ಬೆಂಗಳೂರು: ಸೂರ್ಯ ಸಿಟಿ ಎಸ್‌ಬಿಐ ಮ್ಯಾನೇಜರ್ ವರ್ಗಾವಣೆ, ಕನ್ನಡಿಗ ಗಿರೀಶ್‌ಗೆ ಪ್ರಭಾರ ಹೊಣೆ, ಇದುವರೆಗೆ ಏನೇನಾಯಿತು- 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಸೂರ್ಯ ಸಿಟಿ ಎಸ್‌ಬಿಐ ಮ್ಯಾನೇಜರ್ ವರ್ಗಾವಣೆ, ಕನ್ನಡಿಗ ಗಿರೀಶ್‌ಗೆ ಪ್ರಭಾರ ಹೊಣೆ, ಇದುವರೆಗೆ ಏನೇನಾಯಿತು- 5 ಮುಖ್ಯ ಅಂಶಗಳು

ಬೆಂಗಳೂರು: ಸೂರ್ಯ ಸಿಟಿ ಎಸ್‌ಬಿಐ ಮ್ಯಾನೇಜರ್ ವರ್ಗಾವಣೆ, ಕನ್ನಡಿಗ ಗಿರೀಶ್‌ಗೆ ಪ್ರಭಾರ ಹೊಣೆ, ಇದುವರೆಗೆ ಏನೇನಾಯಿತು- 5 ಮುಖ್ಯ ಅಂಶಗಳು

ಕನ್ನಡ ಮಾತನಾಡುವುದೇ ಇಲ್ಲ, ಯಾಕೆ ಮಾತನಾಡಬೇಕು, ಬೇಕಾದ್ರೆ ಹಿಂದಿಯಲ್ಲಿ ಮಾತನಾಡಿ ಎಂದು ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸೂರ್ಯ ಸಿಟಿ ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕ ಸಿಂಗ್‌ ವರ್ಗಾವಣೆಯಾಗಿದೆ. ಈ ವಿದ್ಯಮಾನಕ್ಕೆ ಸಂಬಂಧಿಸಿದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಕನ್ನಡ ಮಾತನಾಡುವುದೇ ಇಲ್ಲ ಎಂದು ಹೇಳಿದ್ದ ಸೂರ್ಯ ಸಿಟಿ ಎಸ್‌ಬಿಐ ಮ್ಯಾನೇಜರ್ ವರ್ಗಾವಣೆಯಾಗಿದೆ. ಕನ್ನಡಿಗ ಗಿರೀಶ್‌ಗೆ ಪ್ರಭಾರ ಹೊಣೆಯನ್ನು ಬ್ಯಾಂಕ್ ನೀಡಿದೆ. ತೀವ್ರ ಪ್ರತಿಭಟನೆ ವ್ಯಕ್ತವಾದ ಬಳಿಕ ಎಸ್‌ಬಿಐ ಈ ಕ್ರಮ ಜರುಗಿಸಿದೆ. ಬ್ಯಾಂಕ್‌ ಪರವಾಗಿ ಸಹಾಯಕ ಮಹಾಪ್ರಬಂಧಕ ವಿನಯ್‌ ಪ್ರತಿಭಟನಾ ಸ್ಥಳಕ್ಕೆ ಬಂದು ಬ್ಯಾಂಕ್‌ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು (ಎಡ ಚಿತ್ರ).
ಕನ್ನಡ ಮಾತನಾಡುವುದೇ ಇಲ್ಲ ಎಂದು ಹೇಳಿದ್ದ ಸೂರ್ಯ ಸಿಟಿ ಎಸ್‌ಬಿಐ ಮ್ಯಾನೇಜರ್ ವರ್ಗಾವಣೆಯಾಗಿದೆ. ಕನ್ನಡಿಗ ಗಿರೀಶ್‌ಗೆ ಪ್ರಭಾರ ಹೊಣೆಯನ್ನು ಬ್ಯಾಂಕ್ ನೀಡಿದೆ. ತೀವ್ರ ಪ್ರತಿಭಟನೆ ವ್ಯಕ್ತವಾದ ಬಳಿಕ ಎಸ್‌ಬಿಐ ಈ ಕ್ರಮ ಜರುಗಿಸಿದೆ. ಬ್ಯಾಂಕ್‌ ಪರವಾಗಿ ಸಹಾಯಕ ಮಹಾಪ್ರಬಂಧಕ ವಿನಯ್‌ ಪ್ರತಿಭಟನಾ ಸ್ಥಳಕ್ಕೆ ಬಂದು ಬ್ಯಾಂಕ್‌ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು (ಎಡ ಚಿತ್ರ).

ಬೆಂಗಳೂರು: ಕನ್ನಡ ಮಾತನಾಡುವುದೇ ಇಲ್ಲ, ಯಾಕೆ ಮಾತನಾಡಬೇಕು, ಬೇಕಾದ್ರೆ ಹಿಂದಿಯಲ್ಲಿ ಮಾತನಾಡಿ ಎಂದು ಹೇಳುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಸೂರ್ಯ ಸಿಟಿ ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕ ಸಿಂಗ್‌ ಅವರನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ವರ್ಗಾವಣೆ ಮಾಡಿದೆ. ನೇರ ಹಾಗೂ ಸೋಷಿಯಲ್ ಮೀಡಿಯಾ ಪ್ರತಿಭಟನೆ, ದೂರುಗಳ ಬೆನ್ನಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಆಕ್ರೋಶವೂ ವ್ಯಕವಾದ ಬಳಿಕ ಬ್ಯಾಂಕ್ ಈ ಕ್ರಮ ತೆಗೆದುಕೊಂಡಿದೆ. ಇದೇ ವೇಳೆ, ಸೂರ್ಯ ಸಿಟಿ ಶಾಖೆಯ ಹೊಣೆಗಾರಿಕೆಯನ್ನು ಕನ್ನಡಿಗ ಗಿರೀಶ್ ಅವರಿಗೆ ವಹಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕನ್ನಡ ಮಾತನಾಡುವುದೇ ಇಲ್ಲ ಎಂದ ಎಸ್‌ಬಿಐ ಮ್ಯಾನೇಜರ್‌; ಇದುವರೆಗೆ ಏನೇನಾಯಿತು 5 ಮುಖ್ಯ ಅಂಶಗಳು

1) ಕನ್ನಡ ಮಾತನಾಡುವುದೇ ಇಲ್ಲ - ಏನಿದು ಘಟನೆ

ಬೆಂಗಳೂರಿನ ಸೂರ್ಯಸಿಟಿ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಮಂಗಳವಾರ (ಮೇ 20) ಮ್ಯಾನೇಜರ್‌ ಪ್ರಿಯಾಂಕ ಸಿಂಗ್‌ ಅವರು ಗ್ರಾಹಕರ ಜತೆಗೆ ಮಾತಿನ ಚಕಮಕಿ ನಡೆಸಿದ್ದು, ಯಾವುದೇ ಕಾರಣಕ್ಕೂ ಕನ್ನಡದಲ್ಲಿ ಮಾತನಾಡುವುದಿಲ್ಲ. ಕನ್ನಡದಲ್ಲಿ ಮಾತನಾಡಬೇಕು ಎಂಬ ರೂಲ್ಸ್ ಇದೆಯಾ, ನೀವು ಬೇಕಿದ್ದರೆ ಹಿಂದಿಯಲ್ಲಿ ಮಾತನಾಡಿ, ಇದು ಇಂಡಿಯಾ, ನೀವು ಬೇಕಿದ್ದರೆ ಎಸ್‌ಬಿಐ ಚೇರ್‌ಮನ್ ಬಳಿ ಮಾತನಾಡಿ ಎಂದು ದುರಹಂಕಾರದ ಮಾತುಗಳನ್ನಾಡಿದ್ದರು.

2) ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್‌; ಕ್ರಮಕ್ಕೆ ಆಗ್ರಹ

ಈ ಮಾತಿನ ಚಕಮಕಿಯ ವೇಳೆ ಸ್ವತಃ ಪ್ರಿಯಾಂಕ ಸಿಂಗ್ ಮತ್ತು ಗ್ರಾಹಕ ಕೆಆರ್‌ಎಸ್‌ ಪಕ್ಷದ ಮಹೇಶ್‌ ಪರಸ್ಪರ ವಿಡಿಯೋ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ, ಅಸಮಾಧಾನಕ್ಕೆ ಗುರಿಯಾಗಿತ್ತು. ಜನ ಸಾಮಾನ್ಯರು ಅನೇಕರು ಕನ್ನಡ ಭಾಷೆ ಬಾರದ ಅಧಿಕಾರಿಗಳ ಜತೆಗಿನ ಸಂವಹನ ಸಂಕಷ್ಟವನ್ನು ಹಂಚಿಕೊಂಡರು. ಇದೇ ವೇಳೆ, ಸಂಸದ ತೇಜಸ್ವಿ ಸೂರ್ಯ ಆರ್‌ಬಿಐ ಗೈಡ್‌ಲೈನ್ ಅನ್ನು ಶೇರ್ ಮಾಡಿಕೊಂಡಿದ್ದು, ಕರ್ನಾಟಕದ ಗ್ರಾಹಕರು ಬ್ಯಾಂಕ್‌ಗಳಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳ ಅಹವಾಲುಗಳಿಗೆ ಬಲ ತುಂಬಿದರು. ಇನ್ನೊಂದೆಡೆ, ಕನ್ನಡ ವಿರೋಧಿಗಳ ಮೇಲೆ ಕ್ರಮ ಆಗಬೇಕು. ಇದರಲ್ಲಿ ಎರಡು ಮಾತಿಲ್ಲ. ಎಲ್ಲ ಕಡೆ ಕನ್ನಡ ಕಡ್ಡಾಯಗೊಳಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದ್ದರು.

3) ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅಸಮಾಧಾನ

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವ ಆನೇಕಲ್ ತಾಲ್ಲೂಕಿನ ಸೂರ್ಯಸಿಟಿಯ ಎಸ್‌ಬಿಐ ಶಾಖಾ ವ್ಯವಸ್ಥಾಪಕರ ವರ್ತನೆ ತೀವ್ರ ಖಂಡನೀಯ. ಇಂತಹ ವರ್ತನೆ ತೋರಿದ ಸಿಬ್ಬಂದಿ ಮೇಲೆ ಎಸ್‌ಬಿಐ ಕ್ಷಿಪ್ರವಾಗಿ ಕ್ರಮ ಜರುಗಿಸಿದೆ. ಇದನ್ನು ಸ್ವಾಗತಿಸುತ್ತೇನೆ. ಎಲ್ಲ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

4) ಸೂರ್ಯ ಸಿಟಿ ಬ್ಯಾಂಕ್ ಎದುರು ಕೆಆರ್‌ಎಸ್ ಪ್ರತಿಭಟನೆ

ಕೆಆರ್‌ಎಸ್‌ ಪಕ್ಷದ ನಾಯಕ ರವಿಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಸೂರ್ಯ ಸಿಟಿ ಎಸ್‌ಬಿಐ ಬ್ಯಾಂಕ್‌ ಶಾಖೆ ಎದುರು ಬುಧವಾರ ಪ್ರತಿಭಟನೆ ನಡೆಯಿತು. ಬ್ಯಾಂಕ್‌ ಪರವಾಗಿ ಸಹಾಯಕ ಮಹಾಪ್ರಬಂಧಕ ವಿನಯ್‌ ಪ್ರತಿಭಟನಾ ಸ್ಥಳಕ್ಕೆ ಬಂದು, ಮಂಗಳವಾರ ರಾತ್ರಿಯೇ ಪ್ರಿಯಾಂಕ ಸಿಂಗ್‌ ಅವರನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಗಿರೀಶ್‌ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಎಸ್‌ಬಿಐ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

5) ಸಂಸತ್‌ನಲ್ಲಿ ಪ್ರಸ್ತಾಪಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹ

ಕರ್ನಾಟಕದಲ್ಲಿ ಗ್ರಾಹಕರ ಮೇಲೆ ಅನ್ಯಭಾಷಿಕ ಬ್ಯಾಂಕ್ ಸಿಬ್ಬಂದಿ ಮಾಡುವ ಭಾಷಾ ಪ್ರಹಾರ ತಡೆಯಲು ರಾಷ್ಟ್ರಮಟ್ಟದಲ್ಲಿ ಪರಿಹಾರ ಕಾಣಬೇಕು. ರಾಜ್ಯದ ಸಂಸದರು ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಿ ಗಂಭೀರವಾಗಿ ಚರ್ಚಿಸಬೇಕು. ಯಾವುದೇ ರಾಜ್ಯದ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸ್ಥಳೀಯ ಭಾಷಾ ಜ್ಞಾನದ ಕುರಿತಂತೆ ಪರೀಕ್ಷೆಯನ್ನು ಎದುರಿಸಿ, ಉತ್ತೀರ್ಣರಾಗಬೇಕು. ಸ್ಥಳೀಯ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರಾಗಬೇಕು. ನೇಮಕಾತಿ ಸಂದರ್ಭದಲ್ಲಿಯೇ ಈ ಷರತ್ತನ್ನು ವಿಧಿಸುವುದಕ್ಕೆ ಒತ್ತಡ ಹೇರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ರಾಜ್ಯದ ಸಂಸದರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.