ಸಂಚಾರ ಪೊಲೀಸರ ಅಮಾನವೀಯತೆಯ ಹಿಂದಿದೆ ವರ್ಗಾವಣೆ ದಂಧೆಯ ಕರಾಳ ಮುಖ!; ರಾಜೀವ ಹೆಗಡೆ ಬರಹ
ಮಂಡ್ಯದಲ್ಲಿನ ಘಟನೆಗೆ ಮೂಲ ಕಾರಣವಾಗಿದ್ದು ಸಂಚಾರ ಪೊಲೀಸರ ದಂಡ ವಸೂಲಿ ಕಾರ್ಯಕ್ರಮ ಎನ್ನುವುದನ್ನು ಮರೆಯಬೇಡಿ. ಎಲ್ಲದಕ್ಕೂ ಮಿಗಿಲಾಗಿ, ಸಂಚಾರ ಪೊಲೀಸರ ಅಮಾನವೀಯತೆಯ ಹಿಂದಿದೆ ವರ್ಗಾವಣೆ ದಂಧೆಯ ಕರಾಳ ಮುಖ ಎನ್ನುವುದೂ ವಾಸ್ತವ. (ಬರಹ- ರಾಜೀವ ಹೆಗಡೆ, ಬೆಂಗಳೂರು)

ಕರ್ನಾಟಕ ಸರ್ಕಾರದ ಲೂಟಿ ಕಾರ್ಯಕ್ರಮಕ್ಕೆ ಮಂಡ್ಯದಲ್ಲಿ ಹಸುಗೂಸೊಂದು ಪ್ರಾಣ ಕಳೆದುಕೊಂಡಿದೆ. ನಾವಿದಕ್ಕೆ ಸಂಚಾರ ಪೊಲೀಸರನ್ನು ಬೈದು ಕೋಪ ತಣಿಸಿಕೊಳ್ಳುತ್ತಿದ್ದೇವೆ. ನಮ್ಮ ಆಕ್ರೋಶವನ್ನು ಶಮನಗೊಳಿಸುವ ಔಷಧಿಯನ್ನು ನಮ್ಮ ಘನ ಸರ್ಕಾರ ಸಿದ್ಧಪಡಿಸಿಕೊಂಡು ಕುಳಿತಿದೆ. ಹೀಗಾಗಿ ಮಾನವೀಯತೆ ಇಲ್ಲದ ಮೂವರು ಎಎಸ್‌ಐಗಳನ್ನು ಅಮಾನತು ಮಾಡಿ, ನಮಗೆ ಚೆಂದದ ಟೋಪಿಯನ್ನು ಹಾಕಿ ಮತ್ತೆ ಲೂಟಿ ಕಾರ್ಯಕ್ರಮ ಮುಂದುವರಿಸುತ್ತಾರೆ. ಆದರೆ ಇಂತಹ ಅಮಾನೀಯ ಘಟನೆಗಳಿಗೆ ಮೂಲ ಕಾರಣ ಹುಡುಕುವ ಪ್ರಯತ್ನವನ್ನೇ ಮಾಡುವುದಿಲ್ಲ. ಆದರೆ ಪ್ರಜ್ಞಾವಂತರೆನಿಸಿಕೊಂಡವರು ಕೂಡ ಸರ್ಕಾರದ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದರೆ ಕಷ್ಟವಾದೀತು. ಮಂಡ್ಯದ ಹೃದಯ ವಿದ್ರಾವಕ ಘಟನೆಯ ಜತೆಗೆ ಒಮ್ಮೆ ಇಡೀ ರಾಜ್ಯವನ್ನು ನೆನಪಿಸಿಕೊಳ್ಳಿ ಹಾಗೂ ಕಳೆದೊಂದು ದಶಕಗಳ ವಿವಿಧ ಘಟನೆಯನ್ನು ಒಮ್ಮೆ ಅವಲೋಕಿಸಿ. ಆಗ ಸರ್ಕಾರದ ಬಣ್ಣ-ಬಣ್ಣದ ಎಷ್ಟು ಟೋಪಿ ನಮ್ಮ ತಲೆಯ ಮೇಲಿದೆ ಎನ್ನುವುದು ಗೊತ್ತಾಗುತ್ತದೆ.
ಮಂಡ್ಯದಲ್ಲಿನ ಘಟನೆಗೆ ಮೂಲ ಕಾರಣವಾಗಿದ್ದು ಸಂಚಾರ ಪೊಲೀಸರ ದಂಡ ವಸೂಲಿ ಕಾರ್ಯಕ್ರಮ ಎನ್ನುವುದನ್ನು ಮರೆಯಬೇಡಿ. ನಾನು ಗಮನಿಸಿದಂತೆ ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡ ಪ್ರತಿಯೊಬ್ಬ ಪೊಲೀಸ್ ಮಹಾನಿರ್ದೇಶಕರು ಒಂದು ಆದೇಶ ಹೊರಡಿಸಿದ್ದಾರೆ. ಅದರ ಪ್ರಕಾರ ʼಜನಸಾಮಾನ್ಯರ ಸಂಚಾರಕ್ಕೆ ಅಡ್ಡಿಯಾಗಿ ಸಂಚಾರ ಪೊಲೀಸರು ದಂಡ ವಸೂಲಿ ಮಾಡಬಾರದು ಹಾಗೂ ಸುಖಾಸುಮ್ಮನೇ ವಾಹನಗಳನ್ನು ಅಡ್ಡ ಹಾಕಿ ನಿಲ್ಲಿಸಿ ಕಾಟ ಕೊಡಬಾರದುʼ ಎನ್ನುವುದು ಆ ಸುತ್ತೋಲೆಗಳ ಪ್ರಮುಖಾಂಶವಾಗಿದೆ.
ಈ ರಾಜ್ಯದ ಯಾವುದಾದರೊಂದು ಸಂಚಾರ ಪೊಲೀಸ್ ಠಾಣೆಯಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೆ ನಾವು ಖುಷಿ ಪಡಬಹುದಿತ್ತು. ಪೊಲೀಸ್ ವಿಭಾಗದ ಮುಖ್ಯಸ್ಥರ ಆದೇಶವನ್ನೇ ಅವರ ಸಹೋದ್ಯೋಗಿಗಳು ಪಾಲಿಸುತ್ತಿಲ್ಲ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಇರಲೇಬೇಕು. ಏಕೆಂದರೆ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಆದೇಶಕ್ಕಿಂತ ದೊಡ್ಡ ನಿಯಮವಿರಲು ಸಾಧ್ಯವಿಲ್ಲ. ಪೊಲೀಸ್ ಮಹಾನಿರ್ದೇಶಕರ ಆದೇಶವನ್ನು ಮೀರಿಸುವ ಶಕ್ತಿ ಈ ರಾಜ್ಯದಲ್ಲಿರಬೇಕು ಅಥವಾ ಅದೇ ಇಲಾಖೆಯಿಂದ ಇನ್ನೊಂದು ಮೌಖಿಕ ಸೂಚನೆ ಬಂದಿರಬೇಕು. ಇವೆರಡನ್ನು ಬಿಟ್ಟು ಬೇರೆ ಸಾಧ್ಯತೆಗಳಿಗೆ ಅವಕಾಶವೇ ಇಲ್ಲ.
ನಿನ್ನೆ ಮಂಡ್ಯದಲ್ಲಿ ನೋಡಿದ ಘಟನೆಗೆ ಸಂಬಂಧಿಸಿದ ಸಂಚಾರ ಪೊಲೀಸರ ಹಿಮ್ಮೇಳ ಹಾಗೂ ಮುಮ್ಮೇಳವು ರಾಜ್ಯಾದ್ಯಂತ ಏಕರೂಪದಲ್ಲ ಕಾರ್ಯನಿರ್ವಹಿಸುತ್ತಿದೆ. ರಸ್ತೆ ಸುರಕ್ಷತಾ ಅಭಿಯಾನ ಮಾಡುವ ಸಂಚಾರ ಪೊಲೀಸರು, ಅಕ್ಷರಶಃ ಯಮಕಿಂಕರರಾಗುತ್ತಿದ್ದಾರೆ. ಇದು ಕಳೆದೊಂದು ದಶಕದಿಂದ ಅತಿಯಾಗಿಯೇ ನಡೆದುಕೊಂಡು ಬರುತ್ತಿದೆ.
ಕೆಲ ವರ್ಷಗಳ ಹಿಂದೆ ಚಿತ್ರದುರ್ಗ-ಶಿರಾ ನಡುವಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ಹಣ ವಸೂಲಿ ಶುರು ಮಾಡಿದ್ದರು. ಒಂದು ಬದಿಯಲ್ಲಿನ ಮೂರು ಪಥಗಳಲ್ಲಿ ಒಂದನ್ನು ಬಂದ್ ಮಾಡಿಕೊಂಡು ರಸ್ತೆಗೆ ಅಡ್ಡ ಬಂದು ವೇಗದಲ್ಲಿ ಚಲಿಸುತ್ತಿದ್ದ ವಾಹನಗಳನ್ನು ಅಡ್ಡ ಹಾಕುತ್ತಿದ್ದರು. ಇದನ್ನು ನಾನು ಬರೆದು ದೂರು ಕೊಟ್ಟಾಗ, ಪೋಸ್ಟ್ ಡಿಲೀಟ್ ಮಾಡುವಂತೆ ಬೆದರಿಕೆಗಳು ಬಂದಿದ್ದವು. ಇದಾದ ಕೆಲವೇ ವರ್ಷಗಳಲ್ಲಿ ಕೋವಿಡ್ ಅವಧಿಯಲ್ಲಿ ಶಿರಸಿ-ಸಿದ್ದಾಪುರ ರಸ್ತೆಯಲ್ಲಿಯೂ ಇದೇ ರೀತಿ ಮಧ್ಯ ರಸ್ತೆಗೆ ಓಡಿ ಬಂದು ವಾಹನಗಳನ್ನು ಅಡ್ಡ ಹಾಕುತ್ತಿದ್ದರು. ಒಮ್ಮೆ ನಾನೇ ಪೊಲೀಸರನ್ನೇ ಅಡ್ಡ ಹಾಕಿ, ಕಾರವಾರ ಎಸ್‌ಪಿಗೆ ದೂರು ನೀಡಿದ ಬಳಿಕ ನಮ್ಮ ರಸ್ತೆಯಲ್ಲಿ ಆ ಸಮಸ್ಯೆ ಕಡಿಮೆಯಾಗಿತ್ತು. ಜನಾಕ್ರೋಶ ಹೆಚ್ಚಾದಾಗ ಮಾತ್ರ ಇಂತಹ ವಸೂಲಿಗೆ ಕಡಿವಾಣ ಹಾಕುತ್ತಿದ್ದರು. ಹಾಗಂದ ಮಾತ್ರಕ್ಕೆ ರಾಜ್ಯದ ಉಳಿದೆಡೆ ಈ ವಸೂಲಿ ನಿಂತಿದೆಯೆಂದಲ್ಲ. ನಾನೇ ಖುದ್ದಾಗಿ ಇಂತಹ ಅವ್ಯವಸ್ಥೆಗಳ ವಿರುದ್ಧ ಹತ್ತಾರು ದೂರುಗಳನ್ನು ನೀಡಿದ್ದೇನೆ. ಸಾವಿರಾರು ಜನರು ಈ ಕೆಲಸವನ್ನು ಮಾಡಿರಬಹುದು. ಖುದ್ದಾಗಿ ಪೊಲೀಸ್ ಮಹಾ ನಿರ್ದೇಶಕರಿಂದ ಆದೇಶ ಬಂದರೂ ಸರಿಯಾಗಿಲ್ಲ ಎಂದಾದರೆ ನಿಖರವಾದ ಕಾರಣ ಬೇರೆಯೇ ಇರುತ್ತದೆ.
ಈ ರಾಜ್ಯವನ್ನು ಎರಡು ಪ್ರಮುಖ ವಿಚಾರಗಳು ಕಾಡುತ್ತಿವೆ. ಬಡ ಹಾಗೂ ಮಧ್ಯಮ ವರ್ಗದ ಜನರನ್ನು ತಿಗಣೆಗಳ ರೀತಿ ಇವು ರಕ್ತ ಹೀರುತ್ತಿವೆ. ರಾಜ್ಯ ಸರ್ಕಾರದ ಅಲಿಖಿತ ಟಾರ್ಗೆಟ್ ಹಾಗೂ ವರ್ಗಾವಣೆಯು ಸಾರ್ವಜನಿಕರ ಬಹುತೇಕ ಸಮಸ್ಯೆಗೆ ಕಾರಣವಾಗಿದೆ. ಇದೇ ಕಾರಣದಿಂದ ಹೈಕೋರ್ಟ್, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರ ಆದೇಶಗಳು ಈ ಅಲಿಖಿತ ವ್ಯವಸ್ಥೆಯ ಮುಂದೆ ನಗಣ್ಯವಾಗಿವೆ. ಟಾರ್ಗೆಟ್ ಹಾಗೂ ವರ್ಗಾವಣೆಯ ಭಾಗವಾಗಿರುವ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮಾನವೀಯತೆ ಬಿಟ್ಟು ವರ್ತಿಸುವಂಥ ಸ್ಥಿತಿ ನಿರ್ಮಾಣ ಮಾಡಿದೆ.
ವರ್ಗಾವಣೆ & ಟಾರ್ಗೆಟ್
2014ರ ಚುನಾವಣೆಯ ನಂತರ ಈ ರಾಜ್ಯದಲ್ಲಿನ ಬಹುತೇಕ ಆಯಕಟ್ಟಿನ ಹುದ್ದೆಗಳಿಗೆ ಹರಾಜು ಪ್ರಕ್ರಿಯೆ ಶುರುವಾಗಿದೆ. ಮೊದಲೆಲ್ಲ ಅತ್ಯಂತ ಪ್ರಭಾವಿ ಹುದ್ದೆಗಳ ವರ್ಗಾವಣೆ ದಂಧೆ ನಡೆಯುತ್ತಿತ್ತು. ಆದರೆ ಕಳೆದು ಆರೇಳು ವರ್ಷಗಳಿಂದ ಬಿಕರಿಯಾಗದ ಆಯಕಟ್ಟಿನ ಹುದ್ದೆಗಳು ತೀರಾ ಕಡಿಮೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ ಅದೆಷ್ಟೋ ವರದಿಗಳು ಮಾಧ್ಯಮದಲ್ಲಿ ಪ್ರಕಟವಾಗಿವೆ ಹಾಗೂ ವಿಧಾನಸಭೆಯಲ್ಲಿ ಬಹಿರಂಗವಾಗಿಯೇ ಚರ್ಚೆಯಾಗಿವೆ. ಮಾಧ್ಯಮ ಹಾಗೂ ವಿಧಾನಸಭೆಯಲ್ಲಿ ವರ್ಗಾವಣೆಯ ದರಪಟ್ಟಿ ಪ್ರಕಟವಾಗಿದೆ. ಹೂಡಿಕೆ ಮಾಡಿ ಹೋಗುವ ಪ್ರತಿಯೊಬ್ಬ ಅಧಿಕಾರಿಯು ಲಾಭವನ್ನು ಹೆಕ್ಕುವ ಕಾಯಕಕ್ಕೆ ಮುಂದಾಗುವುದು ಸಹಜ.
ವರ್ಗಾವಣೆಗೆ ಮಾಡಿರುವ ಹೂಡಿಕೆಯನ್ನು ಹಿಂಪಡೆಯುವುದು ಹೇಗೆ ಎನ್ನುವ ಲೆಕ್ಕಾಚಾರದಲ್ಲಿರುವಾಗಲೇ ಆಡಳಿತ ವ್ಯವಸ್ಥೆಯಿಂದ ಅಲಿಖಿತ ಟಾರ್ಗೆಟ್ ಬರುತ್ತದೆ. ಮಾಸಿಕವಾಗಿ ಎಷ್ಟು ಮದ್ಯ ಮಾರಾಟ ಮಾಡಬೇಕು? ಎಷ್ಟು ದಂಡ ವಸೂಲಿ ಮಾಡಬೇಕು? ಎಷ್ಟು ತೆರಿಗೆ ಸಂಗ್ರಹಿಸಬೇಕು......? ಇಂತಹ ಹತ್ತಾರು ಪಟ್ಟಿಗಳು ಅಧಿಕಾರಿಗಳ ಕೈ ಸೇರುತ್ತವೆ. ಈ ಅಲಿಖಿತ ಟಾರ್ಗೆಟ್‌ಗೆ ಚುಕ್ತಾ ಮಾಡಬೇಕಿರುವ ಒಂದಿಷ್ಟು ಲೆಕ್ಕಗಳು ಸೇರಿಕೊಳ್ಳುತ್ತವೆ. ಬುಡದಿಂದ ತುದಿಯವರೆಗೆ ಸಲ್ಲಿಕೆ ಆಗಬೇಕಿರುವ ಮಾಸಿಕ ಕಪ್ಪ ಕಾಣಿಕೆ, ಹೂಡಿಕೆಯಲ್ಲಿ ಹಿಂಪಡೆಯುವ ಹಣವು ಅಲಿಖಿತ ಟಾರ್ಗೆಟ್‌ಗೆ ಹೆಚ್ಚುವರಿ ಸೇರ್ಪಡೆಯಾಗುತ್ತದೆ.
ಇಂತಹ ಹೆಚ್ಚುವರಿ ಸಂಗ್ರಹದ ಒತ್ತಡಗಳು ಬಂದಾಗ ಅಧಿಕಾರಿಗಳು ಜನಸಾಮಾನ್ಯರ ಪಾಲಿಗೆ ತಿಗಣೆಗಳಾಗುತ್ತಾರೆ. ಹೆಚ್ಚುವರಿ ಹಣವು ನಾವು ಕಟ್ಟಬೇಕಿರುವ ಅಧಿಕೃತ ತೆರಿಗೆ, ದಂಡದಲ್ಲಿ ಬರುವುದಿಲ್ಲ. ಆಗ ಹೊಸ ಲೆಕ್ಕಾಚಾರಗಳು ಶುರು ಮಾಡಬೇಕಾಗುತ್ತದೆ. ಈ ಬಗ್ಗೆ ಇಲಾಖಾವಾರು ವಿವರಗಳನ್ನು ಕೊಡುತ್ತಿದ್ದರೆ, ಒಂದು ಪಿಎಚ್‌ಡಿ ಗ್ರಂಥ ಬರೆಯಬಹುದು. ಆದರೆ ಸಂಚಾರ ಪೊಲೀಸರಿಗೆ ಸೀಮಿತವಾಗಿ ಹೆಚ್ಚುವರಿ ಹಣ ಸಂಗ್ರಹದ ಮಾರ್ಗ ಹೇಗಿರುತ್ತದೆ ಎನ್ನುವುದನ್ನು ನೋಡೋಣ. ನಾನು ಕೆಳಗೆ ಉಲ್ಲೇಖಿಸಿದ ಪ್ರತಿ ಅಂಶವು ನಿಮ್ಮ ಗಮನಕ್ಕೆ ಬಂದಿರುತ್ತದೆ.
1) ರಸ್ತೆಗಳ ಮಧ್ಯೆ ತಪಾಸಣೆಗೆಂದು ಹೆಚ್ಚುವರಿ ಬ್ಯಾರಿಕೇಡ್‌ಗಳು ಬರುತ್ತವೆ.
2) ಕಳ್ಳರಂತೆ ಮರಗಳ ಹಿಂದೆಯಿಂದ ಓಡಿಬಂದು ವಾಹನವನ್ನು ಅಡ್ಡಗಟ್ಟುತ್ತಾರೆ.
3) ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ೧೦೦ ಕಿ.ಮೀ ಎಂದಿದ್ದರೂ ಸ್ಥಳೀಯವಾಗಿರುವ ʼಟಾರ್ಗೆಟ್ʼ ಗಿರಾಕಿಗಳು ತಮ್ಮ ವಸೂಲಿಗೆ ತಕ್ಕಂತೆ ಬದಲಾಯಿಸಿಕೊಂಡು ಹೊಸ ಬೋರ್ಡ್ ಹಾಕಿಸುತ್ತಾರೆ.
4) ನೀವು ಸಂಚರಿಸುವ ಚತುಷ್ಪಥದಲ್ಲಿ ೧೦೦ ಕಿ.ಮೀ ವೇಗದಲ್ಲಿ ಚಲಿಸಬಹುದು ಎಂದು ಸಂಚಾರ ವಿಭಾಗದ ಎಡಿಜಿಪಿಯೇ ಆದೇಶ ಹೊರಡಿಸಿರುತ್ತಾರೆ. ಆದರೆ ಮಾರ್ಗ ಮಧ್ಯೆ ಸಣ್ಣದೊಂದು ಬೋರ್ಡ್ ಹಾಕಿಕೊಂಡು, ಅದಾದ ಅರ್ಧ ಕಿ.ಮೀ ದೂರದಲ್ಲಿ ಸ್ಪೀಡ್ ಗನ್ ಕ್ಯಾಮೆರಾ ಇರುವ ತಪಾಸಣಾ ವಾಹನ ರಣಹದ್ದಿನಂತೆ ಕಾಯುತ್ತಿರುತ್ತದೆ.
5) ಮೇಲ್ನೋಟಕ್ಕೆ ಸಂಚಾರ ನಿಯಮ ಉಲ್ಲಂಘಿಸಿದ್ದು ಕಂಡರೆ ಮಾತ್ರ ವಾಹನ ನಿಲ್ಲಿಸಬೇಕು ಎನ್ನುವ ನಿಯಮವಿದ್ದರೂ, ರಸ್ತೆಯಲ್ಲಿ ಹೋಗುವ ಪ್ರತಿ ಗಾಡಿಯನ್ನು ಅಡ್ಡ ಹಾಕುತ್ತಾರೆ.
6) ಹೊರ ಜಿಲ್ಲೆ ಅಥವಾ ಬೇರೆ ಆರ್‌ಟಿಒಗೆ ಸೇರಿದ ಪ್ರತಿಯೊಂದು ವಾಹನವನ್ನು ಅಡ್ಡಗಟ್ಟುತ್ತಾರೆ.
7) ಹೈವೆಯಲ್ಲಿ ವಾಹನಗಳನ್ನು ಅಡ್ಡ ಹಾಕಲು ಸಾಧ್ಯವಿಲ್ಲವೆಂದು ಟೋಲ್ ಪ್ಲಾಝಾ ಪ್ರದೇಶದಲ್ಲಿ ಠಿಕಾಣಿ ಹೂಡಿರುತ್ತಾರೆ.
ಇಂತಹ ಇನ್ನೂ ಹತ್ತು ರೀತಿಯ ಉದಾಹರಣೆಗಳು ನಿಮ್ಮ ಬಳಿ ಇರಬಹುದು ಅಥವಾ ಸಂಚಾರ ಪೊಲೀಸರು ಮಾಡುತ್ತಿರಬಹುದು. ಇದರಿಂದ ಸಾಮಾನ್ಯ ಜನರಿಗೆ ಸಮಸ್ಯೆ ಆಗುತ್ತಿದೆ ಎನ್ನುವುದು ಆಡಳಿತ ವ್ಯವಸ್ಥೆಯ ಪ್ರತಿಯೊಂದು ವಿಭಾಗಕ್ಕೂ ತಿಳಿದಿದೆ. ಆದರೆ ಈ ಅವ್ಯವಸ್ಥೆಯಲ್ಲಿ ಬಹುತೇಕರು ಪಾಲುದಾರರಾಗಿದ್ದಾರೆ. ಹೀಗಾಗಿ ಜನರ ಕಣ್ಣಿಗೆ ಮಣ್ಣೆರಚಲು ಒಂದೆರಡು ಅಮಾನತು ಮಾಡಿ ಕೈ ತೊಳೆದುಕೊಳ್ಳುತ್ತಾರೆ. ವ್ಯವಸ್ಥೆಯನ್ನು ಸುಧಾರಿಸುವ ಮಾತನ್ನೇ ಆಡುವುದಿಲ್ಲ. ಒಂದೊಮ್ಮೆ ಅಂತಹ ಕೆಲಸ ಮಾಡಿದರೆ ʼಟಾರ್ಗೆಟ್ʼಗೆ ಸಮಸ್ಯೆ ಆಗಬಹುದು ಎನ್ನುವ ದೂರಾಲೋಚನೆ ಇರುತ್ತದೆ. ಈ ಬಗ್ಗೆ ಆಕ್ರೋಶ ಹುಟ್ಟಬೇಕಿದ್ದರೆ, ಅದು ಖಂಡಿತವಾಗಿಯೂ ಕೆಳಹಂತದ ವ್ಯವಸ್ಥೆಯ ಮೇಲಾಗಬಾರದು. ಇದಕ್ಕೆ ಕಾರಣವಾಗಿರುವ ವಿಧಾನಸೌಧದಲ್ಲಿನ ಪ್ರಭಾವಿಗಳ ಮೇಲೆ ಆಕ್ರೋಶ ಹೊರಹಾಕಬೇಕು.
ಅಂದರೆ ಇಂತಹ ವಸೂಲಿಗಳಿಗೆ ಮೂಲ ಕಾರಣವೇ ವರ್ಗಾವಣೆಯಲ್ಲಿನ ದರಪಟ್ಟಿ ಹಾಗೂ ಲೆಕ್ಕದ ಹೊರಗಿನ ಟಾರ್ಗೆಟ್. ಇವೆರಡನ್ನೂ ವ್ಯವಸ್ಥೆಯಿಂದ ಕಡಿಮೆ ಮಾಡಿದಷ್ಟು ಜನ ಸಾಮಾನ್ಯರ ರಕ್ತ ಹೀರುವಿಕೆ ಕಾರ್ಯಕ್ರಮದಲ್ಲಿ ಇಳಿಕೆ ಕಾಣಬಹುದು. ಮೇಲ್ನೋಟಕ್ಕೆ ನಾವು ನೆಲದಲ್ಲಿ ಕೆಲಸ ಮಾಡುವ ಕೆಳ ಹಂತದ ಅಧಿಕಾರಿಗಳ ಮೇಲೆ ಕೂಗಾಡಬಹುದು. ಆದರೆ ಇದಕ್ಕೆ ನಿಜವಾದ ಕಾರಣೀಕರ್ತರು ವಿಧಾನಸೌಧದಲ್ಲಿ ಬೆಚ್ಚಗೆ ಕುಳಿತಿದ್ದಾರೆ. ವಿಪರ್ಯಾಸವೆಂದರೆ ಸಂಚಾರ ಪೊಲೀಸರ ಇದ್ಯಾವುದೇ ನಿಯಮ ಪರಿಶೀಲನೆ ಕಾಳಜಿಯು ಈ ವಿಧಾನಸೌಧದ ಸುತ್ತಮುತ್ತ ನಡೆಯುವುದಿಲ್ಲ.
ವಿಶೇಷ ಉಲ್ಲೇಖ: ಅಂದ್ಹಾಗೆ ಈ ರೀತಿ ದಂಡ ವಸೂಲಿ ಹಾಗೂ ತಪಾಸಣೆಯನ್ನು ರಾಜ್ಯದ ಎಲ್ಲ ಭಾಗಗಳಲ್ಲಿ ಮಾಡುವ ಧೈರ್ಯವನ್ನು ಸಂಚಾರ ಪೊಲೀಸರು ಹೊಂದಿಲ್ಲ. ಕೆಲವು ನಿರ್ದಿಷ್ಟ ಸಮುದಾಯದ ಜನರಿರುವ ಜಂಕ್ಷನ್ ಹಾಗೂ ರಸ್ತೆಗಳ ಕಡೆ ತಲೆ ಹಾಕುವ ಉಸಾಬರಿಗೂ ಹೋಗುವುದಿಲ್ಲ. ಏಕೆಂದರೆ ಅವರ ವಿರುದ್ಧ ಕ್ರಮಕೈಗೊಂಡರೆ, ಠಾಣೆಗೆ ಬೆಂಕಿ ಹಚ್ಚಬಹುದು ಎನ್ನುವ ಭಯವಿರುವ ಹಾಗಿದೆ.
ಇನ್ನೊಂದು ಅಪಾಯಕಾರಿ ಅಭ್ಯಾಸ
ರಾಜ್ಯದ ಬಹುತೇಕ ಜಿಲ್ಲೆಗಳ ಹೆದ್ದಾರಿಗಳಲ್ಲಿ ಸಂಚಾರಿ ಪೊಲೀಸರ ಒಂದು ಅಭ್ಯಾಸ ನಿಮ್ಮ ಗಮನಕ್ಕೂ ಬಂದಿರಬಹುದು. ಚತುಷ್ಪಥ ಸೇರಿ ದ್ವಿಪಥ ರಸ್ತೆಗಳ ಮಧ್ಯೆ ಬ್ಯಾರಿಕೇಡ್‌ಗಳನ್ನು ಹಾಕಿರುತ್ತಾರೆ. ನಾನು ಕಾಯಂ ಆಗಿ ಪ್ರಯಾಣಿಸುವ ಚಿತ್ರದುರ್ಗ-ಶಿವಮೊಗ್ಗ-ಸಾಗರ ರಸ್ತೆಗಳಲ್ಲಂತೂ ಲೆಕ್ಕದ ಹೊರಗೆ ಈ ಬ್ಯಾರಿಕೇಡ್‌ಗಳಿವೆ. ತಿರುವು ರಸ್ತೆಗಳಲ್ಲೂ ಇದ್ದಕ್ಕಿದ್ದಂತೆ ಈ ಬ್ಯಾರಿಕೇಡ್‌ಗಳು ಪ್ರತ್ಯಕ್ಷವಾಗುತ್ತವೆ. ಪೊಲೀಸರನ್ನು ಈ ಬಗ್ಗೆ ಕೇಳಿದಾಗ, ಅವರಿಂದ ಬಂದ ಉತ್ತರ ಮಜವಾಗಿತ್ತು. ʼಸವಾರರು ವೇಗದ ಮಿತಿ ಮೀರಿ ವಾಹನ ಓಡಿಸುತ್ತಾರೆ. ಹೀಗಾಗಿ ಬ್ಯಾರಿಕೇಡ್ ಹಾಕುವುದು ಅನಿವಾರ್ಯ ಎನ್ನುತ್ತಾರೆʼ. ಆದರೆ ಈ ಬ್ಯಾರಿಕೇಡ್‌ಗಳಿಂದಲ ಪ್ರತಿನಿತ್ಯ ಹ್ತಾರು ಅಪಘಾತಗಳಾಗುತ್ತಿವೆ. ಸುರಕ್ಷಿತ ರಸ್ತೆಗಾಗಿ ವೈಜ್ಞಾನಿಕ ಹಂಪ್ಸ್‌ಗಳನ್ನು ಅಳವಡಿಸುವ ಬದಲಿಗೆ, ತಾತ್ಕಾಲಿಕ ಬ್ಯಾರಿಕೇಡ್‌ಗಳೇ ಕಾಯಂ ಆಗುತ್ತಿವೆ. ಈ ಅವೈಜ್ಞಾನಿಕ ವ್ಯವಸ್ಥೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರತಿಯೊಂದು ಸಮಸ್ಯೆ ಪರಿಹಾರಕ್ಕೆ ರಕ್ತ ಬೀಳಬೇಕು ಎನ್ನುವ ದುರ್ಬುದ್ಧಿ ಸರ್ಕಾರಕ್ಕೆ ಆದಷ್ಟು ಬೇಗ ಹೋಗಲಿ.
ವಿಶೇಷ ಮನವಿ: ಮಂಡ್ಯದಲ್ಲಿ ನಡೆದಿರುವ ಘಟನೆಯನ್ನು ನೆನಸಿಕೊಂಡೆ ಮೈ ಉರಿಯುತ್ತದೆ. ಆದರೆ ಪೊಲೀಸರಿಗೆ ಅಂತಹ ಅವಕಾಶ ಸೃಷ್ಟಿಯಾಗದಂಥ ರೀತಿಯಲ್ಲೂ ನಾವು ನಡೆದುಕೊಳ್ಳಲು ಪ್ರಯತ್ನಿಸಬೇಕು. ಈ ಅವ್ಯವಸ್ಥೆಗೆ ತೆರೆ ಎಳೆಯಲು ನಿಯಮ ಪಾಲನೆ ಕೂಡ ಒಂದು ಮಾರ್ಗವಾಗಿದೆ. ಸಂಚಾರ ನಿಯಮಗಳನ್ನು ಪಾಲಿಸಿ ಸಾಗಿದರೆ, ಯಾವ ಪೊಲೀಸರಿಂದ ಏನೂ ಮಾಡಲಾಗದು. ನಾವು ಆ ವಿಚಾರದಲ್ಲಿ ನಿಖರತೆ ಹೊಂದಿದಾಗ, ಇಂತಹ ಭ್ರಷ್ಟರನ್ನು ಅಷ್ಟೇ ಗಟ್ಟಿಯಾಗಿ ಪ್ರಶ್ನಿಸಲು ಕೂಡ ಸಾಧ್ಯವಾಗುತ್ತದೆ.
ಬರಹ- ರಾಜೀವ ಹೆಗಡೆ, ಬೆಂಗಳೂರು