ಕನ್ನಡ ಸುದ್ದಿ  /  Karnataka  /  Svys Yojana What Is Swami Vivekananda Yuva Shakti Yojana And Other Details

SVYS Yojana: ಏನಿದು ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನಾ?; ಯುವ ಸ್ವಸಹಾಯ ಸಂಘ ರಚನೆಗೆ ಏನು ಮಾನದಂಡ

Swami Vivekananda Yuva Shakti Yojana: ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಎರಡು ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳಂತೆ 12,000 ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಆದೇಶ ಹೊರಡಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ. ಏನಿದು ಯೋಜನೆ, ಮಾನದಂಡಗಳೇನು? ಇಲ್ಲಿದೆ ವಿವರ.

ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನಾ (ಸಾಂಕೇತಿಕ ಚಿತ್ರ)
ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನಾ (ಸಾಂಕೇತಿಕ ಚಿತ್ರ) (Yuvaspandana)

ರಾಜ್ಯದಲ್ಲಿ ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಯುವಕರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದ ಯೋಜನೆಯೇ ಈ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನಾ.

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ರಾಜ್ಯ ಸರ್ಕಾರವು 'ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ'ಯನ್ನು ರೂಪಿಸಿ ಅಧಿಸೂಚನೆ ಹೊರಡಿಸಿತ್ತು.

ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದ ಸ್ವಾಮಿ ವಿವೇಕಾನಂದ ಯುವ ಸ್ವ-ಸಹಾಯ ಗುಂಪುಗಳ ರಚನೆಗೆ ಈ ಯೋಜನೆ ಅವಕಾಶ ಮಾಡಿಕೊಡುತ್ತದೆ. ಯೋಜನೆಯ ಅನುಷ್ಠಾನಕ್ಕೆ 500 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಪೈಕಿ ಮೊದಲ ಕಂತಿನಲ್ಲಿ 10 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ.

ಸ್ವಸಹಾಯ ಸಂಘ ರಚನೆಗೆ ಅರ್ಹತೆ ಮತ್ತು ಮಾನದಂಡ ಏನು?

ಸ್ವ ಸಹಾಯ ಸಂಘ ರಚಿಸುವಂಥವರು 18ರಿಂದ 29 ವರ್ಷ ವಯಸ್ಸಿನೊಳಗಿನವರಾಗಿರಬೇಕು.

ಒಂದು ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪು ರಚಿಸುವುದಕ್ಕೆ ಕನಿಷ್ಠ 10 ಸದಸ್ಯರು ಇರಬೇಕು. ಗರಿಷ್ಠ 20 ಸದಸ್ಯರ ಸೇರ್ಪಡೆಗೆ ಅವಕಾಶ ಇದೆ.

ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪಿಗೆ ಸಿಗುವ ಸೌಲಭ್ಯಗಳೇನು?

  • ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಪ್ರೋತ್ಸಾಹ
  • ಗ್ರಾಮೀಣ ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ ಒದಗಿಸುವುದು. ಅದೇ ರೀತಿ ಅವರು ವಾಸಿಸುವ ಸ್ಥಳಗಳಲ್ಲಿ ಸ್ವಯಂ ಉದ್ಯೋಗ ಅವಕಾಶ ನೀಡುವುದು
  • ಸ್ವ-ಸಹಾಯ ಗುಂಪುಗಳಿಗೆ ನಿರಂತರ ಮತ್ತು ಸುಸ್ಥಿರ ಸ್ವಯಂ ಉದ್ಯೋಗ ಅವಕಾಶ, ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಂಘದ ಸದಸ್ಯ ಯುವಜನರಿಗೆ ಪ್ರೋತ್ಸಾಹ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜನೆ
  • ಪ್ರತಿ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪಿಗೆ 10,000 ರೂಪಾಯಿಯ ಸುತ್ತು ನಿಧಿ
  • ಒಂದು ಲಕ್ಷ ರೂಪಾಯಿ ಸಹಾಯಧನದೊಂದಿಗೆ 5,00,000 ರೂಪಾಯಿ ಸಾಲ ಸೌಲಭ್ಯ (ಇದು ಉದ್ಯಮ ಮತ್ತು ಅರ್ಹತೆಗೆ ಅನುಗುಣವಾದ ಸಾಲ ಸೌಲಭ್ಯ)
  • ಸರ್ಕಾರದ ವತಿಯಿಂದ ಕೌಶಲಾಭಿವೃದ್ಧಿ, ಉದ್ಯಮಶೀಲತೆಗೆ ತರಬೇತಿ ಮತ್ತು ಬ್ಯಾಂಕ್ ಸಾಲ ಪಡೆಯಲು ಪ್ರೋತ್ಸಾಹ
  • ಪ್ರಾರಂಭದಲ್ಲಿ 6 ತಿಂಗಳವರೆಗೆ ಸಾಲ ಮರುಪಾವತಿಗೆ ರಜಾ ಅವಧಿ

ಗುಂಪು ರಚನೆಗೆ ಯಾರನ್ನು ಸಂಪರ್ಕಿಸಬೇಕು?

ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪು ರಚಿಸುವುದಕ್ಕೆ ಆಸಕ್ತ ಯುವಜನರು ಆಯಾ ಗ್ರಾಮ ಪಂಚಾಯಿತಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬಹುದು.

ಸರ್ಕಾರದ ಹೊಸ ಆದೇಶ ಹೇಳುವುದೇನು?

ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಎರಡು ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳಂತೆ 12,000 ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಆದೇಶ ಹೊರಡಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.

ರಾಜ್ಯದ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವ ಸ್ವಸಹಾಯ ಸಂಘ ಸ್ಥಾಪಿಸಿ, ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೆ ನೆರವು ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಮೊದಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಗುಂಪಿನಂತೆ 6000 ಗುಂಪುಗಳನ್ನು ರಚಿಸಲು ಆದೇಶಿಸಲಾಗಿತ್ತು. ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳ ರಚನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದರಿಂದ ಪ್ರತಿ ಪಂಚಾಯತ್ ಗೆ ಎರಡರಂತೆ 12 ಸಾವಿರ ಗುಂಪುಗಳನ್ನು ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದರು. ಅದರಂತೆ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

IPL_Entry_Point