ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹ
ಕನ್ನಡ ಸುದ್ದಿ  /  ಕರ್ನಾಟಕ  /  ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹ

ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹ

ತೆರಿಗೆ ಹಂಚಿಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅನುದಾನ ಕಡಿತವೂ ಸೇರಿದಂತೆ ನೆಲ-ಜಲ-ಭಾಷೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಎಸಗುತ್ತಿದೆ

ಮುಖ್ಯಮಂತ್ರಿ ಸಿದ್ಧರಾಮಯ್ಯ
ಮುಖ್ಯಮಂತ್ರಿ ಸಿದ್ಧರಾಮಯ್ಯ (ಸಂಗ್ರಹ ಚಿತ್ರ - PTI)

ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ದ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ. ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‍ ಅವರೇ ನನಗೆ ತಿಳಿಸಿದ್ದಾರೆ ಎಂದು ಸಾವಂತ್ ಅವರು ಇಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರ ಕರ್ನಾಟಕದ ಹಿತಾಸಕ್ತಿ ಮೇಲಿನ ಇನ್ನೊಂದು ಪ್ರಹಾರವಾಗಿದೆ. 2018ರಲ್ಲಿ ಮಹದಾಯಿ ಜಲವಿವಾದ ನ್ಯಾಯಮಂಡಳಿ 13.42 ಟಿಎಂಸಿ ನೀರನ್ನು ನಮ್ಮ ರಾಜ್ಯಕ್ಕೆ ನಿಗದಿಪಡಿಸಿ ಐತೀರ್ಪು ನೀಡಿದ್ದರೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಯೋಜನೆಯ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಪ್ರದೇಶದ ಜನತೆಯ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ದಗೊಂಡಿದ್ದು, ಗೋವಾದ ಬಿಜೆಪಿ ಸರ್ಕಾರದ ಜೊತೆ ಷಾಮೀಲಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ.

ರಾಜ್ಯದ ಬಿಜೆಪಿ ನಾಯಕರಾಗಲಿ, ಕನ್ನಡಿಗರಿಂದಲೇ ಆರಿಸಿ ಹೋಗಿರುವ ಬಿಜೆಪಿ ಮತ್ತು ಜೆಡಿಎಸ್ ಸಂಸದರಾಗಲಿ ಈ ಅನ್ಯಾಯದ ವಿರುದ್ದ ದನಿ ಎತ್ತಲಾಗದಷ್ಟು ನಿರ್ವಿರ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಕರ್ನಾಟಕದ ಜನತೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದಲೇ ಮಹದಾಯಿ ಯೋಜನೆಗೆ ಪರಿಸರ ಖಾತೆಯ ಅನುಮತಿಯನ್ನು ನಿರಾಕರಿಸಿರುವುದು ಸ್ಪಷ್ಟವಾಗಿದೆ.

ತೆರಿಗೆ ಹಂಚಿಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅನುದಾನ ಕಡಿತವೂ ಸೇರಿದಂತೆ ನೆಲ-ಜಲ-ಭಾಷೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆ ವಿರುದ್ಧ ನಾಡಿನ ಸಮಸ್ತ ಕನ್ನಡಿಗರನ್ನು ಜೊತೆಯಲ್ಲಿ ಕಟ್ಟಿಕೊಂಡು ಹೋರಾಟ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in