ಹುಟ್ಟೂರು ದಕ್ಷಿಣ ಕನ್ನಡದ ಮಂಚಿಯಲ್ಲಿ ರಂಗದಿಗ್ಗಜ ಬಿ.ವಿ.ಕಾರಂತ ಸ್ಮರಣೆ; ಏಪ್ರಿಲ್ 26ರಿಂದ ಮೂರು ದಿನಗಳ ನಾಟಕೋತ್ಸವ
ಕನ್ನಡ ಸುದ್ದಿ  /  ಕರ್ನಾಟಕ  /  ಹುಟ್ಟೂರು ದಕ್ಷಿಣ ಕನ್ನಡದ ಮಂಚಿಯಲ್ಲಿ ರಂಗದಿಗ್ಗಜ ಬಿ.ವಿ.ಕಾರಂತ ಸ್ಮರಣೆ; ಏಪ್ರಿಲ್ 26ರಿಂದ ಮೂರು ದಿನಗಳ ನಾಟಕೋತ್ಸವ

ಹುಟ್ಟೂರು ದಕ್ಷಿಣ ಕನ್ನಡದ ಮಂಚಿಯಲ್ಲಿ ರಂಗದಿಗ್ಗಜ ಬಿ.ವಿ.ಕಾರಂತ ಸ್ಮರಣೆ; ಏಪ್ರಿಲ್ 26ರಿಂದ ಮೂರು ದಿನಗಳ ನಾಟಕೋತ್ಸವ

ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲು ರಂಗಛಾಪು ಮೂಡಿಸಿದ ಕನ್ನಡಿಗ ಬಿ.ವಿ.ಕಾರಂತ ಅವರ ಹುಟ್ಟೂರು ದಕ್ಷಿಣ ಕನ್ನಡದ ಮಂಚಿಯಲ್ಲಿ ಈ ವಾರಾಂತ್ಯ ನಾಟಕೋತ್ಸವ ಆಯೋಜನೆಗೊಂಡಿದೆ.ವಿಶೇಷ ಬರಹ: ಹರೀಶ ಮಾಂಬಾಡಿ, ಮಂಗಳೂರು

ರಂಗ ದಿಗ್ಗಜ ಬಿ.ವಿ.ಕಾರಂತರ ಸ್ಮರಣಾರ್ಥ ನಾಟಕೋತ್ಸವ ನಡೆಸಲಾಗುತ್ತಿದೆ.
ರಂಗ ದಿಗ್ಗಜ ಬಿ.ವಿ.ಕಾರಂತರ ಸ್ಮರಣಾರ್ಥ ನಾಟಕೋತ್ಸವ ನಡೆಸಲಾಗುತ್ತಿದೆ.

ಮಂಗಳೂರು: ಕನ್ನಡವಷ್ಟೇ ಅಲ್ಲ, ಹಲವು ಭಾರತೀಯ ಭಾಷೆಗಳ ರಂಗಭೂಮಿ, ಸಿನಿಮಾ ಕ್ಷೇತ್ರಗಳಿಗೆ ಹೊಸ ದಿಕ್ಕು ನೀಡಿದ, ಮೈಸೂರು ರಂಗಾಯಣದ ಸ್ಥಾಪಕ ನಿರ್ದೇಶಕ ಬಿ.ವಿ.ಕಾರಂತ - ಬಾಬುಕೋಡಿ ವೆಂಕಟರಮಣ ಕಾರಂತ (19 ಸೆಪ್ಟೆಂಬರ್ 1939 - 1 ಸೆಪ್ಟೆಂಬರ್ 2002) ಎಲ್ಲರಿಗೂ ಗೊತ್ತು. ಬಾರತೀಯ ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲಿ ನಿರ್ದೇಶಕ, ನಾಟಕಕಾರ, ನಟ, ಚಿತ್ರಕಥೆಗಾರ, ಸಂಯೋಜಕ ಮತ್ತು ನಾಟಕಕಾರ ರಾಗಿ ಅವರು ಗುರುತಿಸಿಕೊಂಡಿದ್ದಾರೆ. ಸಮಾನಾಂತರ ಸಿನಿಮಾದ ಪ್ರವರ್ತಕರಲ್ಲಿ ಒಬ್ಬರಾದ ಕಾರಂತ, ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ನಂತರ ಅದರ ನಿರ್ದೇಶಕರಾಗಿದ್ದವರು ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 1976ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಗರಿಕ ಗೌರವ ಪದ್ಮಶ್ರೀಯನ್ನು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಬಾಬುಕೋಡಿ ಅವರ ಹುಟ್ಟೂರು. ಈ ಹಿನ್ನೆಲೆಯಲ್ಲಿ ಕಾರಂತರ ನೆನಪನ್ನು ಹಸಿರಾಗಿಸುವ ಉದ್ದೇಶದಿಂದ ಸಮಾನಾಸಕ್ತರು ಒಟ್ಟು ಸೇರಿ ಹುಟ್ಟೂರಲ್ಲೇ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅನ್ನು 2010ರಲ್ಲಿ ಸ್ಥಾಪಿಸಿ ಅವರ ನೆನಪಿಗೆ ನಾಟಕ, ಕಾರ್ಯಾಗಾರಳಂಥ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. 2009ರಲ್ಲಿ ಸಮಾನಾಸಕ್ತರು ಸೇರಿ ನಾಟಕೋತ್ಸವವನ್ನು ಮೂರು ದಿನಗಳ ಕಾಲ ಬಿ.ವಿ.ಕಾರಂತ ನೆನಪಿನಲ್ಲಿ ನಡೆಸಿದರು. ಇದೀಗ ಮತ್ತೆ ನಾಟಕೋತ್ಸವಕ್ಕೆ ಸಜ್ಜಾಗುತ್ತಿದೆ. ಇದು 16ನೇ ನಾಟಕೋತ್ಸವ ಎನ್ನುತ್ತಾರೆ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಕಜೆ ರಾಮಚಂದ್ರ ಭಟ್.

ಕಾರಂತ ವಿಚಾರಧಾರೆ ಪರಿಚಯಿಸುವ ಕಾರ್ಯ

ಕಳೆದ 16 ವರ್ಷಗಳಿಂದ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ ಅವರ ಹುಟ್ಟೂರು ಮಂಚಿಯಲ್ಲಿ ನಡೆಯುತ್ತಿದೆ. ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಕಾರಂತರನ್ನು ನೆನಪಿಸಿಕೊಳ್ಳುವ ನಾಟಕೋತ್ಸವವನ್ನು ಪ್ರತಿ ವರ್ಷ ಮಾಡಿಕೊಂಡು ಬರುತ್ತಿದೆ. ಈ ಉತ್ಸವದಲ್ಲಿ ಕರ್ನಾಟಕದ ಶ್ರೇಷ್ಠ ತಂಡಗಳು ಭಾಗವಹಿಸಿ, ಕಾರಂತರ ಆಶಯದ ನಾಟಕಗಳನ್ನು ಪ್ರದರ್ಶಿಸಿವೆ. ಮಕ್ಕಳ ರಂಗಶಿಬಿರಗಳ ಮೂಲಕ ಕಾರಂತ ವಿಚಾರಧಾರೆಗಳನ್ನು ಪರಿಚಯಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಯತ್ನಗಳು ಇದರ ಹಿಂದೆ ಅಡಗಿದೆ. ಈ ಹದಿನಾರು ವರ್ಷಗಳಲ್ಲಿ ವಿಚಾರಗೋಷ್ಠಿ, ಚಲನಚಿತ್ರ ಪ್ರದರ್ಶನದಂಥ ಸಾಂಸ್ಕೃತಿಕ ಚಟುವಟಿಕೆಗಳಿಗೆ ರಂಗಭೂಮಿಕಾ ಟ್ರಸ್ಟ್ ವೇದಿಕೆಯಾಗಿದೆ. ಬಿ.ವಿ.ಕಾರಂತ ಹೆಸರಲ್ಲಿ ಮಂಚಿಯನ್ನು ಸಾಂಸ್ಕೃತಿಕ ಗ್ರಾಮವೆಂದು ಗುರುತಿಸುವಂತಾಗಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಈ ಕಾರ್ಯಕ್ರಮಗಳನ್ನು ಕಳೆದ ಹದಿನಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್.

ಈ ಬಾರಿಯ ನಾಟಕೋತ್ಸವದಲ್ಲಿ ಏನೇನಿದೆ

ಮಂಚಿ ನಾಟಕೋತ್ಸವ ಹೆಸರಿನಲ್ಲಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಆಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಈ ಬಾರಿ ಏಪ್ರಿಲ್ 26ರಿಂದ 28ರವರೆಗೆ ಪ್ರತಿದಿನ ಸಂಜೆ 6ರಿಂದ ಮಂಚಿ ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ. ಕಾರ್ಕಳ ಯಕ್ಷರಂಗಾಯಣ ಮತ್ತು ಮಂಚಿ ಕುಕ್ಕಾಜೆಯ ಸಿದ್ಧಿವಿನಾಯಕ ಭಜನಾ ಮಂಡಳಿ ಇದಕ್ಕೆ ಸಾಥ್ ನೀಡಲಿವೆ. ಇದು ಮಂಚಿ ಕುಕ್ಕಾಜೆಯ ರಸ್ತೆಯ ಪಕ್ಕದಲ್ಲೇ ಇದೆ. 26 ರಂದು ಸಂಜೆ 6 ಗಂಟೆಯಿಂದ ಆರಂಭಗೊಳ್ಳುವ ನಾಟಕೋತ್ಸವವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸುವರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಭಾಗವಹಿಸಡುವರು. ಬಳಿಕ ಉಡುಪಿ ಜಿಲ್ಲೆಯ ಬ್ರಹ್ಮಾವರ ಬೈಕಾಡಿಯ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ವತಿಯಿಂದ ಮೂಲತಃ ಇಟಲಿ ನಾಟಕಕಾರ ದಾರಿಯೋ ಪೋ ನ ಒನ್ ವಾಸ್ ನ್ಯೂಡ್, ಒನ್ ವೋರ್ ಟೈಲ್ ಎಂಬ ನಾಟಕದ ಪ್ರಕಾಶ್ ಗರುಡ ಕನ್ನಡಕ್ಕೆ ಅನುವಾದಿಸಿದ ಬೆತ್ತಲಾಟ ನಾಟಕ ಪ್ರದರ್ಶನಗೊಳ್ಳಲಿದೆ. ವಿನ್ಯಾಸ ಹಾಗೂ ನಿರ್ದೇಶನವನ್ನು ರೋಹಿತ್ ಬೈಕಾಡಿ ಮಾಡಲಿದ್ದಾರೆ.

27ರಂದು ಭಾನುವಾರ ಶಂಜೆ 6 ಗಂಟೆಯಿಂದ ಪ್ರಜ್ಞಾನಂ ಟ್ರಸ್ಟ್ ಉಡುಪಿ ಇವರಿಂದ ಏಕವ್ಯಕ್ತಿ ನಾಟಕ ಹೆಜ್ಜೆಗೊಂದು ಬೆಳಕು ನಾಟಕ ಪ್ರದರ್ಶನಗೊಳ್ಳಲಿದೆ. ರಂಗಪದ್ಯವನ್ನು ಸುಧಾ ಅಡುಕಳ, ರಂಗವಿನ್ಯಾಸ, ಸಂಗೀತ ಮತ್ತು ನಿರ್ದೇಶನವನ್ನು ಗಣೇಶ್ ರಾವ್ ಎಲ್ಲೂರು ನಿರ್ವಹಿಸುವರು. ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸಲಿದ್ದಾರೆ.

28ನೇ ಸೋಮವಾರ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಮಿತ್ತೂರು ಈಶ್ವರ ಉಪಾಧ್ಯಾಯ ವಹಿಸುವರು. ಯಕ್ಷರಂಗಾಯಣ ಕಾರ್ಕಳದ ನಿರ್ದೇಶಕ ಬಿ.ವೆಂಕಟರಮಣ ಐತಾಳ್, ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಎನ್.ಸಂಜೀವ ಆಚಾರ್ಯ ಭಾಗವಹಿಸುವರು. ಈ ವೇಳೆ ಯಕ್ಷರಂಗಾಯಣ ಕಾರ್ಕಳ ಪ್ರಸ್ತುತಪಡಿಸುವ ಯಕ್ಷರಂಗಾಯಣದ ರಿಪರ್ಟರಿ ಕಲಾವಿದರಿಂದ ಕುಮಾರವ್ಯಾಸ ಭಾರತದ ವಿರಾಟ್ ಪರ್ವದಿಂದ ಆಯ್ದ ಭಾಗವಾದ ಆರೊಡನೆ ಕಾದುವೆನು ನಾಟಕ ಪ್ರದರ್ಶನಗೊಳ್ಳಲಿದೆ.

ನೂರಕ್ಕೂ ಅಧಿಕ ನಾಟಕ ನಿರ್ದೇಶಿಸಿದ್ದ ಕಾರಂತರು

ಕಾರಂತರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇಂಗ್ಲಿಷ್, ತೆಲುಗು , ಮಲಯಾಳಂ , ತಮಿಳು , ಪಂಜಾಬಿ , ಉರ್ದು , ಸಂಸ್ಕೃತ ಮತ್ತು ಗುಜರಾತಿ, ಹಿಂದಿ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಿದ್ದಾರೆ . ಹಯವದನ (ಗಿರೀಶ್ ಕಾರ್ನಾಡರಿಂದ), ಕತ್ತಲೆ ಬೆಳಕು , ಹುಚ್ಚು ಕುದುರೆ , ಏವಂ ಇಂದ್ರಜಿತ್ , ಈಡಿಪಸ್ , ಸಂಕ್ರಾಂತಿ , ಜೋಕುಮಾರ ಸ್ವಾಮಿ , ಸತ್ತವರ ನೇರಳು , ಹುಟ್ಟುವ ಬಡಿದರೆ ಮತ್ತು ಗೋಕುಲ ನಿರ್ಗಮನ ಇವು ಕನ್ನಡದಲ್ಲಿ ಅವರ ಕೆಲವು ಜನಪ್ರಿಯ ನಾಟಕಗಳು. ಅವರು ಹಿಂದಿಯಲ್ಲಿ ನಿರ್ದೇಶಿಸಿದ ನಲವತ್ತು ಅಥವಾ ಅದಕ್ಕಿಂತ ಹೆಚ್ಚು ನಾಟಕಗಳಲ್ಲಿ, ಮ್ಯಾಕ್‌ಬೆತ್ (ಸಾಂಪ್ರದಾಯಿಕ ಯಕ್ಷಗಾನ ನೃತ್ಯ ರೂಪವನ್ನು ಬಳಸಿ), ಕಿಂಗ್ ಲಿಯರ್, ಚಂದ್ರಹಾಸ, ಹಯವದನ, ಘಾಸಿರಾಮ್ ಕೊತ್ವಾಲ್, ಮೃಚ್ಛಾ ಕಟಿಕ, ಮುದ್ರಾ ರಾಕ್ಷಸ ಮತ್ತು ಮಾಳವಿಕಾಗ್ನಿ ಮಿತ್ರ ಕೆಲವು ಹೆಚ್ಚು ಜನಪ್ರಿಯವಾಗಿವೆ. ಕಾರಂತರು ಮಕ್ಕಳ ನಿರ್ದೇಶನದಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದು , ಪಂಜರ ಶಾಲೆ , ನೀಲಿ ಕುದುರೆ , ಹೆಡ್ಡಾಯನ , ಅಲಿಲು ರಾಮಾಯಣ ಮತ್ತು ದಿ ಗ್ರೇಟ್‌ಫುಲ್ ಮ್ಯಾನ್‌ನಂತಹ ಹಲವಾರು ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಾರೆ .

ಕಾರಂತ್ 26 ಚಿತ್ರಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ನಾಲ್ಕು ಚಲನಚಿತ್ರಗಳು ಮತ್ತು ನಾಲ್ಕು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಗಿರೀಶ್ ಕಾರ್ನಾಡ್ ಅವರೊಂದಿಗೆ ವಂಶ ವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ಮುಂತಾದ ಚಿತ್ರಗಳಲ್ಲಿ ಸಹನಿರ್ದೇಶನ ಮಾಡಿ ತಮ್ಮದೇ ಛಾಪು ಮೂಡಿಸಿದ್ದಾರೆ.

ವಿಶೇಷ ಬರಹ: ಹರೀಶ ಮಾಂಬಾಡಿ, ಮಂಗಳೂರು

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.