ಶಿಕ್ಷಕರೇ ಗಮನಿಸಿ, ಪ್ರಬಂಧ ಬರೆದು 1.5 ಲಕ್ಷ ರೂಗೂ ಹೆಚ್ಚು ಬಹುಮಾನ ಗೆಲ್ಲುವ ಅವಕಾಶ ನೀಡಿದೆ ಸದಾತನ ಟ್ರಸ್ಟ್, ನೋಂದಣಿಗೆ ಡಿ 31 ಕೊನೇ ದಿನ
Essay Contest: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಖುಷಿ ಸುದ್ದಿ ನೀಡಿದೆ ಸದಾತನ ಟ್ರಸ್ಟ್. ಪ್ರಬಂಧ ಬರೆದು ಕಳುಹಿಸಿ ಒಟ್ಟು 1.5 ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶ ಇದು. ನೋಂದಣಿಗೆ ಡಿ.31 ಕೊನೇ ದಿನ, ಪ್ರಬಂಧ ಕಳುಹಿಸಲು ಜನವರಿ 14 ಕೊನೇ ದಿನ. ಸ್ಪರ್ಧಾ ನಿಯಮ ಮತ್ತು ವಿವರ ಇಲ್ಲಿದೆ.
Essay Contest: ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಒಂದು ಖುಷಿ ಸುದ್ದಿ. ಪ್ರಬಂಧ ಬರೆದು ಕಳುಹಿಸಿ ಒಟ್ಟು 1.5 ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶ ಇದು. ಶಿಕ್ಷಕರಿಗಾಗಿಯೇ ಇಷ್ಟು ದೊಡ್ಡ ಪ್ರಮಾಣದ ಬಹುಮಾನಗಳನ್ನು ಇಟ್ಟು ಪ್ರಬಂಧ ಸ್ಪರ್ಧೆ ಏರ್ಪಡಿಸಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಡಿಸೆಂಬರ್ 31ರ ಒಳಗೆ ನೋಂದಣಿ ಮಾಡಿಸಿಕೊಳ್ಳಬೇಕು. 2025ರ ಜನವರಿ 14ರ ಒಳಗೆ ಪ್ರಬಂಧ ಬರೆದು ಕಳುಹಿಸಬೇಕು ಎಂದು ಸದಾತನ ಟ್ರಸ್ಟ್‌ನ ಟ್ರಸ್ಟಿ ಕೆ. ಎಸ್. ಉಪಾಧ್ಯಾಯ ತಿಳಿಸಿದ್ದಾರೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗಾಗಿ ಪ್ರಬಂಧ ಸ್ಪರ್ಧೆ; ಪ್ರಬಂಧ ವಿಷಯ ಮತ್ತು ನಿಬಂಧನೆಗಳು
ಶಿಕ್ಷಕರಲ್ಲಿ ಓದು ಮತ್ತು ಬರವಣಿಗೆಯ ಕೌಶಲವನ್ನು ಉತ್ತೇಜಿಸುವುದಕ್ಕಾಗಿ ‘ಸದಾತನ ಟ್ರಸ್ಟ್’ ರಾಜ್ಯಮಟ್ಟದ ಪ್ರಬಂಧಸ್ಪರ್ಧೆಯನ್ನು ಏರ್ಪಡಿಸಿದೆ. ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ‘ವರ್ತಮಾನದ ಸಮಸ್ಯೆಗಳಿಗೆ ಸನಾತನ ಧರ್ಮದಲ್ಲಿದೆ ಪರಿಹಾರ’ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯಬೇಕು. ಪ್ರಬಂಧವು 2500ರಿಂದ 3000 ಪದಗಳ ಮಿತಿಯಲ್ಲಿರಬೇಕು.
ಶಿಕ್ಷಕರು ಪ್ರಬಂಧವನ್ನು ಕೈ ಬರಹದಲ್ಲಿ ಬರೆದು ಅಥವಾ ಟೈಪ್ ಮಾಡಿ ಕೂಡ ಕಳುಹಿಸಬಹುದು. ಕೈಬರಹದಲ್ಲಿ ಬರೆದ ಪ್ರಬಂಧವಾದರೆ ಆ ಪ್ರಬಂಧದ ಮೂಲ ಪ್ರತಿಯನ್ನು (ಜೆರಾಕ್ಸ್ ಅಲ್ಲ) 2025ರ ಜನವರಿ 14ರ ಒಳಗೆ ‘ಸದಾತನ’, ಎಸ್.ಎಫ್.-1, 73/6, ‘ಶ್ರೀಲಕ್ಷ್ಮೀ ರೆಸಿಡೆನ್ಸಿ’, ದೇವನಾಥಾಚಾರ್ ಸ್ಟ್ರೀಟ್, ಚಾಮರಾಜಪೇಟೆ, ಬೆಂಗಳೂರು-560 018 ಈ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು. ನುಡಿ ಅಥವಾ ಯೂನಿಕೋಡ್‌ನಲ್ಲಿ ಟೈಪ್ ಮಾಡಿ ಕಳುಹಿಸುವುದಾದರೆ, 2025ರ ಜನವರಿ 14ರ ಒಳಗೆ ಟೈಪ್ ಮಾಡಿದ ಪ್ರಬಂಧ ಪ್ರತಿಯ ಡಾಕ್ ಫೈಲ್ ಮತ್ತು ಪಿಡಿಎಫ್ ಫೈಲ್‌ಗಳನ್ನು sadaatana2024@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು ಎಂದು ಸದಾತನ ಟ್ರಸ್ಟ್‌ನ ಟ್ರಸ್ಟಿ ಕೆ. ಎಸ್. ಉಪಾಧ್ಯಾಯ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧಾಕಾಂಕ್ಷಿಗಳು ಗಮನಿಸಬೇಕಾದ ವಿಷಯ
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರಬಂಧದೊಂದಿಗೆ ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಶಾಲೆಯ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದು ಕಳುಹಿಸಬೇಕು. ಹಾಗೂ ತಮ್ಮ ಶಾಲೆಯ ಗುರುತಿನ ಪತ್ರದ ನಕಲನ್ನು ಕಳುಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಶಿಕ್ಷಕರು 2024ರ ಡಿಸೆಂಬರ್ 31ರ ಒಳಗೆ 100 ರೂಪಾಯಿ ನೋಂದಣಿ ಶುಲ್ಕವನ್ನು ಪಾವತಿಸಿ ಹೆಸರು ನೋಂದಾಯಿಸಬೇಕು. ಶುಲ್ಕ ಪಾವತಿ ಮಾಡಿದ್ದರ ರಸೀದಿಯನ್ನು ಮತ್ತು ಶಿಕ್ಷಕರ ಶಾಲಾ ವಿಳಾಸವನ್ನು 7483681708 – ಈ ನಂಬರಿಗೆ ವಾಟ್ಸ್‌ಆಪ್‌ಗೆ ಕಳುಹಿಸಬೇಕು. ಸದಾತನ ಟ್ರಸ್ಟ್ ಪ್ರಬಂಧ ಬರೆಯುವುದಕ್ಕೆ ಬೇಕಾದ ಆಕರ ಗ್ರಂಥ 250 ರೂಪಾಯಿ ಮುಖಬೆಲೆಯ ‘ಸನಾತನ ಧರ್ಮ’ ಪುಸ್ತಕವನ್ನು ಉಚಿತವಾಗಿ ಕಳುಹಿಸಲಿದೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು 13 ಬಹುಮಾನಗಳನ್ನು ನೀಡಲು ನಿರ್ಧರಿಸಲಾಗಿದ್ದು, ಪ್ರಥಮ ಬಹುಮಾನ 21,000 ರೂ., ದ್ವಿತೀಯ ಬಹುಮಾನ 18,000 ರೂ., ತೃತೀಯ ಬಹುಮಾನ 15,000 ರೂಪಾಯಿ ಇದೆ. ಇದಲ್ಲದೆ, 10 ಶಿಕ್ಷಕರಿಗೆ ಮೆಚ್ಚುಗೆ ಬಹುಮಾನವಾಗಿ ತಲಾ 10,000 ರೂಪಾಯಿ ಸಿಗಲಿದೆ. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ಆಯೋಜಕರ ನಿರ್ಣಯವೇ ಅಂತಿಮ ಎಂದು ಬೆಂಗಳೂರಿನಲ್ಲಿರುವ ಸದಾತನ ಟ್ರಸ್ಟ್‌ನ ಟ್ರಸ್ಟಿ ಕೆ. ಎಸ್. ಉಪಾಧ್ಯಾಯ ತಿಳಿಸಿದ್ದಾರೆ.