ಬೆಂಗಳೂರಿನ ಐಷಾರಾಮಿ ವಿಲ್ಲಾದಲ್ಲಿ ಬಾಡಿಗೆದಾರರಿಗೆ ಕಿರುಕುಳ: ಬೀಗ ಹಾಕಿ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಐಷಾರಾಮಿ ವಿಲ್ಲಾದಲ್ಲಿ ಬಾಡಿಗೆದಾರರಿಗೆ ಕಿರುಕುಳ: ಬೀಗ ಹಾಕಿ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ

ಬೆಂಗಳೂರಿನ ಐಷಾರಾಮಿ ವಿಲ್ಲಾದಲ್ಲಿ ಬಾಡಿಗೆದಾರರಿಗೆ ಕಿರುಕುಳ: ಬೀಗ ಹಾಕಿ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ

ಬಾಡಿಗೆದಾರರಿಗೆ ಕಿರುಕುಳ ಕೊಟ್ಟು ಬೀಗ ಹಾಕಿ, ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ ಮನೆ ಓನರ್ ಬಗ್ಗೆ ಗೂಗಲ್ ಟೆಕ್ಕಿ ಒಬ್ಬರು ಎಕ್ಸ್‌ನಲ್ಲಿ ತಮಗಾದ ಭಯಾನಕ ಅನುಭವ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಐಷಾರಾಮಿ ವಿಲ್ಲಾದಲ್ಲಿ ಬಾಡಿಗೆದಾರರಿಗೆ ಕಿರುಕುಳ (ಪ್ರಾತಿನಿಧಿಕ ಚಿತ್ರ)
ಬೆಂಗಳೂರಿನ ಐಷಾರಾಮಿ ವಿಲ್ಲಾದಲ್ಲಿ ಬಾಡಿಗೆದಾರರಿಗೆ ಕಿರುಕುಳ (ಪ್ರಾತಿನಿಧಿಕ ಚಿತ್ರ)

ಬೆಂಗಳೂರಿನ ಐಷಾರಾಮಿ ವಿಲ್ಲಾದಲ್ಲಿ ಮನೆ ಓನರ್‌ನ ಕಿರುಕುಳಕ್ಕೆ ಸಿಲುಕಿ ತೊಂದರೆ ಅನುಭವಿಸಿದ ನಾಲ್ವರು ಟೆಕ್ಕಿಗಳು ತಮಗಾದ ಭಯಾನಕ ಅನುಭವವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ನೋವು ತೋಡಿಕೊಂಡಿದ್ದಾರೆ. ಪ್ರೆಸ್ಟೀಜ್ ಲ್ಯಾಂಗ್ಲಿ ಹಂತ 1 ರ ಹೃದಯಭಾಗದಲ್ಲಿ, ನಾಲ್ವರು ಟೆಕ್ಕಿಗಳು ವಿಲ್ಲಾ ಒಂದಕ್ಕೆ ಬಾಡಿಗೆಗೆ ಬಂದಿದ್ದು, ನಂತರ ಮನೆ ಓನರ್‌ನ ಕಿರುಕುಳಕ್ಕೆ ಸಿಲುಕಿ ಸಮಸ್ಯೆ ಅನುಭವಿಸಿದ್ದಾರೆ.

ಗೂಗಲ್ ಟೆಕ್ಕಿ ಪ್ರಿಯಾಂಶ್ ಅಗರ್ವಾಲ್ ಅವರ ಪ್ರಕಾರ, ವಿಲ್ಲಾ 101 ಅವರ ನೆಮ್ಮದಿಯ ತಾಣವಾಗಬೇಕಿತ್ತು. ಬಾಡಿಗೆ ವಿಲ್ಲಾಗೆ ಪ್ರವೇಶಿಸಿದ ಮೊದಲ ಆರು ತಿಂಗಳ ಕಾಲ ಎಲ್ಲವೂ ಚೆನ್ನಾಗಿತ್ತು. ತದನಂತರ, ಒಂದೊಂದೆ ಸಮಸ್ಯೆಗಳು ಆರಂಭವಾದವು. ವಿದ್ಯುತ್ ಬ್ಯಾಕಪ್, ಕಸ ಸಂಗ್ರಹಣೆ, ಜಿಮ್ ಮತ್ತು ಈಜುಕೊಳಕ್ಕೆ ಪ್ರವೇಶ ಸೇರಿದಂತೆ ಅಗತ್ಯ ಸೇವೆಗಳನ್ನು ಅಲ್ಲಿನ ಸೊಸೈಟಿಯು ಕಡಿತಗೊಳಿಸಲು ಪ್ರಾರಂಭಿಸಿತು ಎಂದು ಅಗರ್ವಾಲ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಒಂದೊಂದೇ ಸೇವೆಗಳನ್ನು ಅಲ್ಲಿನ ಸಿಬ್ಬಂದಿ ಕಡಿತಗೊಳಿಸಿದಾಗ, ಅವರಿಗೆ ವಿಲ್ಲಾ ಓನರ್ ವರ್ಷಗಳಿಂದ ನಿರ್ವಹಣಾ ವೆಚ್ಚವನ್ನು ಪಾವತಿಸಿರಲಿಲ್ಲ. ಹೊಸ ಬಾಡಿಗೆದಾರರು ಮನೆಗೆ ಬಂದಾಗ ಅವರಿಗೆ ಈ ವಿಚಾರ ಹೇಳಿರಲಿಲ್ಲ. ಹೀಗಾಗಿ ಟೆಕ್ಕಿ ಮತ್ತು ಗೆಳೆಯರಿಗೆ ಅದರ ಬಗ್ಗೆ ತಿಳಿದಿರಲಿಲ್ಲ.

ನಾವು ಪ್ರತಿ ತಿಂಗಳು ಓನರ್ ಲೇಡಿಗೆ ನಿರ್ವಹಣಾ ವೆಚ್ಚವನ್ನು ಪಾವತಿಸುತ್ತಿದ್ದೆವು. ಆದರೆ ಆಕೆ ಸೊಸೈಟಿಯೊಂದಿಗೆ ಕಾನೂನು ಹೋರಾಟ ಮಾಡುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ನಮಗೆ ಹೇಳಿದಳು. ಹೀಗಾಗಿ ಆಕೆಗೆ ಪ್ರತಿ ತಿಂಗಳೂ ವೆಚ್ಚವನ್ನು, ಬಾಡಿಗೆಯನ್ನು ಕೂಡ ನೀಡುತ್ತಿದ್ದೆವು. ಆದರೆ ಈ ಪ್ರಕರಣದ ಸಂಬಂಧ ಅಪ್‌ಡೇಟ್ ಕೇಳಿದಾಗ ಆಕೆ ಸರಿಯಾಗಿ ಉತ್ತರಿಸದೆ ತಪ್ಪಿಸುತ್ತಿದ್ದಳು. ನಂತರ ನಮಗೆ ಒಂದು ಕರೆ ಬಂದಿತು, ಅದರಲ್ಲಿ ಅದೇ ವಿಲ್ಲಾದ ಮಾಜಿ ಬಾಡಿಗೆದಾರರು ತಮಗಾದ ವಂಚನೆಯ ಬಗ್ಗೆ ಹೇಳಿಕೊಂಡರು. ಅವರ ಭದ್ರತಾ ಠೇವಣಿ ತಡೆ ಹಿಡಿದಿರುವುದು, ನಿಂದನೆ ಮತ್ತು ಕಿರುಕುಳದ ಸುಳ್ಳು ಆರೋಪಗಳನ್ನು ನಮ್ಮ ಮೇಲೆ ದಾಖಲಿಸಲಾಗಿತ್ತು ಎಂದು ಅವರು ಹೇಳಿದರು. ಹೀಗಾಗಿ ನಮಗೆ ನಿಜವಾಗಿಯೂ ಆಗ ಭಯವಾಗಲು ಆರಂಭಿಸಿತು. ಮನೆ ಓನರ್‌ನ ಈ ವಂಚನೆಯ ಬಗ್ಗೆ ನಮಗೆ ತಿಳಿದಿರಲಿಲ್ಲ. ಆದರೆ ಓನರ್ ನಂತರ ನಾವು ಬಿಟ್ಟು ಹೋಗುತ್ತೇವೆ ಎಂದರೂ ಕೇಳಲಿಲ್ಲ. ಗುತ್ತಿಗೆ ಮುಗಿಯುವವರೆಗೂ ಇರಬೇಕೆಂದು ಓನರ್ ಒತ್ತಾಯಿಸಿದರು. ಅಲ್ಲದೆ ಎಲ್ಲ ಅವಶ್ಯ ಸೇವೆಗಳನ್ನು ಕಡಿತಗೊಳಿಸಿದ ಆ ವಿಲ್ಲಾವನ್ನು ಬೇರೆ ಯಾರೂ ಬಾಡಿಗೆಗೆ ಪಡೆಯುವುದಿಲ್ಲ ಎಂದು ಅವಳಿಗೆ ತಿಳಿದಿತ್ತು, ಆದ್ದರಿಂದ ಬಾಡಿಗೆ ಪಡೆಯಲು ಅವಳು ನಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿದಳು ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದರಿಂದ ಬೇಸತ್ತ ಬಾಡಿಗೆದಾರ ಗೂಗಲ್ ಟೆಕ್ಕಿ ಪ್ರಿಯಾಂಶ್ ಅಗರ್ವಾಲ್, ಬಾಡಿಗೆ ಪಾವತಿಸುವುದನ್ನು ನಿಲ್ಲಿಸಿದರು ಮತ್ತು ಬದಲಿಗೆ ಠೇವಣಿಯಿಂದ ಬಾಕಿ ವಸೂಲಿ ಮಾಡಲು ಕೇಳಿದರು. ಆಗ ಮತ್ತಷ್ಟು ಸಮಸ್ಯೆ ಎದುರಾಯಿತು. ನಂತರ ಮನೆ ಓನರ್ ಮಹಿಳೆ ಬಂದು, ಮೊದಲು ಬೇಡಿಕೊಂಡಳು, ನಂತರ ನಿಂದನೆಯ ಮಾತುಗಳನ್ನು ಆಡಿದಳು. ಬಳಿಕ ಬಾಡಿಗೆದಾರರು ಪೊಲೀಸರನ್ನು ಕರೆಸಬೇಕಾಯಿತು. ಅದರಂತೆ ಅವಳು 45 ದಿನಗಳಲ್ಲಿ ಹೊಸ ಬಾಡಿಗೆದಾರನನ್ನು ಹುಡುಕಿ, ಹೊಸ ಠೇವಣಿಯನ್ನು ಸಂಗ್ರಹಿಸಿ, ಅವರ 5 ಲಕ್ಷವನ್ನು ಮರುಪಾವತಿಸುತ್ತಾಳೆ, ಅಥವಾ ಅದನ್ನು ಮರುಪಡೆಯುವವರೆಗೆ ಬಾಡಿಗೆ ಮುಕ್ತವಾಗಿ ಇರಬಹುದು ಎಂಬ ಒಪ್ಪಂದವಾಯಿತು. ಆದರೆ, ಮಹಿಳೆ ಹೊಸ ಬಾಡಿಗೆದಾರರನ್ನು ಹುಡುಕಲಿಲ್ಲ. 45 ದಿನಗಳ ಅವಧಿ ಮುಗಿದಾಗ, ಓನರ್ ಲೇಡಿ ಮತ್ತೆ ಬಂದರು, ಈ ಬಾರಿ ಆಕೆ ಬಾಡಿಗೆ ಪಾವತಿಸದಿದ್ದರೆ ಮಹಿಳಾ ಕಿರುಕುಳ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದರು. ನಂತರ ಪೊಲೀಸರನ್ನು ಕರೆಸಿದಾಗ, ಅಲ್ಲಿಯೂ ಮಹಿಳೆ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದಳು.

ಹೀಗಾಗಿ ಬಾಡಿಗೆದಾರರಾದ ನಾವು, ಕಾನೂನು ಬಲೆಗೆ ಸಿಲುಕುವ ಭಯದಿಂದ, ಸಾಕ್ಷ್ಯಗಳನ್ನು ಸಂಗ್ರಹಿಸಲು ತಮ್ಮ ವಿಲ್ಲಾದೊಳಗೆ ಸಿಸಿಟಿವಿ ಕ್ಯಾಮೆರಾವನ್ನು ಸ್ಥಾಪಿಸಿದೆವು. ಒಂದು ದಿನ ನಾವು ಮನೆಯಿಂದ ದೂರವಿದ್ದಾಗ, ಮನೆಯ ಮಾಲೀಕ ಮಹಿಳೆ ವಿಲ್ಲಾಗೆ ಪ್ರವೇಶಿಸಿ, ನಮ್ಮ ಅಡುಗೆಯವರಿಗೆ ಕಿರುಕುಳ ನೀಡಿದರು, ಮನೆಯ ಕೀಲಿಗಳನ್ನು ವಶಪಡಿಸಿಕೊಂಡರು ಮತ್ತು ಅವರನ್ನು ಲಾಕ್ ಮಾಡಿದರು ಎಂದು ಹೇಳಿದ್ದಾರೆ. ಆದರೆ ನಮ್ಮ ಎಲ್ಲ ವಸ್ತುಗಳು ಇನ್ನೂ ಮನೆಯ ಒಳಗೆ ಇದ್ದವು. ನಂತರ, ಈ ವಿಷಯವು ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿ, ಅಲ್ಲಿಯೂ ಸಹ, ಮಹಿಳೆ ಪ್ರಕರಣವನ್ನು ತಿರುಚಿ, ಕಥೆ ಸೃಷ್ಟಿಸಿದಳು. ಹೀಗಾಗಿ ನಾವು ಸಮಸ್ಯೆಗೆ ಸಿಲುಕಿದೆವು. ನಂತರ ಮನೆಯ ಓನರ್ ಠೇವಣಿಯ ಒಂದು ಭಾಗವನ್ನು ಮಾತ್ರ ಹಿಂದಿರುಗಿಸಿದಳು. ಹೀಗಾಗಿ ಬಾಡಿಗೆದಾರರಾದ ನಾವು ಅನಿವಾರ್ಯವಾಗಿ ಮರುದಿನ ಮನೆ ಖಾಲಿ ಮಾಡಬೇಕಾಯಿತು. ಈ ಕೆಟ್ಟ ಅನುಭವವು ನಮ್ಮ ಮಾನಸಿಕ ಆರೋಗ್ಯವನ್ನು ಹಾಳುಮಾಡಿತು. ನಾವು ಕೆಲಸದಿಂದ ಬಿಡುವು ತೆಗೆದುಕೊಂಡೆವು, ಆತಂಕ, ಪೊಲೀಸ್ ಕೇಸ್, ಸುಳ್ಳು ಪ್ರಕರಣಗಳ ಬೆದರಿಕೆಗಳನ್ನು ಎದುರಿಸಿದೆವು, ಇವೆಲ್ಲಕ್ಕೂ ಒಬ್ಬ ಅಪ್ರಾಮಾಣಿಕ ಮಾಲೀಕ ಕಾರಣ ಎಂದು ಪ್ರಿಯಾಂಶ್ ಪೋಸ್ಟ್ ಮಾಡಿದ್ದಾರೆ. ಜತೆಗೆ ಮನೆ ಬಾಡಿಗೆ ಪಡೆಯುವಾಗ ಈ ರೀತಿಯ ವಂಚನೆಗೆ ಸಿಲುಕಬೇಡಿ, ಎಚ್ಚರಿಕೆ ವಹಿಸಿ ಎಂದು ಅವರು ನೆನಪಿಸಿದ್ದಾರೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in