೀವು ಸಕ್ಕರೆ ಬೈಲಿಗೆ ಹೋದರೆ ಸಿಗಬಹುದು.

ಶೃಂಗೇರಿ ಹರಿಹರಪುರ/ ತುಂಗಾ ನದಿ

ಚಿಕ್ಕಮಗಳೂರು ಜಿಲ್ಲೆಯ ಎರಡು ಪ್ರವಾಸಿ ತಾಣಗಳು ಶೃಂಗೇರಿ ಹಾಗೂ ಹರಿಹರಪುರ. ಈ ಎರಡೂ ಕೂಡ ತುಂಗಾ ನದಿ ತಟದ ತಾಣಗಳೇ. ಶೃಂಗೇರಿಯಂತೂ ಪ್ರಸಿದ್ದ ಯಾತ್ರಾ ಸ್ಥಳ. ಶೃಂಗೇರಿ ಶಾರದಾಂಬೆಯ ಸನ್ನಿಧಿಗೆ ಹೊಂದಿಕೊಂಡಂತೆ ಹೊಳೆ ಹರಿಯುತ್ತದೆ. ಇಲ್ಲಿನ ವಾತಾವರವು ದೈವೀಕವಾಗಿಯೇ ಇದೆ. ಇದೇ ರೀತಿ ಶೃಂಗೇರಿಯಿಂದ 20 ಕಿ.ಮಿ ದೂರದಲ್ಲಿದೆ ಕೊಪ್ಪ ತಾಲ್ಲೂಕಿನ ಹರಿಹರಪುರ. ಇಲ್ಲಿಯೂ ತುಂಗೆಯೇ ಹರಿಯುವಂತದ್ದು. ಇಲ್ಲಿನ ನದಿ ತೀರ, ದೇಗುಲಗಳ ದರ್ಶನ ನಿಮ್ಮ ಪ್ರವಾಸದ ಭಾಗವಾಗಬಹುದು.

ಸನ್ನತಿ ಯಾದಗಿರಿ/ಭೀಮಾ ನದಿ

ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆ ಗಡಿ ಭಾಗದಲ್ಲಿರುವ ಭೀಮಾ ನದಿ ತೀರದ ಸನ್ನತಿ ಕ್ಷೇತ್ರವೂ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿಯೂ ನದಿ ತೀರ ಪ್ರವಾಸಿ ಸ್ನೇಹಿಯಾಗಿಯೇ ಇದೆ. ಸನ್ನತಿಯಲ್ಲಿರುವ ಪುರಾತನ ಚಂದ್ರಲಾ ಪರಮೇಶ್ವರಿ ದೇಗುಲವೂ ಆಕರ್ಷಕವಾಗಿದೆ. ಸಮೀಪದಲ್ಲಿಯೇ ಬುದ್ದ ಸ್ಮಾರಕವೂ ಇದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸನ್ನತಿಯಲ್ಲಿಯೇ ಭೀಮಾ ನದಿಗೆ ಕಿರು ಜಲಾಶಯವನ್ನು ನಿರ್ಮಿಸಲಾಗಿದ್ದು. ಅದನ್ನೂ ವೀಕ್ಷಿಸಬಹುದು.

ಶೂರ್ಪಾಲಿ ಜಮಖಂಡಿ/ಕೃಷ್ಣಾ ನದಿ

ಬಾಗಲಕೋಟೆ ಜಿಲ್ಲೆಯ ಅರಮನೆ ನಗರಿ ಜಮಮಂಡಿಯಿಂದ ಸುಮಾರು 20 ಕಿ.ಮಿ ಅಂತರದಲ್ಲಿದೆ ಶೂರ್ಪಾಲಿ. ಇದು ನರಸಿಂಹ ದೇಗುಲದ ಕ್ಷೇತ್ರ. ಈ ಪುರಾತನ ಕ್ಷೇತ್ರವು ಕೃಷ್ಣಾ ನದಿ ತೀರದಲ್ಲಿದೆ. ಇಲ್ಲಿನ ನದಿ ತೀರ ವಿಶಾಲವಾಗಿದ್ದು, ಇಲ್ಲಿಗೆ ಬರುವ ಭಕ್ತರು ಸ್ವಚ್ಛಂದವಾಗಿಯೇ ಕಳೆಯಬಹುದು. ದೇಗುಲಕ್ಕೆ ಹೊಂದಿಕೊಂಡೇ ಕೃಷ್ಣಾ ನದಿ ಹರಿಯುತ್ತದೆ. ವಿಜಯಪುರ ಹಾಗೂ ಬೆಳಗಾವಿಯ ಅಥಣಿಗೂ ಶೂರ್ಪಾಲಿ ಹತ್ತಿರವಿರುವುದಿಂದ ಇಲ್ಲಿಂದಲೂ ಬಂದು ಹೋಗಬಹುದು.

ನಂಜನಗೂಡು ಸುತ್ತೂರು ಕಪಿಲಾ ನದಿ

ಮೈಸೂರು ಜಿಲ್ಲೆಯ ನಂಜನಗೂಡಿನ ಕಪಿಲಾ ನದಿ ತೀರ ದಕ್ಷಿಣ ಕಾಶಿ ಎಂದೇ ಹೆಸರುವಾಸಿ. ಇಲ್ಲಿಯೂ ಕೂಡ ಶ್ರೀಕಂಠೇಶ್ವರ ದೇಗುಲದ ಎದುರೇ ಕಪಿಲಾ ನದಿ ಹರಿಯುತ್ತದೆ. ವಿಶಾಲವಾದ ಸ್ನಾನಘಟ್ಟ ಇಲ್ಲಿದ್ದು ಕುಟುಂಬಗಳು ಇಲ್ಲವೇ ಸ್ನೇಹಿತರು ನಿರುಮ್ಮಳವಾಗಿ ಸ್ನಾನ ಮಾಡಬಹುದು. ಇಲ್ಲಿನ ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿ ನಂಜುಂಡೇಶ್ವರನ ದರ್ಶನ ಮಾಡಬಹುದು. ನಂಜನಗೂಡಿನಲ್ಲಿಯೇ ರಾಯರಮಠವೂ ಇದ್ದು ಅಲ್ಲಿಗೂ ಹೋಗಿ ಬರಹುದು.

ಸುಬ್ರಹ್ಮಣ್ಯ/ ಕುಮಾರಧಾರ ನದಿ

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಸುಬ್ರಹ್ಮಣ್ಯ ಕ್ಷೇತ್ರವೂ ಪ್ರಮುಖವಾದದ್ದು. ಸುಬ್ರಹ್ಮಣ್ಯ ದೇಗುಲದಿಂದ ಅನತಿ ದೂರದಲ್ಲಿಯೇ ಕುಮಾರಧಾರ ನದಿ ಹರಿಯುತ್ತದೆ. ಸುತ್ತಲೂ ಹಸಿರು ಪರಿಸರ, ತಣ್ಣನೆಯ ಗಾಳಿಯ ವಾತಾವರಣದ ನಡುವೆ ಹೊಳೆಯಲ್ಲಿ ಸ್ನಾನ ಮಾಡಲು, ಕೆಲ ಹೊತ್ತು ಕಳೆಯಲು ಅವಕಾಶವಿದೆ. ಸುಬ್ರಹ್ಮಣ್ಯ ದೇಗುಲ ದರ್ಶನವನ್ನೂ ಮುಗಿಸಿಕೊಂಡು ಆಸಕ್ತಿಯಿದ್ದರೆ ಕುಮಾರಧಾರ ಪರ್ವತದಲ್ಲಿ ಚಾರಣವನ್ನೂ ಮಾಡಿಕೊಂಡು ಬರಬಹುದು.

ಸಂಗಮ ಕನಕಪುರ/ ಕಾವೇರಿ ನದಿ

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಾವೇರಿ ಸಂಗಮ ತಾಣ ಬೆಂಗಳೂರು ಭಾಗದವರಿಗಂತೂ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಸಂಗಮವು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ರಾಮನಗರದಿಂದ 60 ಕಿ.ಮೀ ದೂರದಲ್ಲಿದೆ. ಇದು ಮಹಳ್ಳಿ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇದು ಬೆಂಗಳೂರಿನಿಂದ 59 ಕಿ.ಮೀ ದೂರದಲ್ಲಿದೆ. ಸಂಗಮವು ಉತ್ತರಕ್ಕೆ ರಾಮನಗರ ತಾಲ್ಲೂಕು, ಪೂರ್ವಕ್ಕೆ ಥಲ್ಲಿ ತಾಲ್ಲೂಕು, ಪಶ್ಚಿಮಕ್ಕೆ ಚನ್ನಪಟ್ಟಣ ತಾಲ್ಲೂಕು, ಪಶ್ಚಿಮಕ್ಕೆ ಮದ್ದೂರು ತಾಲ್ಲೂಕುಗಳಿಂದ ಸುತ್ತುವರೆದಿದೆ. ಕನಕಪುರ ತಾಲ್ಲೂಕು ಸಂಗಮಕ್ಕೆ ಹತ್ತಿರದ ಪಟ್ಟಣವಾಗಿದೆ. ಕನಕಪುರದಿಂದ ಸಂಗಮಕ್ಕೆ ರಸ್ತೆ ಸಂಪರ್ಕವಿದೆ. ಸಂಗಮದ ಬಳಿ ಅರ್ಕಾವತಿ ಮತ್ತು ಕಾವೇರಿ ನದಿಗಳ ಎರಡು ಸಂಗಮಗಳು ಇಲ್ಲಿಗೆ ಸೇರುತ್ತವೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಈ ತಾಣವನ್ನು ಆನಂದಿಸುತ್ತಾರೆ. ಇಲ್ಲಿ ಜಲ ಕ್ರೀಡೆಗಳನ್ನು ಸಹ ನಡೆಸಲಾಗುತ್ತದೆ ಮತ್ತು ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು ಲಭ್ಯವಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner