Kannada News  /  Karnataka  /  Thunderstorms Forecast Today In Some Parts Of South Interior Karnataka Capital City Bangalore Is Also Alerted Rmy
ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ
ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ

Karnataka Weather: ದಕ್ಷಿಣ ಒಳನಾಡಿನ ಕೆಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ; ರಾಜಧಾನಿ ಬೆಂಗಳೂರಿಗೂ ಎಚ್ಚರಿಕೆ

26 May 2023, 7:39 ISTRaghavendra M Y
26 May 2023, 7:39 IST

ಬೆಂಗಳೂರಿನಲ್ಲಿ ಇಂದು ಸಂಜೆ ಅಥವಾ ರಾತ್ರಿ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ವರುಣನ ಆರ್ಭಟಕ್ಕೆ ಬೆಂಗಳೂರು ಮಂದಿ ತತ್ತರಿಸಿ ಹೋಗಿದ್ದಾರೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಇಲ್ಲಿನ ಜನರು ಪರದಾಡುವಂತಾಗಿತ್ತು.

ಇಂದು (ಮೇ 26, ಶುಕ್ರವಾರ) ಕೂಡ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗುವ (Karnataka Rain) ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಶೇಷವಾಗಿ ಬೆಂಗಳೂರಿನಲ್ಲಿ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಭಾರಿ ಮಳೆಯಾಗುವ (Bangalore Rain) ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹಗುರದಿಂದ ಸಾಧಾರಣ ಮಳೆ ಇಲ್ಲವೇ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ದೈನಂದಿನ ವರದಿಯಲ್ಲಿ ಹೇಳಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಣ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇರುತ್ತದೆ ಎಂದು ವಿವರಿಸಿದೆ.

ನಿನ್ನೆ ಕೂಡ ಕೆಲವೆಡೆ ವರುಣ ಆರ್ಭಟಿಸಿದ್ದು, ಚಿತ್ರದುರ್ಗದ ಬಿ.ದುರ್ಗದಲ್ಲಿ 7 ಸೆಂಟಿ ಮೀಟರ್ ಮಳೆಯಾಗಿದೆ. ಕೊಡಗು ಜಿಲ್ಲೆಯ ನಾಪೋಕ್ಲುನಲ್ಲಿ 6, ರಾಣಿಬೆನ್ನೂರು, ರಾಯಲಪಾಡು, ನಾಯಕಹಟ್ಟಿಯಲ್ಲಿ ತಲಾ 3, ಸರಗೂರು, ಚಿತ್ರದುರ್ಗದಲ್ಲಿ ತಲಾ 2, ಮಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಕುಮಟಾ, ನರಗುಂದ, ಕುಷ್ಟಗಿ, ತಾಳಿಕೋಟೆ, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ, ಹೊಕೋಟೆ, ಚನ್ನಗಿರಿ, ಹಿರಿಯೂರು ಹಾಗೂ ಚಿಂತಾಮಣಿಯಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.

ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಷ್ಣಾಂಶದಲ್ಲಿ ಕೂಡ ಭಾರಿ ಬದಲಾವಣೆಯಾಗುತ್ತಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಅಂದರೆ 3.1 ಡಿಗ್ರಿ ಸೆಲ್ಸಿಯಸ್‌ನಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದೆ. ಇನ್ನುಳಿದಂತೆ ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಹೆಚ್ಚಳವಾಗಿದೆ.

ಕರಾವಳಿ ಕರ್ನಾಟಕದ ಹೊನ್ನಾವರ 33.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಾರವಾರ 35.6, ಶಿರಾಲಿ 36.9, ಮಂಗಳೂರು ವಿಮಾನ ನಿಲ್ದಾಣ 35.2, ಪಣಂಬೂರು 36.4, ಉತ್ತರ ಒಳನಾಡಿನ ಬೆಳಗಾವಿ ನಗರದಲ್ಲಿ 34.8, ಬೆಳಗಾವಿ ವಿಮಾನ ನಿಲ್ದಾಣ 34.4, ಬೀದರ್ 38.6, ವಿಜಯಪುರ 38.1, ಬಾಗಲಕೋಟೆ 36.4, ಧಾರವಾಡ 34.2, ಗದಗ 36.8, ಕಲಬುರ್ಗಿ 39.7, ಹಾವೇರಿ 33.4, ಕೊಪ್ಪಳ 38.4, ರಾಯಚೂರು 39.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ 32, ಬೆಂಗಳೂರು ನಗರ 32, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 34.6, ಬಳ್ಳಾರಿ 39.7, ಚಿಕ್ಕಮಗಳೂರು 29.2, ಚಿತ್ರದುರ್ಗ 34.9, ದಾವಣಗೆರೆ 34, ಹಾಸನ 34.8, ಚಿಂತಾಮಣಿ 34.3, ಮಂಡ್ಯ 35, ಮಡಿಕೇರಿ 26.4, ಮೈಸೂರು 35.9, ಶಿವಮೊಗ್ಗ 34.6, ಚಿಕ್ಕನಹಳ್ಳಿ 35.6 ಡಿಗ್ರಿ ಸೆಲ್ಸಿಯನ್ ಉಷ್ಣಾಂಶ ದಾಖಲಾಗಿದೆ.