Suttur Jatre 2025: ಸುತ್ತೂರು ಜಾತ್ರೆಯಲ್ಲಿ ಕಲಾವಿದರ ಕಲರವ, ಮೈಸೂರು ದಸರಾ ನೆನಪಿಸಿದ ಮೆರವಣಿಗೆ, ಹಣ್ಣು ಎಸೆದು ಭಕ್ತಿಭಾವ ಮೆರೆದ ಭಕ್ತಗಣ
Suttur Jatre 2025: ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು,ಚಿತ್ರಗಳು: ವಾಟಾಳ್ ಆನಂದ ಹಾಗೂ ಜಿ.ಎಲ್.ತ್ರಿಪುರಾಂತಕ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ತೀರದ ಧಾರ್ಮಿಕ ಹಾಗೂ ಶೈಕ್ಷಣಿಕ ಮಹತ್ವದ ಸುತ್ತೂರಿನಲ್ಲಿ ಮಂಗಳವಾರ ರಥೋತ್ಸವ ಸಡಗರದಿಂದ ನಡೆಯಿತು. ಮೈಸೂರು ದಸರಾದ ಜಂಬೂಸವಾರಿ ಮಾದರಿಯಲ್ಲಿಯೇ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಹೆಜ್ಜೆ ಹಾಕಿದರೆ, ಗಣ್ಯರು ಹಾಗೂ ಭಕ್ತರು ಭಕ್ತಿ ಭಾವಗಳಿಂದ ತೆರನ್ನು ಎಳೆದರು. ಸಹಸ್ರಾರು ಭಕ್ತರು ಶ್ರೀ ಶಿವರಾತ್ರಿ ಶಿವಯೋಗಿಗಳ ರಥೋತ್ಸವ ಬಂದಾಗ ಹಣ್ಣು ಜವನ ಎಸೆದು ಜೈ ಶಿವರಾತ್ರೀಶ್ವರ ಎನ್ನುವ ಉದ್ಘಾರಗಳೊಂದಿಗೆ ಸಂಭ್ರಮಿಸಿದರು. ಸುತ್ತೂರಿನ ಮುಖ್ಯರಸ್ತೆಯಲ್ಲಿ ರಥೋತ್ಸವ ಹೋಗುತ್ತಿದ್ದರೆ ಮುಂದೆ ರೋಬೋಟಿಕ್ ಆನೆ ಹೆಜ್ಜೆ ಹಾಕುತ್ತಿದ್ದರು. ತಮಟೆ, ನಗಾರಿ ಸದ್ದು ನಿನಾದಿಸುತ್ತಲೇ ಇತ್ತು.
ಶ್ರೀ ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಗೆ ಅಪಾರ ಭಕ್ತರ ಜನಸ್ತೋಮ ಜಯ ಘೋಷಗಳನ್ನು ಮುಗಿಲೆತ್ತರಕ್ಕೆ ಕೂಗುತ್ತ, ತಮಟೆ, ನಗರಿ ಸದ್ದಿಗೆ ಕುಣಿದು ಕುಪ್ಪಳಿಸಿ ಶಿವಯೋಗಿಗಳ ರಥೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಶಿವಯೋಗಿ ಸ್ವಾಮೀಜಿ...’, ‘ಜೈ ಶಿವರಾತ್ರೀಶ್ವರ...’, ‘ಹರಹರ ಮಹದೇವ’ ಎಂಬ ಘೋಷಗಳನ್ನು ನಾಡಿನ ವಿವಿಧ ಮೂಲೆಗಳಿಂದ ಬೆಳಗ್ಗಿನಿಂದಲೇ ಗ್ರಾಮದ ರಥ ಸಾಗುವ ಬೀದಿುಂಲ್ಲಿ ಜವಾಯಿಸಿದ್ದ ಬಂದಿದ್ದ ಭಕ್ತರು ಮುಗಿಲೆತ್ತರಕ್ಕೆ ಮೊಳಗಿಸಿದರು. ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು. ಹರಕೆ ಕಾರ್ಯ ನೆರವೇರಿಸಿದ ಸಂತೃಪ್ತಿ ಅವರಲ್ಲಿ ಮೂಡಿತ್ತು.
ಬೆಳಿಗ್ಗೆಯೇ ಪೂಜಾ ಸಮಯ
ಬೆಳಿಗ್ಗೆಯೇ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಸುತ್ತೂರು ಮಠದ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಮಂತ್ರ ಮಹಷಿಗಳ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಸ್ನೇಹ-ಸೌಹಾರ್ದ-ಶಾಂತಿ-ಪಾರ್ಥನಾ ಪಥ ಸಂಚಲನ ನೆರವೇರಿತು. ಬೆಳಿಗ್ಗೆ 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನಡೆಯಿತು. ಬಳಿಕ ಶಿವಯೋಗಿಗಳ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದಾಗ ಅರ್ಚಕರು ಪೂಜಾ ವಿಧಿವಿಧಾನ ಪೂರೈಸಿದರು.
ರಥ ಎಳೆದರು ಭಕ್ತರು
ಇದಾಗುತ್ತಲೇ ಬೆಳಿಗ್ಗೆ 11 ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ವಲಾರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ರಥದ ಎಳೆದು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು. ಭಕ್ತರು ಮಠದ ಗುರು ಪರಂಪರೆಗೆ ಜಯಕಾರ ಹಾಕುತ್ತಾ ಎಳೆಯುತ್ತಿದ್ದರೆ ರಾಜಠೀವಿಯಲ್ಲಿ ರಥವು ಸಾಗಿತು.
ಜಾನಪದ ಕಲಾತಂಡಗಳೊಂದಿಗೆ ಪುಷ್ಪಾಲಂಕೃತ ರಥವು ಕ್ರಮಿಸಿತು. ತಮಟೆ, ನಗಾರಿ ವಾದ್ಯಗಳ ನಾದ ಮುಗಿಲುಮುಟ್ಟಿತು. ಮುಂದೆ ಸಾಗುತ್ತಿದ್ದ ಚಿಕ್ಕತೇರಿಗೂ ಭಕ್ತವೃಂದ ಕೈ ಮುಗಿಯಿತು . ಸುತ್ತೂರು ಮೂಲಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಕತೃಗದ್ದುಗೆಗೆ ಮರಳಿತು. ಗ್ರಾಮದ ಕತೃಗದ್ದುಗೆ ಆವರಣದಲ್ಲಿ ಜಮಾಯಿಸಿದ್ದ ಭಕ್ತರು ಹೆಬ್ಬಾವಿನ ಗಾತ್ರದ ರಥವನ್ನು ಎಳೆದು ಹರಕೆ ತೀರಿಸಿದ್ದೂ ನಡೆಯಿತು.
ಕಲಾತಂಡಗಳ ಸಂಭ್ರಮ
ರಥೋತ್ಸವದ ಮೆರವಣಿಗೆಯಲ್ಲಿ ಸಾಗಿದ 40 ಕಲಾತಂಡಗಳು ಶಿಸ್ತಿನಲ್ಲಿ ಹೆಜ್ಜೆ ಹಾಕಿದ್ದಲ್ಲದೇ ದಸರಾ ಜಂಬೂಸವಾರಿಯನ್ನು ನೆನಪಿಸಿದವು. ನಂದಿಧ್ವಜ ಕುಣಿತ ರಥದ ಮುಂಭಾಗವಿತ್ತು. ನಗಾರಿಯ ಸದ್ದಿಗೆ ಕಂಬದ ಗೆಜ್ಜೆಗಳನ್ನು ಝಲ್ಲೆನೆಸುತ್ತಾ ಹೆಜ್ಜೆ ಹಾಕಿದ ಕಲಾವಿದರು, ರಥೋತ್ಸವದ ಮೆರವಣಿಗೆಗೆ ಮುನ್ನುಡಿ ಬರೆದರು. ನಾಗಮಂಗಲದ ಮಹದೇವಪ್ಪ ಮತ್ತು ಮಹೇಶ್ ಕಿರಾಳು ನೇತೃತ್ವದ ಕಲಾವಿದರ ತಂಡದ ಲಿಂಗಧೀರರ ನೃತ್ಯ ಗಮನ ಸೆಳೆಯಿತು.
ನಾದಸ್ವರದಲ್ಲಿ ನವಿಲೂರಿನ ಚಿಕ್ಕಣ್ಣ, ಚನ್ನ ಒಡೆಯನಪುರ ಚಿನ್ನಪ್ಪ, ಮಹದೇವು, ಎಸ್.ಎಂ.ರಮೇಶ್, ಸುತ್ತೂರು ನಂಜಪ್ಪ, ನಾಗರಾಜು ಮೈಸೂರು ನೇತೃತ್ವದ ಕಲಾವಿದರು ಭಾಗಿಯಾಗಿದ್ದರು. ನಾದಸ್ವರದ ನಾದದ ಅಲೆ ಭಕ್ತಭಾವ ತುಂಬಿತು. ಮೈಸೂರಿನ ಪಿ.ಕುಮಾರ, ಕೆ.ಆರ್.ಪೇಟೆ ಪ್ರಸನ್ನ ಕುಮಾರ್, ಶ್ರೀರಂಗಪಟ್ಟಣದ ಗುರುಪ್ರಸಾದ್ ತಂಡವೂ ಸಾಕ್ಸೋಫೋನ್ ಶಬ್ದ ತನ್ಮಯಿತಗೊಳಿಸಿತು. ಬೀಡನಹಳ್ಳಿ ಶಿವು, ಯಡಹಳ್ಳಿ ಪ್ರಕಾಶ್ ಪೂಜಾಕುಣಿತ ಆಕರ್ಷಿಸಿತು.
ತಳಗವಾಡಿ ಹೊನ್ನಯ್ಯ ತಂಡದಿಂದ ಕೋಲಾಟ, ತಾಯೂರು ಸಿದ್ದರಾಜು ಮರಗಾಲು, ಮೈಸೂರು ರವಿಚಂದ್ರ ಮತ್ತು ಕೆಂಪಿಸಿದ್ದನಹುಂಡಿ ಮಹದೇವು ಕಂಸಾಳೆ ನೃತ್ಯ ಹಳ್ಳಿ ಸೊಗಿಡನ್ನು ನೆನಪಿಸಿತು. ಧಾರವಾಡದ ಗಂಗಯ್ಯ ಈರಯ್ಯ ಖಾನಾಪುರ ಮಠ ದಾನಪಟ್ಟಿ, ಸುತ್ತೂರಿನ ಮಹದೇವನಾಯ್ಕ ತಂಡದ ವೀರ ಮಕ್ಕಳ ಕುಣಿತ, ಕೊಟಮಯ್ಯ ತಮಟೆ ಸದ್ದು ವಿಜೃಂಭಣೆಗೆ ಸಾಕ್ಷಿಯಾಯಿತು.
ಮಹಿಳೆಯರ ಚೆಂಡೆ ಸದ್ದು
ರಾಮನಗರ ಜಿಲ್ಲೆಯ ಮಾಗಡಿಯ ಇಂದಿರಾ, ಮತ್ತು ಉಡುಪಿಯ ಚೆಂಡೆ ಬಳಗದ ಚೆಂಡೆ ನೃತ್ಯ ಪ್ರದರ್ಶಿಸಿದರು. ಹೆಬ್ಬಳ್ಳಿ ಅಡಿಯಪ್ಪ ಮಾಯಪ್ಪ ದಾಳಪಟ, ಬಾಗಲಕೋಟೆಯ ಜಗದೇವಪ್ಪ ಶಿವಲಿಂಗಪ್ಪ ಕರಡಿ ಮಜಲು, ಚಾಮರಾಜನಗರದ ಗೌರಿ ಶಂಕರ ತಂಡವೂ ಸುಗ್ಗಿ ಮತ್ತು ಗೊರವರ ಕುಣಿತ ಸೂಜಿಗಲ್ಲಿನಂತೆ ಆಕರ್ಷಿಸಿತು. ಮಂಗಳೂರಿನ ಮಂಜು ನೇತೃತ್ವದ ತಂಡೂ ನಾಸಿಕ್ ಡ್ರಾಮ್ಸ್ ಮತ್ತು ಮಹಾರಾಷ್ಟ್ರದ ಎಂ.ಆರ್.ಪಾಟೀಲ್ ತಂಡವೂ ಜಾನ್ ಪಥಕ್ ಜಾನಪದ ಸೊಬಗನ್ನು ಮರುಕಳಿಸಿ ಹಬ್ಬದ ಕಳೆಯನ್ನು ಹೆಚ್ಚಿಸಿತು.
ನಂಜನಗೂಡು ಮಹೇಶ್ ಗಾರುಡಿಗೊಂಬೆ, ಮೈಸೂರು ಚಿನ್ನ, ನಾಗೇಶ್ ನೇತೃತ್ವದ ತಂಡ ತಮಟೆ ನಗರಿ ಸದ್ದು ಹಬ್ಬದ ಕಳೆ ಹೆಚ್ಚಿಸಿತು. ಯುವ ಸಮೂಹ ಕುಣಿದು ಕುಪ್ಪಳಿಸುವಂತೆ ಮಾಡಿತು. ಶಿವಮೊಗ್ಗದ ರಾಘವೇಂದ್ರರ ಜಾಂಜ್ ಮೇಳ, ಹೊಸದುರ್ಗದ ಪ್ರಸನ್ನ ಕುಮಾರ್, ಮ್ಯೂಸಿಕ್ ಡ್ರಮ್ಸ್, ಬೆಂಡೆಕಟ್ಟೆ ಮಹೇಶಪ್ಪ, ಚಾಮರಾಜನಗರದ ಮಹೇಶ್ ಡೊಳ್ಳು ಕುಣಿತ ಮನ ಸೋಲುವಂತೆ ಮಾಡಿತು.
