ಮೈಸೂರು ಸೋಪ್ಸ್‌ನ ನೂತನ ರಾಯಭಾರಿ ತಮನ್ನಾ ಭಾಟಿಯಾ; ಸರಿಯೋ ತಪ್ಪೋ? ಮಾರುಕಟ್ಟೆ ತಜ್ಞರು ಹೇಳುವುದೇನು?
ಮುಂಬೈ ಮೂಲದ ತಮನ್ನಾ ಭಾಟಿಯಾ ಅವರು ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಕೆಜಿಎಫ್ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಮೈಸೂರು ಒಡೆಯರ್ ಮನೆತನದ ಸಂಸದ ಯದುವೀರ್ ಒಡೆಯರ್ ನಟಿ ರಮ್ಯಾ ಅವರೂ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. (ವರದಿ: ಎಚ್.ಮಾರುತಿ)

ಬೆಂಗಳೂರು: ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ (ಕೆಎಸ್ ಡಿಎಲ್) ನ ನೂತನ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದಕ್ಕೆ ರಾಜಕೀಯ, ಕನ್ನಡ ಚಿತ್ರರಂಗ ಕನ್ನಡ ಹೋರಾಟಗಾರರು ಸೇರಿಂತೆ ವಿವಿಧ ವಲಯಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಮಾರುಕಟ್ಟೆ ತಜ್ಞರು ಅನೇಕ ವಿಷಯಗಳ ಆಧಾರದಲ್ಲಿ ತಮನ್ನಾ ಅವರನ್ನು ಆಯ್ಕೆ ಮಾಡಿರಬಹುದು ಎಂದು ಪ್ರತಿಪಾದಿಸುತ್ತಿದ್ದಾರೆ. ತಮನ್ನಾ ಅವರ ಜನಪ್ರಿಯತೆ, ಅವರ ಲಭ್ಯತೆ, ಅವರು ರಾಯಭಾರಿಯಾಗಿದ್ದ ಈ ಹಿಂದಿನ ಉತ್ಪನ್ನಗಳ ಯಶಸ್ಸು ಮತ್ತಿತರ ಅಂಶಗಳನ್ನು ಪರಿಗಣಿಸಲಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಎರಡು ವರ್ಷಗಳ ಅವಧಿಗೆ ಅವರಿಗೆ ರೂ.6.20 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮುಂಬೈ ಮೂಲದ ತಮನ್ನಾ ಭಾಟಿಯಾ ಅವರು ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಕೆಜಿಎಫ್ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಮೈಸೂರು ಒಡೆಯರ್ ಮನೆತನದ ಸಂಸದ ಯದುವೀರ್ ಒಡೆಯರ್, ನಟಿ ರಮ್ಯಾ ಅವರೂ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ಪ್ರಾಂತೀಯ ನಟಿಯರನ್ನು ಕೈಬಿಟ್ಟಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಪುನೀತ್ ರಾಜಕುಮಾರ್, ಡಾಲಿ ಧನಂಜಯ ಅವರಂತಹ ನಟರು ಉಚಿತವಾಗಿ ರಾಯಭಾರಿಗಳಾಗಿರುವುದನ್ನು ನೆನಪಿಸಿದ್ದಾರೆ.
ಈ ಎಲ್ಲ ಟೀಕೆ ಟಿಪ್ಪಣಿಗಳ ನಡುವೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಮನ್ನಾ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಾರುಕಟ್ಟೆ ತಜ್ಞರು ತಮ್ಮದೇ ಆದ ವಾದ ಸರಣಿಯನ್ನು ಮುಂದಿಡುತ್ತಾರೆ. ಬ್ರ್ಯಾಂಡ್ ಎಂದರೆ ಅದು ಧರ್ಮಕ್ಕೆ ನಡೆಸುವ ಉದ್ಯಮ ಅಲ್ಲ. ಅದು ವಾಣಿಜ್ಯ ವ್ಯವಹಾರಕ್ಕೆ ಸಂಬಂಧಪಟ್ಟಿರುತ್ತದೆ. ಸ್ಥಳೀಯ, ರಾಷ್ಟ್ರೀಯ ಅಥವಾ ಜಾಗತಿಕ ಮಟ್ಟದಲ್ಲಿ ಉತ್ಪನ್ನದ ಮಾರುಕಟ್ಟೆಯ ವಿಸ್ತಾರವನ್ನು ಗಮನದಲ್ಲಿಟ್ಟುಕೊಂಡೇ ರಾಯಭಾರಿಯನ್ನು ಆಯ್ಕೆ ಮಾಡಿರುತ್ತಾರೆ ಎನ್ನುತ್ತಾರೆ. ಗುಜರಾತ್‌ನ ಅನೇಕ ಉತ್ಪನ್ನಗಳು ಬಾಲಿವುಡ್ ನಟ ನಟಿಯರನ್ನು ರಾಯಭಾರಿಗಳನ್ನಾಗಿ ನೇಮಿಸಿಕೊಂಡು ತಮ್ಮ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಂಡಿವೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ಲಾಭ ಗಳಿಸುತ್ತಿವೆ.
ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಅಥವಾ ಪೂಜಾ ಹೆಗ್ಡೆ ಅವರು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಕನ್ನಡದವರೇ ಆದ ಅವರನ್ನೂ ಅಯ್ಕೆ ಮಾಡಬಹುದಾಗಿತ್ತು. ಕೆಎಸ್‌ಡಿಎಲ್ ಉತ್ಪನ್ನಕ್ಕೆ ಸಂಬಂಧಪಟ್ಟಂತೆ ತಮನ್ನಾ ಏನು ಮಾಡಬಲ್ಲರು? ರಾಜ್ಯಕ್ಕೆ ಆಗಮಿಸುವವರು ರಾಜ್ಯದ ಅಥವಾ ಸ್ಯಾಂಡಲ್ ವುಡ್‌ನ ಪರಂಪರೆಯನ್ನು ಹುಡುಕುತ್ತಾರೆ. ಬಾಲಿವುಡ್‌ನಲ್ಲೂ ಹೆಸರು ಮಾಡಿರುವ ಕನ್ನಡದ ತಾರೆಯರನ್ನೇ ಆಯ್ಕೆ ಮಾಡಿ ಮೈಸೂರು ಸ್ಯಾಂಡಲ್ ಸೋಪ್‌ನ ಪರಂಪರೆಯನ್ನು ಉಳಿಸಿ ಹೊಸ ಗ್ರಾಹಕರನ್ನು ಸೆಳೆಯಬಹುದಾಗಿತ್ತು ಎಂದು ಅಭಿಪ್ರಯಪಡುವವರೂ ಇದ್ದಾರೆ.
ಇಂದು ಬಹುಭಾಷಾ ಮತ್ತು ಓಟಿಟಿಯಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸ್ಥಳೀಯ ಪ್ರತಿಭೆಗಳೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಈಗ ಇಂದು ಹೆಸರು ಮಾಡಿದವರು ನಾಳೆ ಹೆಸರಿಲ್ಲದೆ ಹೋಗುತ್ತಾರೆ. ಅವರಿಗೆ ಮಾರುಕಟ್ಟೆಯೇ ಇಲ್ಲವಾಗಬಹುದು. ಹಾಗಾಗಿ ಈಗಾಗಲೇ ಹೆಸರು ಗಳಿಸಿರುವ ಪ್ರತಿಭಾವಂತರನ್ನೇ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಒಂದು ಉತ್ಪನ್ನವನ್ನು ಪ್ರಸಿದ್ಧಿಗೊಳಿಸಬೇಕೆಂದರೆ ಈಗಾಗಲೇ ಪ್ರಸಿದ್ಧಿ ಪಡೆದಿರುವವರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಬ್ರ್ಯಾಂಡ್ ಬೆಳೆದಂತೆಲ್ಲಾ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಕನ್ನಡೇತರ ರಾಯಭಾರಿಯನ್ನು ಆಯ್ಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಕನ್ನಡದ ಕ್ರಿಕೆಟ್ ಆಟಗಾರರು ಇದ್ದರೂ 2006 ರಲ್ಲಿ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಖ್ಯಾತ ಕ್ರಿಕೆಟ್ ಆಟಗಾರ ಎಂ ಎಸ್ ಧೋನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಪಾರಂಪರಿಕ ಉತ್ಪನ್ನಗಳ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಲು ಸ್ಥಳೀಯ ಪ್ರತಿಭಾವಂತರನ್ನೇ ಆಯ್ಕೆ ಮಾಡುವುದು ಒಳ್ಳೆಯದು. ಇದರಿಂದ ಉತ್ಪನ್ನ ಮತ್ತು ರಾಯಭಾರಿಯ ವ್ಯಕ್ತಿತ್ವ ಎರಡನ್ನೂ ಉಳಿಸಿ ಬೆಳೆಸಲು ಸಹಾಯವಾಗುತ್ತದೆ ಎಂದು ಮತ್ತೊಬ್ಬ ತಜ್ಞರು ಹೇಳುತ್ತಾರೆ.