CM Bommai: ಎಸ್ಸಿ ಪಟ್ಟಿಯಿಂದ ಯಾರನ್ನೂ ತೆಗೆಯುವ ಪ್ರಶ್ನೆ ಇಲ್ಲ - ಸಿಎಂ ಬೊಮ್ಮಾಯಿ ಸ್ಪಷ್ಟನೆ
ಎಸ್ಸಿ ಪಟ್ಟಿಯಿಂದ ಕೈಬಿಡುವುದಾಗಿ ಕಾಂಗ್ರೆಸ್ ರಾಜಕೀಯ ಪ್ರೇರಿತ ಕುತಂತ್ರ ಮಾಡಿದ್ದು, ಯಾರನ್ನೂ ತೆಗೆಯುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.
ಬೆಂಗಳೂರು: ಎಸ್ಸಿ ಪಟ್ಟಿಯಿಂದ ಕೈಬಿಡುವುದಾಗಿ ಕಾಂಗ್ರೆಸ್ ರಾಜಕೀಯ ಪ್ರೇರಿತ ಕುತಂತ್ರ ಮಾಡಿದ್ದು, ಯಾರನ್ನೂ ತೆಗೆಯುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಎಸ್.ಸಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸಮುದಾಯಗಳಿಗೆ ಕಾಂಗ್ರೆಸ್ನವರು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಬಂಜಾರ, ಭೋವಿ, ಕೊರಚ ಯಾರನ್ನೂ ಕೂಡ ಪಟ್ಟಿಯಿಂದ ತೆಗೆಯಲಾಗುವುದಿಲ್ಲ. ಈ ಬಗ್ಗೆ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಇವರೆಲ್ಲಾ ಮಹಾರಾಜರ ಕಾಲದಿಂದಲೂ ಇರುವಂಥ ಸಮುದಾಯಗಳು. ಸಂವಿಧಾನ ಆದ ನಂತರ ಇದ್ದ ಆರು ಸಮುದಾಯಗಳಲ್ಲಿ ಇವೂ ಇದ್ದು, ಇದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎರಡೂ ಪಕ್ಷಗಳ ವರಿಷ್ಠರು ಆಫರ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಗೆ ಯಾರು ಯಾವಾಗ ಏನು ಕೊಡುಗೆ ನೀಡುತ್ತಾರೆ, ಅವರು ಏನು ಸ್ವೀಕಾರ ಮಾಡುತ್ತಾರೆ ಎಂದು ಅವರಿಗೇ ಗೊತ್ತು ಎಂದರು.
ನಾವು ಬೇರೆ ಪಕ್ಷಗಳ ರೀತಿ ಸುಳ್ಳು ಅಂಕಿ ಸಂಖ್ಯೆಗಳನ್ನು ಹೇಳುವುದಿಲ್ಲ. ನಮಗೆ ಎಲ್ಲಾ ಸಮೀಕ್ಷೆಗಳ ವರದಿ ಬಂದಿದ್ದು, ನಾವು ಬೇರೆ ಪಕ್ಷಗಳಿಗಿಂತ ಮುಂದಿದ್ದೇವೆ. ಇದು ಪಕ್ಷದ ಆಂತರಿಕ ವಿಚಾರವಾಗಿದ್ದು, ಬಹಿರಂಗ ಪಡಿಸಲು ಆಗುವುದಿಲ್ಲ ಎಂದರು.
ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆಗೆ ಸಹಕಾರ
ಇಂದು ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸುವ ಮುನ್ನ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಕಳೆದ ಬಾರಿ ಏಪ್ರಿಲ್ 27 ನೇ ತಾರೀಖು ಚುನಾವಣೆ ಘೋಷಣೆಯಾಗಿತ್ತು. 27ರ ನಂತರ ಯಾವ ದಿನವಾದರೂ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿತ್ತು. ನೀತಿ ಸಂಹಿತೆ ಕೂಡ ಜಾರಿಯಾಗಲಿದ್ದು, ಎಲ್ಲಾ ಪಕ್ಷಗಳೂ ನೀತಿ ಸಂಹಿತೆಯ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಸ್ವತಂತ್ರ ಮತ್ತು ನ್ಯಾಯೋಚಿತ ಚುನಾವಣೆಗೆ ಎಲ್ಲರೂ ಸಹಕರಿಸಬೇಕೆಂದು ವಿನಂತಿ ಮಾಡಿದರು. ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಈಗಾಗಲೇ ಸಮೀಕ್ಷೆಯ ವರದಿಗಳಿವೆ. ಅದರೊಂದಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಭಿಪ್ರಾಯಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಕ್ರೂಢೀಕರಿಸಿ ಪಟ್ಟಿ ಸಂಸದೀಯ ಮಂಡಳಿಗೆ ಕಳುಹಿಸಲಾಗುವುದು. ಒಂದು ವಾರ ಪ್ರಕ್ರಿಯೆ ನಡೆಯಲಿದೆ ಎಂದರು.
ಸ್ಪಷ್ಟ ಬಹುಮತ
ಒಂದೂವರೆ ವರ್ಷದಲ್ಲಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ 5-6 ಬಾರಿ ಭೇಟಿ ನೀಡಿದ್ದು, ಕಳೆದ ಮೂರು ತಿಂಗಳಲ್ಲಿ ಪ್ರವಾಸ ಮಾಡದ ಜಿಲ್ಲೆಯೇ ಇಲ್ಲ. ನಮಗೆ ಸಂಪೂರ್ಣ ಹಾಗೂ ಸ್ಪಷ್ಟ ಬಹುಮತ ಬರುವ ವಿಶ್ವಾಸವಿದೆ. ಮತ್ತೊಮ್ಮೆ 2023 ರಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಲಿದೆ ಎಂದರು.
ಏಪ್ರಿಲ್ 9ಕ್ಕೆ ಪ್ರಧಾನಿಗಳ ಭೇಟಿ
ಚುನಾವಣಾ ಪ್ರಚಾರಕ್ಕೆ ವರಿಷ್ಠರು ಬರುತ್ತಾರೆ. ಏಪ್ರಿಲ್ 9 ರಂದು ಹುಲಿ ಕಾರ್ಯಕ್ರಮಕ್ಕೆ ಪ್ರಧಾನಿಗಳು ಮೈಸೂರಿಗೆ ಬರುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಸರ್ಕಾರದ ಪೂರ್ವನಿಗದಿತ ಕಾರ್ಯಕ್ರಮ ಎಂದರು. ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಜೊತೆಗೆ ಅಮಿತ್ ಶಾ, ಜೆ.ಪಿ.ನಡ್ಡಾ ಅವರ ಪ್ರವಾಸ ಕಾರ್ಯಕ್ರಮವನ್ನು ಸಮಿತಿಗಳಲ್ಲಿ ನಿರ್ಧರಿಸಿ ಕರ್ನಾಟಕ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವಾಗ ಯೋಜಿತವಾಗಿ ಮಾಡಲಾಗುವುದು. ಕಳೆದ ಬಾರಿ ಬಂದಂತೆಯೇ ಈ ಬಾರಿಯೂ ಬರಲಿದ್ದಾರೆ ಎಂದು ತಿಳಿಸಿದರು.
ಗರಿಷ್ಠ ಜನರನ್ನು ತಲುಪುವ ಪ್ರಚಾರ
ಈ ಬಾರಿಯ ಪ್ರಚಾರ ಗರಿಷ್ಠ ಜನರನ್ನು ತಲುಪುವ ಪ್ರಚಾರ. ಡಿಜಿಟಲೈಜೇಶನ್ ಬಳಕೆ, ನಾಯಕರ ವ್ಯಾಪಕ ಪ್ರಚಾರ, ಪ್ರವಾಸ, ಪ್ರತಿ ಮತದಾರರಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕೇಂದ್ರ ರಾಜ್ಯ ಸರ್ಕಾರಗಳ ಯೋಜನೆಗಳನ್ನು ತಿಳಿಸಿದ್ದಾರೆ. ಪ್ರಚಾರ ವಿವಿಧ ಹಂತಗಳಲ್ಲಿರುತ್ತದೆ. ನಾಯಕರು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ, ರಾಷ್ಟ್ರೀಯ ನಾಯಕರು ರಾಜ್ಯ ಮಟ್ಟದಲ್ಲಿ ಪ್ರಚಾರ ಮಾಡಲಿದ್ದು, ವ್ಯಾಪಕ ಪ್ರಚಾರ ಆಗಲಿದೆ ಎಂದರು.
ಕಾಂಗ್ರೆಸ್ಗೆ ಅಭ್ಯರ್ಥಿಗಳ ಕೊರತೆ
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎರಡನೇ ಪಟ್ಟಿ ಸಿದ್ದ ಮಾಡುವಾಗ ನಮ್ಮ ಶಾಸಕರಿಗೆ ಕರೆ ಮಾಡಿದ್ದಾರೆ. ನಮ್ಮ ಶಾಸಕರನ್ನು ಸಂಪರ್ಕಿಸಿರುವುದು ಅವರ ಪರಿಸ್ಥಿತಿ ತೋರಿಸುತ್ತದೆ. ಗಟ್ಟಿಯಾದ ಅಭ್ಯರ್ಥಿ ಗಳಿದ್ದಿದ್ದರೆ ನಮ್ಮ ಶಾಸಕರಿಗೆ ಕರೆ ಮಾಡುತ್ತಿರಲಿಲ್ಲ. ಸಾರಾಸಗಟಾಗಿ ಎಲ್ಲರಿಗೂ ಕರೆ ಮಾಡಿ ನಮ್ಮದಿನ್ನೂ ನಿರ್ಣಯವಾಗಿಲ್ಲ, ನೀವು ಬಂದರೆ ನಿಮಗೆ ಟಿಕೆಟ್ ಕೊಡುವುದಾಗು ಹೇಳಿದ್ದಾರೆ ಎಂದರು. ನಮ್ಮ ಪಕ್ಷದವರು ಅವರು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ವಲಸಿಗರು ಸೇರಿದಂತೆ ಮೂಲ ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿದ್ದಾರೆ. ಈ ಬಾರಿ ಸ್ಪಷ್ಟ ಬಹುಮತದ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಸೇವೆಗೆ ಅವಕಾಶ
ಇಷ್ಟು ಜನರ ಅಹವಾಲು ಸ್ವೀಕರಿಸಿದೆ. ನಾಳೆಯಿಂದ ಸ್ವೀಕರಿಸಲು ನೀತಿ ಸಂಹಿತೆ ಅಡ್ಡಿ ಆಗಲಿದೆ. ಇಷ್ಟು ದಿನ ಜನರ ಸೇವೆ ಮಾಡಲು ಅವಕಾಶ ದೊರೆತಿದ್ದು, ಕಾನೂನು ಪ್ರಕಾರ ನಾವು ನಡೆದುಕೊಳ್ಳಬೇಕು ಎಂದರು.