Tippu Express train name: ಟಿಪ್ಪು ಎಕ್ಸ್‌ಪ್ರೆಸ್ ರೈಲು ಹೆಸರು ಬದಲಾವಣೆಗೆ ಸಿದ್ದರಾಮಯ್ಯ ಹೇಳಿದ್ದೇನು, ಬಿಜೆಪಿಯವರ ತಿರುಗೇಟು ಹೇಗಿತ್ತು?
ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಮರು ಬದಲಾವಣೆ ಮಾಡಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡಿರುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದೆ.
ಬೆಂಗಳೂರು: ಕೇಂದ್ರ ಸರ್ಕಾರ ಈಚೆಗಷ್ಟೇ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಮರು ನಾಮಕರಣ ಮಾಡಿದೆ ಟಿಪ್ಪು ಎಕ್ಸ್‌ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದೆ.
ಮರುನಾಮಕರಣವನ್ನು ಬಹುತೇಕರು ಸ್ವಾಗತಿಸಿದರೆ, ಟಿಪ್ಪು ಹೆಸರು ಬದಲಾಯಿಸಿರುವುದಕ್ಕೆ ಕೆಲವೊಂದು ಕಡೆ ಆಕ್ಷೇಪಗಳೂ ವ್ಯಕ್ತವಾಗಿವೆ. ಇದೇ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಮುುಂದುವರೆದಿದೆ.
ಇದೇ ವಿಚಾರವಾಗಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯವರಿಗೆ ದ್ವೇಷ ಬಿತ್ತುವುದೇ ಕೆಲಸ. ದ್ವೇಷದ ರಾಜಕಾರಣ ಮಾಡುವುದೇ ಅವರ ಕೆಲಸವಾಗಿದೆ. ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಾಯಿಸುವ ಅಗತ್ಯವಿರಲಿಲ್ಲ. ಇದರ ಬದಲು ಹೊಸ ರೈಲಿಗೆ ಒಡೆಯರ್ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದರು.
ಒಡೆಯರ್ ಅವರಿಗೆ ಗೌರವ ಕೊಡಬೇಕೆಂದರೆ ಇನ್ನೊಂದು ಹೊಸ ರೈಲಿಗೆ ಹೆಸರಿಡಬೇಕಿತ್ತು. ಇದು ದ್ವೇಷ ಬಿತ್ತುವ ಉದ್ದೇಶದಿಂದಲೇ ಮಾಡಿದ ಕೆಲಸ. ಬಿಜೆಪಿಯವರು ಈ ಥರ ಎಲ್ಲಾ ಮಾಡುತ್ತಾರೆ. ಟಿಪ್ಪು ಹೆಸರು ತೆಗೆದುಬಿಟ್ಟೇ ರೈಲಿಗೆ ಮರುನಾಮಕರಣ ಮಾಡುವ ಅಗತ್ಯವಿರಲಿಲ್ಲ ಎಂದು ಸಿದ್ದರಾಮಯ್ಯ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಸಿದ್ದರಾಮಯ್ಯ ಅವರ ಹೇಳಿಕೆ ರವಿಕುಮಾರ್, ಅಶೋಕ್ ತಿರುಗೇಟು
ಸಿದ್ದರಾಮಯ್ಯ ಅವರಿಗೆ ಅದ್ಯಾಕೆ ಒಡೆಯರ್ ಹೆಸರು ಬೇಸರ ತರಿಸಿತೋ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಂದು ಅಭಿನಂದನೆ ಸಲ್ಲಿಸುತ್ತೇನೆ. ಮೈಸೂರಿನಿಂದ ಬೆಂಗಳೂರಿಗೆ ಓಡಾಡುವವರ ಮನಸ್ಸಿನಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಅನ್ನೋದರ ಹೆಸರು ಬದಲಿಸಬೇಕು ಎಂಬ ಬೇಗುದಿ ಇತ್ತು. ಕರ್ನಾಟಕಕ್ಕೆ ಮೊದಲು ಮೀಸಲಾತಿ ತಂದುಕೊಟ್ಟ, ನಾಡು ಕಟ್ಟಿದ ಒಡೆಯರ್ ಹೆಸರಿಟ್ಟಿದ್ದಾರೆ ಎಂದರು.
ಒಡೆಯರ್ ಹೆಸರಿಟ್ಟಿರೋದಕ್ಕೆ ನಾಡಿನ ಎಲ್ಲರೂ ಸ್ವಾಗತ ಕೋರಿದ್ದಾರೆ. ಸಿದ್ದರಾಮಯ್ಯ ಮತ್ತೆ ಕೆಲ ಕಾಂಗ್ರೆಸ್‌ನವರು ಯಾಕೆ ವಿರೋಧ ಮಾಡ್ತಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರದಲ್ಲಿದ್ದು, ಮೀಸಲಾತಿ ಹೆಚ್ಚಳ ಕೆಲಸ ಮಾಡಲೇ ಇಲ್ಲ. ಬಿಜೆಪಿ ಸರ್ಕಾರ ತನ್ನ ಬದ್ಧತೆ ತೋರಿಸಿದೆ. 1947 ರಿಂದ ಮೊನ್ನೆಯವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಕೊಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮೀಸಲಾತಿ ಚುನಾವಣಾ ಲಾಭದ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಹೋರಾಟದ ಬೇಡಿಕೆಯನ್ನು ಬಿಜೆಪಿ ಈಡೇರಿಸಿದೆ. ಹಾಗಾಗಿ ಈಗ ಜನ ತೀರ್ಮಾನ ಮಾಡಬೇಕು. ಕಾಂಗ್ರೆಸ್ನದ್ದು ಸಮಿತಿ ಮಾಡಿದ್ದೇವೆ, ನೋಡೋಣ ಎಂಬ ಕಣ್ಣೊರೆಸುವ ತಂತ್ರ ಎಂದು ದೂರಿದರು.
‘ಬಿನ್ ಲಾಡೆನ್, ಘಜನಿ ಹೆಸರಿಡಲಿ’
ಇನ್ನ ಕಂದಾಯ ಸಚಿವ ಆರ್.ಅಶೋಕ್ ಕೂಡ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಇನ್ನು ನೂರು ಟ್ರೈನ್ ತಂದು ಟಿಪ್ಪು ಸುಲ್ತಾನ್, ಬಿನ್ ಲಾಡೆನ್, ಘಜನಿ ಮೊಹಮ್ಮದ್ ಹೆಸರಿಟ್ಟು ಓಡಿಸಲಿ ಎಂದು ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ರೈಲಿಗೆ ಟಿಪ್ಪು ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸರ್ಕಾರ ಒಳ್ಳೆಯ ಉದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಡಲಾಗಿದೆ.
ಮೈಸೂರು ಮಂಡ್ಯ ಭಾಗಕ್ಕೆ ನೀರು ಕೊಟ್ಟವರು ಒಡೆಯರ್. ತಮ್ಮ ಒಡವೆ ಮಾರಿ ಕೆಆರ್‌ಎಸ್ ಕಟ್ಟಿ ಕರ್ಣರಾದವರು. ಮೊದಲು ವಿದ್ಯುತ್ ತಯಾರಿಕೆ ಮಾಡಿದ್ದು, ಸೋಪ್, ಸಕ್ಕರೆ ತಯಾರಿಕೆ ಎಲ್ಲವನ್ನೂ ಕರ್ನಾಟಕಕ್ಕೆ ಕೊಟ್ಟವರು. ಅವರ ಹೆಸರಲ್ಲೇ ಜಂಬೂ ಸವಾರಿ ಆರಂಭವಾಗಿದ್ದು. ಟಿಪ್ಪು ಕನ್ನಡಿಗ ಅಂತ ಒಪ್ಪಿಯೇ ಇಲ್ಲ ಎಂದು ಕಿಡಿಕಾರಿದರು.
ಟಿಪ್ಪು ಆಡಳಿತ ಭಾಷೆ ಪರ್ಶಿಯನ್. ಕಗ್ಗೊಲೆ ಮಾಡಿ, ಮತಾಂತರಗೊಳಿಸಿದ್ದಾರೆ. ಚಲುವನಾರಾಯಣಸ್ವಾಮಿ ದೇವಸ್ಥಾನದ ಬಳಿ ಕೊಗ್ಗೊಲೆ ಮಾಡಿದ್ದಾನೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ. ಈ ಹೆಸರನ್ನು ಟ್ರೈನಿಗೆ ಇಟ್ರೆ ಜನರು ಮೆಚ್ತಾರೆ. ಅವರು ಅಧಿಕಾರಕ್ಕೆ ಬಂದಾಗ ಇಟ್ಟುಕೊಳ್ಳಲಿ. ನಮ್ಮ ಬೆಂಬಲ ಒಡೆಯರ್ ಅವರಿಗೆ ಎಂದರು.