ಕನ್ನಡ ಸುದ್ದಿ  /  ಕರ್ನಾಟಕ  /  Swachh Mandir Abhiyan: ಮುಜರಾಯಿ ದೇಗುಲಗಳ ತ್ಯಾಜ್ಯ ನಿರ್ವಹಣೆಗೆ ʻಸ್ವಚ್ಛ ಮಂದಿರ ಅಭಿಯಾನʼ; ಫೆ.10ಕ್ಕೆ 12 ದೇಗುಲಗಳಲ್ಲಿ ಉದ್ಘಾಟನೆ

Swachh mandir abhiyan: ಮುಜರಾಯಿ ದೇಗುಲಗಳ ತ್ಯಾಜ್ಯ ನಿರ್ವಹಣೆಗೆ ʻಸ್ವಚ್ಛ ಮಂದಿರ ಅಭಿಯಾನʼ; ಫೆ.10ಕ್ಕೆ 12 ದೇಗುಲಗಳಲ್ಲಿ ಉದ್ಘಾಟನೆ

Swachh mandir abhiyan: ಮುಜರಾಯಿ ದೇಗುಲಗಳ ತ್ಯಾಜ್ಯ ನಿರ್ವಹಣೆ ಸಮಸ್ಯೆ ಪರಿಹಾರಕ್ಕಾಗಿ ರೂಪಿಸಿರುವ ʻಸ್ವಚ್ಛ ಮಂದಿರ ಅಭಿಯಾನʼದ ಮೊದಲ ಹಂತವಾಗಿ ಫೆ.10ಕ್ಕೆ ರಾಜ್ಯದ 12 ದೇಗುಲಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಲೋಕಾರ್ಪಣೆಯಾಗಲಿದೆ.

ಸ್ವಚ್ಛ ಮಂದಿರ ಅಭಿಯಾನ (ಸಾಂದರ್ಭಿಕ ಚಿತ್ರ)
ಸ್ವಚ್ಛ ಮಂದಿರ ಅಭಿಯಾನ (ಸಾಂದರ್ಭಿಕ ಚಿತ್ರ) (GoK)

ಬೆಂಗಳೂರು: ಹಿಂದು ದೇವಾಲಯಗಳ ತ್ಯಾಜ್ಯ ನಿರ್ವಹಣೆಗೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಮಹತ್ವಾಕಾಂಕ್ಷೆಯ "ಸ್ವಚ್ಛ ಮಂದಿರ ಅಭಿಯಾನ"ವನ್ನು ರೂಪಿಸಿದೆ. ಇದರ ಮೊದಲ ಹಂತಕ್ಕೆ ಫೆ.10ರಂದು ರಾಜ್ಯದ 12 ದೇಗುಲಗಳಲ್ಲಿ ಚಾಲನೆ ಸಿಗಲಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಮಂದಿರ ಪರಿಕಲ್ಪನೆಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ “ಸ್ವಚ್ಛ ಮಂದಿರ ಅಭಿಯಾನ” ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 12 ದೇವಸ್ಥಾನಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದೇವಸ್ಥಾನಗಳಲ್ಲಿ ಅಳವಡಿಸಲಾಗುವುದು. ಈ ಸೌಲಭ್ಯದಿಂದಾಗಿ ಪ್ರತಿದಿನ ಈ ದೇವಸ್ಥಾನಗಳಲ್ಲಿ ಉತ್ಪತ್ತಿಯಾಗುವ ಸುಮಾರು 3500 ರಿಂದ 12 ಸಾವಿರ ಕೆಜಿಗಳಷ್ಟು ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಭಕ್ತಾದಿಗಳಿಗೆ ಸ್ವಚ್ಛ, ಸುಂದರ ಹಾಗೂ ನೈರ್ಮಲ್ಯದ ವಾತಾವರಣ ಒದಗಿಸುವುದು ಪ್ರಮುಖ ಉದ್ದೇಶ ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಹೇಳಿದ್ದಾರೆ.

ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಅ ಜೊಲ್ಲೆ ಅವರ ಆಶಯದ ಯೋಜನೆಯ ಚಾಲನೆಗೆ ಅಗತ್ಯ ಸಿದ್ದತೆಗಳನ್ನು ಇಲಾಖೆ ಮಾಡಿಕೊಂಡಿದೆ. ಫೆಬ್ರವರಿ 10 ರಂದು ಮಂಡ್ಯ- ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಮುಖ್ಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲಿ ನಿರಂತರ ಹೆಚ್ಚುತ್ತಿರುವ ಘನ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಯೋಜನೆಯನ್ನ ಅನುಷ್ಠಾನಗೊಳಿಸುತ್ತಿದೆ. ದೇವಸ್ಥಾನಗಳಲ್ಲಿ ಸ್ವಚ್ಛ ಪರಿಸರ ಒದಗಿಸುವುದಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ ಅವರು ನೀಡಿದ ಸೂಚನೆ ಮೇರೆಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಇದರಂತೆ, ಮೊದಲ ಹಂತದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ ಪ್ರಮುಖ 12 ದೇಗುಲಗಳಲ್ಲಿ ʻಸ್ವಚ್ಛ ಮಂದಿರ ಅಭಿಯಾನʼ ಯೋಜನೆ ಪ್ರಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಫೆ.10ರಂದು ಲೋಕಾರ್ಪಣೆ ಮಾಡಲಾಗುತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಉದ್ಘಾಟನೆ ಮುಖ್ಯ ಕಾರ್ಯಕ್ರಮವಾಗಿರಲಿದ್ದು, ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ವೇಳೆ ಉಳಿದ 11 ದೇಗುಲಗಳ ಘಟಕಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ವಚ್ಛ ಮಂದಿರ ಅಭಿಯಾನದ ಘನತ್ಯಾಜ್ಯ ನಿರ್ವಹಣಾ ಘಟಕ

ಸ್ವಚ್ಚ ಮಂದಿರ ಅಭಿಯಾನದ ಘನತ್ಯಾಜ್ಯ ನಿರ್ವಹಣಾ ಘಟಕವು, ದೇವಸ್ಥಾನಗಳಲ್ಲಿ ಹಾಗೂ ದೇವಸ್ಥಾನದ ಆವರಣದಲ್ಲಿ ಉತ್ಪತ್ತಿಯಾಗುವ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗ ನೆರವಾಗುತ್ತದೆ. ಈ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡುವ ಉದ್ದೇಶ ಇದರದ್ದು. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಲು ವ್ಯವಸ್ಥಿತ ಕ್ರಮ ತೆಗೆದುಕೊಳ್ಳುವುದು, ದೇವಾಲಯಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸುವುದು, ಸಾಗಿಸುವುದು, ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡಲು ಅಗತ್ಯವಾದ ಬೆಂಬಲ ವ್ಯವಸ್ಥೆಗಳನ್ನು ಇದು ಒಳಗೊಂಡಿದೆ. ಮೂಲದಲ್ಲಿಯೇ ತ್ಯಾಜ್ಯವನ್ನು ಪ್ರತ್ಯೇಕಿಸುವ ವ್ಯವಸ್ಥೆಯೂ ಇದರಲ್ಲಿದೆ. ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ದೇವಸ್ಥಾನವನ್ನು ಸುಸ್ಥಿರ ಸಂಸ್ಥೆ ಮತ್ತು ಶೂನ್ಯ ತ್ಯಾಜ್ಯ ಆವರಣವನ್ನಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಉದ್ಘಾಟನೆಯಾಗುವ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಹೊಂದಿರುವ ದೇವಸ್ಥಾನಗಳ ಪಟ್ಟಿ:

 1. ಶ್ರೀ ನಿಮಿಷಾಂಬ ದೇವಾಲಯ, ಗಂಜಾಂ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ
 2. ಶ್ರೀ ಬನಶಂಕರಿ ದೇವಾಲಯ, ಕರಿಯಪ್ಪ ರಸ್ತೆ, ಬೆಂಗಳೂರು ನಗರ ಜಿಲ್ಲೆ
 3. ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ
 4. ಶ್ರೀ ರೇವಣ ಸಿದ್ಧೇಶ್ವರ ದೇವಾಲಯ, ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ
 5. ಶ್ರೀ ಕಬ್ಬಾಳಮ್ಮ ದೇವಾಲಯ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ
 6. ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, ರಾಮನಗರ ಜಿಲ್ಲೆ
 7. ಶ್ರೀ ರಂಗನಾಥಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ
 8. ಶ್ರೀ ಚೆನ್ನಕೇಶವಸ್ವಾಮಿ ದೇವಾಲಯ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ
 9. ಶ್ರೀ ದುರ್ಗಪರಮೇಶ್ವರಿ ದೇವಾಲಯ, ಮಂದಾರ್ತಿ, ದಕ್ಷಿಣ ಕನ್ನಡ ಜಿಲ್ಲೆ
 10. ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ನಾಯಕನಹಟ್ಟಿ, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ
 11. ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ದೇವರಾಯನ ದುರ್ಗ, ತುಮಕೂರು ಜಿಲ್ಲೆ
 12. ಶ್ರೀ ಪೊಳಲಿ ರಾಜರಾಜೇಶ್ವರಿ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆ

ಟಿ20 ವರ್ಲ್ಡ್‌ಕಪ್ 2024