ನಾಗರಹೊಳೆ ಅರಣ್ಯದಂಚಿನಲ್ಲಿ ಹುಲಿ ದಾಳಿ; ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತ ಯುವಕ ಬಲಿ
ಹುಲಿ ದಾಳಿ ಮಾಡಿದ್ದರಿಂದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿ ಜೀವನದ ಕನಸು ಕಂಡಿದ್ದ ಯುವಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರು: ಆತ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿ ಖುಷಿಯಲ್ಲಿದ್ದ. ಎಲ್ಲರಂತೆ ಬದುಕು ನಡೆಸಿಕೊಂಡು ಹೋಗಬೇಕು ಎನ್ನುವ ಉಮೇದಿನಲ್ಲಿಯೂ ಇದ್ದ. ಆದರೆ ದುರಾದೃಷ್ಟವಶಾತ್ ಹಾಗೆ ಅಗಲೇ ಇಲ್ಲ. ಜಮೀನಿನ ಬಳಿ ಮೇಕೆ ಮೇಯಿಸಲು ಹೋಗಿದ್ಧಾಗ ಏಕಾಏಕಿ ವ್ಯಾಘ್ರ ಮಾಡಿ ಕೊಂದು ಹಾಕಿತ್ತು. ಯುವಕನ ಚೀರಾಟ ಕೇಳಿ ಸಮೀಪದ ಜಮೀನಿನಲ್ಲಿಯೇ ಕೆಲಸ ಮಾಡುತ್ತಿದ್ದ ತಂದೆ ತಾಯಿ ಬರುವಷ್ಟರ ಹೊತ್ತಿಗೆ ಹುಲಿ ದಾಳಿ ಮಾಡಿ ಅಲ್ಲಿಂದ ಕಾಲ್ಕಿತ್ತಿತ್ತು. ಕೊನೆಗೆ ಆಸ್ಪತ್ರೆಗೆ ಸಾಗಿಸಿದರೂ ಆಗಲೇ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಶತಮಾನಗಳಿಂದ ಅರಣ್ಯ ಪ್ರದೇಶ ಹಾಗೂ ನೆರೆ ಹೊರೆಯಲ್ಲಿಯೇ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಹುಲಿ ದಾಳಿಯಿಂದ ಮಗನನ್ನು ಕಳೆದುಕೊಂಡ ಆಕ್ರಂದನ. ಈಗಷ್ಟೇ ಮದುವೆಯಾಗಿ ಪತಿಯೊಂದಿಗೆ ಬಾಳುವ ಕನಸು ಕಂಡಿದ್ದ ಯುವತಿಗೂ ಬರಸಿಡಿಲು ಬಂದಂತಹ ಸನ್ನಿವೇಶ.ಇದು ನಡೆದಿರುವುದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗುರುಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ನಾಗಾಪುರ-5ನೇ ಬ್ಲಾಕ್‌ನ ಪಕ್ಕದ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ.
ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಪುರ್ವಸತಿ ಕೇಂದ್ರದ 5ನೇ ಬ್ಲಾಕ್‌ನ ಕೃಷ್ಣ- ನಾಗವೇಣಿ ದಂಪತಿಯ ಏಕೈಕ ಪುತ್ರ ಹರೀಶ್(29) ಹುಲಿ ದಾಳಿಗೆ ಬಲಿಯಾದ ಯುವಕ. ತಂದೆಯೊಂದಿಗೆ ಹರೀಶ ತಮ್ಮ ಜಮೀನಿನ ಬಳಿಯ ಅರಣ್ಯ ಪ್ರದೇಶದಲ್ಲಿ ಮೇಕೆ ಮೇಯಿಸಲು ತೆರಳಿದ್ದಾನೆ. ತಂದೆ ಕೃಷ್ಣ ಅರಣ್ಯದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮೇಕೆ ಮೇಯಿಸುತ್ತಿದ್ದ ಹರೀಶನಿಗೆ ಒಮ್ಮೆಲೆ ಹುಲಿ ದಾಳಿ ನಡೆಸಿದೆ. ಹರೀಶ ಜೋರಾಗಿ ಕಿರುಚಿ ಕೊಳ್ಳುತ್ತಿದ್ದಂತೆ ತಂದೆ ಕೃಷ್ಣ ಗಾಬರಿಯಿಂದ ಓಡೋಡಿ ಬಂದು ಹುಲಿಯನ್ನು ಬೆದರಿಸಿ ಓಡಿಸಿ ಮಗನನ್ನು ಪಾರು ಮಾಡಿದ್ದರಾದರೂ ಅಷ್ಟರೊಳಗೆ ರಕ್ತ ಸಾಕಷ್ಟು ಹೋಗಿ ಅಸ್ವಸ್ಥಗೊಂಡಿದ್ದ. ಕೂಡಲೇ ಮಗನನ್ನು ಅಕ್ಕ ಪಕ್ಕದ ಜಮೀನಿನಲ್ಲಿದ್ದಆದಿವಾಸಿ ರೈತರು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗಲೇ ಹರೀಶ್ ಸಾವನ್ನಪ್ಪಿದ್ದರು.
ಆಸ್ಪತ್ರೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಪಿ.ಎ.ಸೀಮಾ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಫಯಾಜುದ್ದೀನ್, ಆರ್.ಎಫ್.ಒ ನಂದಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕ ಗಂಗಾಧರ್ ಭೇಟಿ ನೀಡಿ ಕುಟುಂಬದವರನ್ನು ಸಂತೈಸಿದರು.
ತಕ್ಷಣಕ್ಕೆ ಟೈಗರ್ ಫೌಂಡೇಶನ್ ವತಿಯಿಂದ ಐದು ಲಕ್ಷರೂ ಪರಿಹಾರದ ಚೆಕ್ ನೀಡಲಾಗುವುದು. ನಂತರ 15 ಲಕ್ಷ ರೂ ಚೆಕ್ ನೀಡಲಾಗುವುದು. ಹುಲಿ ಸೆರೆಗೆ ಎರಡು ಅರಣ್ಯ ವಿಭಾಗಗಳ ಸಿಬ್ಬಂದಿ ತಕ್ಷಣದಿಂದಲೇ ಕೂಂಬಿಂಗ್ ನಡೆಸಲಾಗುವುದೆಂದು ಡಿಸಿಎಫ್ ಸೀಮಾ ಭರವಸೆ ನೀಡಿದರು.
ಇದ್ದೊಬ್ಬ ಮಗನನ್ನು ಕಳೆದುಕೊಂಡ ತಂದೆ-ತಾಯಿ, ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಕೊಡಗಿನ ಕುಮಾರಕಟ್ಟೆ ಹಾಡಿಯ ಪತ್ನಿ ರಶ್ಮಿತಾ, ಕುಟುಂಬದವರು ಹಾಗೂ ಆತನ ಸ್ನೇಹಿತರ ಗೋಳು ಆಸ್ಪತ್ರೆಯ ಆವರಣದಲ್ಲಿ ಹೇಳತೀರದಾಗಿತ್ತು. ಕುಟುಂದವರು, ಆತ್ಮೀಯರು ಅವರನ್ನು ಸಂತೈಸುತ್ತಲೇ ಇದ್ದರು.
ಎರಡು ವರ್ಷಗಳಿಂದ ಹನಗೋಡು ಸುತ್ತಮುತ್ತಲಿನ ಭಾಗದಲ್ಲಿ ಹುಲಿ ಓಡಾಡುತ್ತಿದೆ. ಹಲವಾರು ಜಾನುವಾರುಗಳನ್ನು ಸಾಯಿಸಿದ್ದರೂ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಫಲವಾಗಿದೆ. ಇದೀಗ ಹುಲಿಯನ್ನು ಸೆರೆ ಹಿಡಿಯಿರಿ, ಹರೀಶ ಕುಟುಂಬಕ್ಕೆ ೫೦ಲಕ್ಷರೂ ಪರಿಹಾರ ಹಾಗೂ ಕುಟುಂಬಕ್ಕೆ ಉದ್ಯೋಗ ನೀಡುವಂತೆ ಗುರುಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಹಿಂದೆ ನಾಗರಹೊಳೆ ಉದ್ಯಾನದಂಚಿನ ಕೊಳವಿಗೆ ಹಾಡಿಯ ಅಜ್ಜ ರಾಜು -ಮೊಮ್ಮಗ ಚೇತನ್, ಐಯ್ಯನಕೆರೆ ಹಾಡಿ ಗಣೇಶ, ನೇರಳಕುಪ್ಪೆ ಬಿ.ಹಾಡಿಯ ವೃದ್ದ ಜಗದೀಶ, ಉಡುವೆಪುರದ ಗಣೇಶ್‌ಗೌಡರನ್ನು ಕೊಂದು ಹಾಕಿತ್ತು. ಇದೀಗ ಹರೀಶನನ್ನು ಹುಲಿ ಬಲಿ ಪಡೆದಿದೆ. ಅಲ್ಲದೆ ನೂರಾರು ಜಾನುವಾರುಗಳನ್ನು ಕೊಂದು ಹಾಕಿದೆ. ಆದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶದ ನುಡಿ.
ಘಟನೆ ಕುರಿತು ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಚಿರೆತೆ ದಾಳಿಯಿಂದ ಯುವಕ ಮೃತಪಟ್ಟಿದ್ದಾನೆ. ಹುಲಿ ದಾಳಿಯಿಂದ ಅಲ್ಲ ಎಂದು ಹೇಳಿದ್ದಾರೆ.
ಆದರೆ ಮೃತ ಯುವಕ ಹರೀಶ್ ತಂದೆ ಕೃಷ್ಣ ಹೇಳುವಂತೆ, ಹುಲಿಯೇ ದಾಳಿ ಮಾಡಿದೆ. ನಾನೇ ಹುಲಿ ಇದ್ದುದನ್ನು ನೋಡಿದ್ದೇನೆ. ನನ್ನ ಮಗ ಜೀವ ಕಳೆದುಕೊಂಡ ಎಂದು ಬೇಸರದಿಂದ ತಿಳಿಸಿದ್ದಾರೆ.