Teachers day: ನಾಟಕಗಳ ಮೂಲಕ ವಿಜ್ಞಾನ ಪಾಠದ ಸಂತೋಷ: ಮೇಷ್ಟ್ರ ಪ್ರಯೋಗಕ್ಕೆ ಮಕ್ಕಳೆಲ್ಲಾ ಪಾಸ್
Science Lessons in Drama ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಕಲಿಕೆ ಬಲು ಸುಲಭ. ಏಕೆಂದರೆ ಅಲ್ಲಿ ರಂಗ ಚಟುವಟಿಕೆ ಮೂಲಕ ವಿಜ್ಞಾನ ಕಲಿಕೆ ಸಹಜವಾಗಿದೆ. ಅಲ್ಲದೇ ಹೊಸ ಪ್ರಯೋಗಗಳನ್ನು ಮಾಡಿರುವ ಶಿಕ್ಷಕ ಸಂತೋಷ್‌ಗುಡ್ಡಿಂಯಗಡಿ ಹಾಗೂ ಅವರೆಲ್ಲಾ ತಂಡ ಜನರ ಮೆಚ್ಚುಗೆಗೂ ಪಾತ್ರವಾಗಿದೆ.
ಮೈಸೂರು: ಅದು ಮೈಸೂರು ಜಿಲ್ಲೆ ನಂಜನಗೂಡು ನಗರದಿಂದ ಎಂಟು ಕಿ.ಮಿ ದೂರದಲ್ಲಿರುವ ಪುಟ್ಟ ಊರು ಹೆಗ್ಗಡಹಳ್ಳಿ. ಆ ಊರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಚಟುವಟಿಕೆಯ ಸದ್ದು ಕೇಳುತ್ತದೆ. ಅದೂ ವಿಜ್ಞಾನ ಭಾಷೆಯಲ್ಲಿ. ಇದರ ಪರಿಣಾಮ ಮಕ್ಕಳೆಲ್ಲಾ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣರೂ ಆಗುತ್ತಿದ್ದಾರೆ.
ಮಕ್ಕಳೆಲ್ಲಾ ಪೈಥಾಗೊರಸ್‌ನ ಪ್ರಮೇಯಗಳನ್ನು ಅರಳು ಹುರಿದಂತೆ ಹೇಳುತ್ತಾರೆ. ಅವುಗಳನ್ನು ಸುಲಭವಾಗಿ ಬಿಡಿಸುತ್ತಾರೆ. ಪೈಥಾಗೊರಸ್‌ನ ಪ್ರಮೇಯಗಳನ್ನು ಹೇಳಿಕೊಡಲು ಬಳಸಿದ್ದು ರಂಗಮಾರ್ಗವನ್ನು. ನಾಟಕದ ಮಾರ್ಗದಲ್ಲಿ ಅವುಗಳನ್ನು ತಿಳಿಸುವುದರಿಂದ ಕಲಿಕೆಯೂ ಸಹಜವಾಗಿದೆ. ಇದರ ಹಿಂದಿನ ರೂವಾರಿ ಪ್ರಯೋಗ ಶೀಲ ರಂಗ ಶಿಕ್ಷಕ ಸಂತೋಷ್ ಗುಡ್ಡಿಯಂಗಡಿ.
ಹನ್ನೊಂದು ವರ್ಷದಿಂದ ಇಂತಹ ಪ್ರಯೋಗಗಳುಇಲ್ಲಿ ನಡೆಯುತ್ತಲೇ ಇವೆ. ಮಕ್ಕಳು ತಮ್ಮದೇ ಯೂಟೂಬ್ ಚಾನೆಲ್ ಆರಂಭಿಸಿ ಇದನ್ನೆಲ್ಲಾ ಪ್ರಸಾರ ಮಾಡುತ್ತಾರೆ. ಕುಟುಂಬದವರು, ಸ್ನೇಹಿತರು, ಸಂಬಂಧಿಕರು ನೋಡುವಂತೆ ಮಾಡುತ್ತಾರೆ. ಇತರೆ ಶಾಲೆಗಳಿಗೂ ಮಾದರಿಯಾಗಿ ಹಲವು ಕಡೆ ಇಂತಹ ಚಟುವಟಿಕೆಗಳೂ ಶುರುವಾಗಿವೆ.
ಪ್ರಯೋಗ ಶೀಲ ಶಿಕ್ಷಕ
ಸಂತೋಷ್ ಗುಡ್ಡಿಯಂಗಡಿ ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಗುಡ್ಡಿಯಂಗಡಿಯವರು. ಅಲ್ಲಿಯೇ ಪಿಯುಸಿವರೆಗೂ ಶಿಕ್ಷಣ ಮುಗಿಸಿದವರು. ಆನಂತರ ರಂಗಭೂಮಿ ಚಟುವಟಿಕೆಯತ್ತ ಆಕರ್ಷಿತರಾಗಿ ಸಾಗರ ತಾಲ್ಲೂಕು ಹೆಗ್ಗೋಡಿನ ನೀನಾಸಂನತ್ತ ಆಕರ್ಷಿತರಾದವರು. ಅಲ್ಲಿ ಒಂದು ವರ್ಷ ರಂಗಶಿಕ್ಷಣ ಕೋರ್ಸ್ ಮುಗಿಸಿದರು. ಆನಂತರ ಮೂರೂವರೆ ವರ್ಷ ನೀನಾಸಂನ ತಿರುಗಾಟದಲ್ಲಿಯೇ ಕೆಲಸ ಕರ್ನಾಟಕದಾದ್ಯಂತ ಸುತ್ತಿದರು. ಕುಂದಾಪುರಕ್ಕೆ ವಾಪಾಸಾಗಿ ಭಂಡಾರಕರ್ ಶಿಕ್ಷಣ ಸಂಸ್ಥೆಯಲ್ಲಿ ರಂಗ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಕರ್ನಾಟಕ ಸರ್ಕಾರ ರಂಗ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ನಲವತ್ತೆರಡು ಮಂದಿ ಆಯ್ಕೆಯಾದರು. ಅದರಲ್ಲಿ ಗುಡ್ಡಿಯಂಗಡಿ ಕೂಡ ಒಬ್ಬರು. ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರೂವರೆ ವರ್ಷ ರಂಗ ಶಿಕ್ಷಕರಾಗಿದ್ದರು. ಆನಂತರ ಅದೇ ತಾಲ್ಲೂಕಿನ ಹೆಗ್ಗಡಹಳ್ಳಿಗೆ ವರ್ಗವಾಗಿ ಬಂದರು.
ಹೊಸತನದ ಶಿಕ್ಷಣ
ಸಂತೋಷ್ ಅವರು ಮಕ್ಕಳಿಗೆ ಹೊಸ ರೀತಿಯಲ್ಲಿ ಪಾಠ ಹೇಳಿಕೊಡಬೇಕು. ಅವರಿಗೆ ಹೇಳಿದ್ದು ಅರ್ಥವಾಗಬೇಕು. ಅದು ಮುಂದೆ ಅವರ ಬದುಕಿಗೂ ಗಟ್ಟಿ ಬುನಾದಿಯಾಗಬೇಕು ಎನ್ನುವ ಆಶಯ ಹೊಂದಿದವರು. ಮಕ್ಕಳಿಗೆ ರಂಗಚಟುವಟಿಕೆಯೂ ಆಯಿತು. ಅದು ಅವರಿಗೆ ಪಾಠವೂ ಆಯಿತು. ಅದರಂತೆಯೇ ರಂಗ ಚಟುವಟಿಕಗಳ ಮೂಲಕ ವಿಜ್ಞಾನ, ಗಣಿತದಂತಹ ಕಠಿಣ ವಿಷಯಗಳನ್ನು ಹೇಳಕೊಡತೊಡಗಿದರು. ನಾಟಕಗಳನ್ನು ರೂಪಿಸಿದರು. ಜೈವಿಕ ಇಂಧನ, ಪರಿಸರ, ಅಳಿವಿನಂಚಿನ ಪ್ರಾಣಿ ಪಕ್ಷಿಗಳು, ಇಂಗಾಲ, ಪ್ಲಾಸ್ಟಿಕ್ ದುಷ್ಪರಿಣಾಮ, ಜಾಗತಿಕ ತಾಪಮಾನ.. ಹೀಗೆ ಹಲವು ವಿಷಯಗಳು ರಂಗ ರೂಪ ಪಡೆದವು. ಅದರಲ್ಲಿ ಪೈಥಾಗೊರಸ್‌ನ ಪ್ರಮೇಯಗಳನ್ನಾಧರಿಸಿದ ನಾಟಕವೂ ಒಂದು. ಅದಕ್ಕೆ ಬೇಕಾದ ಪರಿಕರಗಳನ್ನು ಸಿದ್ದಪಡಿಸುವುದು. ಅದನ್ನು ಅಭಿನಯದ ಮೂಲಕ ಹೇಳಿಕೊಟ್ಟಾಗ ಮಕ್ಕಳಿಗೆ ಅರ್ಥ ಮಾಡಿಸಬಹುದು. ಇದರೊಟ್ಟಿಗೆ ದೇಶ ಹಾಗೂ ಹೊರ ದೇಶದ ವಿಜ್ಞಾನಿಗಳೊಂದಿಗೆ ನೇರ ಸಂವಾದವನ್ನು ಶಾಲೆಯಲ್ಲಿ ಆಯೋಜಿಸುತ್ತಾ ಬರಲಾಗಿದೆ. ಇದ ಕೂಡ ಮಕ್ಕಳಲ್ಲಿ ಮಾತನಾಡುವ ಭಯ ಹೋಗಲಾಡಿಸಿ ಪ್ರಶ್ನಿಸುವ ಮನೋಭಾವ ಬೆಳೆಸಿದೆ.
ಇದರ ಪರಿಣಾಮವಾಗಿ ಶಾಲೆಯ ಫಲಿತಾಂಶವೂ ಸುಧಾರಿಸಿದೆ. ಇಲ್ಲಿ ಓದಿದ ಮಕ್ಕಳು ಈಗ ಎಂಜಿನಿಯರ್, ಉಪನ್ಯಾಸಕರು, ವಾಣಿಜ್ಯ ಪದವೀಧರರಾಗಿ ಹಲವು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ತಮಗೆ ಸಿಕ್ಕ ವಿಭಿನ್ನ ಶಿಕ್ಷಣದ ಫಲ ವೃತ್ತಿ ಬದುಕಿನಲ್ಲಿ ಆಗುತ್ತಿರುವುದನ್ನು ಗಮನಿಸಿ ಸಂತಸ ವ್ಯಕ್ತಪಡಿಸುತ್ತಾರೆ.
ನಮ್ಮ ಸ್ಕೂಲ್ ಟಿವಿ
ಹೆಗ್ಗಡಹಳ್ಳಿ ಶಾಲೆಯಲ್ಲಿ ನಮ್ಮ ಸ್ಕೂಲ್ ಎನ್ನುವ ಯೂಟೂಬ್ ಚಾನೆಲ್ ಅನ್ನು ರೂಪಿಸಿ ಆ ಮೂಲಕ ಚಟುವಟಿಕೆ ರೂಪಿಸುತ್ತಾ ಬರಲಾಗುತ್ತಿದೆ. ಕೋವಿಡ್ ಅವಧಿಯಲ್ಲಂತೂ ಮಕ್ಕಳು ಶಿಕ್ಷಣ ಪಡೆಯಲು ಇದು ನೆರವಾಗಿದೆ. ನಮ್ಮ ಸ್ಕೂಲ್‌ನಲ್ಲಿ ಹೆಗ್ಗಡಹಳ್ಳಿ ಶಾಲೆಯ ಎಲ್ಲಾ ಚಟುವಟಿಕೆಗಳೂ ದಾಖಲಾಗಿವೆ. ಶಾಲೆಯಲ್ಲಿ ಮೈನಾ ರಂಗ ಬಳಗವನ್ನು ರೂಪಿಸಿ ಅದರಡಿ ಈ ಎಲ್ಲಾ ಚಟುವಟಿಕೆಗಳು ನಡೆಯುತ್ತಾ ಬಂದಿವೆ.
ರಂಗಭೂಮಿ ಹವ್ಯಾಸವೇ ಮುಂದೆ ವೃತ್ತಿಯೂ ಆಗಿ ಮುಂದುವರಿದಿದೆ. ನಾನು ಕರಾವಳಿ ಭಾಗದವನು. ನಂಜನಗೂಡು ಪ್ರದೇಶದಲ್ಲಿ ಉದ್ಯೋಗ ದೊರೆಯಿತು. ನಮ್ಮ ಮುಖ್ಯ ಶಿಕ್ಷಕರು, ಶಿಕ್ಷಕರು, ಇಲಾಖೆ ಅಧಿಕಾರಿಗಳು, ಗ್ರಾಮದವರ ಸಹಕಾರದಿಂದ ಪ್ರಯೋಗ ಮಾಡಲು ಸಾಧ್ಯವಾಯಿತು. ಇದರ ಫಲ ಮಕ್ಕಳ ಫಲಿತಾಂಶದಲ್ಲಿ ಬರೀ ಅಂಕದಲ್ಲಿ ಮಾತ್ರವಲ್ಲದೇ ಬದುಕಿನಲ್ಲೂ ಆಗಿರುವುದು ಸಂತಸದಾಯಕ. ಹೊಸ ಪ್ರಯೋಗಗಳಿಗೆ ತೆರೆದುಕೊಂಡು ಶಿಕ್ಷಣ ಪಡೆದ ಮಕ್ಕಳನ್ನೂ ಅಭಿನಂದಿಸಬೇಕು ಎನ್ನುತ್ತಾರೆ ಸಂತೋಷ್ ಗುಡ್ಡಿಯಂಗಡಿ.
ಸಚಿವರೇ ಹುಡುಕಿಕೊಂಡು ಬಂದರು
ಇಲ್ಲಿ ಹಲವಾರು ರಂಗಪ್ರಯೋಗಗಳನ್ನು ಮಾಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿದ, ಫಲಿತಾಂಶ ಹೆಚ್ಚಳಕ್ಕೂ ಕಾರಣವಾಗಿದ್ದರ ಕುರಿತು ಮಾಧ್ಯಮಗಳಲ್ಲಿ ಬಂದ ವರದಿ ಗಮನಿಸಿ ಮೂರು ವರ್ಷದ ಹಿಂದೆ ಅಗಿನ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಖುದ್ದು ಹೆಗ್ಗಡಹಳ್ಳಿ ಶಾಲೆಗೆ ಆಗಮಿಸಿದ್ದರು. ಚಟುವಟಿಕೆಗಳನ್ನು ಆಲಿಸಿ ಸಂತೋಷ್ ಗುಡ್ಡಿಯಂಗಡಿ ಅವರನ್ನು ಸನ್ಮಾನಿಸಿದ್ದರು. ಅಲ್ಲದೇ ಸಂತೋಷ್ ಅವರು ಚೆನ್ನಾಗಿ ಕೆಲಸ ಮಾಡಲು ಪ್ರೋತ್ಸಾಹಿಸುತ್ತಿದ್ದ ಮುಖ್ಯ ಶಿಕ್ಷಕರನ್ನು ಗೌರವಿಸಿದ್ದರು.
ಊರವರಿಗೂ ಹೆಮ್ಮೆ
ಹೆಗ್ಗಡಹಳ್ಳಿ ಶಾಲೆಗೆ ಹೋಗುವುದೆಂದರೆ ಮಕ್ಕಳಿಗೂ ಖುಷಿ. ಸಂತಸದಿಂದಲೇ ಶಾಲೆಗೆ ಹೋಗಿ ಇಂದು ಏನೋ ಕಲಿತುಕೊಂಡು ಬಂದೆವು ಎಂದು ಮಕ್ಕಳು ಆತ್ಮವಿಶ್ವಾಸದಿಂದ ಬಂದಾಗ ಪೋಷಕರಿಗೂ ಖುಷಿ. ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಿದ್ದ ಮಕ್ಕಳು ಶಾಲೆ ಕಡೆಗೆ ಮುಖ ಮಾಡಿದರೆ ಯಾವ ಪೋಷಕರಿಗೆ ಖುಷಿಯಾಗುವುದಿಲ್ಲ. ಈ ಬದಲಾವಣೆ ಕಂಡ ಪೋಷಕರಿಗೂ ಶಿಕ್ಷಕರ ಹೊಸತನದ ಪ್ರಯತ್ನಗಳ ಬಗ್ಗೆ ಅಭಿಮಾನ. ಊರಿನವರೆಲ್ಲರೂ ಹೆಮ್ಮೆಯಿಂದಲೇ ತಮ್ಮೂರ ಶಾಲೆಯ ಪ್ರಯೋಗ, ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ.
ಸಂತೋಷ್ ಮಾಸ್ಟ್ರು ಹಾಗೂ ಇತರರು ಮಕ್ಕಳನ್ನು ತಯಾರು ಮಾಡಲು ಬಗೆಬಗೆಯ ಪ್ರಯೋಗ ಮಾಡ್ತಾರೆ. ಅದರಲ್ಲಿ ರಂಗ ಚಟುವಟಿಕೆ, ಸಂವಾದ, ಪುಸ್ತಕ ಓದುವ ಹವ್ಯಾಸ ಬೆಳೆಸುವುದೂ ಸೇರಿ ಹಲವು ಸೇರಿವೆ. ನಮ್ಮ ಮಕ್ಕಳು ಇಲ್ಲಿ ಶಿಕ್ಷಣ ಪಡೆದು ಈಗ ಉದ್ಯೋಗವನ್ನೂ ಪಡೆದಿದ್ಧಾರೆ ಎಂದು ಪೋಷಕರು ಸಂತಸದಿಂದಲೇ ಹೇಳಿಕೊಂಡರು.
ವರ್ಗವಾದರು
ಹನ್ನೊಂದು ವರ್ಷ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಲಸ ಮಾಡಿದ ಸಂತೋಷ್ ಕೆಲ ದಿನಗಳ ಹಿಂದೆ ಇದೇ ತಾಲ್ಲೂಕಿನ ಸುತ್ತೂರು ಪಕ್ಕದ ಕುಪ್ಪರವಳ್ಳಿ ಸರ್ಕಾರಿ ಪ್ರೌಢಶಾಲೆಗೆ ವರ್ಗಗೊಂಡರು. ಊರವರಿಗೂ ಇಂತಹ ಶಿಕ್ಷಕರನ್ನು ಬಿಟ್ಟು ಕೊಡಲು ಮನಸಿಲ್ಲ. ಇಲಾಖೆ ಆದೇಶ ಪಾಲಿಸಬೇಕಲ್ಲ. ಅಲ್ಲಿನ ಮಕ್ಕಳಿಗೆ ಒಂದಷ್ಟು ಉಪಯೋಗ ಸಿಗಲಿ ಎಂದು ಮುಕ್ತ ಮನಸಿನಿಂದ ಒಪ್ಪಿದರು. ಆದರೆ ಬೀಳ್ಕೊಡದೇ ನೀವು ಇಲ್ಲಿಗೂ ಬಂದು ಹೋಗಬೇಕು ಎಂದೂ ಹೇಳಿದರು. ಸಂತೋಷ್ ವಾರಕ್ಕೊಮ್ಮೆಯಾದರೂ ಹೆಗ್ಗಡಹಳ್ಳಿ ಕಡೆಗೆ ಹೋಗಿ ಬರುತ್ತಾರೆ. ಮೇಷ್ಟ್ರು ಮಕ್ಕಳ ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ತಿಳಿದರೇ ಊರವರೇ ಅಭಿಮಾನ ಪಡುತ್ತಾರೆ ಎನ್ನುವುದಕ್ಕೆ ಸಂತೋಷ್ ಪ್ರಯೋಗಗಳೇ ಉದಾಹರಣೆ. ಕುಪ್ಪರವಳ್ಳಿ ಶಾಲಾ ಮಕ್ಕಳೂ ಈಗ ಸಂತೋಷ್ ಅವರ ಹೊಸ ಶೈಲಿ ಆಟ ಪಾಠಕ್ಕೆ ಅಣಿಯಾಗುತ್ತಿದ್ದಾರೆ.
=============