ಬಿಜೆಪಿಯ 18 ಶಾಸಕರ ಅಮಾನತು ವಾಪಸ್; ಸ್ಪೀಕರ್‌ ಯುಟಿ ಖಾದರ್‌ ನೇತೃತ್ವದ ಸಭೆ ಬಳಿಕ ಮಹತ್ವದ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿಯ 18 ಶಾಸಕರ ಅಮಾನತು ವಾಪಸ್; ಸ್ಪೀಕರ್‌ ಯುಟಿ ಖಾದರ್‌ ನೇತೃತ್ವದ ಸಭೆ ಬಳಿಕ ಮಹತ್ವದ ನಿರ್ಧಾರ

ಬಿಜೆಪಿಯ 18 ಶಾಸಕರ ಅಮಾನತು ವಾಪಸ್; ಸ್ಪೀಕರ್‌ ಯುಟಿ ಖಾದರ್‌ ನೇತೃತ್ವದ ಸಭೆ ಬಳಿಕ ಮಹತ್ವದ ನಿರ್ಧಾರ

ಎರಡು ತಿಂಗಳ ಹಿಂದೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದ್ದ ನಿರ್ಣಯವನ್ನು ಹಿಂಪಡೆಯಲಾಗಿದೆ. ವಿಧಾನಸಭೆ ಸ್ಪೀಕರ್‌ ಯುಟಿ ಖಾದರ್‌ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯ ಬಳಿಕ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬಿಜೆಪಿಯ 18 ಶಾಸಕರ ಅಮಾನತು ವಾಪಸ್; ಯುಟಿ ಖಾದರ್‌ ನೇತೃತ್ವದ ಸಭೆ ಬಳಿಕ ಮಹತ್ವದ ನಿರ್ಧಾರ
ಬಿಜೆಪಿಯ 18 ಶಾಸಕರ ಅಮಾನತು ವಾಪಸ್; ಯುಟಿ ಖಾದರ್‌ ನೇತೃತ್ವದ ಸಭೆ ಬಳಿಕ ಮಹತ್ವದ ನಿರ್ಧಾರ

ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಮಾರ್ಚ್ 21ರ ಶುಕ್ರವಾರದಂದು ವಿಧಾನಸಭೆಯಲ್ಲಿ ಸದನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿ ಅಶಿಸ್ತಿನಿಂದ ನಡೆದುಕೊಂಡಿದ್ದ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಅವಧಿಗೆ ಅಮಾನತು ಮಾಡಲಾಗಿತ್ತು. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಪಕ್ಷ ನಾಯಕರು ಮನವಿ ಸಲ್ಲಿಸಿದ್ದರು. ಅಮಾನತಿಗೆ ಸಂಬಂಧಿಸಿದಂತೆ ಇಂದು (ಮೇ 25, ಭಾನುವಾರ) ಸ್ಪೀಕರ್ ಯುಟಿ ಖಾದರ್ ನೇತೃತ್ವದ ನಡೆದ ಸಭೆಯಲ್ಲಿ ಅಮಾನತು ಹಿಂಪಡೆಯುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ, ಮಸೂದೆಯ ಪ್ರತಿಗಳನ್ನು ಹರಿದು ಅಶಿಸ್ತು ತೋರಿದ ಆರೋಪದ ಮೇಲೆ ಮಾರ್ಚ್ 21‌ರಂದು 18 ಬಿಜೆಪಿ ಶಾಸಕರನ್ನು ಅಮಾನತ್ತು ಮಾಡಬೇಕೆಂದು ಪ್ರಸ್ತಾಪಿಸಿದ ನಿರ್ಣಯಕ್ಕೆ ಸ್ಪೀಕರ್ ಯುಟಿ ಖಾದರ್ ಅವರ ಮೂಲಕ ನಡೆದ ಸಭೆಯಲ್ಲಿ ಆಳುವ ಪಕ್ಷದಿಂದ ಅಂಗೀಕಾರ ಪಡೆಯಲಾಗಿತ್ತು. ಈ ಅಮಾನತ್ತು ಆರು ತಿಂಗಳ ಅವಧಿಯವರೆಗೆ ಅಂದರೆ ಸೆಪ್ಟಂಬರ್ ತಿಂಗಳ 21ರವರೆಗೆ ಎಂಬುದು ನಿರ್ಣಯವಾಗಿತ್ತು. ಅಮಾನತು ಘೋಷಿಸಿ ಎರಡು ತಿಂಗಳು ಪೂರ್ಣವಾದ ನಂತರ ಅದನ್ನು ಹಿಂಪಡೆಯಲಾಗಿದೆ.

ಅಮಾನತುಗೊಂಡ ಶಾಸಕರು ವಿಧಾನಸಭೆಯ ಯಾವುದೇ ಸ್ಥಾಯಿ ಸಮಿತಿ ಸಭೆಯಲ್ಲಿಯೂ ಭಾಗವಹಿಸುವಂತಿರಲಿಲ್ಲ. ಹೀಗಾಗಿ ಪ್ರತಿಪಕ್ಷ ನಾಯಕರ ಮನವಿ ಹಾಗೂ ಅಮಾನತುಗೊಂಡ ಶಾಸಕರ ಮನವಿ ಮೇರೆಗೆ ಇಂದು 18 ಶಾಸಕರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ.

ಬಿಜೆಪಿ ಶಾಸಕರ ಅಮಾನತು ಸಂಬಂಧ ವಿಧಾನಸಭೆ ಅಧ್ಯಕ್ಷರಾದ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಪ್ರತಿಪಕ್ಷ ನಾಯಕ ಅಶೋಕ್, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಪಾಲ್ಗೊಂಡಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಧಾರ

ಅಮಾನತುಗೊಂಡ ಸದಸ್ಯರು ತಮ್ಮ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಸಂವಿಧಾನಾತ್ಮಕವಾಗಿ ಸದನದ ಕಾರ್ಯಕಲಾಪಗಳಲ್ಲಿ ಸಂಯಮದಿಂದ ನಡೆದುಕೊಳ್ಳುವುದಾಗಿ ತಿಳಿಸಿರುವುದನ್ನು ಸಭೆಯಲ್ಲಿ ಪರಿಗಣಿಸಲಾಗಿದೆ. ಆಡಳಿತ ಪಕ್ಷದ ಶಾಸಕಾಂಗ ನಾಯಕರಾದ ಮುಖ್ಯಮಂತ್ರಿಯವರು, ಉಪ ಮುಖ್ಯಮಂತ್ರಿಯವರು, ಪ್ರತಿಪಕ್ಷದ ನಾಯಕರು, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಒಮ್ಮತ ಸೂಚಿಸಿದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಸದಸ್ಯರುಗಳು ಸಂವಿಧಾನತ್ಮಕವಾಗಿ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಅಮಾನತ್ತು ಹಿಂಪಡೆಯಲಾಗಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಮಾನತುಗೊಂಡಿದ್ದ ಶಾಸಕರು

ದೊಡ್ಡನಗೌಡ ಹೆಚ್. ಪಾಟೀಲ್, (ಪ್ರತಿಪಕ್ಷದ ಮುಖ್ಯ ಸಚೇತಕರು), ಡಾ. ಅಶ್ವಥನಾರಾಯಣ್ ಸಿ.ಎನ್, ಎಸ್.ಆರ್. ವಿಶ್ವನಾಥ್, ಬಿ.ಎ. ಬಸವರಾಜ, ಎಂ.ಆರ್. ಪಾಟೀಲ್, ಚನ್ನಬಸಪ್ಪ, ಬಿ. ಸುರೇಶ್‌ ಗೌಡ, ಉಮಾನಾಥ್ ಎ. ಕೋಟ್ಯಾನ್, ಶರಣು ಸಲಗರ, ಡಾ. ಶೈಲೇಂದ್ರ ಬೆಲ್ದಾಳೆ, ಸಿ.ಕೆ. ರಾಮಮೂರ್ತಿ, ಯಶಪಾಲ್ ಎ. ಸುವರ್ಣ, ಬಿ.ಪಿ. ಹರೀಶ್, ಡಾ. ಭರತ್ ‌ಶೆಟ್ಟಿ ವೈ., ಮುನಿರತ್ನ, ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು ಮತ್ತು ಡಾ. ಚಂದ್ರು ಲಮಾಣಿ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.