ಹುಲಿ ಸಂರಕ್ಷಣೆ ಎಂದರೆ ಈಗ ಬರೀ ಹಣ ಖರ್ಚು ಕಾರ್ಯಕ್ರಮವೇ, ಕರ್ನಾಟಕ ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಏನಾದರು: ಉಲ್ಲಾಸ ಕಾರಂತ ಪ್ರಶ್ನೆ
ಮಲೈಮಹದೇಶ್ವರ ವನ್ಯಧಾಮದಲ್ಲಿ ಒಂದೇ ದಿನ ಐದು ಹುಲಿಗಳು ಮೃತಪಟ್ಟ ಪ್ರಕರಣ, ಹುಲಿ ಸಂರಕ್ಷಣೆಯ ಯೋಜನೆ, ಕರ್ನಾಟಕ ಅರಣ್ಯ ಇಲಾಖೆ ಕಾರ್ಯವೈಖರಿ ಕುರಿತು ಡಾ.ಉಲ್ಲಾಸಕಾರಂತ ಮಾತನಾಡಿದ್ದಾರೆ.

ಕರ್ನಾಟಕ ಮಾತ್ರವಲ್ಲ. ಭಾರತದಲ್ಲಿ ಈಗ ಹುಲಿ ಸಂರಕ್ಷಣಾ ಕಾರ್ಯಕ್ರಮ ಎಂದರೆ ಹಣ ಖರ್ಚು ಮಾಡುವ, ಹಣ ಮಾಡಿಕೊಳ್ಳುವ ಯೋಜನೆಯಾಗಿ ಮಾರ್ಪಟ್ಟಿದೆ. ಕರ್ನಾಟಕದಲ್ಲಿ ಹುಲಿ ಯೋಜನೆಯ ನೆಪದಲ್ಲಿ ಕೋಟಿಗಟ್ಟಲೇ ಯೋಜನೆ ರೂಪಿಸಿರುವುದು. ಅದನ್ನು ಖರ್ಚು ಮಾಡುವುದು. ಕೆಲವರು ಹಣ ಮಾಡಿಕೊಳ್ಳುವ ಮಾರ್ಗವಾಗಿ ಬದಲಾಗಿದೆ. ಹೀಗಾದರೆ ಹುಲಿ ಸಂರಕ್ಷಣೆ ಹೇಗೆ ಸಾಧ್ಯ, ಅರಣ್ಯ ಇಲಾಖೆಯಲ್ಲಿ ಹಿಂದೆಲ್ಲಾ ದಕ್ಷತೆಗೆ ಹೆಸರಾದ ಅರಣ್ಯ ಅಧಿಕಾರಿಗಳಿದ್ದರು.ಕೆಳ ಹಂತದಲ್ಲೂ ನಿಷ್ಠೆಯಿಂದ ಕೆಲಸ ಮಾಡುವ ಸಿಬ್ಬಂದಿಗಳಿದ್ದರು. ಈಗ ಅವರೆಲ್ಲ ಏನಾದರು ಎನ್ನುವ ಪ್ರಶ್ನೆ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ಕರ್ನಾಟಕದ ಅರಣ್ಯ ಇಲಾಖೆ ಎಂದರೆ ಅದಕ್ಕೊಂದು ಹೆಸರಿತ್ತು. ಮಾದರಿ ಎನ್ನುವ ವ್ಯವಸ್ಥೆಯಿತ್ತು. ಈಗ ಅದನ್ನೆಲ್ಲಾ ಹುಡುಕುವ ಸ್ಥಿತಿಯಿದೆ. ನಾಯಕತ್ವ ಎನ್ನುವುದು ಕಾಣುತ್ತಲೇ ಇಲ್ಲ. ಕೆಲಸ ಮಾಡುವವರಿಗೂ ಸರಿಯಾದ ಬೆಂಬಲವಿಲ್ಲ.ಹೀಗೆಯೇ ಆದರೆ ಐದು ಹುಲಿಗಳು ಮೃತಪಟ್ಟಂತಹ ಸನ್ನಿವೇಶಗಳು ಹೆಚ್ಚುತ್ತಲೇ ಇರುತ್ತವೆ. ಅರಣ್ಯ,ವನ್ಯಜೀವಿ ಸಂರಕ್ಷಣೆ ಎನ್ನುವುದು ಬರೀ ಬಾಯಿ ಮಾತಿನಲ್ಲಿ ಉಳಿದರೆ ಏನು ಪ್ರಯೋಜನ ಹೇಳಿ.
ಕರ್ನಾಟಕ ಮಾತ್ರವಲ್ಲದೇ ಭಾರತ, ಜಗತ್ತಿನ ಹಲವು ದೇಶಗಳಲ್ಲಿ ಹುಲಿಗೆ ಸಂಬಂಧಿಸಿದಂತೆ ತಮ್ಮ ಸಂಶೋಧನಾ ಚಟುವಟಿಕೆಗಳ ಮೂಲಕವೇ ಗಮನ ಸೆಳೆದ ಅಂತರಾಷ್ಟ್ರಿಯ ಹುಲಿ ತಜ್ಞರಾದ, ಕರ್ನಾಟಕದವರೇ ಆದ ಡಾ.ಉಲ್ಲಾಸ ಕಾರಂತ ಅವರ ಪ್ರಶ್ನೆಯಿದು. ಮಲೈ ಮಹದೇಶ್ವರ ಬೆಟ್ಟ ವನ್ಯಧಾಮ ವ್ಯಾಪ್ತಿಯಲ್ಲಿ ಐದು ಹುಲಿಗಳು ಮೃತಪಟ್ಟ ಘಟನೆ, ಹುಲಿ ಯೋಜನೆಯ ಸ್ಥಿತಿಗತಿ, ಇಲಾಖೆಯ ಮನಸ್ಥಿತಿ, ಅಧಿಕಾರಿಗಳ ಕಾರ್ಯವೈಖರಿ ಸಂಬಂಧಿಸಿದಂತೆ ಅವರು ಹಿಂದೂಸ್ತಾನ್ ಟೈಂಸ್ ಕನ್ನಡದ ಜತೆಗೆ ವಿಸ್ತೃತವಾಗಿಯೆ ಮಾತನಾಡಿದರು.
ಎಪ್ಪತ್ತರ ದಶಕದಲ್ಲಿ ಭಾರತದಲ್ಲಿ ವನ್ಯಜೀವಿಗಳನ್ನು ಬೇಟೆಯಿಂದ ಉಳಿಸಬೇಕು. ವನ್ಯಜೀವಿಗಳನ್ನು ರಕ್ಷಿಸಿ ಅರಣ್ಯವನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ಗಂಭೀರವಾಗಿಯೇ ಆರಂಭಗೊಂಡವು. ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಿತು. ಇದರ ಮುಂದುವರೆದ ಭಾಗವಾಗಿಯೇ ಹುಲಿ ಯೋಜನೆ ಜಾರಿಗೆ ಬಂದಿತು. ಕರ್ನಾಟಕದ ಬಂಡೀಪುರ ಸಹಿತ ವಿವಿಧ ರಾಜ್ಯಗಳನ್ನೂ ಒಳಗೊಂಡು 9 ಹುಲಿ ಯೋಜನೆಗಳು ಜಾರಿಯಾದವು. ಹುಲಿ ಸಂರಕ್ಷಿತ ಪ್ರದೇಶವನ್ನು ರಕ್ಷಿಸಿ ಹುಲಿಗಳ ಆವಾಸಸ್ಥಾನ ವೃದ್ದಿಸುವುದು. ಅವುಗಳ ಸ್ವತಂತ್ರ ಇರುವಿಕೆಗೆ ಒತ್ತು ನೀಡುವುದು. ಹುಲಿ ರಕ್ಷಿಸುತ್ತಲೇ ಕಾಡನ್ನು, ಪರಿಸರವನ್ನು ಉಳಿಸಿಕೊಳ್ಳುವುದು ಇದರ ಹಿಂದಿನ ಆಶಯವಾಗಿತ್ತು. ಎರಡು ದಶಕಗಳ ಕಾಲ ಇದು ಚೆನ್ನಾಗಿಯೇ ನಡೆಯಿತು. ಹುಲಿ ಸಂರಕ್ಷಿತ ಪ್ರದೇಶಗಳನ್ನು ವಿಸ್ತರಿಸುತ್ತಾ ಹೋಗಲಾಯಿತು. ಆದರೆ 90ರ ದಶಕ ಮುಗಿಯುವ ಹೊತ್ತಿಗೆ ಹುಲಿ ಯೋಜನೆಯ ದಿಕ್ಕೇ ಬದಲಾಯಿತು. ಯಥೇಚ್ಛ ಅನುದಾನ, ಯೋಜನೆಗಳು ಯೋಜನೆಯ ಹಾದಿಯನ್ನೇ ಬದಲಿಸಿಬಿಟ್ಟಿದೆ. ಈಗಂತೂ ಪರಿಸರ ಪ್ರವಾಸೋದ್ಯಮವೂ ಸೇರಿಕೊಂಡು ಹುಲಿ ಸಂರಕ್ಷಿತ ಪ್ರದೇಶಗಳು ಎಂದರೆ ಕೋಟಿಗಟ್ಟಲೇ ಖರ್ಚು ಮಾಡುವ ಮಾರ್ಗಗಳಾಗಿ ಬದಲಾಗಿವೆ. ಸಂರಕ್ಷಣೆಯೇ ಉದ್ದೇಶವಾದರೆ, ಅರಣ್ಯ ಇಲಾಖೆ ಒದಗಿಸುವ ಅನುದಾನ ಬಿಟ್ಟು ಕೋಟಿ ಕೋಟಿ ಹಣವಾದರೂ ಏಕೆ ಬೇಕು ಎನ್ನುವುದು ಅವರ ಗಂಭೀರ ಪ್ರಶ್ನೆ.
ಹುಲಿ ಯೋಜನೆ ಪ್ರದೇಶಗಳು ಹೆಚ್ಚುತ್ತಲೇ ಇವೆಯೇ ಹೊರತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬದಲಾವಣೆ ಮಾತ್ರ ಇಲ್ಲ. ಅಭಯಾರಣ್ಯ ಎಂದು ಭಾರತದಲ್ಲಿ ಶೇ.4 ಜಾಗವನ್ನು ಮೀಸಲಿಡಲಾಗಿದೆ. ಅಲ್ಲಿಯಾದರೂ ಹುಲಿ ಇರುವಿಕೆಗೆ ಅವಕಾಶ ಇದೆಯಾ. ಅದೂ ಇಲ್ಲ. ಅಲ್ಲಿಯೂ ಹತ್ತಾರು ಅಡತಡೆಗಳು. ಬೇಕಾಬಿಟ್ಟಿ ಯೋಜನೆಗಳಿಂದಾಗಿ ಹುಲಿ ಪ್ರದೇಶಗಳು ಅನಾಹುತ ತಂದೊಡ್ಡುತ್ತಲೇ ಇವೆ. ಶೇ. 96 ರಷ್ಟು ಪ್ರದೇಶ ಮನುಷ್ಯನಿಗೆ ಇದ್ದ ಮೇಲೆ ಅದನ್ನು ಬಿಟ್ಟು ಅಭಯಾರಣ್ಯದ ಮೇಲೂ ಒತ್ತಡ ಏಕೆ. ಅರಣ್ಯ ಇಲಾಖೆ ಉನ್ನತ ಸ್ಥಾನದಲ್ಲಿರುವವರು ಹುಲಿ ಸಂರಕ್ಷಿತ ಪ್ರದೇಶಗಳು, ಅಭಯಾರಣ್ಯಗಳ ನಿರ್ವಹಣೆ ನಿಟ್ಟಿನಲ್ಲಿ ಸರಿಯಾದ, ಸುಸ್ಥಿರ ಯೋಜನೆ ರೂಪಿಸಬೇಕೇ ಹೊರತು ಹೀಗೆ ಆದರೆ ಯಾರನ್ನು ಕೇಳುವುದು ಎನ್ನುವುದೇ ತಿಳಿಯದಂತ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂಬುದು ಅವರ ಬೇಸರದ ನುಡಿ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ( NTCA) ಹುಲಿ ಪ್ರದೇಶ ಬಿಟ್ಟು ಹೊರ ಭಾಗವನ್ನು ಗುರಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತಿದೆ. ಅರಣ್ಯ ಇಲಾಖೆಯಲ್ಲೂ ಹಿಂದಿನ ದಕ್ಷತೆ ಎನ್ನುವುದು ಕಾಣುತ್ತಿಲ್ಲ. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಭಯಾರಣ್ಯದಲ್ಲಿ ಗಸ್ತು ಹೆಚ್ಚಿಸುವ, ಸಮನ್ವಯತೆಯ ಕಾಪಾಡಿಕೊಂಡು ಅರಣ್ಯದಂಚಿನ ಗ್ರಾಮಸ್ಥರ ವಿಶ್ವಾಸದೊಂದಿಗೆ, ಏನಾದರೂ ಅನಾಹುತ ಆಗುವ ಮುನ್ನವೇ ಸಿಗುವ ಸೂಚನೆ ಆಧರಿಸಿ ಯೋಜಿಸುವ ಮನೋಭಾವವೇ ಕಡಿಮೆಯಾಗಿದೆ. ಇದರ ಪರಿಣಾಮ ಕೆಳ ಹಂತದ ಸಿಬ್ಬಂದಿ ಮೇಲೂ ಆಗಿದೆ. ಈಗ ಅರಣ್ಯ ಇಲಾಖೆ ಬೆಳೆದಿದೆ. ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿದ್ದಾರೆ. ಸೌಲಭ್ಯ ಬಂದಿದೆ. ಆದರೆ ಇಷ್ಟೆಲ್ಲಾ ಇದ್ದಮೇಲೂ ಒಂದೇ ಬಾರಿಗೆ ಐದೈದು ಹುಲಿಗಳು ಸುಲಭವಾಗಿ ಜೀವ ಕಳೆದುಕೊಳ್ಳುವ ಸನ್ನಿವೇಶ ಇದೆ ಎಂದರೆ ಇಲಾಖೆ ಬೆಳೆದಿದೆ ಎಂದು ಯಾವ ಅರ್ಥದಲ್ಲಿ ಹೇಳಬೇಕು ಎನ್ನುವುದು ಅವರ ಪ್ರಶ್ನೆ.
ಮಲೈಮಹದೇಶ್ವರ ಬೆಟ್ಟ ಭಾಗದಲ್ಲಿ ನಾನು ಹೆಚ್ಚು ಕೆಲಸ ಮಾಡಿಲ್ಲ. ಆದರೆ ಹುಲಿ ವಿಚಾರ ಬಂದಾಗ ಆ ಭಾಗದ ಅಧಿಕಾರಿಗಳು, ಸಿಬ್ಬಂದಿ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಹುಲಿ ಮರಿಗಳೊಂದಿಗೆ ಒಂದು ವರ್ಷ ಜತೆಗಿದ್ದ, ಮುಂದಿನ ವರ್ಷ ಅದಕ್ಕೆ ಬೇಟೆ ಕಲಿಸಿ ಹೊಸ ಆವಾಸ ಸ್ಥಾನವನ್ನು ಹುಡುಕಿಕೊಡುತ್ತದೆ. ಇದು ಜೈವಿಕ ಕ್ರಿಯೆಯೂ ಹೌದು. ಇದೆಲ್ಲವೂ ಅಧಿಕಾರಿಗಳು, ಸಿಬ್ಬಂದಿಗೆ ಗೊತ್ತಿರುತ್ತದೆ. ಈ ವೇಳೆ ಅವುಗಳು ಸಂಘರ್ಷ ಎದುರಿಸುವ ಸನ್ನಿವೇಶ ಇರುತ್ತದೆ. ದನ ಬೇಟೆಯಾಡಿ ಮರಿಗಳಿಗೆ ಕಲಿಸಿಕೊಡುವ ಸನ್ನಿವೇಶದಲ್ಲಿ ತೊಂದರೆಯೂ ಆಗಬಹುದು. ದನ ಸಾಕಣೆ ಹಾಗೂ ಹುಲಿ ಸಂರಕ್ಷಣೆ ಒಟ್ಟೊಟ್ಟಿಗೆ ಹೋಗಲು ಸಾಧ್ಯವೇ ಇಲ್ಲ. ಹುಲಿಗೆ ಎಂದು ಮೀಸಲಿಟ್ಟ ಪ್ರದೇಶ ಹುಲಿಗೆ ಇರಬೇಕು. ಅಲ್ಲಿ ದನ ಬಿಟ್ಟರೆ ಸಹಜವಾಗಿಯೇ ಹುಲಿ ದಾಳಿ ಮಾಡಿ ತಿಂದು ಹಾಕುತ್ತದೆ. ಹುಲಿಗೆ ತನ್ನದೇ ಜಾಗವನ್ನು ನೀಡಲೇಬೇಕು. ಅರಣ್ಯ ಇಲಾಖೆ ಸಮನ್ವಯದಿಂದ, ಹುಲಿ ಉಳಿಸಬೇಕು. ಅರಣ್ಯ ಕಾಪಾಡಬೇಕು ಎನ್ನುವ ಧೇಯದಿಂದ ಕೆಲಸ ಮಾಡಿದರೆ ಏನಾದರೂ ಆಗಬಹುದು. ಅದನ್ನು ಬಿಟ್ಟು ಹಣ, ಯೋಜನೆ, ಪ್ರಗತಿಯೇ ಮುಖ್ಯವಾದರೆ ಅನಾಹುತ ತಪ್ಪಿಸಲು ಆಗುವುದೇ ಇಲ್ಲ ಎನ್ನುವುದನ್ನು ಅರಿಯಬೇಕು. ಮೊದಲಿನ ಶಿಸ್ತನ್ನು ಅರಣ್ಯ ಇಲಾಖೆಯಲ್ಲಿ ತರಬೇಕು. ಇಲ್ಲದೇ ಇದ್ದರೆ ನಾವು ಏನು ಮಾಡಿಯೂ ಪ್ರಯೋಜನ ಮಾತ್ರ ಆಗುವುದಿಲ್ಲ ಎನ್ನುತ್ತಾರೆ ಉಲ್ಲಾಸ ಕಾರಂತ್.