ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ; ಈತ ಟಿಎನ್ ಹಿಜ್ಬ್-ಉತ್-ತಹ್ರೀರ್ ಪ್ರಕರಣದ ಪ್ರಮುಖ ಆರೋಪಿ
Bengaluru Crime News - Kempegowda International Airport: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಈ ಶಂಕಿತ ಉಗ್ರ ಆಗಸ್ಟ್ 30ರ ಶುಕ್ರವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಏರ್ ಲೈನ್ಸ್ ವಿಮಾನದಲ್ಲಿ ಸೌದಿ ಅರೇಬಿಯಾದ ಜಿದ್ದಾಗೆ ಪರಾರಿಯಾಗಲು ಸಂಚು ರೂಪಿಸಿದ್ದ.
ಈ ವಿಮಾನ 11.45 ಕ್ಕೆ ಹೊರಡುವುದಿತ್ತು. ಆಗ ಎನ್‌ಐಎ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಬಂಧಿತ ಉಗ್ರನನ್ನು ಅಜೀಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಮಿಗ್ರೇಷನ್ ಅಧಿಕಾರಿಗಳು ನೀಡಿದ ಮಾಹಿತಿ ಮೆರೆಗೆ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಈತ ತಮಿಳುನಾಡಿನ ಹಿಜ್ಬ್-ಉತ್-ತಹ್ರೀರ್ ಪ್ರಕರಣದ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಶಂಕಿತ ಉಗ್ರ ಮತ್ತು ಆತನ ಪತ್ನಿ ಇಬ್ಬರೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಎನ್‌ಐಎ ಅಧಿಕಾರಿಗಳು ಉಗ್ರನನ್ನು ವಶಕ್ಕೆ ಪಡೆಯುತ್ತಿದ್ದಂತೆ ಆತನ ಪತ್ನಿ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿಗಳು ತನ್ನ ಪತಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಉಗ್ರನ ಪತ್ನಿಯ ದೂರಿನ ಆಧಾರದ ಮೇಲೆ ಎನ್‌ಐಎ, ಈತನನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದೆ. ಇಮಿಗ್ರೇಷನ್ ಅಧಿಕಾರಿಗಳೂ ಸಹ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎಂಡಿಎಂಎ ಡ್ರಗ್ ಸಾಗಿಸುತ್ತಿದ್ದ ಕೇರಳದವರ ಸೆರೆ
ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಸಾಗಾಟ, ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿದಂತೆ ಮೂವರನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು, 42 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಶಾಜಹಾನ್ ಪಿಎಂ (32), ಮುಹಮ್ಮದ್ ನಿಶಾದ್ (27) ಮತ್ತು ಕೊಡಗಿನ ಮನ್ಸೂರು ಎಂಎಂ (27) ಬಂಧಿತರು. ಬೆಂಗಳೂರಿನಲ್ಲಿ ಎಂಡಿಎಂಎ ಅನ್ನು ಖರೀದಿಸಿ ಕಾರಿನಲ್ಲಿ ಸಾಗಾಟ, ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ.
ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ಆರೋಪಿ ಜೈಲುಪಾಲು
ಮಂಗಳೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪುತ್ತೂರು ಕಬಕದ ನಿವಾಸಿ ನಿತೇಶ್ (30) ಶಿಕ್ಷೆಗೊಳಗಾದವನು. ಈತನ ಜತೆಗೆ ಈತನ ತಂದೆ ರಾಮಣ್ಣ ಪೂಜಾರಿ (62) ಮತ್ತು ಬಾವ ನಿಖಿತಾಶ್ ಸುವರ್ಣ (40)ನಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.