Suttur Jatre 2025: ಸುತ್ತೂರು ಜಾತ್ರೆಗೆ ಆನೆ ಬಂತೊಂದಾನೆ, ಅದು ರೋಬೋಟಿಕ್‌ ಆನೆ, ಜಾತ್ರೆಗೆ ಬಂದರೆ ಶಿವನನ್ನು ನೋಡದೇ ಹೋಗದಿರಿ
ಕನ್ನಡ ಸುದ್ದಿ  /  ಕರ್ನಾಟಕ  /  Suttur Jatre 2025: ಸುತ್ತೂರು ಜಾತ್ರೆಗೆ ಆನೆ ಬಂತೊಂದಾನೆ, ಅದು ರೋಬೋಟಿಕ್‌ ಆನೆ, ಜಾತ್ರೆಗೆ ಬಂದರೆ ಶಿವನನ್ನು ನೋಡದೇ ಹೋಗದಿರಿ

Suttur Jatre 2025: ಸುತ್ತೂರು ಜಾತ್ರೆಗೆ ಆನೆ ಬಂತೊಂದಾನೆ, ಅದು ರೋಬೋಟಿಕ್‌ ಆನೆ, ಜಾತ್ರೆಗೆ ಬಂದರೆ ಶಿವನನ್ನು ನೋಡದೇ ಹೋಗದಿರಿ

Suttur Jatre 2025: ಸುತ್ತೂರು ಜಾತ್ರೆಯಲ್ಲಿ ಈ ಬಾರಿ ವಿಶೇಷ ಆನೆಯೊಂದು ಬಂದಿದೆ. ಅದು ಹತ್ತಿರ ಹೋದರೆ ತಳ್ಳೋಲ್ಲ.ದಾಳಿಯನ್ನೂ ಮಾಡೋಲ್ಲ. ಅದು ರೋಬೋಟಿಕ್‌ ಆನೆ. ಅದರ ವಿಶೇಷ ಇಲ್ಲಿದೆ.

ಸುತ್ತೂರು ಜಾತ್ರೆಗೆ ಬಂದಿದೆ ಶಿವ ಆನೆ.ಅದು ರೋಬೋಟಿಕ್‌ ಆನೆ.
ಸುತ್ತೂರು ಜಾತ್ರೆಗೆ ಬಂದಿದೆ ಶಿವ ಆನೆ.ಅದು ರೋಬೋಟಿಕ್‌ ಆನೆ.

ಮೈಸೂರು ಜಿಲ್ಲೆಯ ಸೊಬಗಿನ ಸುತ್ತೂರು ಜಾತ್ರೆ ಶುರುವಾಗಿದೆ. ಆರು ದಿನಗಳ ಕಾಲ ಸುತ್ತೂರು ಜಾತ್ರೆ ಲಕ್ಷಾಂತರ ಜನರನ್ನು ಸೆಳೆಯಲಿದೆ. ಜಾತ್ರೆಗೆ ದೇಶಿತನದ ನೋಟವಿದೆ. ಹೊಸತನವನ್ನು ರೈತಾಪಿ ಜನರಿಗೆ ತೋರಿಸಿಕೊಡುವ ಪ್ರದರ್ಶನಗಳೂ ಇವೆ. ಬೆಂಡು ಬತ್ತಾಸು ತಿಂದು ಹೋಗುವ ಜತೆಗೆ ಕೆಲ ಹೊತ್ತು ಆಟವಾಡಿ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವ ದೇಸಿ ಆಟಗಳೂ ಜಾತ್ರೆಯಲ್ಲಿವೆ. ಆದರೆ ಸಾಕಷ್ಟು ಇತಿಹಾಸ ಇರುವ ಸುತ್ತೂರು ಜಾತ್ರೆಗೆ ಈ ಬಾರಿ ವಿಶೇಷ ಅತಿಥಿ ಆಗಮಿಸಿದ್ಧಾರೆ. ಆ ಅತಿಥಿ ಸುತ್ತೂರಿನ ಮಠದಿಂದ ಮುಖ್ಯ ರಸ್ತೆವರೆಗೂ ಸುತ್ತು ಹಾಕುವ ಮೂಲಕ ಆಕರ್ಷಣೆಯೂ ಆಗಿದ್ದಾರೆ. ಆದು ಶಿವ ಆನೆ. ಅಂತಿಂತಹ ಆನೆಯಲ್ಲ. ರೋಬೋಟಿಕ್‌ ಆನೆ. ಸುತ್ತೂರು ಜಾತ್ರೆಗೆ ಬಂದರೆ ನೀವು ಕೆಲ ಹೊತ್ತು ಶಿವ ಆನೆಯೊಂದಿಗೆ ಕಳೆದು ಹೋಗಬಹುದು. ಫೋಟೋ ತೆಗೆಯಿಸಿಕೊಳ್ಳಬಹುದು. ಆ ಆನೆ ನಿಮ್ಮನ್ನು ಸೊಂಡಿಲಿನಿಂದ ತಳ್ಳುವ ಇಲ್ಲವೇ ನಿಮ್ಮ ಮೇಲೆ ದಾಳಿ ಮಾಡಲು ಬರಲು ಸಾಧ್ಯವೇ ಅಲ್ಲ. ಅಷ್ಟರ ಮಟ್ಟಿಗೆ ಅದು ಯಾಂತ್ರಿಕ ಆನೆ. ಹಾಗೆಂದು ನೀವು ಅದನ್ನು ಒಮ್ಮೆಲೆ ನೋಡಿದರೆ ಅದು ನಿಜ ಆನೆಯಂತೆಯೇ ಭಾಸವಾಗುತ್ತದೆ. ಮಠದ ಎಲ್ಲಾ ಪೂಜಾ ಕೈಂಕರ್ಯಗಳಿಗೆ ರೋಬೋಟಿಕ್‌ ಆನೆಯನ್ನೇ ಬಳಕೆ ಮಾಡಲಾಗುತ್ತಿದೆ.

ಮಠಗಳಲ್ಲಿಲ್ಲ ನಿಜ ಆನೆ

ಹಿಂದೆಲ್ಲಾ ಮಠ, ದೇಗುಲಗಳಲ್ಲಿ ಆನೆಗಳನ್ನು ಇಟ್ಟುಕೊಳ್ಳುವುದು ಸಂಪ್ರದಾಯವೇ. ಈ ಆನೆಗಳನ್ನು ನಿತ್ಯ ಪೂಜೆ, ದೇಗುಲ ಇಲ್ಲವೇ ಮಠದ ಮೆರವಣಿಗೆ, ಇತರೆ ಚಟುವಟಿಕೆಗೆ ಬಳಸಿಕೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕಾಡಿನಲ್ಲಿದ್ದ ಆನೆಗಳು ಶಿಬಿರಕ್ಕೆ ಬಂದವು. ಅಲ್ಲಿಂದ ಅವುಗಳು ಮಠ ಮಾನ್ಯ ಸೇರಿಕೊಂಡವು. ಕೆಲವು ಸರ್ಕಸ್‌ ಕಂಪೆನಿ ಪಾಲಾಗಿ ಮನರಂಜನೆಯ ಸರಕೂ ಆದವು. ಕರ್ನಾಟಕದಲ್ಲಿಯೇ ಧರ್ಮಸ್ಥಳ, ಮೈಸೂರಿನ ಸುತ್ತೂರು ಮಠ, ಸಿರಿಗೆರೆ ಮಠ ಸೇರಿ ಹಲವು ಕಡೆ ಸಾಕಾನೆಗಳ ಬಳಕೆ ಇತ್ತು.ಸುತ್ತೂರು ಮಠದ ಆನೆಯೇ ಒಮ್ಮೆ ಮೆರವಣಿಗೆ ಕರೆದೊಯ್ಯುವಾಗ ನಿಯಂತ್ರಣ ಕಳೆದುಕೊಂಡು ಆನಂತರ ಅದನ್ನು ಹಿಡಿಯುವಷ್ಟರಲ್ಲಿ ಸಾಕು ಬೇಕಾದ ಸನ್ನಿವೇಶವನ್ನೂ ನೋಡಿದ್ದಾಗಿತ್ತು.

ದಶಕಗಳ ಹಿಂದೆಯೇ ಆನೆಗಳ ಬಳಕೆ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲನ್ನು ಪ್ರಾಣಿ ಪ್ರಿಯರು ಏರಿದರು. ಅದರ ಹಿಂದೆ ಇದ್ದ ಶಕ್ತಿ ಕೇಂದ್ರದಲ್ಲಿ ಸಚಿವೆಯಾಗಿದ್ದ ಮನೇಕಾ ಗಾಂಧಿ. ಅವರ ನಿರಂತರ ಹೋರಾಟ, ಕಾನೂನು ಬೆಂಬಲದ ಫಲವಾಗಿ ಈಗ ಮಠ, ಮಂದಿರಗಳಲ್ಲಿ ಆನೆಗಳಿಲ್ಲ. ಅವುಗಳೆಲ್ಲಾ ಅರಣ್ಯ ಇಲಾಖೆ ಸುಪರ್ದಿಗೆ ಸೇರಿಕೊಂಡಿವೆ. ಕೆಲವು ಮೃಗಾಲಯಕ್ಕೆ ಹೋದರೆ ಬಹುತೇಕ ಆನೆ ಶಿಬಿರದಲ್ಲಿ ನೆಲೆ ಕಂಡು ಕೊಂಡಿವೆ.

ಆನೆಗಳನ್ನು ದಸರೆ ಅಂಬಾರಿ ಹೊರಲು ಬಳಸಬಾರದು ಎನ್ನುವ ಒತ್ತಡ ಆಗ ಕೇಳಿ ಬಂದಿತ್ತು. ಆಗ ಸಿಎಂ ಆಗಿದ್ದ ಜೆ.ಎಚ್.ಪಟೇಲ್‌ ಅವರು ಹಾಸ್ಯಭರಿತವಾಗಿಯೇ ಉತ್ತರಿಸಿದ್ದರು. ಅಂಬಾರಿಯನ್ನು ಆನೆಗಳು ಹೊರದೇ ಮನೇಕಾ ಹೊರ್ತಾಳಂತೇನು ಎಂದು ಪಟೇಲರು ತಮ್ಮದೇ ಶೈಲಿಯಲ್ಲಿ ಕಿಚಾಯಿಸಿದ್ದರು. ಆದರೆ ನಾಡಹಬ್ಬ ಸಹಿತ ವಿಶೇಷ ಉತ್ಸವಗಳಲ್ಲಿ ಆನೆಗಳ ಬಳಕೆ ಈಗಲೂ ಮುಂದುವರಿದೆ. ಆದರೆ ಮಠಗಳು, ದೇಗುಲಗಳಲ್ಲಿ ಆನೆಗಳು ಇಲ್ಲ. ಅಲ್ಲೆಲ್ಲಾ ಬಂದಿರುವುದು ರೋಬೋಟಿಕ್‌ ಆನೆಗಳು.

ಹೊಸ ಆನೆ ಹೋದ ವರ್ಷ ಬಂತು

ವರ್ಷದ ಹಿಂದಿನ ಘಟನೆಯಿದು. ಕೇರಳದ ತ್ರಿಶೂರ್‌ ನಗರದ ಇರಿಂಜಡಪ್ಪಿಲ್ಲಿ ಶ್ರೀಕೃಷ್ಣ ದೇಗುಲಕ್ಕೆ ಮತ್ತೆ ಭಾರೀ ಗಾತ್ರದ ಆನೆ ಬಂದೇ ಬಿಟ್ಟಿತು. ಮೊರದಗಲದ ಕಿವಿಯನ್ನು ಅಲ್ಲಾಡಿಸುವ ಆನೆ ಕಣ್ಣು ಪಿಳಿಪಿಳಿ ಬಿಡುವುದನ್ನು ಕಂಡವರು ಆಶ್ಚರ್ಯ ಚಕಿತರಾದರು. ಜತೆಗೆ ಬಂದಿದ್ದವರು ಕೊಡುತ್ತಿದ್ದ ಸೂಚನೆಯನ್ನು ಅದು ಪಾಲಿಸುತ್ತಿತ್ತು. ಈ ಆನೆ ನಿಯಂತ್ರಿಸಲು ಕೋಲು ಇರಲಿಲ್ಲ. ಬದಲಿಗೆ ಕೈಯಲ್ಲೊಂದು ಯಂತ್ರ ಇತ್ತು. ಯಂತ್ರ ಒತ್ತಿದಂತೆ ಆನೆ ಮುಂದೆ ಸರಿಯುತ್ತ ಹೋಗುತ್ತಲೇ ಇತ್ತು. ಇದು ನಿಜವಾದ ಆನೆಯಾಗಿರಲಿಲ್ಲ. ಬದಲಿಗೆ ಯಾಂತ್ರಿಕ ಆನೆ( mechanical elephant ). ಅದಕ್ಕೆ ಇಟ್ಟಿದ್ದ ಹೆಸರು ರಾಮನ್‌. ಪೇಟಾ ಮನುಷ್ಯರಿಂದ ಆನೆ ಸಹಿತ ಯಾವುದೇ ಪ್ರಾಣಿಗಳನ್ನು ದೂರ ಮಾಡುವುದಕ್ಕಿಂತ ಅವುಗಳನ್ನು ಪರ್ಯಾಯವಾಗಿ ಹೇಗೆ ಬಳಸಬಹುದು ಎನ್ನುವ ಯೋಚನೆ ಮಾಡಿತು. ಇದರ ಮುಂದುವರೆದ ಭಾಗವೇ ಯಾಂತ್ರಿಕ ಆನೆ. ಸುಮಾರು 800 ಕೆಜಿ ತೂಗುವ 11 ಎತ್ತರದ ಆನೆ ಕಬ್ಬಿಣ ಹಾಗೂ ರಬ್ಬರ್‌ ಬಳಸಿ ಮಾಡಿರುವಂತದ್ದು. ಸುಮಾರು 5 ಲಕ್ಷ ರೂ. ಈ ಆನೆಯ ವೆಚ್ಚ. ಮಾಮೂಲಿ ಆನೆಯಂತ ಈ ರೋಬೋಟಿಕ್‌ ಆನೆಯು ನಾಲ್ವರನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಎಲ್ಲಾ ಸಂಪ್ರದಾಯದ ಚಟುವಟಿಕೆಗಳನ್ನು ಈ ಆನೆ ನಡೆಸಿಕೊಡಲಿದೆ.

ಸುತ್ತೂರು ಮಠದಲ್ಲಿ ಶಿವ

ಕಳೆದ ವರ್ಷದ ಏಪ್ರಿಲ್‌ನಲ್ಲಿ ಯಾಂತ್ರಿಕ ಆನೆ ಈಗ ಮೈಸೂರಿಗೆ ಬಂದಿದೆ. ಸುತ್ತೂರು ಮಠಕ್ಕೆ ಆನೆಯನ್ನು ತಾರಾ ದಂಪತಿಗಳಾದ ದಿಗಂತ್‌ ಹಾಗೂ ಐಂದ್ರಿತಾ ರೇ ಅವರು ನೀಡಿರುವುದು ವಿಶೇಷ. ಹೋದ ವರ್ಷ ಮಠಕ್ಕೆ ಆನೆ ಬರುವ ಹೊತ್ತಿಗೆ ಸುತ್ತೂರು ಜಾತ್ರೆ ಮುಗಿದಿತ್ತು. ಈ ಬಾರಿ ಶಿವ ಸುತ್ತೂರು ಜಾತ್ರೆಯನ್ನು ಪ್ರವೇಶಿಸಿದ್ದಾರೆ. ಆನೆ ನಿರ್ವಹಣೆಗೆ ತಂಡವನ್ನು ರಚಿಸಿದ್ದು, ಅವರು ಶಿವನನ್ನು ನಿತ್ರ ಊರಲ್ಲಿ ಸುತ್ತು ಹಾಕಿಸುತ್ತಾರೆ. ಮಠದ ಎಲ್ಲಾ ಚಟುವಟಿಕೆಗಳಿಗೂ ತೆಗೆದುಕೊಂಡು ಹೋಗುತ್ತಾರೆ, ಮೂರು ವರ್ಷದ ನಂತರ ಮತ್ತೆ ಸುತ್ತೂರು ಮಠಕ್ಕೆ ಆನೆ ಬಂದ ಖುಷಿ. ಭಕ್ತರಿಗೂ ಆನೆ ಕಂಡ ಸಂತಸ. ನೀವು ಅತ್ತ ಕಡೆ ಹೋದರೆ ಆನೆಯೊಂದಿಗೆ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದನ್ನು ಮರೆಯಬೇಡಿ.

 

Whats_app_banner