ಮಾಸ್ಕ್ ಬೇಡ ಎನ್ನುತ್ತಿವೆ ಬೆಂಗಳೂರಿನ ಸೂಪರ್ ಮಾರ್ಕೆಟ್‌ಗಳು; ಮಾಸ್ಕ್ ಧರಿಸಿ ಬರುವವರಿಂದ ಲಕ್ಷ ಲಕ್ಷ ನಷ್ಟ-supermarkets in bengaluru ban face masks as theft cases increased in city malls after covid 19 era jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಾಸ್ಕ್ ಬೇಡ ಎನ್ನುತ್ತಿವೆ ಬೆಂಗಳೂರಿನ ಸೂಪರ್ ಮಾರ್ಕೆಟ್‌ಗಳು; ಮಾಸ್ಕ್ ಧರಿಸಿ ಬರುವವರಿಂದ ಲಕ್ಷ ಲಕ್ಷ ನಷ್ಟ

ಮಾಸ್ಕ್ ಬೇಡ ಎನ್ನುತ್ತಿವೆ ಬೆಂಗಳೂರಿನ ಸೂಪರ್ ಮಾರ್ಕೆಟ್‌ಗಳು; ಮಾಸ್ಕ್ ಧರಿಸಿ ಬರುವವರಿಂದ ಲಕ್ಷ ಲಕ್ಷ ನಷ್ಟ

ಬೆಂಗಳೂರು ನಗರದ ಸೂಪರ್‌ ಮಾರ್ಕೆಟ್‌ಗಳಲ್ಲಿ ಕಳ್ಳತನ ಪ್ರಕರಣಗಳ ಹೆಚ್ಚಳದಿಂದಾಗಿ, ಮಾಸ್ಕ್‌ ಧರಿಸಿ ಬರುವವರನ್ನು ನಿಷೇಧಿಸಲಾಗುತ್ತಿದೆ. ಅಪರಾಧಿಗಳು ತಮ್ಮ ಗುರುತನ್ನು ಮರೆಮಾಚಲು ಮಾಸ್ಕ್‌ ದುರುಪಯೋಗಪಡಿಸಿಕೊಳ್ಳುತ್ತಿರುವುದು ತಿಳಿದುಬಂದಿದೆ.

ಮಾಸ್ಕ್ ಬೇಡ ಎನ್ನುತ್ತಿವೆ ಬೆಂಗಳೂರಿನ ಸೂಪರ್ ಮಾರ್ಕೆಟ್‌ಗಳು; ಕಾರಣ ಹೀಗಿದೆ
ಮಾಸ್ಕ್ ಬೇಡ ಎನ್ನುತ್ತಿವೆ ಬೆಂಗಳೂರಿನ ಸೂಪರ್ ಮಾರ್ಕೆಟ್‌ಗಳು; ಕಾರಣ ಹೀಗಿದೆ

ಭಾರತದಲ್ಲಿ ಕೋವಿಡ್‌ 19 ಕಾಲದಲ್ಲಿ ಆರಂಭವಾದ ಮಾಸ್ಕ್‌ ಧರಿಸುವ ಅಭ್ಯಾಸವು ಈಗ‌ ಬಹುತೇಕ ಅಪರೂಪವಾಗಿದೆ. ಈಗ ನಿತ್ಯ ಮಾಸ್ಕ್‌ ಧರಿಸಿ ಓಡಾಡುವವರ ಸಂಖ್ಯೆ ತೀರಾ ಕಡಿಮೆ. ಅಪರೂಪಕ್ಕೆ ಕೆಲವೊಂದು ಕಡೆಗಳಲ್ಲಿ‌ ಜನರು ಮಾಸ್ಕ್‌ ಧರಿಸುತ್ತಾರೆ. ಮಾಸ್ಕ್‌ ಧರಿಸಿಯೇ ಓಡಾಡಬೇಕು ಎಂಬ ನಿಯಮ ಎಲ್ಲೂ ಇಲ್ಲ. ಹಾಗಂತಾ ಧರಸಬಾರದೂ ಎಂದು ಹೇಳುವವರೂ ಇಲ್ಲ. ಆದರೆ, ಉದ್ಯಾನ ನಗರಿ ಬೆಂಗಳೂರಿನಲ್ಲಿ ಕೆಲವೆಡೆ ಮಾಸ್ಕ್‌ ಧರಿಸುವಂತಿಲ್ಲ ಎಂಬ ಸೂಚನೆ ಹಾಕಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಅಭ್ಯಾಸವು ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ನಗರದ ಹಲವು ಸ್ಥಳೀಯ ಸೂಪರ್‌ ಮಾರ್ಕೆಟ್‌ಗಳಲ್ಲಿ ಗ್ರಾಹಕರು ಮಾಸ್ಕ್‌ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಮಾಸ್ಕ್‌ ಧರಿಸಿ ತಮ್ಮ ಗುರುತನ್ನು ಮರೆಮಾಚುವ ವ್ಯಕ್ತಿಗಳಿಂದ ಕಳ್ಳತನ ಪ್ರಕರಣ ಹೆಚ್ಚಳವಾಗುತ್ತಿರುವ ಕಾರಣದಿಂದ ಇಂಥಾ ಕ್ರಮ ಕೈಗೊಳ್ಳಲಾಗಿದೆ.

ನಗರದ ಕೆಂಗೇರಿಯ ಸೂಪರ್‌ ಮಾರ್ಕೆಟ್ ಸಿಬ್ಬಂದಿಯೊಬ್ಬರು, ಕಳ್ಳತನ ಪ್ರಕರಣ ಕುರಿತಂತೆ ಮಾಹಿತಿ ನೀಡಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಂತೆ, ಮಾಸ್ಕ್ ಧರಿಸಿಕೊಂಡು ಸೂಪರ್‌ ಮಾರ್ಕೆಟ್‌ ಪ್ರವೇಶಿಸುವ ವ್ಯಕ್ತಿಗಳು ನಡೆಸಿದ ಕಳ್ಳತನದಿಂದಾಗಿ ತಮ್ಮ ಮಳಿಗೆಗೆ ಗಣನೀಯ ಪ್ರಮಾಣದ ನಷ್ಟವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಈ ಪ್ರದೇಶದ ಎರಡು ಸೂಪರ್‌ ಮಾರ್ಕೆಟ್‌ಗಳಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಸರಕುಗಳು ಕಳ್ಳತನವಾಗಿವೆ ಎಂದು ವರದಿ ತಿಳಿಸಿದೆ. ಇದರಲ್ಲಿ ಒಂದು ಅಂಗಡಿಯಿಂದ 1.2 ಲಕ್ಷ ರೂ ಮಾಲ್ಯದ ಸ್ವತ್ತುಗಳು ಕಳ್ಳರ ಪಾಲಾಗಿದೆ. ಕಳ್ಳರು ತಮ್ಮ ಗುರುತನ್ನು ಮರೆಮಾಚುವ ಸಲುವಾಗಿ ಮಾಸ್ಕ್‌ ಧರಿಸಿಕೊಂಡು ಬರುತ್ತಿದ್ದಾರೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತಿಳದುಬಂದಿದೆ. ಹೀಗಾಗಿ ಸೂಪರ್‌ಮಾರ್ಕೆಟ್‌ ಆಡಳಿತ ಮಂಡಳಿಯು ಮಾಲ್‌ ಒಳಗೆ ಮಾಸ್ಕ್‌ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಿದೆ. ಅದರಂತೆಯೇ ಮಾಲ್‌ ಹೊರಗೆ ಮಾಸ್ಕ್‌ ಧರಿಸಿ ಪ್ರವೇಶಿಸುವಂತಿಲ್ಲ ಎಂಬ ಬೋಡ್‌ ಹಾಕಿದೆ.

ಮಾಸ್ಕ್‌ ಧರಿಸಿ ಕಳ್ಳತನ ಮಾಡುವ ಕಳ್ಳರು, ಯೋಜಿತ ರೀತಿಯಲ್ಲೇ ಮಾರ್ಕೆಟ್‌ ಪ್ರವೇಶ ಮಾಡುತ್ತಾರೆ. ಚೆಕ್ ಔಟ್ ಸಮಯದಲ್ಲಿ ಬಿಲ್‌ ಮಾಡುವಾಗ ಕೆಲವು ಅಗ್ಗದ ವಸ್ತುಗಳಿಗೆ ಹಣ ಪಾವತಿಸುತ್ತಾರೆ. ಆದರೆ ಕದ್ದ ವಸ್ತುಗಳನ್ನು ತಮ್ಮಲ್ಲಿ ಅಡಗಿಸಿಟ್ಟು ಅನುಮಾನ ಬರದಂತೆ ಹೊರಟುಹೋಗುತ್ತಾರೆ. ಕೆಲವು ಅಂಗಡಿಗಳಲ್ಲಿ ಹೊರಗಿನಿಂದ ಚೀಲಗಳನ್ನು ತರುವಂತಿಲ್ಲ. ಆದರೆ ಕೆಲವು ಸಣ್ಣ ಮಳಿಗೆಗಳಲ್ಲಿ ಅಂತಹ ಭದ್ರತಾ ನಿಯಮಗಳು ಇರುವುದಿಲ್ಲ.

ಪೊಲೀಸರಿಗೆ ದೂರು ನೀಡಿದರೆ ಗಂಭೀರವಾಗಿ ಪರಿಗಣಿಸುವುದಿಲ್ಲ

ಇಂಥಾ ಕಳ್ಳರು ಏಕಕಾಲಕ್ಕೆ ಲಕ್ಷಾಂತರ ರೂಪಾಯಿ ವಸ್ತುಗಳನ್ನು ಕಳ್ಳತನ ಮಾಡಿಲ್ಲ. ಒಂದು ಬಾರಿ 1ರಿಂದ 2 ಸಾವಿರದ ವಸ್ತುಗಳನ್ನು ಕದ್ದಿರಬಹುದು. ಹೀಗಾಗಿ ಇದನ್ನು ಪೊಲೀಸರಿಗೆ ಆಗಾಗ ದೂರು ನೀಡುವುದು ಕೂಡಾ ವ್ಯರ್ಥ ಎಂದು ಉದ್ಯೋಗಿ ವಿವರಿಸುತ್ತಾರೆ. ಕದ್ದ ಮೊತ್ತವು ಸಾಮಾನ್ಯವಾಗಿ 1000ದಿಂದ 2000 ರೂ.ಗಳ ನಡುವೆ ಇರುತ್ತದೆ. ಹೀಗಾಗಿ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಮಾಸ್ಕ್‌, ಹೆಲ್ಮೆಟ್‌ಗಳಂಥಾ ವಸ್ತುಗಳು ಕಳ್ಳರ ಫೇವರೆಟ್. ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಮಾಸ್ಕ್ ಧರಿಸಿದ ಅಪರಾಧಿಗಳ ಸವಾಲನ್ನು ಒಪ್ಪಿಕೊಂಡಿದ್ದಾರೆ. ಮಾಸ್ಕ್‌ ಧರಿಸಿ ನಡೆಯುವ ದರೋಡೆಗಳು ಮತ್ತು ಸರಗಳ್ಳತನದಂಥಾ ಪ್ರಕರಣಗಳನ್ನು ತನಿಖೆ ಮಾಡುವುದು ಹೆಚ್ಚು ಕಷ್ಟಕರ ಎಂದರು. ಮಾಸ್ಕ್‌ ಧರಿಸುವುದರಿಂದ ಶಂಕಿತರನ್ನು ಗುರುತಿಸುವುದು ಕಷ್ಟ ಎಂದಿದ್ದಾರೆ.