ಬೆಂಗಳೂರಲ್ಲಿ ಎಳನೀರು ದರ 60 ರೂ; 200 ಎಂಎಲ್‌ಗೆ ಅತಿಯಾಯಿತು ದರ, ನೀರು ಕುಡೀರಿ ಸಾಕು ಎಂದ ಡಾಕ್ಟರ್, ಬೆಲೆ ನಿಗದಿ ಮಾಫಿಯಾ ಬಗ್ಗೆ ಚರ್ಚೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಎಳನೀರು ದರ 60 ರೂ; 200 ಎಂಎಲ್‌ಗೆ ಅತಿಯಾಯಿತು ದರ, ನೀರು ಕುಡೀರಿ ಸಾಕು ಎಂದ ಡಾಕ್ಟರ್, ಬೆಲೆ ನಿಗದಿ ಮಾಫಿಯಾ ಬಗ್ಗೆ ಚರ್ಚೆ

ಬೆಂಗಳೂರಲ್ಲಿ ಎಳನೀರು ದರ 60 ರೂ; 200 ಎಂಎಲ್‌ಗೆ ಅತಿಯಾಯಿತು ದರ, ನೀರು ಕುಡೀರಿ ಸಾಕು ಎಂದ ಡಾಕ್ಟರ್, ಬೆಲೆ ನಿಗದಿ ಮಾಫಿಯಾ ಬಗ್ಗೆ ಚರ್ಚೆ

ಬೆಂಗಳೂರಲ್ಲಿ ಎಳನೀರು ದರ 60 ರೂಪಾಯಿ ತಲುಪಿದೆ. 200 ಎಂಎಲ್‌ಗೆ ಅತಿಯಾಯಿತು ದರ, ನೀರು ಕುಡೀರಿ ಸಾಕು ಎಂದು ಬೆಂಗಳೂರು ಮೂಲದ ಡಾಕ್ಟರ್ ಪ್ರತಿಕ್ರಿಯಿಸಿದ್ದು, ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಎಳನೀರು ಬೆಲೆ ನಿಗದಿ ಮಾಫಿಯಾ ಬಗ್ಗೆ ಚರ್ಚೆ ಬಿರುಸಾಗಿ ನಡೆದಿದೆ.

ಬೆಂಗಳೂರಲ್ಲಿ ಎಳನೀರು ದರ 60 ರೂಪಾಯಿ ತಲುಪಿದ್ದು, ಬೆಲೆ ನಿಗದಿ ಮಾಫಿಯಾ ಬಗ್ಗೆ ಸಾಮಾಜಿ ತಾಣದಲ್ಲಿ ಚರ್ಚೆ ನಡೆದಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಎಳನೀರು ದರ 60 ರೂಪಾಯಿ ತಲುಪಿದ್ದು, ಬೆಲೆ ನಿಗದಿ ಮಾಫಿಯಾ ಬಗ್ಗೆ ಸಾಮಾಜಿ ತಾಣದಲ್ಲಿ ಚರ್ಚೆ ನಡೆದಿದೆ. (ಸಾಂಕೇತಿಕ ಚಿತ್ರ) (Pexels)

ಬೆಂಗಳೂರು ಸುತ್ತಮುತ್ತ ಸುಡುಬಿಸಲು ಜನರನ್ನು ಕಂಗೆಡುವಂತೆ ಮಾಡಿದೆ. ಎಳನೀರು ಕುಡಿದು ದಾಹ, ಆಯಾಸ ತೀರಿಸಿಕೊಳ್ಳೋಣ ಅಂದರೆ ಗಗನಮುಖಿಯಾಗಿದೆ ಎಳನೀರು ದರ. ಹೌದು, ಎಳನೀರು ದರ 60 ರೂಪಾಯಿ ದಾಟಿದೆ. ಬಹುತೇಕರು ಎಳನೀರು ಕುಡಿಯಲು ಬಯಸುತ್ತಾರಾದರೂ, ಅದರ ದರ ನೋಡಿ ಬಡ ಮಧ್ಯಮ ವರ್ಗದವರು ದೂರ ಸರಿದುಬಿಡುತ್ತಾರೆ. ಈ ಬೇಸಿಗೆಯಲ್ಲಂತೂ ಬೆಂಗಳೂರು ಮಾತ್ರ ಅಲ್ಲ, ಬಹುತೇಕ ಎಲ್ಲ ಕಡೆ ಎಳನೀರು ದರ 50 ರೂಪಾಯಿ ಗಡಿ ದಾಟಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲಕಾರಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಎಂದರೆ ಡಾಕ್ಟರ್ ಒಬ್ಬರು ಮಾಡಿದ ಕಾಮೆಂಟ್, ಎಳನೀರು ದರ ನಿಗದಿ ಮಾಫಿಯಾದ ಚರ್ಚೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದೆ.

ಎಳನೀರು ದರ ಅತಿಯಾಯಿತು, ನೀರು ಕುಡೀರಿ ಸಾಕು ಎಂದ ಡಾಕ್ಟರ್

ಎಳನೀರು ದರ ಅತಿಯಾಗಿ ಏರಿಕೆಯಾಗುತ್ತಿರುವ ವಿಚಾರ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬೆಂಗಳೂರಲ್ಲಿ ಎಳನೀರು ದರ ದುಬಾರಿಯಾಗಿದೆ ಎಂಬ ವಿಚಾರವೂ ಪ್ರಸ್ತಾಪವಾಗಿತ್ತು. ಈ ಚರ್ಚೆಯಲ್ಲಿ ಭಾಗಿಯಾದ ಬೆಂಗಳೂರು ಮೂಲದ ಕಾರ್ಡಿಯೋಲಜಿಸ್ಟ್ ಡಾ ದೀಪಕ್ ಕೃಷ್ಣಮೂರ್ತಿ, ಚರ್ಚೆಯ ಕಾವು ಇನ್ನಷ್ಟು ಹೆಚ್ಚಾಗುವಂತೆ ಮಾಡಿದರು. ಎಳನೀರು ದರ ಅತಿಯಾಯಿತು. ಹಾಗಾಗಿ ಎಳನೀರು ಬಿಟ್ಟು ನೀರು ಕುಡಿದರೆ ಸಾಕು. ಅದು ಶರೀರವನ್ನು ತಂಪಾಗಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಅವರ ಕಾಮೆಂಟ್‌ಗೆ 100ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ.

ಎಕ್ಸ್ ಬಳಕೆದಾರ ಮಹೇಶ್ ಅಯ್ಯರ್ ಎಂಬುವವರು ಎಳನೀರು ದರದ ವಿಚಾರ ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು, ಎಳನೀರು ಮಾಫಿಯಾ ಬೆಂಗಳೂರಿನಲ್ಲಿ ಎಲ್ಲ ಕಡೆ ಎಳನೀರು ದರ 60 ರೂಪಾಯಿ ಎಂದು ನಿಗದಿ ಮಾಡಿದೆ. 200 ಎಂಎಲ್‌ ಎಳನೀರು ಇದ್ದರೂ ಅದಕ್ಕೆ 60 ರೂಪಾಯಿ ದರ ನೀಡಬೇಕಾದ ಪರಿಸ್ಥಿತಿ ಇದೆ. ಬೆಂಗಳೂರು ಬಿಟ್ಟು ಹೊರಗೆ ಹೋದರೆ ಪ್ರದೇಶಕ್ಕೆ ಅನುಗುಣವಾಗಿ ಎಳನೀರು ದರ ನಿಗದಿಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಎಳನೀರು ದರ 100 ರೂಪಾಯಿ ಆಗಿದೆ!

ಎಕ್ಸ್ ತಾಣದಲ್ಲಿರುವ ಎಳನೀರು ದರದ ಚರ್ಚೆಯ ಜಾಡು ಹಿಡಿದು ಕಾಮೆಂಟ್‌ಗಳನ್ನು ಗಮನಿಸುತ್ತ ಹೋದರೆ, ಅನೇಕ ಬಳಕೆದಾರರು ಕೆಲವೆಡೆ ಎಳನೀರು ದರ 100 ರೂಪಾಯಿ ಆಗಿದೆ ಎಂಬ ವಿಚಾರವೂ ಪ್ರಸ್ತಾಪವಾಗಿದೆ. ಮಹೇಶ್ ಅಯ್ಯರ್ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಡಾ ಕೃಷ್ಣಮೂರ್ತಿ, ನಿಮ್ಮ ಮನೆ ಸಮೀಪ ಅಥವಾ ತೋಟದಲ್ಲಿ ತೆಂಗಿನ ಮರ ಇದ್ದರೆ ಎಳನೀರು ಕುಡಿಯಿರಿ. ಇಲ್ಲದೇ ಇದ್ದರೆ ಎಳನೀರಿಗಾಗಿ ಹಣ ವ್ಯಯಿಸಬೇಡಿ. ಬಿಸಿಲಿನ ತಾಪದಿಂದ ಶರೀರವನ್ನು ತಂಪಾಗಿಸಲು ನೀರು ಕುಡಿದರೆ ಸಾಕು ಎಂದು ಹೇಳಿದ್ದಾರೆ.

ಡಾಕ್ಟರ್ ಕೃಷ್ಣಮೂರ್ತಿ ಅವರ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀರು ಮತ್ತು ಎಳನೀರನ್ನು ಯಾವ ರೀತಿ ತುಲನೆ ಮಾಡ್ತೀರಿ ಎಂದು ಕೆಲವರು ಕೇಳಿದ್ದಾರೆ. ದೆಹಲಿಯ ಬಳಕೆದಾರರೊಬ್ಬರು, ಆಸಕ್ತಿದಾಯಕ ವಿಚಾರ, ಎಳನೀರಿನಲ್ಲಿ ಹೆಚ್ಚುವರಿ ಪೌಷ್ಟಿಕಾಂಶ, ಖನಿಜಾಂಶಗಳು ಇರಲ್ವ, ಇಲ್ಲಿ ದೆಹಲಿಯಲ್ಲಿ ಎಳನೀರು ದರ 70- 75 ರೂಪಾಯಿ ಇದೆ ಎಂದು ಬರೆದಿದ್ದಾರೆ. ಇದಕ್ಕೆ ಡಾಕ್ಟರ್ ಪ್ರತಿಕ್ರಿಯಿಸಿದ್ದು, ಒಂದು ಬಾಳೆ ಹಣ್ಣು ಮತ್ತು ನೀರು ಕುಡಿದರೆ. ಎಳನೀರಿಗೆ ವ್ಯಯಿಸುವ ಶೇಕಡ 10ರ ವೆಚ್ಚದಲ್ಲಿ ಸರಿಹೋಗುತ್ತದೆ ಎಂದು ಹೇಳಿದ್ದಾರೆ.

ಇನ್ನೂ ಕೆಲವು ಬಳಕೆದಾರರು ತಮ್ಮದೇ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಲ್ಲಿ ಈ ಬಾರಿ ಸುಡುಬಿಸಿಲು, ಬಿರು ಬೇಸಿಗೆ. ನಿತ್ಯವೂ ಎಳನೀರು ಕುಡಿಯುವ ಕಾರಣ ಶರೀರವನ್ನು ತಂಪಾಗಿ ಇಟ್ಟುಕೊಂಡಿದ್ಧೇನೆ. ನೀರು ಕುಡಿದಾಗ ಈ ರೀತಿ ಪರಿಣಾಮ ಕಂಡುಬಂದಿಲ್ಲ ಡಾಕ್ಟರ್ ಎಂದು ಹೇಳಿದ್ಧಾರೆ. ಇದಕ್ಕೆ ಬೆಂಗಳೂರು ಡಾಕ್ಟರ್ ಕೃಷ್ಣಮೂರ್ತಿ ಅವರು ಪ್ರತಿಕ್ರಿಯಿಸಿದ್ದು, ನೀವು ಒಮ್ಮೆ ಇಎನ್‌ಟಿ ಸ್ಪೆಷಲಿಸ್ಟ್ ಅನ್ನು ಕಾಣುವುದು ಒಳ್ಳೆಯದು ಎಂದಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner