ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರ್ಯಾಂಡ್ ಅಂಬಾಸಿಡರ್ ನೇಮಕ ಅಗತ್ಯವೇ? ವಾಸ್ತವ ಸಂಗತಿ ಏನು?: ಕೃಷ್ಣ ಭಟ್ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರ್ಯಾಂಡ್ ಅಂಬಾಸಿಡರ್ ನೇಮಕ ಅಗತ್ಯವೇ? ವಾಸ್ತವ ಸಂಗತಿ ಏನು?: ಕೃಷ್ಣ ಭಟ್ ಬರಹ

ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರ್ಯಾಂಡ್ ಅಂಬಾಸಿಡರ್ ನೇಮಕ ಅಗತ್ಯವೇ? ವಾಸ್ತವ ಸಂಗತಿ ಏನು?: ಕೃಷ್ಣ ಭಟ್ ಬರಹ

ಮೈಸೂರು ಸ್ಯಾಂಡಲ್ ಸೋಪ್‌ಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವ ಸಂಗತಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಕೆಎಸ್‌ಡಿಎಲ್‌ ಬ್ರ್ಯಾಂಡ್ ಅಂಬಾಸಿಡರ್ ನೇಮಕದ ವಿಷಯದಲ್ಲಿ ಅಸಲಿ ಸಂಗತಿ ಏನಿದೆ? ಈ ಬಗ್ಗೆ ಕೃಷ್ಣ ಭಟ್ ಬರಹ ಇಲ್ಲಿದೆ.

ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರ್ಯಾಂಡ್ ಅಂಬಾಸಿಡರ್
ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರ್ಯಾಂಡ್ ಅಂಬಾಸಿಡರ್ (Krishna Bhat Facebook)

ಕೆಎಸ್‌ಡಿಎಲ್‌ಗೆ ಬ್ರ್ಯಾಂಡ್ ಅಂಬಾಸಿಡರ್ ನೇಮಕದ ವಿಷಯದಲ್ಲಿ ಎರಡು ಅಭಿಪ್ರಾಯಗಳೂ ವ್ಯಕ್ತವಾಗಿವೆ. ಆ ಎರಡೂ ಅಭಿಪ್ರಾಯಗಳು ಅವರವರ ನೆಲೆಯಲ್ಲಿ ಸರಿಯೇ. ಆದರೆ, ವಾಸ್ತವವನ್ನು ಗಮನಿಸಿದರೆ ಸ್ವಲ್ಪ ಬೇರೆ ಚಿತ್ರಣ ಸಿಗುತ್ತದೆ. ಸರ್ಕಾರ ಹಾಗೂ ಸಚಿವರು ಹೇಳುವ ಪ್ರಕಾರ ಕೆಎಸ್‌ಡಿಎಲ್‌ ಭಾರಿ ಪ್ರಗತಿ ಸಾಧಿಸುತ್ತಿದೆ ಎಂದು! ವಾಸ್ತವ ಏನು? ನಾವು ಕೆಎಸ್‌ಡಿಎಲ್ ಅನ್ನು ಖಾಸಗಿ ಕಂಪನಿಗಳ ಜೊತೆಗೆ ಹೋಲಿಸಿ ನೋಡಿದಾಗ ಕೆಎಸ್‌ಡಿಎಲ್ ಎಲ್ಲಿದೆ? FMCG ವಿಭಾಗದಲ್ಲಿ HUL ದೇಶದ ದೊಡ್ಡ ಕಂಪನಿ. ಅದರ ವಿವಿಧ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಡವ್ ಸೋಪ್‌ನಿಂದ ವಿಮ್ ಲಿಕ್ವಿಡ್‌ವರೆಗೆ ಎಲ್ಲವೂ ಸಿಗುತ್ತವೆ.

ಕೆಎಸ್‌ಡಿಎಲ್ 2022-23 ರಲ್ಲಿ 182 ಕೋಟಿ ರೂ. ಆದಾಯ ಬಂದಿದ್ದರೆ, 2023-24 ರಲ್ಲಿ 362 ಕೋಟಿ ರೂ. ಆದಾಯ ಬಂದಿದೆ. ಅಂದರೆ, ಆದಾಯ ದುಪ್ಪಟ್ಟಾಗಿದೆ. ಅಂದರೆ, ಮಾರಾಟವೂ ದುಪ್ಪಟ್ಟಾಗಿರಬೇಕಲ್ಲ? ಆದರೆ, ಹಾಗಾಗಿಲ್ಲ. ಮಾರಾಟ ಹೆಚ್ಚಳವಾಗಿದ್ದು ಕೇವಲ 13%! 27,229.487 ಮೆ.ಟ. ಇಂದ 31,189.430 ಮೆ.ಟನ್‌ಗೆ ಮಾರಾಟ ಹೆಚ್ಚಳವಾಗಿದೆ. ಅಂದರೆ, 13%.

13% ಮಾರಾಟ ಹೆಚ್ಚಳವಾಗಿದ್ದಕ್ಕೆ, 100% ಲಾಭ ಹೆಚ್ಚಳವಾಗಿದ್ದು ಹೇಗೆ?

ಒಂದೋ ಕಂಪನಿ ತನ್ನ ಉತ್ಪನ್ನಗಳ ದರವನ್ನು ಹೆಚ್ಚಿಸಿರಬೇಕು ಅಥವಾ ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡಿರಬೇಕು. ಆಗ ಮಾತ್ರವೇ ಇಷ್ಟು ಪ್ರಮಾಣದಲ್ಲಿ ಲಾಭ ಮಾಡಲು ಸಾಧ್ಯ. ಉತ್ಪನ್ನಗಳ ದರ ಹೆಚ್ಚು ಮಾಡಿದ್ದರೆ ಅದು ಕಂಪನಿಗೆ ಹಿನ್ನಡೆ. ಒಂದು ವೇಳೆ ಕಾರ್ಯಾಚರಣೆ ವೆಚ್ಚ ಕಡಿಮೆ ಮಾಡಿದ್ದರೆ ಅದು ಕಂಪನಿ ಪ್ರಗತಿಯ ಸೂಚಕ. ಹಣಕಾಸಿನ ವಿವರವನ್ನು ಗಮನಿಸಿದರೆ, 163 ಕೋಟಿ ರೂ. ನಗದನ್ನು ಬ್ಯಾಲೆನ್ಸ್‌ ಶೀಟ್‌ನಲ್ಲಿ ಕಾರ್ಯಾಚರಣೆಯಿಂದ ಉತ್ಪಾದನೆಯಾದ ಮೊತ್ತ ಎಂದು ತೋರಿಸಲಾಗಿದೆ. ಈ ಪೈಕಿ ಹೆಚ್ಚಿನ ಮೊತ್ತ ಅಂದರೆ, 81 ಕೋಟಿ ರೂ. ಬಂದಿದ್ದು ಬಡ್ಡಿ ಮತ್ತು ಡಿವಿಡೆಂಡ್ ಆದಾಯದಿಂದ. ಕಳೆದ ವರ್ಷ ಅಂದರೆ, 2022-23 ರಲ್ಲಿ 51 ಕೋಟಿ ರೂ. ಬಡ್ಡಿ ಮತ್ತು ಡಿವಿಡೆಂಡ್ ಬಂದಿತ್ತು. ಇತರೆ ವೆಚ್ಚದಲ್ಲಿ 75 ಕೋಟಿ ರೂ. ಕಡಿಮೆ ತೋರಿಸಲಾಗಿದೆ. ಅಂದರೆ, ಕಂಪನಿ ಮಾಡಿದ ಲಾಭ ಸೋಪ್ ಮಾರಾಟದಿಂದ ಅಲ್ಲ. ಬದಲಿಗೆ, ಕಂಪನಿಗೆ ಬಂದ ಬಡ್ಡಿ ಮತ್ತು ಡಿವಿಡೆಂಡ್‌ನಿಂದ ಹಾಗೂ ವೆಚ್ಚಗಳನ್ನು ಕಡಿಮೆ ಮಾಡಿರುವುದರಿಂದ! ಇನ್ನು ಕಂಪನಿಯ ಈಕ್ವಿಟಿ ಮತ್ತು ಬಾಧ್ಯತೆಯೇ 2700 ಕೋಟಿ ರೂ. ಇದೆ. ಈಕ್ವಿಟಿ 2200 ಕೋಟಿ ರೂ. ಇದ್ದರೆ, ಇತರ ಬಾಧ್ಯತೆಗಳು 400 ಕೋಟಿ ರೂ. ಇದೆ.

ಇನ್ನೊಂದು ಕಡೆ ಎಚ್‌ಯುಎಲ್‌ ಬರಿ ತನ್ನ ಸೋಪ್ ಮಾರಾಟದಿಂದಲೇ 18% ಲಾಭ ಮಾಡಿದೆ. ಅದು ಡವ್ ಸೇರಿದ ಹಾಗೆ ಸುಮಾರು ವಿಧದ ಸೋಪುಗಳನ್ನು ಮಾರಾಟ ಮಾಡುತ್ತಿದೆ. ಇನ್ನು ಬೇರೆ ಬೇರೆ ವಿಭಾಗದಲ್ಲೂ ಕಂಪನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇನ್ನೊಂದು ವಿಭಾಗ ಡಿಟರ್ಜಂಟ್. ಅದರಲ್ಲೂ ಕೆಎಸ್‌ಡಿಎಲ್‌ ಮತ್ತು ಎಚ್‌ಯುಎಲ್ ಇವೆ. ಕೆಎಸ್‌ಡಿಎಲ್ ಕ್ಲೀನೋಲ್ ಎಂಬ ಲಿಕ್ವಿಡ್ ಡಿಟರ್ಜಂಟ್ ಮಾರಾಟ ಮಾಡುತ್ತದೆ. ಎಚ್‌ಯುಎಲ್ ವಿಮ್ ಮಾರಾಟ ಮಾಡುತ್ತದೆ. ಆದರೆ, ಕೆಎಸ್‌ಡಿಎಲ್‌ನ ಡಿಟರ್ಜಂಟ್ ವಿಭಾಗದಲ್ಲಿ ಮಾರಾಟ 10% ಕುಸಿತ ಕಂಡಿದೆ. ಎಚ್‌ಯುಎಲ್‌ ಮಾರಾಟ ಎಷ್ಟು ಏರಿಕೆಯಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ, ಒಂದು ವಿಷಯವನ್ನಂತೂ ನಾವು ಗಮನಿಸಬಹುದು. ವಿಮ್ ಎಲ್ಲ ಅಂಗಡಿಗಳಲ್ಲೂ ಸಿಗುತ್ತದೆ. ಆದರೆ, ನಮ್ಮ ಕೆಎಸ್‌ಡಿಎಲ್ ಕ್ಲೀನೋಲ್ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಿದೆ ಎಂಬುದೇ ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ.

ಕೃಷ್ಣ ಭಟ್ ಬರಹ

ಇನ್ನೊಂದು ಸಂಗತಿಯನ್ನೂ ನಾವು ಇಲ್ಲಿ ಗಮನಿಸಬೇಕು!

ಕೆಎಸ್‌ಡಿಎಲ್ ಬಳಿ ಕರ್ನಾಟಕದಲ್ಲಿ 95 ಎಕರೆ ಜಾಗ ಇದೆ. ಅದು ಶ್ರೀಗಂಧ ಬೆಳೆಸುವುದಕ್ಕೆ ಅಂತಲೇ ಸರ್ಕಾರ ಈ ಸಂಸ್ಥೆಗೆ ಕೊಟ್ಟ ಜಾಗ. ಇದರಲ್ಲಿ ಕೆಎಸ್‌ಡಿಎಲ್ ಬರಿ 40 ಚಿಲ್ಲರೆ ಎಕರೆಗಳನ್ನು ಬಳಸಿಕೊಂಡು, ಅಲ್ಲಿ ಶ್ರೀಗಂಧ ಬೆಳೆಯತ್ತಿದೆ. ಉಳಿದ ಜಾಗ ಖಾಲಿ ಬಿದ್ದಿದೆ. ಇದರಿಂದ 2020-21 ರಲ್ಲಿ ಸುಮಾರು 4 ಸಾವಿರ ಕಿಲೊ ಸಿಗುತ್ತಿದ್ದ ಶ್ರೀಗಂಧದ ಎಣ್ಣೆ ಈಗ 700 ಕಿಲೋಗೆ ಕುಸಿದಿದೆ. 100 ಕ್ಕೂ ಹೆಚ್ಚು ವರ್ಷಗಳ ಹಿಂದೆ ಕರ್ನಾಟಕದಿಂದ ಶ್ರೀಗಂಧವನ್ನು ತೆಗೆದುಕೊಂಡು ಹೋಗಿ ಎಣ್ಣೆ ತಯಾರಿಸಿ, ಫ್ರಾನ್ಸ್‌ನಲ್ಲಿ ಸುಗಂಧವನ್ನು ತಯಾರಿಸುತ್ತಾರೆ ಎಂದು ತಿಳಿದು, ಅದನ್ನು ನಮ್ಮಲ್ಲೇ ಬಳಸಿಕೊಳ್ಳುವುದಕ್ಕೆ ನಿರ್ಧರಿಸಿದ ಒಡೆಯರ್ ಇಲ್ಲೇ ಸೋಪ್ ಉತ್ಪಾದನೆ ಕಾರ್ಖಾನೆಯನ್ನು ಆರಂಭಿಸಿದರು. ಆದರೆ, ಈಗ, ಪರಿಸ್ಥಿತಿ ಉಲ್ಟಾ ಆಗಿದೆ. ಒಂದು ವೇಳೆ ಕೆಎಸ್‌ಡಿಎಲ್‌ ಈಗ ಹೇಳುವ ಹಾಗೆ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡರೆ, ಸಿಂಗಾಪುರದಿಂದ ಶ್ರೀಗಂಧವನ್ನು ಖರೀದಿ ಮಾಡಿಕೊಂಡು ಬರಬೇಕಾಗುತ್ತದೆ! ಅದಕ್ಕೆ ಕಳೆದ ಜುಲೈನಲ್ಲಿ ಜಾಗತಿಕ ಟೆಂಡರ್ ಕೂಡ ಕರೆಯಲಾಗಿದೆ. ಸದ್ಯ ಸಿಂಗಾಪುರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಗಂಧವನ್ನು ಬೆಳೆಸುತ್ತಿದ್ದಾರೆ.

ಶ್ರೀಗಂಧ ಬೆಳೆಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದ ಕೆಎಸ್‌ಡಿಎಲ್ ಕಳೆದ ವರ್ಷ ವಿತರಣೆ ಮಾಡಿದ ಶ್ರೀಗಂಧದ ಸಸಿಗಳ ಸಂಖ್ಯೆಯೇ 2800! ಒಂದು ಎಕರೆ ಪೂರ್ತಿ ಶ್ರೀಗಂಧ ಬೆಳೆಯಲು 500 ಸಸ್ಯಗಳು ಬೇಕಾಗುತ್ತವೆ. ಅಂದರೆ, ಕೆಎಸ್‌ಡಿಎಲ್ ಐದೂವರೆಗೆ ಎಕರೆಗೆ ಬೇಕಾಗುವಷ್ಟು ಸಸ್ಯವನ್ನು ದಾನ ಮಾಡಿ ಶ್ರೀಗಂಧ ಬೆಳೆಯಲು ಜನರನ್ನು ಪ್ರೋತ್ಸಾಹಿಸುತ್ತಿದೆ!! ಹೀಗಾಗಿ, 6 ಕೋಟಿ ರೂ. ಕೊಟ್ಟು ಬ್ರ್ಯಾಂಡ್ ಅಂಬಾಸಿಡರ್ ನೇಮಕ ಮಾಡಿಕೊಳ್ಳುವುದು ದೊಡ್ಡ ಮೊತ್ತ ಅಲ್ಲದಿರಬಹುದು. ಆದರೆ, ಬ್ರ್ಯಾಂಡ್ ಅಂಬಾಸಿಡರ್ ನೇಮಕ ಮಾಡಿಕೊಂಡು ಮಾರಾಟ ಹೆಚ್ಚಳ ಮಾಡುವುದಕ್ಕಿಂತ ಮುಖ್ಯವಾಗಿ ಮಾಡಬೇಕಾದ ಕೆಲಸ ಬಹಳಷ್ಟಿದೆ. ಕಾರ್ಯಾಚರಣೆಯಲ್ಲಿ ಇನ್ನಷ್ಟು ದಕ್ಷತೆ ತರಬೇಕಿದೆ. ಉತ್ಪನ್ನಗಳಲ್ಲಿನ ವೈವಿಧ್ಯತೆಯನ್ನು ಹೆಚ್ಚಿಸಬೇಕು. ಡಿಟರ್ಜಂಟ್‌ಗಳ ಮಾರಾಟಕ್ಕೆ ಒತ್ತು ಕೊಡಬೇಕು.

ಇವೆಲ್ಲದರ ಜೊತೆಗೆ, ಶ್ರೀಗಂಧವನ್ನು ಬೆಳೆಸುವುದಕ್ಕೆ ಹೆಚ್ಚು ಒತ್ತು ನೀಡಬೇಕು. ತನಗೆ ಮೀಸಲಿಟ್ಟ ಜಾಗವನ್ನು ಕೆಎಸ್‌ಡಿಎಲ್ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅದರ ಜೊತೆಗೆ ಇತರ ಜಾಗದಲ್ಲೂ ಶ್ರೀಗಂಧ ಬೆಳೆಸಲು ಪ್ರೋತ್ಸಾಹ ನೀಡಬೇಕಿದೆ. ಕರ್ನಾಟಕದ ಶ್ರೀಗಂಧಕ್ಕೆ ಹೆಚ್ಚಿನ ಮೌಲ್ಯವಿದೆ. ಕರ್ನಾಟಕದಲ್ಲಿ ಶ್ರೀಗಂಧ ಬೆಳೆಯದೇ, ಸಿಂಗಾಪುರದಿಂದ ಶ್ರೀಗಂಧವನ್ನು ಆಮದು ಮಾಡಿಕೊಂಡು, ಅದರಿಂದ ಕರ್ನಾಟಕದ ಸರ್ಕಾರಿ ಕಂಪನಿಯೊಂದು ಸೋಪು ಉತ್ಪಾದನೆ ಮಾಡುವ ಯಾವ ಅನಿವಾರ್ಯವೂ ಇಲ್ಲ. ಇತರ ಖಾಸಗಿ ಕಂಪನಿಗಳು ಈಗಾಗಲೇ ಇದನ್ನು ಮಾಡುತ್ತಿವೆ. ಇನ್ನು ಈ ವಿಭಾಗದಲ್ಲಿ ಇದಕ್ಕಿಂತ ಹೆಚ್ಚು ವ್ಯಾಪಾರ ಮಾಡುವ ಕಂಪನಿಗಳು ಕೂಡಾ ಬ್ರ್ಯಾಂಡ್ ಅಂಬಾಸಿಡರ್ ಇಟ್ಟುಕೊಂಡಿಲ್ಲ. ಉದಾಹರಣೆಗೆ, 2 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ಎಚ್‌ಯುಎಲ್‌ನ ವಿಮ್‌ಗೆ ಈವರೆಗೆ ಯಾರೂ ಬ್ರ್ಯಾಂಡ್ ಅಂಬಾಸಿಡರ್ ಇಲ್ಲ. ಆದರೆ, 1500 ಕೋಟಿ ವಹಿವಾಟು ನಡೆಸುವ ಕೆಎಸ್ಡಿಎಲ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಬೇಕಾ? ಹಾಗೆ ಒಂದು ಬ್ರ್ಯಾಂಡ್ ಅಂಬಾಸಿಡರ್ ಬೇಕು ಎಂದಾದರೂ ಯಾವ ರೀತಿಯ ಬ್ರ್ಯಾಂಡ್ ಅಂಬಾಸಿಡರ್ ಬೇಕು? ಕರ್ನಾಟಕದ ಪರಂಪರೆಯೇ ಒಂದು ಬ್ರ್ಯಾಂಡ್ ಅಂಬಾಸಿಡರ್. ಅಲ್ಲವೇ? ಅದರ ಮಾರಾಟ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯ ಬೇರೆ ರಾಜ್ಯದ ಅಥವಾ ನಮ್ಮ ರಾಜ್ಯದ ಅಥವಾ ಬಾಲಿವುಡ್‌ನ ನಟಿಮಣಿಯರಿಗೆ ಇದೆಯೇ?

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in