ಮುಖ್ಯಮಂತ್ರಿ ಹುದ್ದೆಗೆ ಹಾವು ಏಣಿಯಾಟ, ಸಿದ್ದರಾಮಯ್ಯ ಮೇಲುಗೈ, ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹರಸಾಹಸ
ಕನ್ನಡ ಸುದ್ದಿ  /  ಕರ್ನಾಟಕ  /  ಮುಖ್ಯಮಂತ್ರಿ ಹುದ್ದೆಗೆ ಹಾವು ಏಣಿಯಾಟ, ಸಿದ್ದರಾಮಯ್ಯ ಮೇಲುಗೈ, ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹರಸಾಹಸ

ಮುಖ್ಯಮಂತ್ರಿ ಹುದ್ದೆಗೆ ಹಾವು ಏಣಿಯಾಟ, ಸಿದ್ದರಾಮಯ್ಯ ಮೇಲುಗೈ, ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹರಸಾಹಸ

Karnataka CM Race: ಮುಖ್ಯಮಂತ್ರಿ ಹುದ್ದೆಗೆ ಹಾವು ಏಣಿಯಾಟ ನಡೆಯುತ್ತಿದೆ. ಆದರೆ ಸದಾ ಸಿಎಂ ಸಿದ್ದರಾಮಯ್ಯ ಮೇಲುಗೈ ಸಾಧಿಸುತ್ತಿದ್ದಾರೆ. ಮತ್ತೊಂದೆಡೆ ಉಪಮುಖ್ಯಮಂತ್ರಿ ಹುದ್ದೆಯಿಂದ ಮುಖ್ಯಮಂತ್ರಿ ಪಟ್ಟಕ್ಕೆ ಡಿಕೆ ಶಿವಕುಮಾರ್ ಹರಸಾಹಸಪಡುತ್ತಿದ್ದಾರೆ. ಸಿಎಂ ಬಣ ಪಟ್ಟು ಬಿಡುತ್ತಿಲ್ಲ. (ವರದಿ-ಎಚ್ ಮಾರುತಿ)

ಮುಖ್ಯಮಂತ್ರಿ ಹುದ್ದೆಗೆ ಹಾವು ಏಣಿಯಾಟ, ಸಿದ್ದರಾಮಯ್ಯ ಮೇಲುಗೈ, ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹರಸಾಹಸ
ಮುಖ್ಯಮಂತ್ರಿ ಹುದ್ದೆಗೆ ಹಾವು ಏಣಿಯಾಟ, ಸಿದ್ದರಾಮಯ್ಯ ಮೇಲುಗೈ, ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಹರಸಾಹಸ

ಬೆಂಗಳೂರು: ಅಧಿಕಾರಕ್ಕೆ ಬಂದು ಎರಡೂವರೆ ವರ್ಷಕ್ಕೆ ಹತ್ತಿರವಾಗುತ್ತಿದ್ದಂತೆ ಮತ್ತೆ ಅಧಿಕಾರ ಹಂಚಿಕೆ ವಿಷಯ ಮುನ್ನೆಲೆಗೆ ಬಂದಿದೆ. ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಧಿಕಾರ ಪಡೆದುಕೊಳ್ಳಲು ಡಿಕೆ ಶಿವಕುಮಾರ್ ಹರಸಾಹಸ ಪಡುತ್ತಿದ್ದಾರೆ. ಈ ಕುರ್ಚಿಯ ಆಟ ಒಂದು ರೀತಿಯಲ್ಲಿ ಹಾವು- ಏಣಿಯಾಟದಂತಿದ್ದರೂ ಸಿದ್ದರಾಮಯ್ಯ ಒಬ್ಬರೇ ಮೇಲುಗೈ ಸಾಧಿಸುತ್ತಿದ್ದಾರೆ.

ಹೈಕಮಾಂಡ್‌ ನೀಡಿದ ಕಠಿಣ ಎಚ್ಚರಿಕೆಯ ನಡುವೆಯೂ ಸಿಎಂ ಕೂಗು ನಿಂತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬಾಯಿ ಮುಚ್ಚಿಕೊಂಡಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಮುಖಂಡರು ಬಾಯಿಗೆ ಬೀಗ ಹಾಕಿಕೊಂಡಿದ್ದರಾದರೂ ಕಾರ್ಯಕರ್ತರ ಬಾಯಿ ಮುಚ್ಚಿಸುವುದು ಅಸಾಧ್ಯ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಹೊಳಿ ಮೂವರ ಬೆಂಬಲಿಗರೂ ತಮ್ಮ ತಮ್ಮ ನಾಯಕ ಸಿಎಂ ಆಗಲಿ ಎಂದು ಬಹಿರಂಗವಾಗಿಯೇ ಪೂಜೆ ಪುನಸ್ಕಾರ ಮಾಡಿಸುತ್ತಾ ಜೈಕಾರ ಹಾಕುತ್ತಲೇ ಇದ್ದಾರೆ. ಮತೊಂದೆಡೆ ರಾಜಕಾರಣದಲ್ಲಿ ಮೂಗು ತೂರಿಸುತ್ತಿರುವ ಸನ್ಯಾಸಿಗಳೂ ಬ್ಯಾಟ್‌ ಬೀಸುತ್ತಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಹಿರೇಬಾಗೇವಡಿಯ ಬೆಂಬಲಿಗ ಪರುಶರಾಂ ಪೂಜಾರಿ ಅವರು ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸತೀಶ್‌ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂಬ ಪೋಸ್ಟರ್‌ ಪ್ರದರ್ಶಿಸಿದ್ದಾರೆ. ಬೆಳಗಾಯಿಯಲ್ಲಿ ನಡೆದ ಗಾಂಧಿ ಭಾರತ್‌ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಬೆಂಬಲಿಗರು ಖರ್ಗೆ, ಪ್ರಿಯಾಂಕಾ, ಸುರ್ಜೆವಾಲ, ಸಿದ್ದರಾಮಯ್ಯ ಅವರ ಎದುರಿನಲ್ಲೇ ಡಿಕೆ ಅವರ ಹೋರ್ಡಿಂಗ್ಸ್‌ ಪ್ರದರ್ಶಿಸಿ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ್ದಾರೆ.

ಎಷ್ಟೇ ಅಡೆತಡೆ ಹಾಗೂ ಕಷ್ಟಗಳು ಬಂದರೂ ಮುಂಬರುವ ದಿನಗಳಲ್ಲಿ ಶಿವಕುಮಾರ್‌ ಕರ್ನಾಟಕ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವುದು ನಿಶ್ಚಿತ ಎಂದು ವರೂರು ಗುಣಧರನಂದಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಆದರೆ ನನಗೆ ಪಕ್ಷ ಮುಖ್ಯ. ಪಕ್ಷ ನಮಗೆ ನೀಡುವ ಜವಬ್ದಾರಿ ನಿರ್ವಹಿಸುತ್ತೇವೆ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮುಂದುವರೆದು ನಾನು ಯಾವುದೇ ಹುದ್ದೆಯ ಹಿಂದೆ ಹೋಗುವುದಿಲ್ಲ. ನನಗೆ ವಹಿಸಿರುವ ಜವಬ್ದಾರಿ ನಿರ್ವಹಿಸುವತ್ತ ಗಮನ ಹರಿಸುತ್ತೇನೆ ಎಂದೂ ಹೇಳಿದ್ದಾರೆ.

ನಿಜಕ್ಕೂ ಸೂತ್ರ ಹೆಣೆಯಲಾಗಿದೆಯೇ?

ಮೂಲಗಳ ಪ್ರಕಾರ 2023ರಲ್ಲಿ ಕಾಂಗ್ರೆಸ್‌ ಅಧಿಕಾರ ರಚಿಸುವಾಗ ಅಧಿಕಾರ ಹಂಚಿಕೆ ಸೂತ್ರ ಹೆಣೆಯಲಾಗಿದೆ. ತಲಾ ಎರಡೂವರೆ ವರ್ಷ ಸಿಎಂ ಹುದ್ದೆ ನಿರ್ವಹಿಸಬೇಕು ಎಂಬ ಒಪ್ಪಂದ ಆಗಿದೆ ಎನ್ನಲಾಗುತ್ತಿದೆ. ಅಧಿಕಾರ ಹಂಚಿಕೆಗೆ ಇಬ್ಬರ ನಡುವೆ ಒಪ್ಪಂದ ಆಗಿದ್ದರೆ ಅಂತಹದ್ದೊಂದು ಸೂತ್ರ ಏರ್ಪಟ್ಟಿದ್ದರೆ, ಶಿವಕುಮಾರ್‌ ಇಷ್ಟೊಂದು ಆರ್ಭಟ ನಡೆಸುವ ಅಗತ್ಯ ಇತ್ತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಂದು ವೇಳೆ ಸೂತ್ರ ಇದ್ದಿದ್ದರೆ ಅದನ್ನು ಹೈಕಮಾಂಡ್ ನಿಭಾಯಿಸುತ್ತಿತ್ತು ಅಲ್ಲವೇ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಒಕ್ಕಲಿಗ ಮತ್ತು ಕೆಲವೇ ಶಾಸಕರು ಶಿವಕುಮಾರ್‌ ಪರವಾಗಿ ನಿಂತಿದ್ದರೆ, ಸಿದ್ದರಾಮಯ್ಯ ಅವರು ಬೇರೆಯದ್ದೇ ಆಟ ಹೂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮಬೆಂಬಲಿಗರನ್ನು ತರುವುದು ಇವರ ಮೊದಲ ಉದ್ದೇಶ. ಈ ಕಾರಣಕ್ಕಾಗಿಯೇ ಜಾರಕಿಹೊಳಿ, ಕೆಎನ್‌ ರಾಜಣ್ಣ ಪರಮೇಶ್ವರ್‌ ಮೊದಲಾದವರು ಶಿವಕುಮಾರ್‌ ಅವರ ಮೇಲಿರುವ ಹೊರೆಯನ್ನು ಇಳಿಸುವ ಮಾತುಗಳನ್ನಾಡುತ್ತಿದ್ದಾರೆ. ಮುಂದೆ ಪಂಚಾಯಿತಿ ಚುನಾವಣೆಗಳು ಎದುರಾಗುತ್ತಿದ್ದು, ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ. ಡಿಕೆ ಅವರು ಪ್ರಮುಖ ಖಾತೆಗಳು ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವುದು ಕಷ್ಟಸಾಧ್ಯ ಎಂದು ಜಾರಕಿಹೊಳಿ ನೇರವಾಗಿಯೇ ಹೇಳಿದ್ದಾರೆ. ಇದಕ್ಕೆ ಡಿಕೆ ಎದಿರೇಟು ನೀಡಿದ್ದು ಈಗ ಇತಿಹಾಸ. ಮಲ್ಲಿಕಾರ್ಜುನ ಖರ್ಗೆ ಅವರು ಹೇಗೆ ಸೋನಿಯಾ ಗಾಂಧಿ ಅವರು ಎರಡು ಮೂರು ಬಾರಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದರು ಎನ್ನುವುದನ್ನು ನೆನಪಿಸಿದ್ದಾರೆ.

ಈಗ ಮತ್ತೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಬರೋಣ. ವರಿಷ್ಠರೇ ತಲಾ ಎರಡೂವರೆ ವರ್ಷ ಎಂದು ಹಂಚಿಕೆ ಮಾಡಿದ್ದರೆ ಶಿವಕುಮಾರ್‌ ತಲೆಬಿಸಿ ಮಾಡಿಕೊಳ್ಳುತ್ತಿರುವುದಾದರೂ ಏಕೆ? ಶಿವಕುಮಾರ್‌ ಅನುಪಸ್ಥಿತಿಯಲ್ಲಿ ಜಾರಕಿಹೊಳಿ ಔತಣಕೂಟ ಏರ್ಪಡಿಸಿದ್ದು, ಡಿಕೆ ಅದಕ್ಕೆ ಬೆದರಿದ್ದು ಮತೊಂದು ಡಿನ್ನರ್‌ ಪಾರ್ಟಿಯನ್ನು ರದ್ದುಗೊಳಿಸಿದ್ದಾದರೂ ಏಕೆ ಎನ್ನುವುದು ಅರ್ಥವಾಗುತ್ತಿಲ್ಲ. ಇಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಶಿವಕುಮಾರ್‌ ಹಿನ್ನೆಡೆ ಅನುಭವಿಸಿದ್ದಾರೆ ಎಂದು ಭಾವಿಸಬೇಕಾಗುತ್ತದೆ.

ರಾಜಕೀಯ ಪಟ್ಟುಗಳನ್ನು ಉರುಳಿಸುವುದರಲ್ಲಿ ಸಿದ್ದರಾಮಯ್ಯ ಪಳಗಿದ ಕೈ. 2013 ಮತ್ತು 2024 ಪಕ್ಷ ಬಹುಮತ ಪಡೆದಾಗ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಆರಂಭವಾದಾಗ ಶಾಸಕಾಂಗ ಪಕ್ಷದ ಸಭೆ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ದಾಳ ಉರುಳಿಸಿದ್ದರು. ಈಗಲೂ ಶಾಸಕರ ಆಯ್ಕೆ ಅಂತಿಮ ಎನ್ನುವುದಾದರೆ ಶಿವಕುಮಾರ್‌ ಸಿಎಂ ಕುರ್ಚಿಯ ಹತ್ತಿರಕ್ಕೂ ಬರಲಾರರು. ಈ ಕಾರಣಕ್ಕಾಗಿಯೇ ಶಿವಕುಮಾರ್‌ ಅವರು ಹೈಕಮಾಂಡ್‌ ಮೇಲೆ ಒತ್ತಡ ಹೇರಿ ಸಿಎಂ ಆಗಲು ಹವಣಿಸುತ್ತಿದ್ದಾರೆ. ಪಕ್ಷ ಮತ್ತು ಸಚಿವ ಸಂಪುಟದಲ್ಲಿ ಶಿವಕುಮಾರ್‌ ಅವರಿಗೆ ಅಷ್ಟಾಗಿ ಬೆಂಬಲ ಸಿಗಲಿಕ್ಕಿಲ್ಲ. ಹಿರಿಯ ಸಂಪುಟ ಸಹದ್ಯೋಗಿಗಳಾದ ಜಿ ಪರಮೇಶ್ವರ್, ಎಚ್​​ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಅವರಂತಹ ಹಿರಿಯರ ವಿಶ್ವಾಸವನ್ನು ಗಳಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಸಿದ್ದರಾಮಯ್ಯ ನಿರ್ಗಮಿಸುತ್ತಾರೆಯೇ?

2013ರಲ್ಲಿ ಪರಮೇಶ್ವರ್‌ ಸೋಲಿಗೆ ಸಿದ್ದರಾಮಯ್ಯ ಮತ್ತು ಅವರ ಟೀಂ ಕಾರಣ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಆದರೆ ಈಗ ಡಿಕೆ ನಿಯಂತ್ರಿಸಲು ದಲಿತ ಸಿಎಂ ಮುನ್ನೆಲೆಗೆ ಬಿಟ್ಟು ಪರಮೇಶ್ವರ್‌ ಅವರನ್ನು ಸಿದ್ದರಾಮಯ್ಯ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇದು ಅವರ ಚಾಣಾಕ್ಷತನಕ್ಕೆ ಒಂದು ನಿದರ್ಶನ. ಇದೇ ಕೆಲಸವನ್ನು ಮಾಡಲು ಶಿವಕುಮಾರ್‌ ಅವರಿಗೂ ಅವಕಾಶವಿತ್ತು. ಬಳಸಿಕೊಳ್ಳಲಿಲ್ಲ ಅಷ್ಟೇ. ಶಾಸಕರ ವಿಶ್ವಾಸ ಇಲ್ಲದೆ ಮುಖ್ಯಮಂತ್ರಿ ಆಗುವುದು ಅಸಾಧ್ಯ. ಆದರೂ ಬಹುದಿನ ಆ ಹುದ್ದೆಯಲ್ಲಿ ಉಳಿಯುವುದು ಕಷ್ಟ. ಒಂದು ವೇಳೆ ರಾಹುಲ್‌ ಗಾಂಧಿ ಶಾಸಕರ ವಿಶ್ವಾಸವನ್ನು ಗಳಿಸಿಕೊಂಡು ಬನ್ನಿ ಎಂದರೆ ಶಿವಕುಮಾರ್‌ ಏನು ಮಾಡಿಯಾರು?

ಸದ್ಯದ ಮಾಹಿತಿಗಳ ಪ್ರಕಾರ ದಿಲ್ಲಿ ಮಟ್ಟದಲ್ಲಿ ಡಿಕೆ ಶಿವಕುಮಾರ್‌ ಪರ ಇರುವ ಏಕೈಕ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ. ಬಹುಮತ ಬಂದಾಗಲೇ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಸುರ್ಜೆವಾಲ ಪ್ರಯತ್ನಿಸಿದರು. ಆದರೆ ಸಿದ್ದರಾಮಯ್ಯ ಪಟ್ಟಿನ ಮುಂದೆ ಸುರ್ಜೆವಾಲ ವಿಫಲರಾದರು. ಕೆಸಿ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಿಸಿದರು. ನಂತರ ಶಿವಕುಮಾರ್‌ ಮತ್ತು ಸುರ್ಜೆವಾಲ ಮಾಧ್ಯಮಗಳಲ್ಲಿ ಅಧಿಕಾರ ಹಂಚಿಕೆಯಾಗಿದೆ ಎಂಬ ಸುದ್ದಿ ಪ್ರಕಟವಾಗುವಂತೆ ನೋಡಿಕೊಂಡರು. ಆಟ ಮುಂದುವರೆಯುತ್ತಿದೆ. ಅಂತಿಮವಾಗಿ ಸಿದ್ದರಾಮಯ್ಯ ನಿರ್ಗಮಿಸುತ್ತಾರೆಯೇ? ಶಿವಕುಮಾರ್‌ ಮುಖ್ಯಮಂತ್ರಿ ಆಗಲಿದ್ದಾರೆಯೇ? ಅಥವಾ ದಲಿತ ಹಿಂದುಳಿದ ವರ್ಗದ ಒಬ್ಬರನ್ನು ಸಿಎಂ ಹುದ್ದೆಗೆ ಆರಿಸಿ ಎಲ್ಲರ ಬಾಯಿ ಮುಚ್ಚಿಸುತ್ತಾರೆಯೇ? ಉತ್ತರಕ್ಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

Whats_app_banner