TNPura Kumbh Mela 2025: ತಿ.ನರಸೀಪುರ ಕುಂಭಮೇಳ 2025ಕ್ಕೆ ಸಿದ್ದತೆ ಶುರು; ಫೆಬ್ರವರಿ 11 ರಂದು ಕಾವೇರಿ ಆರತಿ ಆಕರ್ಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  Tnpura Kumbh Mela 2025: ತಿ.ನರಸೀಪುರ ಕುಂಭಮೇಳ 2025ಕ್ಕೆ ಸಿದ್ದತೆ ಶುರು; ಫೆಬ್ರವರಿ 11 ರಂದು ಕಾವೇರಿ ಆರತಿ ಆಕರ್ಷಣೆ

TNPura Kumbh Mela 2025: ತಿ.ನರಸೀಪುರ ಕುಂಭಮೇಳ 2025ಕ್ಕೆ ಸಿದ್ದತೆ ಶುರು; ಫೆಬ್ರವರಿ 11 ರಂದು ಕಾವೇರಿ ಆರತಿ ಆಕರ್ಷಣೆ

TNPura Kumbh Mela 2025: ಮೈಸೂರು ಜಿಲ್ಲೆಯ ಕಾವೇರಿ ಹಾಗೂ ಕಬಿನಿ ನದಿನಿ ಸಂಗಮದ ತಿ.ನರಸೀಪುರದಲ್ಲಿ ಕುಂಭಮೇಳ 2025 ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಕುಂಭಮೇಳ 2025 ಫೆಬ್ರವರಿಯಲ್ಲಿ ನಡೆಯಲಿದೆ.
ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಕುಂಭಮೇಳ 2025 ಫೆಬ್ರವರಿಯಲ್ಲಿ ನಡೆಯಲಿದೆ.

ಮೈಸೂರು: ಕಾವೇರಿ, ಕಬಿನಿ ನದಿಗಳ ಪವಿತ್ರ ಸಂಗಮ ಸ್ಥಳವಾದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಫೆಬ್ರವರಿ 10 ರಿಂದ 12 ರವರೆಗೆ ಕುಂಭಮೇಳ 2025 ಆಯೋಜನೆಗಾಗಿ ಸಿದ್ದತೆಗಳು ನಡೆದಿವೆ. ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕಾವೇರಿ ಹಾಗೂ ಕಬಿನಿ ನದಿಗಳು ಗುಂಜಾನರಸಿಂಹಸ್ವಾಮಿ ದೇವಸ್ಥಾನ ಸಮೀಪದಲ್ಲಿಯೇ ಸಂಗಮವಾಗುವ ಸ್ಥಳದಲ್ಲಿ ಫೆಬ್ರವರಿ 11 ರಂದು ಕಾವೇರಿ ಆರತಿಯನ್ನು ಆಯೋಜಿಸಿ ಭಕ್ತರನ್ನು ಸೆಳೆಯುವ ಪ್ರಯತ್ನವೂ ಈ ಬಾರಿ ನಡೆದಿದೆ.

ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ತಿನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಮೂರು ವರ್ಷದ ಹಿಂದೆ ಕೋವಿಡ್‌ ಉಲ್ಬಣಗೊಂಡಿದ್ದರಿಂದ ಸರಳವಾಗಿ ಕುಂಭಮೇಳ ಆಯೋಜಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದಲೇ ಆಚರಿಸಲು ಸಿದ್ದತೆ ನಡೆದಿದೆ. ತಿ.ನರಸೀಪುರದ ಕೆಲ ಭಾಗ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಬರಲಿದೆ. ಇನ್ನಷ್ಟು ಭಾಗ ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಅವರು ಪ್ರತಿನಿಧಿಸುವ ತಿ.ನರಸೀಪುರ ಕ್ಷೇತ್ರಕ್ಕೆ ಬರುತ್ತದೆ. ಈ ಕಾರಣದಿಂದಲೂ ಇದನ್ನು ಧಾರ್ಮಿಕ ಹಾಗೂ ಪ್ರವಾಸಿ ಉತ್ಸವವಾಗಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತವು ತಯಾರಿ ಮಾಡಿಕೊಳ್ಳುತ್ತಿದೆ.

ಕುಂಭಮೇಳ -2025 ರ ಆಚರಣೆಯ ಸಂಬಂಧ ಜಲದರ್ಶಿನಿ ಅಥಿತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಸಚಿವ ಡಾ.ಮಹದೇವಪ್ಪ ಅವರು ಸಿದ್ದತೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಅವರು ಮಾತನಾಡಿ, 3 ಕುಂಭಮೇಳದಲ್ಲಿ ದಿನವೂ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಾವೇರಿ ಆರತಿಯನ್ನು ಫೆಬ್ರವರಿ 11 ರಂದು ಮಾಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು 1989 ರಿಂದ ಕುಂಭಮೇಳ ಆಚರಣೆ ಪ್ರಾರಂಭವಾಯಿತು. ಪ್ರತಿ 3 ವರ್ಷಕ್ಕೆ ಒಮ್ಮೆ ನಡೆಯುತ್ತದೆ. 2019 ರಲ್ಲಿ ನಡೆಯಿತು. ಕೋವಿಡ್ ಇದ್ದುದರಿಂದ 2021 ರಲ್ಲಿ ಕುಂಭಮೇಳ ನಡೆಯಲಿಲ್ಲ. ನದಿಯಲ್ಲಿ ಸ್ಥಾನ ಮಾಡಲು 5 ಕಡೆ ಜಾಗ ಗುರುತಿಸಲಾಗಿದೆ. 1 ಯಾಗ ಶಾಲೆ ನಿರ್ಮಾಣ ಮಾಡಲಾಗುವುದು. 6 ಕುಟೀರಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸೂಚನೆಗಳು ಏನೇನು

  • ಫೆಬ್ರವರಿ 10 ರಿಂದ 12 ರವರೆಗೆ ತಿ.ನರಸೀಪುರದ ತ್ರಿವೇಣಿ ಸಂಗಮದ ಬಳಿ ಕುಂಭಮೇಳ 2025 ನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು.
  • ಕುಂಭಮೇಳದಲ್ಲಿ ಸ್ವಚ್ಚತೆ ಕಾಪಾಡಬೇಕು. ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು.
  • ಸಾಂಸ್ಕೃತಿಕ ಹಾಗೂ ಜನಪದ ಸಂಗೀತ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಆಯೋಜನೆ ಮಾಡಿ, ಹೆಚ್ಚಿನದಾಗಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು.
  • ಮೈಸೂರು ನಂಜನಗೂಡು, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ, ಬನ್ನೂರು ಸಹಿತ ಪ್ರಮುಖ ಭಾಗಗಳಿಂದ ಕೆ.ಎಸ್.ಆರ್.ಟಿ. ಸಿ ವತಿಯಿಂದ ವಿವಿಧ ಭಾಗಗಳಿಂದ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಬೇಕು
  • ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಮಾಡಬೇಕು.
  • ಸ್ನಾನ ಘಟ್ಟಗಳಲ್ಲಿ ಸ್ವಚ್ಚತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
  • ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಉಚಿತ ಅನ್ನದಾನ ಮಾಡುವ ಕಡೆ ಸ್ವಚ್ಚತೆ ಕಾಪಾಡಬೇಕು
  • ಫೈರ್ ಸೆಪ್ಟಿ ಕೈಗೊಳ್ಳಬೇಕು. ಕುಟೀರಗಳ ಬಳಿ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು. ರಸ್ತೆಗಳು ಉತ್ತವಾಗಿ ಇರುವಂತೆ ನೋಡಿಕೊಳ್ಳಬೇಕು

Whats_app_banner